ಷರತ್ತು ಉಲ್ಲಂಘಿಸಿದ ಹಾಲಿಡೇ ರೆಸಾರ್ಟ್‌ಗೆ ದಂಡ

ಆಂಧ್ರಪ್ರದೇಶದ ಸಿಕಂದರಾಬಾದ್‌ನ ಸಿಖ್ ಎಂಬ ಗ್ರಾಮದ ನಿವಾಸಿ, ನಿವೃತ್ತ ಕರ್ನಲ್ ಎಸ್.ಪಿ.ಪುಟ್ಚಾಲ ಅವರು ಸಿಕಂದರಾಬಾದ್‌ನ ಮಹಿಂದ್ರಾ ಹಾಲಿಡೇ ಆ್ಯಂಡ್ ರೆಸಾರ್ಟ್ಸ್ ಇಂಡಿಯಾ ಲಿ. ಮತ್ತು ಬೆಂಗಳೂರಿನ ರೆಸಾರ್ಟ್ ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. (ಆರ್‌ಸಿಐ) ವಿರುದ್ಧ ಹೂಡಿದ್ದ ಮೊಕದ್ದಮೆ ಇದು. ದೂರುದಾರ ಎಸ್.ಪಿ.ಪುಟ್ಚಾಲ ಅವರು ೪-೨-೨೦೦೬ರಂದು ಹಾಲಿಡೇ ರೆಸಾರ್ಟ್ಸ್‌ನ ಸದಸ್ಯರಾಗುತ್ತಾರೆ. ಆರಂಭದಲ್ಲಿ ಇವರು ಇದಕ್ಕಾಗಿ ೧,೪೯,೭೩೦ ರು.ನ ಚೆಕ್ ನೀಡುತ್ತಾರೆ. ಹಾಲಿಡೇ ರೆಸಾರ್ಟ್‌ನ ಪ್ರತಿನಿಧಿ ಆ ಚೆಕ್ ಕಳೆದುಹಾಕಿದ್ದರಿಂದ ಅವರು ೧,೮೯,೨೪೦ ರು.ನ ಹೊಸ ಚೆಕ್ ನೀಡುತ್ತಾರೆ. ದೇಶ ವಿದೇಶಗಳಲ್ಲಿ ರೆಸಾರ್ಟ್‌ನಲ್ಲಿ ವಾಸ ಮಾಡುವ ಹಲವು ಆಫರ್‌ಗಳನ್ನು ಕಂಡೋಮಿನಿಮಮ್ ಇಂಟರ್‌ನ್ಯಾಶನಲ್ ಲಿ. ಪುಟ್ಚಾಲ ಅವರಿಗೆ ೩೧-೧೨-೨೦೦೭ರ ಅವಧಿಯ ವರೆಗೆ ನೀಡಿರುತ್ತದೆ. ಎರಡು ರಾತ್ರಿಗಳ ಕಾಂಪ್ಲಿಮೆಂಟರಿ ಹಾಲಿಡೇಯನ್ನು ಹಾಲಿಡೇ ಕ್ಲಬ್‌ನ ಆಯ್ದ ರೆಸಾರ್ಟ್‌ಗಳಲ್ಲಿ ಕಳೆಯುವುದು, ಡೆಕ್ಕನ್ ಏರ್ ವೇಸ್‌ನಲ್ಲಿ ಒಮ್ಮುಖ ಪ್ರಯಾಣದ ೪ ಟಿಕೆಟ್‌ಗಳು, ಆರ್‌ಸಿಐನಲ್ಲಿ ೯ ಬೋನಸ್ ವಾರಗಳು ಇದರಲ್ಲಿ ಸೇರಿದ್ದವು. ಆರ್‌ಸಿಐ ೨೦-೦೨-೨೦೦೬ರಂದು ಒಂದು ಪತ್ರ ಬರೆದು ಅವರ ಸದಸ್ಯತ್ವವನ್ನು ೨೦೧೯ರ ಫೆಬ್ರವರಿ ವರೆಗೂ ದೃಢೀಕರಿಸಿದನ್ನು ತಿಳಿಸುತ್ತದೆ. ಹಾಲಿಡೇ ರೆಸಾರ್ಟ್ ಹೊಸ ಆಫರ್ ನೀಡಿದ ಪತ್ರವನ್ನು ಬರೆದು ಸದಸ್ಯತ್ವದ ಶುಲ್ಕವನ್ನು ೧,೮೯,೨೪೦ ರು.