ಸುಟ್ಟುಹೋದ ಸೀರೆಗೆ ಪರಿಹಾರ

ಸುಟ್ಟುಹೋದ ಸೀರೆಗಳನ್ನು ಪೂರೈಸಿದ ಏಳು ಸಂಸ್ಥೆಗಳಲ್ಲಿ ಒಂದು ಸಂಸ್ಥೆ ನೀಡಿದ ಬಿಲ್ ನಕಲಿಯಾಗಿತ್ತು. ಆ ಒಂದು ನಕಲಿ ಬಿಲ್‌ಗಾಗಿ ಜಾಬ್‌ವರ್ಕ್ ಮಾಡಿಕೊಟ್ಟ ಸಂಸ್ಥೆಗೆ ವಿಮೆ ಪರಿಹಾರ ನಿರಾಕರಿಸುವಂತಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ಆಯೋಗ ತೀರ್ಪು ನೀಡಿತು. ------------ ಗುಜರಾತಿನ ರಾಜಕೋಟದ ಮೆ.ಜಯ್‌ಗುರುದೇವ್ ಫಿನಿಶಿಂಗ್ ವರ್ಕ್ಸ್ ಕಚ್ಚಾ ಸೀರೆಗಳ ಫಿನಿಶಿಂಗ್ ವರ್ಕ್ ಮಾಡಿಕೊಡುವ ಒಂದು ಸಂಸ್ಥೆ. ಇದು ಒರಿಯಂಟಲ್ ಇನ್ಸುರೆನ್ಸ್ ಕಂಪನಿಯಿಂದ ಬೆಂಕಿಯಿಂದಾಗುವ ಅನಾಹುತಗಳಿಗಾಗಿ ೧೫ ಲಕ್ಷ ರುಪಾಯಿಯ ವಿಮೆಯನ್ನು ಪಡೆದುಕೊಂಡಿತ್ತು. ವಿಮೆಯ ಅವಧಿಯಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಜಯ್‌ಗುರುದೇವ ಸಂಸ್ಥೆಗೆ ತುಂಬಾ ಹಾನಿಯಾಗುತ್ತದೆ. ಮೆ. ಪುರುಷೋತ್ತಮ್ ಪ್ರಿಂಟ್ ಸೇರಿದಂತೆ ಏಳು ಸಂಸ್ಥೆಗಳು ತಮ್ಮ ಸೀರೆಗಳ ಫಿನಿಶಿಂಗ್ ವರ್ಕ್‌ಗಾಗಿ ಗುರುದೇವ ಸಂಸ್ಥೆಗೆ ಸೀರೆಗಳನ್ನು ಕಳುಹಿಸಿದ್ದವು. ಆ ಸಂಸ್ಥೆಗಳೆಲ್ಲ ತಾವು ಎಷ್ಟೆಷ್ಟು ಸೀರೆಗಳನ್ನು ಕೊಟ್ಟಿದ್ದೆವು ಎಂಬ ಕುರಿತು ದಾಖಲೆಗಳನ್ನು ಒದಗಿಸಿದ್ದವು. ಬೆಂಕಿ ಅನಾಹುತ ಸಂಭವಿಸಿದಾಗ ೧೪,೦೩೬ ಸೀರೆಗಳು ಅಲ್ಲಿದ್ದವು. ಅವುಗಳ ಮೌಲ್ಯ ೯.೬೩ ಲಕ್ಷ ರು. ಈ ಮೊತ್ತವನ್ನು ತಮಗೆ ನೀಡುವಂತೆ ಜಯ್‌ಗುರುದೇವ್ ಸಂಸ್ಥೆ ವಿಮೆ ಕಂಪನಿಯನ್ನು ಕೋರಿದಾಗ ಅದು ತಕರಾರು ಎತ್ತಿತು. ಅದು ಹಾನಿಯ ಸರ್ವೆ ಮಾಡುವುದಕ್ಕೆ ಹಿತಾರ್ಥ ದೇಸಾಯಿ ಮತ್ತು ತನಿಖೆಗಾಗಿ ಕೇತನ್ ಠಕ್ಕರ್ ಎಂಬವನ್ನು ನೇಮಿಸಿತ್ತು. ಅವರು ನೀಡಿದ ವರದಿಯಲ್ಲಿ ಪುರುಷೋತ್ತಮ್ ಪ್ರಿಂಟ್ ಪೂರೈಸಿದ್ದ ೧೨೦೦ ಸೀರೆಗಳನ್ನು ಮೆ.ಅಮೋಲಕ್ ಇಂಡಸ್ಟ್ರೀಸ್ ಎಂಬವರಿಂದ ಪಡೆದುದಾಗಿ ಹೇಳಲಾಗಿದೆ. ಅದಕ್ಕಾಗಿ ಬಿಲ್ ಕೂಡ ನೀಡಲಾಗಿದೆ. ಅಸಲಿಗೆ ಈ ಹೆಸರಿನ ಕಂಪನಿಯೇ ಇಲ್ಲ. ಇದೊಂದು ರೀತಿಯಲ್ಲಿ ಮೋಸ. ವಿಮೆ ಕಾಯಿದೆಯ ಪ್ರಕಾರ ವಿಮೆ ಕಂಪನಿಗೆ ಮೋಸ ಮಾಡಲು ಯತ್ನಿಸಿದರೆ ವಿಮೆಯನ್ನು ನಿರಾಕರಿಸಲಾಗುತ್ತದೆ. ಕಾರಣ ವಿಮೆ ಪರಿಹಾರ ನೀಡುವುದಿಲ್ಲ ಎಂದು ವಿಮೆ ಕಂಪನಿ ಹೇಳಿತು. ಇದನ್ನು ಪ್ರಶ್ನಿಸಿ ಜಯ್‌ಗುರುದೇವ್ ಕಂಪನಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ಸಲ್ಲಿಸಿ ೯,೬೩,೪೭೭ ರು. ನಷ್ಟ ಪರಿಹಾರ, ಈ ಮೊತ್ತಕ್ಕೆ ಶೇ.೧೮ರಂತೆ ಬಡ್ಡಿ ಹಾಗೂ ಮಾನಸಿಕ ಕಿರಿಕಿರಿಗಾಗಿ ೫೦ ಸಾವಿರ ರು. ಪರಿಹಾರ ನೀಡಬೇಕು ಎಂದು ಕೋರಿತು. ವಿಮೆ ಕಂಪನಿಯು ಈ ದೂರಿಗೆ ತಕರಾರು ಸಲ್ಲಿಸಿತು. ದೂರುದಾರರು ವಿಮೆ ಪಾಲಿಸಿ ತೆಗೆದುಕೊಂಡಿದ್ದನ್ನು ಅದು ಒಪ್ಪಿಕೊಂಡಿತು. ಆದರೆ ದೂರುದಾರರು ಕಂಪನಿಗೆ ಮೋಸ ಮಾಡಲು ಯತ್ನಿಸಿದ್ದಾರೆ. ಕಾರಣ ಅವರು ವಿಮೆಗೆ ಅರ್ಹರಲ್ಲ ಎಂಬುದು ಅದರ ವಾದವಾಗಿತ್ತು. ಸರ್ವೆಯರ್ ಪ್ರಕಾರ ೪೪೦೦ ಸೀರೆಗಳಿಗೆ ಹಾನಿಯಾಗಿದೆ. ದೂರುದಾರರು ಹೇಳಿರುವಂತೆ ೧೪೦೩೬ ಸೀರೆಗಳಿಗಲ್ಲ. ಸರ್ವೇಯರ್ ಪ್ರಕಾರ ಆಗಿರುವ ಹಾನಿ ೨,೭೪,೪೨೦ ರು. ಮಾತ್ರ. ಆದರೆ ತನಿಖೆ ನಡೆಸಿದ ಕೇತನ್ ಠಕ್ಕರ್ ಅವರ ವರದಿಯ ಪ್ರಕಾರ ಅಮೋಲಕ್ ಇಂಡಸ್ಟ್ರಿ ಎಂಬುದು ಅಸ್ತಿತ್ವದಲ್ಲೇ ಇಲ್ಲ. ಪುರುಷೋತ್ತಮ ಪ್ರಿಂಟ್‌ಗೆ ಅಮೋಲಕ್ ಇಂಡಸ್ಟ್ರಿ ೧೨೦೦ ಸೀರೆ ಒದಗಿಸಿದೆ ಎಂದು ನೀಡಿರುವ ಬಿಲ್ ನಕಲಿ ಎಂಬುದು ಅವರ ಹೇಳಿಕೆಯ ಸಾರವಾಗಿತ್ತು. ಜಿಲ್ಲಾ ಗ್ರಾಹಕ ವೇದಿಕೆಯು ವಿಮೆ ಕಂಪನಿಯ ವಾದವನ್ನು ಒಪ್ಪಿಕೊಂಡಿತು. ಮತ್ತು ದೂರನ್ನು ವಜಾಗೊಳಿಸಿತು. ತನಿಖಾಧಿಕಾರಿಯ ವರದಿಯ ಪ್ರಕಾರ ದೂರುದಾರರು ವಿಮೆ ಲಾಭ ಪಡೆದುಕೊಳ್ಳಲು ನಕಲಿ ಬಿಲ್ ನೀಡಿದ್ದಾರೆ ಎಂಬ ಕಾರಣವನ್ನು ಅದು ನೀಡಿತು. ಇದರಿಂದ ಅಸಮಾಧಾನಗೊಂಡ ದೂರುದಾರರು ಗುಜರಾತ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದರು. ರಾಜ್ಯ ಆಯೋಗವೂ ಅದೇ ಕಾರಣವನ್ನು ನೀಡಿ ಮೇಲ್ಮನವಿಯನ್ನು ವಜಾಗೊಳಿಸಿತು. ಇದರ ವಿರುದ್ಧ ದೂರುದಾರರು ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲೇರಿದರು. ಇಲ್ಲಿ ದೂರುದಾರರ ಪರ ವಕೀಲರು ಪ್ರಬಲವಾದ ವಾದವನ್ನು ಮಂಡಿಸಿದರು. ದೂರುದಾರರು ವಿವಿಧ ಏಜೆನ್ಸಿಗಳಿಂದ ಸೀರೆಗಳನ್ನು ಪಡೆದು ಅದನ್ನು ಫಿನಿಶಿಂಗ್ ಮಾಡುವ ಉದ್ಯೋಗವನ್ನು ಹೊಂದಿದ್ದಾರೆ. ಹೀಗೆ ಸೀರೆ ನೀಡಿದವರಲ್ಲಿ ಮೆ.ಪುರುಷೋತ್ತಮ ಪ್ರಿಂಟ್ ಕೂಡ ಒಂದು. ದೂರುದಾರರು ಇವರಿಂದ ೧೨೦೦ ಸೀರೆಗಳನ್ನು ಪಡೆದುಕೊಂಡಿದ್ದಾರೆ. ಆದರೆ ಪುರುಷೋತ್ತಮ ಪ್ರಿಂಟ್‌ನವರು ಆ ಸೀರೆಗಳನ್ನು ಅಮೋಲಕ್ ಇಂಡಸ್ಟ್ರಿಯಿಂದ ಪಡೆದುಕೊಂಡಿದ್ದೋ ಅಲ್ಲವೋ ಎಂಬುದನ್ನು ಪರಿಶೀಲಿಸಲಿಲ್ಲ. ದೂರುದಾರರು ಕೇವಲ ಜಾಬ್‌ವರ್ಕ್ ಮಾಡುವವರು. ಕಚ್ಚಾ ಸೀರೆಗಳನ್ನು ಪಡೆದುಕೊಂಡು ಅದನ್ನು ಫಿನಿಶಿಂಗ್ ಮಾಡಿ ಕೊಡುವುದಷ್ಟೇ ಅವರ ಕೆಲಸ. ದೂರುದಾರರು ನೇರವಾಗಿ ಅಮೋಲಕ್ ಇಂಡಸ್ಟ್ರಿಯವರ ಜೊತೆ ಯಾವುದೇ ಒಪ್ಪಂದವನ್ನು ಮಾಡಿಕೊಂಡಿರುವುದಿಲ್ಲ. ಹೀಗಿರುವಾಗ ವಿಮೆ ಹಣ ನೀಡದೆ ಇರುವುದು ವಿಮೆ ಕಂಪನಿಯ ತಪ್ಪು ಎಂದು ವಾದಿಸಿದರು. ಹೀಗೆ ವಿಮೆ ಕೊಡುವುದಿಲ್ಲ ಎಂದು ಹೇಳುವುದಕ್ಕೂ ವಿಮೆ ಕಂಪನಿ ಸಕಾರಣವಿಲ್ಲದೆ ೧೫ ತಿಂಗಳುಗಳಷ್ಟು ಸುದೀರ್ಘ ಅವಧಿಯನ್ನು ತೆಗೆದುಕೊಂಡಿತು. ಸರ್ವೇಯರ್ ಸೀರೆಗಳ ಮೌಲ್ಯಮಾಪನ ಮಾಡುವಾಗ ಎಲ್ಲ ಸೀರೆಗಳಿಗೂ ೮೫ ರುಪಾಯಿಯಂತೆ ಹಿಡಿದಿದ್ದಾರೆ. ಆದರೆ ಬೇರೆ ಬೇರೆ ಸೀರೆಗಳ ಬೆಲೆೆ ಬೇರೆ ಬೇರೆಯಾಗಿದೆ. ಸುಟ್ಟಿರುವ ಸೀರೆಗಳು ಮತ್ತು ಬೂದಿಯ ತೂಕದ ಆಧಾರದ ಮೇಲೆ ಸರ್ವೇಯರ್ ೪೫೫೨ ಸೀರೆಗಳಿಗೆ ಹಾನಿಯಾಗಿದೆ ಎಂದು ಅಂದಾಜು ಮಾಡಿದ್ದಾರೆ. ಈ ಕ್ರಮ ಕೂಡ ತಪ್ಪು ಎಂದು ಅರ್ಜಿದಾರರ ವಕೀಲರು ವಾದಿಸಿದರು. ಕೆಳಗಿನ ಗ್ರಾಹಕ ನ್ಯಾಯಾಲಯಗಳು ಕಾನೂನು ಪ್ರಕಾರವಾಗಿಯೇ ವಿಮೆ ಪರಿಹಾರ ನಿರಾಕರಿಸಿವೆ ಎಂದು ವಿಮೆ ಕಂಪನಿಯ ವಕೀಲರು ವಾದಿಸಿದರು. ಸರ್ವೇಯರ್ ಮತ್ತು ತನಿಖೆದಾರರ ವರದಿಯನ್ನು ಆಧರಿಸಿಯೇ ಈ ನಿರ್ಣಯಕ್ಕೆ ಬರಲಾಗಿದೆ. ಅಮೋಲಕ್ ಎಂಬ ಕಂಪನಿಯೇ ಅಸ್ತಿತ್ವದಲ್ಲಿ ಇಲ್ಲ. ಇನ್ನೂ ಹೆಚ್ಚಿನದೆಂದರೆ ದೂರುದಾರರು ಲೆಕ್ಕದ ಪುಸ್ತಕವನ್ನು ಸರ್ವೆಯರ್, ತನಿಖೆದಾರರ ಮುಂದೆ ಪ್ರಸ್ತುತಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗ ಸರ್ವೇಯರ್‌ಗೆ ಸುಟ್ಟಿರುವ ಸೀರೆಗಳ ಆಧಾರದ ಮೇಲೆ ಮೌಲ್ಯ ನಿರ್ಧಾರ ಮಾಡಬೇಕಾಗಿ ಬಂತು. ೩೦೧೦ ಸೀರೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸರ್ವೇಯರ್ ವರದಿಯಲ್ಲಿ ಹೇಳಿದ್ದಾರೆ. ಅಮೋಲಕ್ ಇಂಡಸ್ಟ್ರಿಯವರು ನೀಡಿರುವ ರಸೀದಿಯನ್ನು ದೂರುದಾರರು ವಿಮೆ ಕಂಪನಿಗೆ ನೀಡಿರುವ ಕಾರಣ ದೂರುದಾರರು ಮತ್ತು ಆ ಕಂಪನಿಯ ನಡುವೆ ಕರಾರಿನ ಸಂಬಂಧ ಇದೇ ಎಂದೇ ಅರ್ಥ ಎಂದು ವಾದಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ರಾಷ್ಟ್ರೀಯ ಗ್ರಾಹಕ ಆಯೋಗದ ನ್ಯಾಯಮೂರ್ತಿಗಳು, ಬೆಂಕಿ ಅನಾಹುತ ಸಂಭವಿಸಿದ್ದನ್ನು ಸರ್ವೇಯರ್ ದೃಢಪಡಿಸಿದ್ದಾರೆ. ಸುಟ್ಟುಹೋಗಿರುವ ಸೀರೆಗಳು ೪೫೫೨ ಎಂದು ಅಂದಾಜು ಮಾಡಿ ಅದಕ್ಕೆ ೮೫ ರು.