ವಿಮೆ ಕಾಯ್ದೆಯ ತಿದ್ದುಪಡಿ ಹಿಂದಿನ ಪಾಲಿಸಿಗಳಿಗೆ ಅನ್ವಯಿಸದು
೧೯೩೮ರ ವಿಮೆ ಕಾಯ್ದೆಯ ಸೆಕ್ಷನ್ ೪೫ರ ಪ್ರಕಾರ ಪಾಲಿಸಿಯ ೨ ವರ್ಷ ಮುಗಿದ ಬಳಿಕ ಪಾಲಿಸಿಯ ಲೋಪದೋಷಗಳನ್ನು ಪರಿಗಣಿಸುವಂತಿಲ್ಲ. ಆದರೆ ಇದಕ್ಕೆ ೨೬-೧೨-೨೦೧೪ರಂದು ತಿದ್ದುಪಡಿ ತರಲಾಗಿದೆ. ಇದು ನಂತರದ ಪಾಲಿಸಿಗಳಿಗೆ ಅನ್ವಯವೇ ಹೊರತು ಪೂರ್ವಾನ್ವಯವಾಗುವುದಿಲ್ಲ.
------------
ಜಿಂದಗಿ ಕೆ ಸಾಥ್ ಭಿ ಜಿಂದಗಿ ಕೆ ಬಾದ್ ಭಿ ಎಂಬ ಘೋಷಣೆಯೊಂದಿಗೆ ನಿಮಗೆ ವಿಮೆಯನ್ನು ನೀಡುವುದಕ್ಕೆ ಮುಂದೆ ಬರುವ ಭಾರತೀಯ ಜೀವ ವಿಮಾ ನಿಗಮವು ಈ ಘೋಷಣೆಗೆ ಅನುಗುಣವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆಯೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸುವಂಥ ಪ್ರಕರಣವೊಂದು ಇಲ್ಲಿದೆ. ವಿಮೆ ಪಡೆದ ವ್ಯಕ್ತಿಯ ವಾರಸುದಾರರಿಗೆ ವಿಮೆಯ ಮೊತ್ತ ಸಿಗದ ಹಾಗೆ ಮಾಡಲು ಏನಾದರೂ ಒಳಸುಳಿಗಳನ್ನು ಅದು ಹುಡುಕುತ್ತಲೇ ಇರುತ್ತದೆ. ಹೀಗೆ ತಕ್ಷಣಕ್ಕೆ ವಿಮೆಯ ಹಣ ವಾರಸುದಾರರಿಗೆ ಸಿಗದೆ ಹೋದಾಗ ವಿಮೆ ಮಾಡಿಸುವುದರ ಮೂಲ ಉದ್ದೇಶವೇ ವಿಫಲವಾಗುತ್ತದೆ.
ಹಾಗೆಯೇ ವಿಮೆ ಮಾಡಿಸುವ ಧಾವಂತದಲ್ಲಿ ವಿಮೆಯ ಏಜೆಂಟರು ಏನೇನೋ ಬಣ್ಣದ ಕನಸುಗಳನ್ನು ಬಿತ್ತುತ್ತಾರೆ. ಫಾರ್ಮ್‌ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಉಳಿದುದನ್ನು ತಾವೇ ತುಂಬಿಕೊಳ್ಳುತ್ತಾರೆ. ಹೀಗೆ ಏಜೆಂಟ್ ತುಂಬಿದ ಫಾರ್ಮ್‌ನ ವಿವರಗಳಿಗೆ ಪಾಲಿಸಿದಾರ ಹೊಣೆಯಾಗುತ್ತಾನೆಯೇ? ಇಲ್ಲ ಎಂದು ಗ್ರಾಹಕ ನ್ಯಾಯಾಲಯಗಳ ತೀರ್ಪುಗಳು ಹೇಳುತ್ತವೆ.
ಏನಿದು ಪ್ರಕರಣ?: ಪ್ರಕರಣದ ದೂರುದಾರರಾದ ಚಂಡೀಗಡದ ಜಸ್ವಿಂದರ ಕೌರ್ ಅವರ ಪತಿ ಗುರುಬೀರ್ ಸಿಂಗ್ ರಿಯಾರ್ ಅವರು ೨೦೧೨ರಲ್ಲಿ ಎಲ್‌ಐಸಿಯಿಂದ ಜೀವನ್ ಆನಂದ್ ಎಂಬ ಪಾಲಿಸಿಯನ್ನು ೫ ಲಕ್ಷ ರು.ಗೆ ಮಾಡಿಸುತ್ತಾರೆ. ಈ ಪಾಲಿಸಿಯಲ್ಲಿ ಪತ್ನಿ ಜಸ್ವಿಂದರ್ ಕೌರ್ ನಾಮಿನಿಯಾಗಿರುತ್ತಾರೆ. ಪಾಲಿಸಿಯ ರಿಸ್ಕ್ ಆರಂಭವಾದದ್ದು ೪-೧೨-೨೦೧೨ರಂದು. ದುರ್ದೈವವಶಾತ್ ೨೬-೦೯-೨೦೧೫ರಂದು ಏನು ಕಾರಣವೋ ಏನೋ ಗುರುಬೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ಬಳಿಕ ವಿಮೆ ಮೊತ್ತವನ್ನು ನೀಡುವಂತೆ ಕೋರಿ ಜಸ್ವಿಂದರ್ ಕೌರ್ ಎಲ್‌ಐಸಿಯ ವಿಭಾಗೀಯ ಪ್ರಬಂಧಕರಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ಬೇಡಿಕೆ ತಿರಸ್ಕೃತವಾಗುತ್ತದೆ. ಈ ಸಂಬಂಧ ಎಲ್‌ಐಸಿ ೨೪-೦೬-೨೦೧೬ರಂದು ಬರೆದ ಪತ್ರದಲ್ಲಿ, ಮೃತ ಪಾಲಿಸಿದಾರರು ಪಾಲಿಸಿಯನ್ನು ಪಡೆಯುವ ಸಮಯದಲ್ಲಿ ಕೆಲವು ವಿಷಯಗಳನ್ನು ಮರೆಮಾಚಿದ್ದರು ಎಂದು ತಿಳಿಸಿತು. ಇದರ ವಿರುದ್ಧ ಝೂನಲ್ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು. ಅಲ್ಲಿಂದಲೂ ಅದೇ ಉತ್ತರ. ಬಳಿಕ ಜಸ್ವಿಂದರ್ ಕೌರ್ ಅವರು ಎಲ್‌ಐಸಿಯ ಕ್ಲೇಮ್ಸ್ ಡಿಸ್‌ಪ್ಯೂಟ್ ರಿಡ್ರೆಸಲ್ ಕಮಿಟಿಗೆ ಅರ್ಜಿ ಸಲ್ಲಿಸಿದರು. ಆದರೆ ಅಲ್ಲಿ ಯಾವುದೇ ನಿರ್ಣಯ ಕೈಗೊಳ್ಳದ ಕಾರಣ ಜಸ್ವಿಂದರ್‌ಕೌರ್ ಗ್ರಾಹಕ ವೇದಿಕೆಯ ಮೆಟ್ಟಿಲು ಹತ್ತಿದರು.
ಎಲ್‌ಐಸಿಯ ಮುಖ್ಯ ತಕರಾರು ಎಂದರೆ ಮೃತ ಪಾಲಿಸಿದಾರ ಬೈಪೋಲಾರ್ ಡಿಸ್‌ಆರ್ಡರ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಬೇರೆಬೇರೆ ಕಡೆಗಳಿಂದ ಚಿಕಿತ್ಸೆ ಪಡೆದಿದ್ದರು. ಆದರೆ ಪಾಲಿಸಿ ಪಡೆಯುವಾಗ ಅದನ್ನು ಮುಚ್ಚಿಟ್ಟಿದ್ದರು. ೨.೨.೨೦೧೨ರಂದು ಪಾಲಿಸಿ ಫಾರ್ಮ್ ತುಂಬುವಾಗ ಮಾನಸಿಕ ಸ್ಥಿತಿಯ ಕುರಿತು ಇದ್ದ ಪ್ರಶ್ನೆಗಳಿಗೆ ನಕಾರಾತ್ಮಕವಾಗಿ ಉತ್ತರಿಸಿದ್ದು. ಪಾಲಿಸಿದಾರರು ೨೦೦೮ರಿಂದ ೨೦೦೯ರ ವರೆಗೆ ಮತ್ತು ೨೦೧೫ರಲ್ಲಿ ನರರೋಗ ಮತ್ತು ಮಾನಸಿಕ ರೋಗ ತಜ್ಞರಿಂದ ಹಾಗೂ ಮಾದಕ ದ್ರವ್ಯ ವ್ಯಸನ ಮುಕ್ತಿ ಶಿಬಿರದಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಪಾಲಿಸಿ ಮೊತ್ತವನ್ನು ನಾಮಿನಿಗೆ ನಿರಾಕರಿಸಲಾಗಿದೆ ಎಂದು ಹೇಳಿತು.
೧೬-೧೦-೨೦೧೭ರಂದು ತೀರ್ಪು ನೀಡಿದ ಜಿಲ್ಲಾ ವೇದಿಕೆಯು, ದೂರನ್ನು ಪುರಸ್ಕರಿಸಿತು. ೧೯೩೮ರ ವಿಮೆ ಕಾಯ್ದೆಯ ಸೆಕ್ಷನ್ ೪೫ರ ಪ್ರಕಾರ ಪಾಲಿಸಿಯ ೨ ವರ್ಷ ಮುಗಿದ ಬಳಿಕ ಪಾಲಿಸಿಯ ಲೋಪದೋಷಗಳನ್ನು ಪರಿಗಣಿಸುವಂತಿಲ್ಲ. ಕಾರಣ ವಿಮೆ ಕಂಪನಿಯು ತಕರಾರು ಮಾಡದೆ ನಾಮಿನಿಗೆ ಪಾಲಿಸಿಯ ಹಣವನ್ನು ನೀಡಬೇಕು ಎಂದು ಹೇಳಿತು. ಹಣ ನೀಡದೇ ಇರುವುದು ಸೇವಾನ್ಯೂನತೆ ಮತ್ತು ಸಾಧುವಲ್ಲದ ವ್ಯವಹಾರ ಕ್ರಮ ಎಂದು ಟಿಪ್ಪಣಿ ಬರೆಯಿತು.
ಎಲ್‌ಐಸಿಯು ದೂರುದಾರರಿಗೆ ೫ ಲಕ್ಷ ರುಪಾಯಿ ಪಾಲಿಯ ಮೊತ್ತವನ್ನು ನೀಡಬೇಕು. ಜೊತೆಗೆ ಸೇವಾನ್ಯೂನತೆಗಾಗಿ, ಮಾನಸಿಕ ಕಿರಿಕಿರಿಗಾಗಿ ಮತ್ತು ಸಾಧುವಲ್ಲದ ವ್ಯವಹಾರ ನೀತಿಗಾಗಿ ೨೫ ಸಾವಿರ ರುಪಾಯಿ ಪರಿಹಾರವನ್ನು ನೀಡಬೇಕು. ವ್ಯಾಜ್ಯದ ವೆಚ್ಚವೆಂದು ೧೦ ಸಾವಿರ ರುಪಾಯಿ ನೀಡಬೇಕು. ಇವೆಲ್ಲವನ್ನು ಆದೇಶ ತಲುಪಿದ ೩೦ ದಿನಗಳೊಳಗೆ ನೀಡಬೇಕು. ಇದಕ್ಕೂ ವಿಳಂಬವಾದರೆ ಈ ಎಲ್ಲ ಮೊತ್ತಗಳಿಗೆ ಶೇ.೧೨ರಂತೆ ಬಡ್ಡಿಯನ್ನು ನೀಡಬೇಕು ಎಂದು ಜಿಲ್ಲಾ ವೇದಿಕೆ ಪರಿಹಾರ ಘೋಷಿಸಿತು.
ಜಿಲ್ಲಾ ವೇದಿಕೆಯ ತೀರ್ಪಿನಿಂದ ಅಸಮಾಧಾನಗೊಂಡ ಎಲ್‌ಐಸಿಯು ರಾಜ್ಯ ವೇದಿಕೆಯಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ರಾಜ್ಯ ವೇದಿಕೆಯು ೨೮-೧೧-೨೦೧೭ರಂದು ನೀಡಿದ ಆದೇಶದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿಯಿತು. ದೂರುದಾರರ ಪತಿಯು ಪಾಲಿಸಿಯನ್ನು ಪಡೆದ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲದ ನಂತರ ನಿಧನರಾಗಿದ್ದಾರೆ ಎಂದು ಹೇಳಿತು.
