ಗ್ರಾಹಕ ರಕ್ಷಣೆ ಒಂದು ಆಂದೋಲನ
1. ಪ್ರಸ್ತಾವನೆ ಇವತ್ತು ಗ್ರಾಹಕ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ನಾವೆಲ್ಲರೂ ದೈನಂದಿನ ವ್ಯವಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತೇವೆ. ವ್ಯಕ್ತಿಯೊಬ್ಬ ಯಾವುದಾದರೂ ಒಂದು ವಸ್ತುವನ್ನು ಖರೀದಿಸಿದಾಗ ಅಥವಾ ಒಂದು ಸೇವೆಯನ್ನು ಪಡೆದುಕೊಂಡಾಗ ಅವನು ಗ್ರಾಹಕನಾಗುತ್ತಾನೆ. ಸ್ವಯಂ ಬಳಕೆಗಾಗಿ ನಿರ್ದಿಷ್ಟ ಮೌಲ್ಯದ ಹಣಕ್ಕೆ ಸರಕುಗಳನ್ನು ಖರೀದಿಸಿದ ಯಾವುದೇ ವ್ಯಕ್ತಿ ಗ್ರಾಹಕ. ಇಲ್ಲಿ ಸ್ವಯಂ ಬಳಕೆಗೆ ಎಂಬ ಪದಗಳು ಬಳಕೆಯಾಗಿರುವುದನ್ನು ಗಮನಿಸಬೇಕು. ಮರುಮಾರಾಟದ ಉದ್ದೇಶದಿಂದ ವಸ್ತುವನ್ನು ಖರೀದಿ ಮಾಡಿದ್ದರೆ ಆತ ಗ್ರಾಹಕನಾಗಿರುವುದಿಲ್ಲ. ಆಕ್ಸ್‌ಫರ್ಡ್ ನಿಘಂಟುವಿನಲ್ಲಿ ಕನ್ಸೂಮರ್ ಎಂಬುದಕ್ಕೆ ವಸ್ತು ಅಥವಾ ಸೇವೆಯನ್ನು ಖರೀದಿಸುವವನು ಎಂಬ ಅರ್ಥವನ್ನು ಹೇಳಲಾಗಿದೆ. ಬ್ಲಾಕ್ ಅವರ ಕಾನೂನು ನಿಘಂಟುವಿನಲ್ಲಿ ಬಳಕೆದಾರ ಎಂಬ ಅರ್ಥವಿದೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಗ್ರಾಹಕರನ್ನು ರಾಜರೆಂದೇ ಪರಿಗಣಿಸಲಾಗುತ್ತಿದೆ. ಈಗ ಮಾರುಕಟ್ಟೆಯ ಜಾಲ ವ್ಯಾಪಕವೂ ವಿಸ್ತಾರವೂ ಆಗಿದೆ. ಮೊದಲು ಸ್ವತಃ ನಾವೇ ಅಂಗಡಿಗಳಿಗೆ ತೆರಳಿ ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದಾಗಿತ್ತು. ಆದರೆ ಇಂದು ಆನ್‌ಲೈನ್ ವ್ಯಾಪಾರದ ಭರಾಟೆಯೂ ಜೋರಾಗಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವಿಗೆ ಆದೇಶ ನೀಡಿ ಅದನ್ನು ಪಡೆಯಬಹುದು. ಹೇಗೆ ವ್ಯಾಪಾರದ ಜಾಲವು ವಿಸ್ತಾರವಾಗುತ್ತದೆಯೋ ಅದೇ ರೀತಿ...