ಗಳಂತೆ ಲೆಕ್ಕ ಹಾಕಿದಾಗ ಅದರ ಮೌಲ್ಯ ೩,೮೬,೯೨೦ ರು. ಆಗುತ್ತದೆ. ಇದರಲ್ಲಿ ಪುರುಷೋತ್ತಮ್ ಪ್ರಿಂಟ್‌ನವರದ್ದು ಅಮೋಲಕ್ ಇಂಡಸ್ಟ್ರಿಯಿಂದ ರಸೀದಿ ಪಡೆದ ೧೨೦೦ ಸೀರೆಗಳ ಮೌಲ್ಯವನ್ನು ಕಳೆದು ೨೭೪೪೨೦ ರು. ಪರಿಹಾರ ನೀಡಬಹುದು ಎಂದು ಹೇಳಿದ್ದಾರೆ. ಇನ್ನು ವಿಮೆ ಕಂಪನಿ ಹೇಳುತ್ತಿರುವಂತೆ ೧೨೦೦ ಸೀರೆಗಳ ಸುಳ್ಳು ರಸೀದಿ ನೀಡಿರುವುದರಿಂದ ಆಗಿರುವ ಎಲ್ಲ ಹಾನಿಗೂ ಪರಿಹಾರವನ್ನು ನಿರಾಕರಿಸಬೇಕೆ ಎಂಬುದು ಪ್ರಶ್ನೆ. ಸರ್ವೇಯರ್ ತನ್ನ ವರದಿಯಲ್ಲಿ ಆ ೧೨೦೦ ಸೀರೆಗಳ ಮೌಲ್ಯವನ್ನು ಕಡಿತಗೊಳಿಸಿಯೇ ಪರಿಹಾರ ಸೂಚಿಸಿದ್ದಾರೆ. ಕೆಳಗಿನ ಎರಡೂ ಗ್ರಾಹಕ ನ್ಯಾಯಾಲಯಗಳು ತನಿಖೆದಾರರ ವರದಿಯನ್ನು ಅನ್ವಯಿಸುವಾಗ ತಪ್ಪು ಮಾಡಿದ್ದಾರೆ. ಒಂದು ವೇಳೆ ದೂರುದಾರ ಆ ೧೨೦೦ ಸೀರೆಗಳ ಬಿಲ್ ವಿಮೆ ಕಂಪನಿಗೆ ನೀಡದೆ ಇದ್ದರೆ ಆತನಿಗೆ ಪರಿಹಾರ ನೀಡುತ್ತಿರಲಿಲ್ಲವೆ? ಆತ ಕೇವಲ ಕಚ್ಚಾ ಸೀರೆಗಳ ಸಂಸ್ಕರಣೆ ಮಾಡುವ ಕೆಲಸ ಮಾತ್ರ ಮಾಡುವುದು. ಕಾರಣ ದೂರುದಾರರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಅವರಿಗೆ ವಿಮೆ ಕಂಪನಿಯು ಸರ್ವೇಯರ್ ಹೇಳಿದ ಮೊತ್ತ ೨,೭೪,೪೨೦ ರು.ಗಳನ್ನು ಶೇ.೯ರ ಬಡ್ಡಿ ಸಹಿತ ನಾಲ್ಕು ವಾರಗಳೊಳಗೆ ನೀಡಬೇಕು. ಹಾಗೊಂದು ವೇಳೆ ನೀಡದೆ ಇದ್ದರೆ ಬಡ್ಡಿ ದರವನ್ನು ಶೇ.೧೨ರಂತೆ ಲೆಕ್ಕಹಾಕಿ ನೀಡಬೇಕಾಗುತ್ತದೆ ಎಂದು ಆದೇಶಿಸಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು