ನೂರರ ರಾಖಿ ತಲುಪಿಸದ ಅಮೆಜಾನ್‌ಗೆ 40 ಸಾವಿರ ರು. ದಂಡ

* ಆನ್‌ಲೈನ್‌ ವ್ಯಾಪಾರದ ಮೋಸಕ್ಕೂ ಗ್ರಾಹಕ ವೇದಿಕೆಗೆ ಹೋಗಬಹುದು ಮಾರುಕಟ್ಟೆಯು ಇಂದು ತಿವಿಕ್ರಮ ರೂಪವನ್ನು ತಾಳಿದೆ. ಮಾರುವಾತ ಎಲ್ಲಿಯೋ ಕುಳಿತಿರುತ್ತಾನೆ. ಅವನನ್ನು ನೀವು ನೋಡಿರುವುದೇ ಇಲ್ಲ. ಆನ್‌ಲೈನ್‌ನಲ್ಲಿ ನೀವು ವಸ್ತುವೊಂದನ್ನು ಖರೀದಿಸಲು ಆದೇಶ ಮಾಡುತ್ತೀರಿ. ಅದು ನಿಮಗೆ ಬಂದು ತಲುಪುತ್ತದೆ. ನಿಮ್ಮ ವಸ್ತುವನ್ನು ನಾವು ಮಾರಾಟ ಮಾಡುತ್ತೇವೆ ಎನ್ನುವ ಹಲವು ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಅಮೆಜಾನ್‌, ಫ್ಲಿಕ್‌ಕಾರ್ಟ್‌ ಹೀಗೆ ಹಲವಾರು ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿವೆ. ಆನ್‌ಲೈನ್‌ನಲ್ಲಿ ನೀವು ಹೀಗೆ ವಸ್ತುವನ್ನು ಖರೀದಿಸಿದಾಗ ನಿಮಗೆ ಮೋಸವಾದರೆ ಅಥವಾ ಅವರ ಸೇವೆಯಲ್ಲಿ ನ್ಯೂನತೆ ಕಂಡುಬಂದರೆ ಯಾರನ್ನು ಕಟಕಟೆಗೆ ಎಳೆಯಬೇಕು ಎಂಬ ಗೊಂದಲ ಹಲವು ಗ್ರಾಹಕರಲ್ಲಿದೆ. ಅಂಥವರಿಗೆ ಮಾರ್ಗದರ್ಶಿಯಾಗಬಲ್ಲ ಒಂದು ತೀರ್ಪು ಇಲ್ಲಿದೆ. ಇದು ಮುಂಬಯಿಯಲ್ಲಿ 2019ರಲ್ಲಿ ನಡೆದದ್ದು. ಕೇವಲ ನೂರು ರುಪಾಯಿಯ ರಾಖಿಯನ್ನು ವಿಳಾಸದಾರರಿಗೆ ತಲುಪಿಸದ್ದಕ್ಕೆ ಅಮೆಜಾನ್‌‌ನಂಥ ಗಜ ಗಾತ್ರದ ಸಂಸ್ಥೆಯನ್ನು ಇರುವೆಯಂಥ ಗ್ರಾಹಕರೊಬ್ಬರು ಗ್ರಾಹಕ ವೇದಿಕೆಯ ಮೆಟ್ಟಿಲೇರುವಂತೆ ಮಾಡಿ ದಂಡವನ್ನೂ ಕಕ್ಕಿಸಿದ್ದರು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ರಕ್ಷಾ ಬಂಧನದ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟಿ ಅವರಿಂದ ರಕ್ಷಣೆಯ ಭರವಸೆಯನ್ನು ಪಡೆದುಕೊಳ್ಳುತ್ತಾರೆ. ಮಹಿಳೆಯೊಬ್ಬರು ತಮ್ಮ ಸಹೋದರನಿಗೆ ಕಳುಹಿಸಲು 100 ರುಪಾಯಿಯ ರಾಖಿಯನ್ನು ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದರು. ಆದರೆ ಅಮೆಜಾನ್‌ ಆ ಆರ್ಡರ್‌ ಅನ್ನು ರದ್ದು ಮಾಡಿತ್ತು. ಅಲ್ಲದೆ ಮರುದಿನವೇ ಅದಕ್ಕೆ ಸಂದಾಯ ಮಾಡಿದ್ದ 100 ರುಪಾಯಿಯನ್ನೂ ಮರಳಿಸಿತ್ತು. ಆದರೆ ಹಬ್ಬದ ದಿನ ಅಗತ್ಯವಾಗಿ ತಲುಪಬೇಕಿದ್ದ ರಾಖಿ ತಮ್ಮ ಸಹೋದರನಿಗೆ ತಲುಪದ ಕಾರಣ ಆ ಮಹಿಳೆಗೆ ಅಸಮಾಧಾನವಾಯಿತು. ಇದು ಅಮೆಜಾನ್‌ ಸಂಸ್ಥೆಯ ಸೇವಾನ್ಯೂನತೆ ಎಂದೇ ಅವರು ಪರಿಗಣಿಸಿದರು. ತಪ್ಪು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ವಿಚಾರಣೆ ನಡೆಸಿದರು. ಅಮೆಜಾನ್‌ ಸಂಸ್ಥೆಯು ರಾಖಿಯನ್ನು ತಲುಪಿಸುವ ಹೊಣೆಯನ್ನು ನಿಷ್ಕ್ರಿಯಗೊಂಡ ಕೊರಿಯರ್‌ ಸಂಸ್ಥೆಗೆ ವಹಿಸಿತ್ತು ಎಂಬುದನ್ನು ಅವರು ಕಂಡುಕೊಂಡರು. ಇದು ಅಮೆಜಾನ್‌ ಸಂಸ್ಥೆಯ ಪ್ರಮಾದ ಎಂದು ಬಗೆದ ಅವರು ಅದರ ವಿರುದ್ಧ ಮುಂಬಯಿ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ಈ ವ್ಯವಹಾರದಲ್ಲಿ ಅಮೆಜಾನ್‌ ವಸ್ತುವನ್ನು ಮಾರಾಟಮಾಡಿಕೊಡುವ ಮಧ್ಯಸ್ಥಗಾರ ಆಗಿತ್ತು. ರಾಖಿ ಉತ್ಪನ್ನವನ್ನು ಅಮೆಜಾನ್‌ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಮಾರಾಟಗಾರನಿಗೆ ಅಮೆಜಾನ್‌ 100 ರುಪಾಯಿಗಳನ್ನು ಪಾವತಿಸಿರಲಿಲ್ಲ ಎಂಬುದೂ ಬೆಳಕಿಗೆ ಬಂತು. ಅಮೆಜಾನ್‌ ಸಂಸ್ಥೆಯಿಂದ ಸೇವಾನ್ಯೂನತೆ ತಲೆದೋರಿದೆ ಎಂಬುದು ಮೇಲುನೋಟಕ್ಕೆ ತಿಳಿಯುತ್ತಿತ್ತು. ಎರಡೂ ಕಡೆಯವರ ವಾದ ಪ್ರತಿವಾದಗಳನ್ನು ವೇದಿಕೆಯು ಆಲಿಸಿತು. ನ್ಯಾಯಯುತವಲ್ಲದ ವ್ಯಾಪಾರಪದ್ಧತಿಯನ್ನು ಅದು ಅಳವಡಿಸಿಕೊಂಡಿದೆ ಎಂದು ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷ ಸಮಿಂದರ್‌ ಆರ್‌. ಸುರ್ವೇ ಮತ್ತು ಸದಸ್ಯ ಸಮೀರ್‌ ಎಸ್‌. ಕಾಂಬಳೆ ಅವರಿದ್ದ ವೇದಿಕೆ ತೀರ್ಪು ನೀಡಿತು. ಆದೇಶ ಪ್ರಕಟವಾದ 60 ದಿನಗಳ ಒಳಗಾಗಿ 30 ಸಾವಿರ ರುಪಾಯಿ ದಂಡ ಮತ್ತು ವ್ಯಾಜ್ಯದ ವೆಚ್ಚ 10 ಸಾವಿರ ರುಪಾಯಿ ನೀಡಬೇಕು. ವಿಳಂಬವಾದರೆ ಆದೇಶದ ದಿನದಿಂದ ಶೇ.6ರಂತೆ ಬಡ್ಡಿಯನ್ನೂ ಈ ಮೊತ್ತಕ್ಕೆ ನೀಡಬೇಕು ಎಂದು ಆದೇಶಿಸಿತು.

Comments