ಇದರ ವಿರುದ್ಧ ಎಲ್‌ಐಸಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಇಲ್ಲಿ ಪ್ರತಿವಾದಿಯಾದ ಜಸ್ವಿಂದರ ಕೌರ್ ನೀಡಿದ ವಿವರ ಏನೆಂದರೆ, ಎಲ್‌ಐಸಿಯ ಏಜೆಂಟ್ ವಿಮೆ ಪ್ರಸ್ತಾವನೆಯ ಫಾರ್ಮ್ ಮೇಲೆ ತಮ್ಮ ಪತಿಯಿಂದ ಕೇವಲ ಸಹಿಯನ್ನು ಮಾಡಿಸಿಕೊಂಡರು. ಉಳಿದೆಲ್ಲವನ್ನು ಅವರೇ ತಮ್ಮ ಕೈಯಾರೆ ತುಂಬಿದ್ದಾರೆ. ವಿಮೆ ಏಜೆಂಟ್ ತುಂಬಿರುವ ಫಾರ್ಮ್‌ನಲ್ಲಿ ಲೋಪದೋಷಗಳಿದ್ದರೆ ಅದಕ್ಕೆ ಪಾಲಿಸಿದಾರರಾಗಿದ್ದ ತಮ್ಮ ಪತಿ ಹೊಣೆಯಲ್ಲ ಎಂದು ಹೇಳಿದರು. ಪ್ರಮಾಣಪತ್ರ ನೀಡುವ ವೈದ್ಯರ ಅಫಿಡಾವಿಟ್ ಇಲ್ಲದೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ವಿಮೆಯನ್ನು ನಿರಾಕರಿಸಲು ಬರುವುದಿಲ್ಲ ಎಂದು ವಿವರಿಸಿದರು. ಈ ಸಂಬಂಧದಲ್ಲಿ ಅವರು ಎಲ್‌ಐಸಿ ವಿರುದ್ಧ ಬೀನಾ ಜೋಶಿ ಪ್ರಕರಣದಲ್ಲಿಯ ತೀರ್ಪನ್ನು ಉಲ್ಲೇಖಿಸಿದರು.
ವಿಮೆ ಕಂಪನಿಯು ತನ್ನ ಸಮರ್ಥನೆಗಾಗಿ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿತು. ಅಲ್ಲದೆ ಇನ್ಸುರೆನ್ಸ್ ಆ್ಯಕ್ಟ್ ೧೯೩೮ರ ಸೆಕ್ಷನ್ ೪೫ಕ್ಕೆ ೨೬-೧೨-೨೦೧೪ರಂದು ತಿದ್ದುಪಡಿಯನ್ನು ತರಲಾಗಿದೆ. ಮೊದಲು ಪಾಲಿಸಿಯ ತಕರಾರುಗಳನ್ನು ೨ ವರ್ಷ ಕಳೆದ ಬಳಿಕ ಪರಿಗಣಿಸಲಾಗದು ಎಂದಿದ್ದನ್ನು ೩ ವರ್ಷಕ್ಕೆ ಹೆಚ್ಚಿಸಲಾಗಿದೆ. ಇಲ್ಲಿ ಪಾಲಿಸಿದಾರರು ೩ ವರ್ಷದೊಳಗೇ ನಿಧನರಾಗಿದ್ದಾರೆ ಎಂದು ಹೇಳಿತು.
ಎರಡೂ ಕಡೆಯ ವಕೀಲರು ತಮ್ಮ ಸಮರ್ಥನೆಗಾಗಿ ರಾಷ್ಟ್ರೀಯ ಗ್ರಾಹಕ ವೇದಿಕೆ ಮತ್ತು ಸುಪ್ರೀಂ ಕೋರ್ಟ್ ವಿವಿಧ ಪ್ರಕರಣಗಳಲ್ಲಿ ನೀಡಿದ್ದ ಆದೇಶಗಳನ್ನು ಉಲ್ಲೇಖಿಸಿದರು. ಎರಡೂ ವಾದಗಳನ್ನು ಕೇಳಿಸಿಕೊಂಡ ರಾಷ್ಟ್ರೀಯ ಆಯೋಗ ಈ ಮುಂದಿನ ತೀರ್ಮಾನಕ್ಕೆ ಬಂತು.
ಇಲ್ಲಿ ಪ್ರತಿವಾದಿಯಾಗಿರುವ ಜಸ್ವಿಂದರ ಕೌರ್ ಅವರ ಪತಿ ೪-೧೨-೨೦೧೨ರಂದು ಜೀವ ವಿಮೆ ಪಾಲಿಸಿಯನ್ನು ಪಡೆದುಕೊಂಡರು. ಪಾಲಿಸಿ ಮೊತ್ತ ೫ ಲಕ್ಷ ರು. ಆತ್ಮಹತ್ಯೆ ಮಾಡಿಕೊಂಡದ್ದು ೨೬-೯-೨೦೧೫ರಂದು. ೨ ವರ್ಷ ೯ ತಿಂಗಳ ನಂತರ. ಪ್ರತಿವಾದಿಯ ಬೇಡಿಕೆಯನ್ನು ವಿಮೆ ಕಂಪನಿ ತಿರಸ್ಕರಿಸಿದ್ದು ೨೫-೦೬-೨೦೧೬ರಂದು. ನೀಡಿದ ಕಾರಣ ಪಾಲಿಸಿಯ ಫಾರ್ಮ್ ತುಂಬುವಾಗ ವಾಸ್ತವಿ ಅಂಶಗಳನ್ನು ಮುಚ್ಚಿಟ್ಟಿದ್ದರು ಎಂದು. ಬೈಪೋಲಾರ್ ಡಿಸ್‌ಆರ್ಡರ್‌ನಿಂದ ಬಳಲುತ್ತಿದ್ದುದನ್ನು ತಿಳಿಸಿಲ್ಲ ಎಂಬ ಆಕ್ಷೇಪ ಸರಿಯಾಗಿದೆ. ವಿಮೆ ಎಂಬುದು ಅತ್ಯಂತ ನಂಬಿಕೆಯಿಂದ ಮಾಡಿಕೊಳ್ಳುವ ಕರಾರು. ಕಾರಣ ವಿಮೆಗೆ ಒಳಗಾಗುವ ವ್ಯಕ್ತಿ ಸರಿಯಾದ ಮಾಹಿತಿಯನ್ನು ಒದಗಿಸುವುದು ಕಡ್ಡಾಯ. ವಿಮೆ ಕಾಯ್ದೆಯ ಸೆಕ್ಷನ್‌೪೫ಕ್ಕೆ ತಿದ್ದುಪಡಿಯನ್ನು ತಂದು ತಪ್ಪು ಮಾಹಿತಿಯನ್ನು ನೀಡಿರುವುದನ್ನು ಮೂರು ವರ್ಷಗಳ ನಂತರ ಪ್ರಶ್ನಿಸಲು ಬರುವುದಿಲ್ಲ ಎಂದು ಹೇಳಿರುವ ದಿನಾಂಕ ೨೬-೧೨-೨೦೧೪.
ಅಂದರೆ ಪ್ರಸ್ತುತ ಪ್ರಕರಣದಲ್ಲಿ ಪಾಲಿಸಿದಾರ ವ್ಯಕ್ತಿಯು ಪಾಲಿಸಿಯನ್ನು ಪಡೆದಾಗ ಸೆಕ್ಷನ್ ೪೫ ಜಾರಿಯಲ್ಲಿತ್ತು. ಆ ಬಳಿಕವೇ ಅದಕ್ಕೆ ತಿದ್ದುಪಡಿಯಾಗಿದ್ದು. ತಿದ್ದುಪಡಿ ಅಂಶಗಳು ಆನಂತರದ ಪಾಲಿಸಿಗಳಿಗೆ ಅನ್ವಯ ಎಂದು ಅದರಲ್ಲಿಯೇ ಹೇಳಲಾಗಿದೆ. ಅಂದರೆ ಪ್ರಸ್ತುತ ಪಾಲಿಸಿಗೆ ೨ ವರ್ಷದ ಅವಧಿಯೇ ಅನ್ವಯವಾಗುತ್ತದೆ. ಕಾರಣ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ನೀಡಿದ ತೀರ್ಪು ಸರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್‌ಐಸಿಯ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು.
Comments
Post a Comment