ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಅಧಿಕಾರಿಗಳು ಮತ್ತು ಕಾನೂನು ಮಾಡುವವರು ಸ್ವಲ್ಪ ವಿವೇಚನೆ ಬಳಸಿದರೆ ಸಾರ್ವಜನಿಕರ ಬದುಕು ಅದೆಷ್ಟೋ ಸರಳವಾಗಿರುತ್ತಿತ್ತು. ಅನಗತ್ಯವಾಗಿ ಕೋರ್ಟ್ ಕಚೇರಿ ತಿರುಗುವುದು ತಪ್ಪುತ್ತಿತ್ತು. ಅಂಚೆ ಇಲಾಖೆಯ ಅಧಿಕಾರಿಗಳ ಅನಗತ್ಯ ಕಿರಿಕಿರಿಯೊಂದು ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಅಲ್ಲಿ ಅದಕ್ಕೆ ಮುಖಭಂಗವಾಯಿತು. ಗುಜರಾತ ರಾಜ್ಯದ ಭಾವನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ರಸೇಂದುಭಾಯಿ ಶಾಂತಿಲಾಲ್ ಪಾರೇಖ್ ಎನ್ನುವವರು ತಮ್ಮ ನಿವೃತ್ತಿಯ ಬಳಿಕ ಹಿರಿಯ ನಾಗರಿಕರ ಸೇವಾ ಯೋಜನೆಯ ಖಾತೆಯೊಂದನ್ನು ತೆರೆದಿದ್ದರು. ಅದನ್ನು ಅಂಚೆ ಇಲಾಖೆಯ ಏಜೆಂಟ್ ಒಬ್ಬನ ಮೂಲಕ ತೆರೆದದ್ದು. ಈ ಖಾತೆಯನ್ನು ಅಂಚೆ ಇಲಾಖೆಯು ಅಂಗೀಕರಿಸಿತ್ತು. ಆದರೆ ಈ ಖಾತೆಗೆ ಆಡಿಟ್ ಆಕ್ಷೇಪಣೆ ಬಂತು. ಆಗ ಅಂಚೆ ಕಚೇರಿಯು ಈ ಖಾತೆಯನ್ನು ಸ್ಥಗಿತಗೊಳಿಸಿತು. ಇದನ್ನು ಖಾತೆದಾರರಿಗೆ ತಿಳಿಸಿತು. ನಿಮಗೆ ಈಗಾಗಲೇ ಕೊಟ್ಟಿರುವ ಬಡ್ಡಿಯನ್ನು ವಜಾ ಮಾಡಿಕೊಂಡು ಖಾತೆಯಲ್ಲಿರುವ ಉಳಿದ ಹಣವನ್ನು ವಾಸಪ್ ನೀಡುವುದಾಗಿ ಹೇಳಿತು. ಆದರೆ ಇದಕ್ಕೆ ಅರ್ಜಿದಾರರು ಒಪ್ಪಲಿಲ್ಲ. ಭಾವನಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ದಾಖಲಿಸಿದರು. ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿತು. ದೂರುದಾರರು ಖಾತೆ ತೆರೆಯುವುದಕ್ಕೆ ಅರ್ಹರಲ್ಲ ಎಂದಿದ್ದರೆ ಅವರಿಗೆ ಖಾತೆ ತೆರೆಯುವುದಕ್ಕೆ ಅವಕಾಶ ನೀಡಬಾರದಿತ್ತು. ಅದು ಅಂಚೆ ಕಚೇರಿಯ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಅದು ಹೇಳಿತು. ಇದರ ವಿರುದ್ಧ ಅಂಚೆ ಕಚೇರಿಯು ಗುಜರಾತ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಅದು ಜಿಲ್ಲಾ ವೇದಿಕೆಯ ತೀರ್ಪನ್ನೇ ಪುರಸ್ಕರಿಸಿತು. ಕೊನೆಯದಾಗಿ ಅಂಚೆ ಕಚೇರಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಅಲ್ಲಿ ಅದರ ವಕೀಲರು, ಹಿರಿಯ ನಾಗರಿಕರ ಸೇವಾ ಯೋಜನೆ ನಿಯಮಗಳು- ೨೦೦೪ರ ಪ್ರಕಾರ, ನಿಯಮಗಳಿಗೆ ವಿರುದ್ಧವಾಗಿ ಖಾತೆಯನ್ನು ತೆರೆದರೆ ಖಾತೆಯನ್ನು ಸ್ಥಗಿತಗೊಳಿಸಬೇಕು ಮತ್ತು ಯಾವುದೇ ಬಡ್ಡಿಯನ್ನು ಅದಕ್ಕೆ ನೀಡಬಾರದು ಎಂದಿದೆ. ಈ ಪ್ರಕರಣದಲ್ಲಿ ಅಂಚೆ ಕಚೇರಿಯು ತನ್ನ ಏಜೆಂಟ್ ಮೂಲಕವೇ ಈ ಖಾತೆಯನ್ನು ತೆರೆದಿದೆ. ಹೀಗಿರುವಾಗ ಖಾತೆದಾರರ ಮೇಲೆ ಯಾವುದೇ ಹೊಣೆಯನ್ನು ಹೊರಿಸುವುದು ಸರಿಯಲ್ಲ ಮತ್ತು ಅವರಿಗೆ ಬಡ್ಡಿಯನ್ನು ನಿರಾಕರಿಸುವುದೂ ಸರಿಯಲ್ಲ. ಇದೀಗ ಅಂಚೆ ಕಚೇರಿಯ ಬಳಿಯೇ ಹಣ ಠೇವಣಿ ಇದೆ. ಯಾವುದೇ ಠೇವಣಿಗೆ ಬಡ್ಡಿ ನೀಡಬೇಕಾದುದು ಕರ್ತವ್ಯ. ಅಂಚೆ ಇಲಾಖೆ ಈ ಮೊತ್ತಕ್ಕೆ ಬಡ್ಡಿ ನೀಡಬೇಕು. ಇದನ್ನೇ ಜಿಲ್ಲಾ ವೇದಿಕೆಯೂ ಹೇಳಿತ್ತು. ಕಾರಣ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು. ಅಂಚೆ ಇಲಾಖೆ ಮೇಲ್ಮನವಿಯನ್ನು ೨೨೪ ದಿನಗಳಷ್ಟು ವಿಳಂಬವಾಗಿ ಸಲ್ಲಿಸಿತ್ತು. ಅದನ್ನು ವಿಚಾರಣೆಗೆ ಅಂಗೀಕರಿಸುವಾಗ ವಿಳಂಬವನ್ನು ಮನ್ನಿಸಲಾಗಿತ್ತು. ಭಾವನಗರದ ಹುಸೇನಲಿ ಮೊಹಮ್ಮದಲಿ ಕಾಪಸಿ ಪ್ರಕರಣದಲ್ಲೂ ಆಯೋಗ ಇದೇ ರೀತಿಯ ತೀರ್ಪನ್ನು ನೀಡಿದೆ. ಈ ಪ್ರಕರಣದಲ್ಲಿ ಭಾವನಗರ ಗ್ರಾಹಕ ಸುರಕ್ಷಾ ಮಂಡಲ ಪ್ರತಿವಾದಿಯಾಗಿ ಸೇರಿತ್ತು. -- ಠೇವಣಿಯಾಗಿ ಹಣವನ್ನು ಇಟ್ಟುಕೊಂಡಾಗ ಅದಕ್ಕೆ ಬಡ್ಡಿಯನ್ನು ನೀಡಬೇಕಾದುದು ನ್ಯಾಯ. ಹಿರಿಯ ನಾಗರಿಕರ ಸೇವಾ ಯೋಜನೆ ನಿಯಮಗಳು- ೨೦೦೪ ಏನೇ ಹೇಳಿದರೂ ತನ್ನಲ್ಲಿದ್ದ ಠೇವಣಿಗೆ ಅಂಚೆ ಇಲಾಖೆ ಬಡ್ಡಿ ನೀಡಬೇಕು ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ತೀರ್ಪು ನೀಡಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು