ಚೆಕ್ ದಿನಾಂಕ ತಿದ್ದಿ ದಂಡ ತೆತ್ತ ಎಸ್‌ಬಿಐ

ಬ್ಯಾಂಕುಗಳ ದೊಡ್ಡಣ್ಣ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಂಡ ತೆತ್ತ ಪ್ರಕರಣ ಇದು. ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ಆಯೋಗ ನೀಡಿದ ತೀರ್ಪಿನ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಆಯೋಗದ ಮೆಟ್ಟಿಲು ತುಳಿದಿತ್ತು. ಚೆಕ್ ನೊಂದಣಿ ಮಾಡಿಕೊಳ್ಳುವ ಪುಸ್ತಕವನ್ನು ಆಯೋಗದೆದುರು ಹಾಜರುಪಡಿಸಲು ಅದು ವಿಫಲವಾಯಿತು. ------------ ಸತ್ಯರಂಜನ್ ದಾಸ್ ಕೋಲ್ಕತ್ತಾದ ಶಾನ್ ಕ್ಲಾಸಿಕ್ಸ್ ಎಂಎಫ್‌ಜಿ ಕಂಪನಿಯ ಏಕೈಕ ಮಾಲೀಕರು. ತಮ್ಮ ವ್ಯವಹಾರದಲ್ಲಿ ಅವರು ಮಧ್ಯಪ್ರದೇಶದ ಮೆ.ಅಲೈಡ್ ಮಿನರಲ್ಸ್ ಆ್ಯಂಡ್ ಇಂಡಸ್ಟ್ರೀಸ್‌ಗೆ ಅನಿಲ ಉತ್ಪಾದನೆಯ ಘಟಕವನ್ನು ಪೂರೈಸುವ ಆರ್ಡರ್ ಪಡೆದುಕೊಂಡರು. ಈ ವ್ಯವಹಾರದ ಆಂಶಿಕ ಪಾವತಿಯಾಗಿ ಎಸ್‌ಬಿಐನ ಕತ್ನಿ ಶಾಖೆಯಲ್ಲಿ ಪಾವತಿಯಾಗುವಂತೆ ೧೦ ಲಕ್ಷ ರುಪಾಯಿಯ ಒಂದು ಚೆಕ್ ಸಿಗುತ್ತದೆ. ಚೆಕ್ ನಂ.೧೪೫೬೧೮, ದಿನಾಂಕ ೩೦-೦೭-೨೦೧೫ ಎಂದಿತ್ತು. ಸತ್ಯರಂಜನ್ ದಾಸ್ ಅವರು ಈ ಚೆಕ್‌ಅನ್ನು ಕೋಲ್ಕತ್ತಾದ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಜಮಾ ಮಾಡುತ್ತಾರೆ. ಅಲ್ಲಿ ಅವರ ಕರಂಟ್ ಅಕೌಂಟ್ ಖಾತೆ ಇತ್ತು. ಬ್ಯಾಂಕ್ ಆಫ್ ಇಂಡಿಯಾ ಆ ಚೆಕ್‌ಅನ್ನು ಎಸ್‌ಬಿಐನ ಕತ್ನಿ ಶಾಖೆಗೆ ಕಳುಹಿಸುತ್ತದೆ. ಎಸ್‌ಬಿಐ ಆ ಚೆಕ್‌ಅನ್ನು ಅವಧಿ ಮೀರಿದೆ ಎಂಬ ಷರಾದೊಂದಿಗೆ ೧೮-೧೦-೨೦೦೦೫ರಂದು ವಾಪಸ್ ಕಳುಹಿಸುತ್ತದೆ. ಅದು ಬಂದ ಬಳಿಕ ದೂರುದಾರ ಸತ್ಯರಂಜನ್ ಅವರು ಚೆಕ್ ಗಮನಿಸುತ್ತಾರೆ. ೩೦-೦೭-೨೦೦೫ ಎಂಬುದನ್ನು ೩೦-೦೭-೨೦೦೪ಎಂದು ತಿದ್ದಿರುವುದು ಕಾಣುತ್ತಾರೆ. ಚೆಕ್ ಅಮಾನ್ಯಗೊಂಡಿದ್ದರಿಂದ ಬ್ಯಾಂಕ್ ಆಫ್ ಇಂಡಿಯಾ ಅವರ ಖಾತೆಯಿಂದ ೨೦೪೦ ರು.ಗಳನ್ನು ಮುರಿದುಕೊಳ್ಳುತ್ತದೆ. ೨೨-೧೧-೨೦೦೫ರಂದು ದೂರುದಾರರು ಬ್ಯಾಂಕ್ ಆಫ್ ಇಂಡಿಯಾಕ್ಕೆ ಪತ್ರವೊಂದನ್ನು ಬರೆದು ತಾವು ನೀಡಿದ ಚೆಕ್‌ನಲ್ಲಿ ಪ್ರಕ್ಷೇಪ ಆಗಿರುವುದು ಹೇಗೆ ಎಂದು ಪ್ರಶ್ನಿಸುತ್ತಾರೆ. ತಾವು ಎಸ್‌ಬಿಐನ ಕತ್ನಿ ಶಾಖೆಗೆ ಕಳುಹಿಸಿದಾಗ ಅದರಲ್ಲಿ ೩೦-೦೭-೨೦೦೫ ಎಂದೇ ದಿನಾಂಕ ಇತ್ತು ಎಂದು ಮರುದಿನವೇ ಉತ್ತರವನ್ನು ನೀಡುತ್ತದೆ. ಆದರೆ ಪ್ರಕ್ಷೇಪ ಹೇಗಾಯಿತು ಎಂಬ ಕುರಿತು ಏನನ್ನೂ ಹೇಳುವುದಿಲ್ಲ. ಇದಾದ ಬಳಿಕ ದೂರುದಾರರು ತಿದ್ದುಪಡಿ ಮತ್ತು ಪ್ರಕ್ಷೇಪ ಕುರಿತು ಬ್ಯಾಂಕಿಗೆ ಕಾನೂನುಬದ್ಧ ನೋಟಿಸ್ ನೀಡುತ್ತಾರೆ. ೧೬-೦೫-೨೦೦೬ರಂದು ಬಂದ ಉತ್ತರದಲ್ಲಿ, ದಿನಾಂಕದಲ್ಲಿ ಪ್ರಕ್ಷೇಪಗೊಂಡ ಚೆಕ್ ಎಸ್‌ಬಿಐನ ಕತ್ನಿ ಶಾಖೆಯಿಂದಲೇ ಬಂದದ್ದು. ‘ಇನ್‌ಸ್ಟ್ರುಮೆಂಟ್ ಔಟ್‌ಡೇಟೆಡ್’ ಎಂಬ ಷರಾದೊಂದಿಗೆ ಅದು ಬಂದಿತ್ತು ಎಂದು ವಿವರಿಸಲಾಗಿತ್ತು. ದೂರುದಾರರು ಎಸ್‌ಬಿಐಗೂ ನೋಟಿಸ್ ನೀಡದರು. ಭೋಪಾಲದ ಸ್ಥಳೀಯ ಕೇಂದ್ರ ಕಚೇರಿ ಅದನ್ನು ಪರಿಶೀಲಿಸುವುದು ಎಂದು ಉತ್ತರ ಬಂತು. ಆದರೆ ನಂತರ ಏನೂ ಆಗಲೇ ಇಲ್ಲ. ಇದರಿಂದ ಬೇಸತ್ತ ಸತ್ಯರಂಜನ್‌ದಾಸ್ ಪಶ್ಚಿಮಬಂಗಾಳ ರಾಜ್ಯ ಗ್ರಾಹಕ ಆಯೋಗದಲ್ಲಿ ದೂರನ್ನು ದಾಖಲಿಸುತ್ತಾರೆ. ಎರಡೂ ಬ್ಯಾಂಕ್‌ನವರನ್ನು ಪ್ರತಿವಾದಿಗಳನ್ನಾಗಿ ಮಾಡುತ್ತಾರೆ. ತಮಗೆ ಚೆಕ್ ಮೊತ್ತ ೧೦ ಲಕ್ಷ ರು. ಕೊಡಿಸಬೇಕು, ತಮಗಾದ ಹಣಕಾಸು ನಷ್ಟ ಮತ್ತು ಇತರ ನಷ್ಟಗಳಿಗಾಗಿ ೧೬,೫೦,೦೦೦ ರು.ಗಳನ್ನು ಪರಿಹಾರವಾಗಿ ಕೊಡಿಸಬೇಕು ಎಂದು ಕೋರುತ್ತಾರೆ. ಬ್ಯಾಂಕ್ ಆಫ್ ಇಂಡಿಯಾ ತನ್ನ ಲಿಖಿತ ಉತ್ತರದಲ್ಲಿ, ದೂರುದಾರರು ತಮ್ಮಲ್ಲಿ ೧೦ ಲಕ್ಷ ರುಪಾಯಿಯ ಚೆಕ್ ಠೇವಣಿ ಮಾಡಿದ್ದನ್ನು ಒಪ್ಪಿಕೊಳ್ಳುತ್ತದೆ. ತಾವು ಸ್ವೀಕರಿಸಿದ ಚೆಕ್‌ಅನ್ನು ಎಸ್‌ಬಿಐನ ಕತ್ನಿ ಶಾಖೆಗೆ ಕಳುಹಿಸಲಾಗಿತ್ತು. ಆದರೆ ಎಸ್‌ಬಿಐ ಹಣ ಪಾವತಿಸದೆ ಚೆಕ್ ವಾಪಸ್ ಮಾಡಿತ್ತು. ಅವಧಿ ಮೀರಿದೆ ಎಂಬ ಷರಾ ಇತ್ತು. ಹಾಗೆ ಬಂದ ಚೆಕ್ ಅನ್ನು ದೂರುದಾರರಿಗೆ ಸೂಕ್ತ ಟಿಪ್ಪಣಿಯೊಂದಿಗೆ ಹಿಂತಿರುಗಿಸಲಾಗಿದೆ. ಇವೆಲ್ಲ ಸಾಮಾನ್ಯವಾದ ಬ್ಯಾಂಕ್ ವ್ಯವಹಾರದ ಪ್ರಕ್ರಿಯೆಗಳು. ಚೆಕ್‌ನಲ್ಲಾಗಿರುವ ಯಾವುದೇ ಪ್ರಕ್ಷೇಪಕ್ಕೂ ನಮಗೂ ಸಂಬಂಧವಿಲ್ಲ. ತಮ್ಮ ಗ್ರಾಹಕರಿಂದ ಚೆಕ್ ಪಡೆದು ಅದನ್ನು ನಗದನ್ನಾಗಿಸಲು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಕಳುಹಿಸುವುದಷ್ಟೇ ನಮ್ಮ ಕೆಲಸ. ಅದನ್ನು ನಾವು ಮಾಡಿದ್ದೇವೆ. ದೂರುದಾರರು ಅನಗತ್ಯವಾಗಿ ನಮ್ಮನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಏಕೆಂದರೆ ಚೆಕ್‌ನಲ್ಲಿ ಪ್ರಕ್ಷೇಪವಾಗಿರುವುದು ಎಸ್‌ಬಿಐನ ಕತ್ನಿ ಶಾಖೆಯಲ್ಲಿ. ಕಾರಣ ತಮ್ಮಿಂದ ಯಾವುದೇ ಸೇವಾನ್ಯೂನತೆ ತಲೆದೋರಿಲ್ಲ ಎಂದು ವಿವರಿಸಿತು. ಎಸ್‌ಬಿಐ ತನ್ನ ಲಿಖಿತ ಉತ್ತರದಲ್ಲಿ, ಅಲೈಡ್ ಮಿನರಲ್ಸ್ ಆ್ಯಂಡ್ ಇಂಡಸ್ಟ್ರಿಸ್ ನೀಡಿದ್ದ ೧೦ ಲಕ್ಷ ರುಪಾಯಿಯ, ೩೦-೦೭-೨೦೦೫ ದಿನಾಂಕದ ಚೆಕ್ ನಮ್ಮ ಕತ್ನಿ ಶಾಖೆಗೆ ಬಂದಿತ್ತು. ಅದನ್ನು ಅವಧಿ ಮೀರಿದ್ದು ಎಂಬ ಕಾರಣ ನೀಡಿ ಹಿಂದಕ್ಕೆ ಕಳುಹಿಸಲಾಗಿದೆ. ದಿನಾಂಕದಲ್ಲಿ ಪ್ರಕ್ಷೇಪವಿದ್ದ ಕಾರಣಕ್ಕೆ ಚೆಕ್‌ಅನ್ನು ನಗದಾಗಿಸಿರಲಿಲ್ಲ. ದಿನಾಂಕವನ್ನು ೫ರಿಂದ ೪ಕ್ಕೆ ತಿದ್ದಿದ ಬಳಿಕವೇ ಅದು ನಮ್ಮ ಶಾಖೆಗೆ ಬಂದಿದ್ದು. ಬ್ಯಾಂಕ್ ಆಫ್ ಇಂಡಿಯಾದ ಜೊತೆ ಸೇರಿಕೊಂಡು ನಮ್ಮ ಶಾಖೆಯಲ್ಲಿ ದಿನಾಂಕವನ್ನು ತಿದ್ದಿಲ್ಲ. ಈ ಸಂಬಂಧದಲ್ಲಿ ದೂರುದಾರರು ಯಾವುದೇ ಪುರಾವೆ ಒದಗಿಸಿಲ್ಲ. ಅವರಿಗೆ ಆಗಿರುವ ತೊಂದರೆಗೆ ನಮ್ಮನ್ನು ಹೊಣೆ ಮಾಡಲು ಬರುವುದಿಲ್ಲ. ನಮ್ಮಿಂದ ಯಾವುದೇ ಸೇವಾ ನ್ಯೂನತೆ ತಲೆದೋರಿಲ್ಲ ಎಂದು ವಿವರಿಸಿತು. ದೂರನ್ನು ಪುರಸ್ಕರಿಸುವ ಮೊದಲು ರಾಜ್ಯ ಆಯೋಗವು ಈ ಅಂಶಗಳನ್ನು ಗಮನಿಸಿತು.- ಪ್ರತಿವಾದಿ ಸ್ಟೇಟ್ ಬ್ಯಾಂಕ್‌ನವರು ತಮ್ಮ ಉತ್ತರದಲ್ಲಿ, ವಿವಾದಿತ ಚೆಕ್ ದಿನಾಂಕ ತಿದ್ದಲಾಗಿತ್ತು ಎಂದು ಹೇಳುತ್ತಾರೆ. ಆದರೆ ಚೆಕ್ ಹಿಂತಿರುಗಿಸುವಾಗ ಚೆಕ್ ದಿನಾಂಕ ತಿದ್ದಲಾಗಿದೆ ಎಂಬ ಕಾರಣವನ್ನು ನೀಡದೆ ಅವಧಿ ಮೀರಿದ ಚೆಕ್ ಎಂದು ಷರಾ ಬರೆದಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿವಾದಿಗಳು ತಮ್ಮಲ್ಲೇ ವೈರುಧ್ಯವನ್ನು ಇಟ್ಟುಕೊಂಡಿದ್ದಾರೆ. ಆದರೆ ಬ್ಯಾಂಕ್ ಆಫ್ ಇಂಡಿಯಾದವರು, ತಾವು ಚೆಕ್ ಪಡೆದಾಗ ದಿನಾಂಕ ೩೦-೦೭-೨೦೦೫ ಎಂದೇ ಇತ್ತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಎಸ್‌ಬಿಐ ಕತ್ನಿ ಶಾಖೆ ಮಾತ್ರ ಚೆಕ್ ದಿನಾಂಕ ತಿದ್ದಲಾಗಿದೆ ಎಂದು ಹೇಳಿದೆ ಮತ್ತು ತಿದ್ದಲಾದ ದಿನಾಂಕವನ್ನೇ ಚೆಕ್ ಅವಧಿ ಮೀರಿದ್ದು ಎಂದು ತಿರಸ್ಕರಿಸುವುದಕ್ಕೆ ಕಾರಣವನ್ನಾಗಿಸಿಕೊಂಡಿತ್ತು. ಒಂದು ಕಡೆ ಚೆಕ್ ದಿನಾಂಕದಲ್ಲಿ ಪ್ರಕ್ಷೇಪವಾಗಿದೆ ಎಂಬ ಕಾರಣ, ಮತ್ತೊಂದೆಡೆ ಅವಧಿ ಮೀರಿದೆ ಎಂಬ ಕಾರಣ ನೀಡಿದೆ. ಬ್ಯಾಂಕ್ ಆಫ್ ಇಂಡಿಯಾ ಚೆಕ್ ಕಳುಹಿಸಿದ ಪಾಕೆಟ್ ಒಡೆಯಲಾಗಿತ್ತು ಇತ್ಯಾದಿ ಯಾವುದೇ ಕಾರಣವನ್ನೂ ಅದು ನೀಡಿಲ್ಲ. ಒಂದು ವೇಳೆ ಸಾಗಾಟದ ಸಂದರ್ಭದಲ್ಲಿ ಏನಾದರೂ ಸಂಚು ನಡೆದಿದೆಯೇ ಎಂದು ತರ್ಕಿಸುವುದಕ್ಕೂ ಅವಕಾಶವನ್ನು ಅದು ನೀಡಿಲ್ಲ ಎಂಬುದನ್ನು ರಾಜ್ಯ ಆಯೋಗ ಗಮನಿಸಿತು. ಕಾರಣ ದೂರುದಾರರ ಪರವಾಗಿ ಅದು ತೀರ್ಪು ನೀಡಿತು. ಎಸ್‌ಬಿಐ ದೂರುದಾರರಿಗೆ ೧೦ ಲಕ್ಷ ರು. ಚೆಕ್ ಮೊತ್ತ, ಪರಿಹಾರವೆಂದು ೨೫ ಸಾವಿರ ರು., ವೆಚ್ಚವೆಂದು ೧ ಸಾವಿರ ರು.ಗಳನ್ನು ಎರಡು ತಿಂಗಳೊಳಗೆ ನೀಡಬೇಕು. ತಪ್ಪಿದರೆ ಶೇ.೧೦ರಂತೆ ಬಡ್ಡಿ ನೀಡಬೇಕು ಎಂದು ಹೇಳಿತು. ಇದರ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ಎಸ್‌ಬಿಐ ಮೇಲ್ಮನವಿ ಸಲ್ಲಿಸಿತು. ಎಸ್‌ಬಿಐ ಪರವಾಗಿ ಹಾಜರಾದ ವಕೀಲರು, ಚೆಕ್‌ಅನ್ನು ಬ್ಯಾಂಕ್ ಆಫ್ ಇಂಡಿಯಾ ಕಳುಹಿಸಿದ್ದು ೨೮-೦೯-೨೦೦೫ರಂದು, ಎಸ್‌ಬಿಐಗೆ ತಲುಪಿದ್ದು ೧೦-೧೦-೨೦೦೫ರಂದು. ಅಂದರೆ ೧೩ ದಿನಗಳ ಸುದೀರ್ಘ ಅವಧಿಯಲ್ಲಿ ಏನೂ ಆಗಿರಬಹುದು. ದೂರುದಾರರು ಚೆಕ್ ನೀಡಿದವರನ್ನು ಪ್ರಕರಣದಲ್ಲಿ ಸೇರಿಸಿಯೇ ಇಲ್ಲ. ಎಸ್‌ಬಿಐನೇ ಚೆಕ್ ತಿದ್ದಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲದಿರುವಾಗ ದೂರುದಾರರ ಪರವಾಗಿ ತೀರ್ಪು ನೀಡಿ ರಾಜ್ಯ ಆಯೋಗ ತಪ್ಪು ಮಾಡಿದೆ. ಅಲ್ಲದೆ ಚೆಕ್‌ನ ಎಲ್ಲ ಮೊತ್ತವನ್ನೂ ಪರಿಹಾರವಾಗಿ ನೀಡಬೇಕು ಎನ್ನುವುದು ಸರಿಯಲ್ಲ ಎಂದು ವಾದಿಸಿದರು. ಬ್ಯಾಂಕ್ ಆಫ್ ಇಂಡಿಯಾ ತನ್ನ ಉತ್ತರದಲ್ಲಿ, ಚೆಕ್ ತಿದ್ದುಪಡಿಯಾದ ರೂಪದಲ್ಲಿ ತನ್ನ ಕೈಗೆ ಬಂದಿತ್ತು ಎಂದು ಎಸ್‌ಬಿಐ ಸುಳ್ಳು ಹೇಳುತ್ತಿದೆ. ಅದು ಚೆಕ್ ಹಿಂತಿರುಗಿಸಿದ್ದು ಚೆಕ್ ತಿದ್ದುಪಡಿಯಾಗಿದೆ ಎಂಬ ಕಾರಣಕ್ಕಾಗಿ ಅಲ್ಲ, ಅವಧಿ ಮೀರಿದೆ ಎಂಬ ಕಾರಣಕ್ಕಾಗಿ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ತನ್ನ ಪಾತ್ರವೇನೂ ಇಲ್ಲ ಎಂದು ಹೇಳಿತು. ಎರಡೂ ಬ್ಯಾಂಕ್‌ಗಳಿಗೆ ಚೆಕ್ ನೊಂದಣಿ ಮಾಡುವ ಪುಸ್ತಕವನ್ನು ಹಾಜರುಪಡಿಸುವಂತೆ ಸೂಚಿಸಲಾಯಿತು. ಬ್ಯಾಂಕ್ ಆಫ್ ಇಂಡಿಯಾ ಹಾಜರು ಪಡಿಸಿತು. ಅದರಲ್ಲಿ ಚೆಕ್‌ನ ಎಲ್ಲ ವಿವರವಿತ್ತು. ಆದರೆ ಎಸ್‌ಬಿಐ ‘ಅದು ಲಭ್ಯವಿಲ್ಲ’ ಎಂದು ಹೇಳಿ ಸಲ್ಲಿಸಲಿಲ್ಲ. ವಿಜಯಬ್ಯಾಂಕ್ ವಿರುದ್ಧ ಗುರ್ನಾಮ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸೇವಾನ್ಯೂನತೆಗಾಗಿ ಚೆಕ್‌ನ ಎಲ್ಲ ಮೊತ್ತವನ್ನು ಪಾವತಿಸುವಂತೆ ಬ್ಯಾಂಕ್‌ಗೆ ಆದೇಶಿಸಿತ್ತು. ಅದೇ ಮಾದರಿಯನ್ನು ಇಟ್ಟುಕೊಂಡಾಗ ರಾಜ್ಯ ಆಯೋಗ ನೀಡಿದ ತೀರ್ಪು ಸರಿ ಎಂದು ರಾಷ್ಟ್ರೀಯ ಆಯೋಗ ಹೇಳಿತು. ಆದರೆ ಬಡ್ಡಿಯನ್ನು ಮಾತ್ರ ಶೇ.೧೦ರಿಂದ ಶೇ.೬ಕ್ಕೆ ಇಳಿಸಿತು. ಮೇಲ್ಮನವಿ ಸಲ್ಲಿಸುವಾಗ ಎಸ್‌ಬಿಐ ಇಟ್ಟಿದ್ದ ಕಾನೂನಾತ್ಮಕ ಠೇವಣಿಯನ್ನು ಗ್ರಾಹಕ ಕಲ್ಯಾಣ ನಿಧಿಗೆ ವರ್ಗಾಯಿಸುವಂತೆ ಹೇಳಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು