ತಪ್ಪು ವಯಸ್ಸು ನಮೂದಿಸಿದ್ದಾರೆ ಎಂಬ ವಿಮೆ ಕಂಪನಿಯ ತಕರಾರು ನಿಲ್ಲಲಿಲ್ಲ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿಯ ಸದಾಶಿವ ಉಪ್ಪಾರ ಎನ್ನುವವರು ರಿಲಯನ್ಸ್ ಲೈಫ್ ಇನ್ಸುರೆನ್ಸ್‌ನಿಂದ ೧೫ ವರ್ಷ ಅವಧಿಯ ಎಂಟು ಲಕ್ಷದ ಜೀವವಿಮೆ ಪಾಲಿಸಿಯನ್ನು ಪಡೆದುಕೊಂಡಿದ್ದರು. ಪಾಲಿಸಿ ಪಡೆದುಕೊಂಡ ದಿನಾಂಕ ೧೪-೦೨-೨೦೧೩. ಇದರ ವಾರ್ಷಿಕ ಕಂತು ೮೦ ಸಾವಿರ ರುಪಾಯಿಗಳನ್ನು ಅವರು ತುಂಬಿದ್ದರು. ದುರ್ದೈವವಶಾತ್ ಸದಾಶಿವ ಅವರು ೦೪-೦೬-೨೦೧೩ರಂದು ಸಾವಿಗೀಡಾಗುತ್ತಾರೆ. ಸಾವಿನ ಬಳಿಕ ಅವರ ಪತ್ನಿ ಸಾವಿತ್ರಿ ಮತ್ತು ಮೂವರು ಮಕ್ಕಳು ಪಾಲಿಸಿ ಹಣಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ವಿಮೆ ಕಂಪನಿಯು ಅವರು ತುಂಬಿದ್ದ ೮೦ ಸಾವಿರ ರು. ಮಾತ್ರ ಮರಳಿ ಕೊಟ್ಟು ಉಳಿದ ೭.೨೦ ಲಕ್ಷ ರು. ನೀಡುವುದಕ್ಕೆ ನಿರಾಕರಿಸುತ್ತದೆ. ಅದಕ್ಕೆ ಅವರು ನೀಡಿದ ಕಾರಣ, ಪಾಲಿಸಿದಾರರು ಪಾಲಿಸಿ ಮಾಡುವಾಗ ತಪ್ಪು ವಯಸ್ಸನ್ನು ನೀಡಿದ್ದರು. ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಆದರೆ ೪೩ ವರ್ಷ ಎಂದು ಹೇಳಿದ್ದರು. ಈ ಕಾರಣಕ್ಕೆ ವಿಮೆ ಮೊತ್ತ ನೀಡುವುದಿಲ್ಲ ಎಂದು ಹೇಳಿತು.
ಪಾಲಿಸಿ ಮಾಡಿಸಿದ ಎರಡು ವರ್ಷಗಳೊಳಗೇ ಸಾವಿಗೀಡಾದ ಕಾರಣ ನಿಯಮದಂತೆ ವಿಮೆ ಕಂಪನಿಯು ತನಿಖೆಯನ್ನು ನಡೆಸಿತು. ತನಿಖೆಯ ವೇಳೆ ಸದಾಶಿವ ಉಪ್ಪಾರ ತನ್ನ ವಯಸ್ಸನ್ನು ೪೩ ಎಂದು ಬರೆಸಿದ್ದರು. ಆದರೆ ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಅವರು ತಮ್ಮ ನಿಜವಾದ ವಯಸ್ಸನ್ನು ಹೇಳಿದ್ದರೆ ಅವರಿಗೆ ಪಾಲಿಸಿಯನ್ನೇ ನೀಡುತ್ತಿರಲಿಲ್ಲ. ಇದು ವಿಮೆ ಪಾಲಿಸಿಯ ಷರತ್ತುಗಳಿಗೆ ವಿರುದ್ಧವಾದದ್ದು ಎಂದು ವಿಮೆ ಕಂಪನಿ ಹೇಳಿತು.
ವಿಮೆ ಕಂಪನಿ ವಿರುದ್ಧ ಬೆಳಗಾವಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಾಯಿತು. ದೂರುದಾರರ ವಕೀಲರು, ಸದಾಶಿವ ಉಪ್ಪಾರ ಅವರ ಜನ್ಮ ದಿನಾಂಕ ೧-೬-೧೯೭೦. ಅದನ್ನೇ ಪಾಲಿಸಿಯಲ್ಲಿ ಬರೆಸಲಾಗಿದೆ. ೧-೧-೧೯೯೪ರಂದು ನೀಡಿರುವ ಚುನಾವಣಾ ಆಯೋಗದ ಗುರುತಿನ ಚೀಟಿಯಲ್ಲಿ ಅವರ ವಯಸ್ಸನ್ನು ೨೪ ಎಂದು ನಮೂದಿಸಲಾಗಿದೆ. ಅಂದರೆ ಪಾಲಿಸಿ ತೆಗೆದುಕೊಂಡಾಗ ಅವರಿಗೆ ೪೩ ವರ್ಷ ವಯಸ್ಸಾಗಿತ್ತು. ಕಫದಿಂದಾಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಘಟಪ್ರಭಾದ ಕರ್ನಾಟಕ ಆರೋಗ್ಯ ಸಂಸ್ಥೆಯಲ್ಲಿ ಸೇರಿಸುವಾಗ ಅವರ ಜೊತೆಯಲ್ಲಿದ್ದವರು ಗೊತ್ತಿಲ್ಲದೆ ತಪ್ಪು ವಯಸ್ಸನ್ನು ನಮೂದಿಸಿದ್ದಾರೆ. ವಿಮೆ ಕಂಪನಿಯು ತನಿಖೆಯ ಸಂದರ್ಭದಲ್ಲಿ ಆಸ್ಪತ್ರೆಯ ಚೀಟಿಯಲ್ಲಿ ನಮೂದಾದ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ. ಅದನ್ನು ನೋಡಿ ಪಾಲಿಸಿ ಮೊತ್ತವನ್ನು ತಿರಸ್ಕರಿಸಿದ್ದು ತಪ್ಪು ಎಂದು ವಾದಿಸಿದರು. ವಿಮೆ ಕಂಪನಿಯು ಸಾವಿನ ಕಾರಣದ ಬಗ್ಗೆ ಯಾವುದೇ ತಕರಾರು ಎತ್ತಿಲ್ಲ. ಕಾರಣ ವಿಮೆ ಮೊತ್ತವನ್ನು ಅದು ನೀಡಬೇಕು ಎಂದು ಹೇಳಿದರು. ಪಾಲಿಸಿ ಪಡೆದ ವ್ಯಕ್ತಿ ಉದ್ದೇಶಪೂರ್ವಕವಾಗಿ ಸತ್ಯವನ್ನು ಮುಚ್ಚಿಟ್ಟಿದ್ದರು ಎಂಬುದನ್ನು ವಿಮೆ ಕಂಪನಿ ಸಾಬೀತುಪಡಿಸುವುದು ಸಾಧ್ಯವಾಗಲಿಲ್ಲ. ಅವರ ವಯಸ್ಸು ೪೩ ಅಲ್ಲ, ೬೦ ಎಂದು ಬೇರೆ ರೀತಿಯಿಂದಲೂ ಸಿದ್ಧಪಡಿಸುವುದು ಅಧಕ್ಕೆ ಸಾಧ್ಯವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ವೇದಿಕೆಯು ರಿಲಯನ್ಸ್ ಜೀವ ವಿಮೆ ಕಂಪನಿ ಬಾಕಿ ಉಳಿಸಿಕೊಂಡಿರುವ ೭.೨೦ ಲಕ್ಷ ರು.ಗಳನ್ನು ಆದೇಶ ತಲುಪಿದ ಒಂದು ತಿಂಗಳೊಳಗೆ ಪಾಲಿಸಿದಾರ ಸಾವಿಗೀಡಾದ ದಿನದಿಂದ ಶೇ.೯ರ ಬಡ್ಡಿಯೊಂದಿಗೆ ನೀಡಬೇಕು. ಪರಿಹಾರವೆಂದು ೩ ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು ೨ ಸಾವಿರ ರು. ನೀಡಬೇಕು ಎಂದು ಆದೇಶಿಸಿತು.
------
ವಿಮೆ ಪರಿಹಾರ ನಿರಾಕರಿಸುವುದುಕ್ಕೆ ಸದಾ ಒಂದಿಲ್ಲೊಂದು ನೆಪ ಹುಡುಕುವ ವಿಮೆ ಕಂಪನಿ ಈ ಬಾರಿ ವಯಸ್ಸು ಸುಳ್ಳು ಹೇಳಲಾಗಿದೆ ಎಂಬ ಕಾರಣ ನೀಡಿತು. ಆದರೆ ಗ್ರಾಹಕ ವೇದಿಕೆಯಲ್ಲಿ ಅದು ಸಿದ್ಧವಾಗಲಿಲ್ಲ.
Comments
Post a Comment