ನಿಂದ ೧,೪೯,೭೩೦ ರು.ಗೆ ಇಳಿಸಿರುವುದಾಗಿಯೂ ಮತ್ತು ಸದಸ್ಯತ್ವದ ಅವಧಿಯನ್ನು ೨೫ ವರ್ಷಗಳಿಂದ ೩೩ ವರ್ಷಗಳಿಗೆ ಏರಿಸಿರುವುದಾಗಿಯೂ ತಿಳಿಸುತ್ತದೆ. ಅಲ್ಲದೆ ಅಂತಾರಾಷ್ಟ್ರೀಯ ಹಾಲಿಡೇ ಸೌಲಭ್ಯವನ್ನು ಇನ್ನೊಂದು ವಾರ ಆರ್‌ಸಿಐ ಮೂಲಕ ಹೆಚ್ಚಿಸಿರುವುದಾಗಿಯೂ, ಅವರ ಮಗನಿಗೆ ಸಹಸದಸ್ಯವನ್ನು ನೀಡಿರುವುದಾಗಿಯೂ ಮತ್ತು ಆರ್‌ಸಿಐ ಮೂಲಕ ಎರಡು ವಾರಗಳ ಅಂತಾರಾಷ್ಟ್ರೀಯ ಇಲ್ಲವೆ ದೇಸೀಯ ಹಾಲಿಡೇ ಸೌಲಭ್ಯವನ್ನು ಆರ್‌ಸಿಐ ಮೂಲಕ ನೀಡಿರುವುದಾಗಿಯೂ ತಿಳಿಸಿತು. ಈ ಸಂಬಂಧದ ಹೊಸ ಆಫರ್ ಪತ್ರವನ್ನು ಹಾಲಿಡೇ ರೆಸಾರ್ಟ್ ೨೫-೦೨-೨೦೦೬ರಂದು ನೀಡಿತು. ಆದರೆ ಅದರಲ್ಲಿ ಹೊಸ ಆಫರುಗಳನ್ನು ಸೇರಿಸಿರಲಿಲ್ಲ. ಆದರೆ ತನ್ನ ಕಂಪ್ಯೂಟರಿನಲ್ಲಿ ಅದು ದಾಖಲಾಗಿದೆ ಎಂದು ತಿಳಿಸಿತು. ದೂರುದಾರರಿಗೆ ಉಚಿತವಾಗಿ ನೀಡಿದ್ದ ಏರ್ ಡೆಕ್ಕನ್ ಟಿಕೆಟುಗಳಲ್ಲಿ ಎರಡನ್ನು ಅವರು ಬಳಸಿಕೊಳ್ಳಲು ಯತ್ನಿಸಿದರು. ಆದರೆ ಎರಡು ಸಲವೂ ಏರ್ ಡೆಕ್ಕನ್ ವಿಮಾನ ರದ್ದಾದ ಕಾರಣ ಅವರಿಗೆ ಬೇರೆ ವಿಮಾನ ಒದಗಿಸದೇ ಇದ್ದುದರಿಂದ ಅವು ವ್ಯರ್ಥವಾದವು. ಇದಲ್ಲದೆ ಕೆಲವು ರೆಸಾರ್ಟ್‌ಗಳಲ್ಲಿ ಇವರು ಬುಕ್ ಮಾಡಿದಾಗ ಸ್ಥಳಾವಕಾಶವಿಲ್ಲ ಎಂದು ನಿರಾಕರಿಸಲಾಯಿತು. ಈ ಸಂಬಂಧದಲ್ಲಿ ಅವರು ಹಲವು ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದರು. ದೂರುದಾರರು ೦೧-೦೮-೨೦೧೦ರಂದು ಸ್ವೀಕಾರ್ ರಿಹೆಬಿಲಿಟೇಶನ್ ಸೆಂಟರ್‌ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹದ್ದೆಗೆ ಸೇರುವವರಿದ್ದರು. ತಿಂಗಳ ಸಂಬಳ ೬೦ ಸಾವಿರ ರು. ಆಗಿತ್ತು. ಇದು ೩ ವರ್ಷಗಳ ಕರಾರು ಆಗಿತ್ತು. ಪ್ರತಿವಾದಿಗಳ ಕಿರುಕುಳದಿಂದಾಗಿ ಅವರಿಗೆ ತಾತ್ಕಾಲಿಕ ಪ್ರಜ್ಞಾಶೂನ್ಯತೆ ರೋಗ ಅಮರಿಕೊಂಡಿತು. ಇದರಿಂದಾಗಿ ಅವರಿಗೆ ನೌಕರಿಗೆ ಸೇರುವುದು ಆಗಲಿಲ್ಲ. ತಮ್ಮ ತೊಂದರೆಗಳು ಹಾಗೂ ಕರಾರು ಉಲ್ಲಂಘನೆಯ ಬಗ್ಗೆ ಅವರು ಪ್ರತಿವಾದಿಗಳಿಗೆ ಹಲವಾರು ಬಾರಿ ಬರೆದರೂ ಪ್ರಯೋಜನವಾಗದಿದ್ದುದರಿಂದ ಅವರು ಗ್ರಾಹಕ ಆಯೋಗದಲ್ಲಿ ದೂರು ನೀಡುವುದಕ್ಕೆ ಮುಂದಾದರು. ತಾವು ತುಂಬಿರುವ ಹಣ ೧,೮೦,೦೦೦ ರು. ವಾಪಸ್ ನೀಡಬೇಕು, ತಮ್ಮ ನೌಕರಿ ನಷ್ಟದಿಂದಾದ ಹಾನಿ ೨೧,೬೦,೦೦೦ ರು., ಅಂತಾರಾಷ್ಟ್ರೀಯ ಕರೆಗಳ ವೆಚ್ಚ ೩೭,೦೦೦ ರು., ಮೆಲ್ಬರ್ನ್‌ನಿಂದ ವಿಮಾನದಲ್ಲಿ ಬಂದುದರ ಶುಲ್ಕ ೫.೨೩ ಲಕ್ಷ ರು. ಕೊಡಿಸಬೇಕು ಎಂದು ಕೋರಿದರು. ಆಂಧ್ರಪ್ರದೇಶ ರಾಜ್ಯ ಗ್ರಾಹಕ ಆಯೋಗದಲ್ಲಿ ಪ್ರತಿವಾದಿ ಹಾಲಿಡೇ ರೆಸಾರ್ಟ್ಸ್ ಲಿಖಿತ ಉತ್ತರವನ್ನು ಸಲ್ಲಿಸಿತು. ಸದಸ್ಯತ್ವ ನಿಯಮ ೧೩ರ ಪ್ರಕಾರ ಈ ವಿವಾದವನ್ನು ಮಧ್ಯಸ್ಥಗಾರರು ಮತ್ತು ಚೆನ್ನೈನ ಸಿವಿಲ್ ಕೋರ್ಟ್‌ನಲ್ಲಿ ಮಾತ್ರ ಇತ್ಯರ್ಥಪಡಿಸಿಕೊಳ್ಳಬೇಕು. ಹಣ ವಾಪಸಾತಿಯನ್ನು ಕೇವಲ ೧೦ ದಿನಗಳೊಳಗೆ ಕೇಳಬಹುದು. ದೂರುದಾರರು ಹಲವು ಹಾಲಿಡೇ ಸೌಲಭ್ಯ ಪಡೆದ ನಂತರ ಹಣ ವಾಪಸ್ ಕೇಳುತ್ತಿದ್ದಾರೆ. ಏರ್ ಡೆಕ್ಕನ್ ವಿಮಾನ ತಪ್ಪಿದರೆ ನಾವೇನು ಮಾಡುವುದಕ್ಕೆ ಆಗುತ್ತದೆ? ಆರ್‌ಸಿಐ ಜೊತೆಗಿನ ತಕರಾರನ್ನು ಅದರ ನಿಯಮಗಳಿಗೆ ಅನುಗುಣವಾಗಿ ಬಗೆಹರಿಸಿಕೊಳ್ಳಬೇಕು. ಇದು ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಅರ್ಜಿಯನ್ನು ವಜಾ ಮಾಡಬೇಕು ಎಂದು ವಿವರಿಸಿತು. ಆರ್‌ಸಿಐ ಕೂಡ ತನ್ನ ಲಿಖಿತ ಹೇಳಿಕೆಯನ್ನು ಸಲ್ಲಿಸಿತು. ರಾಜ್ಯ ಆಯೋಗವು ತನ್ನ ತೀರ್ಪಿನಲ್ಲಿ ಹಾಲಿಡೇ ರೆಸಾರ್ಟ್ ದೂರುದಾರರಿಗೆ ೨ ಲಕ್ಷ ರು. ನೀಡಬೇಕು ಮತ್ತು ವ್ಯಾಜ್ಯದ ವೆಚ್ಚವೆಂದು ೫ ಸಾವಿರ ರು. ನೀಡಬೇಕು ಎಂದು ಆದೇಶಿಸಿತು. ದೂರುದಾರರು ತಮ್ಮ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕೆಂದು ಹಾಗೂ ಪ್ರತಿವಾದಿಗಳು ರಾಜ್ಯ ಆಯೋಗದ ತೀರ್ಪನ್ನು ತಿರಸ್ಕರಿಸಬೇಕು ಎಂದು ಕೋರಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ವಾದ ಪ್ರತಿವಾದಗಳನ್ನು ವಿವರವಾಗಿ ಪರಿಶೀಲಿಸಿದ ರಾಷ್ಟ್ರೀಯ ಆಯೋಗವು ಹಾಲಿಡೇ ರೆಸಾರ್ಟ್ ತನ್ನ ಸೇವೆಯನ್ನು ನೀಡುವಲ್ಲಿ ನ್ಯೂನತೆಯನ್ನು ತೋರಿಸಿದೆ. ರಾಜ್ಯ ಆಯೋಗದ ತೀರ್ಪು ಸರಿಯಾಗಿಯೇ ಇದೆ. ಕಾರಣ ಹಾಲಿಡೇ ರೆಸಾರ್ಟ್‌ನ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು. ಮೂಲ ದೂರುದಾರರು ತಮ್ಮ ನೌಕರಿಯನ್ನು ಕಳೆದುಕೊಂಡಿದ್ದಕ್ಕೆ ಹಾಲಿಡೇ ರೆಸಾರ್ಟನ್ನು ಹೊಣೆ ಮಾಡಲು ಬರುವುದಿಲ್ಲ. ಅದಕ್ಕಾಗಿ ಪರಿಹಾರ ಕೋರುವಂತಿಲ್ಲ. ವ್ಯಾಜ್ಯದ ವೆಚ್ಚವೆಂದು ರಾಜ್ಯ ಆಯೋಗ ೫ ಸಾವಿರ ನಿಗದಿ ಮಾಡಿದ್ದು ತುಂಬ ಕಡಿಮೆಯಾಯಿತು. ಅದನ್ನು ೨೦ ಸಾವಿರ ರು.ಗೆ ಏರಿಸುವುದಾಗಿ ಅದು ಹೇಳಿತು. (ಮೂಲ ತೀರ್ಪನ್ನು ಇಲ್ಲಿ ನೋಡಬಹುದು: FIRST APPEAL NO. 752 OF 2012 (Against the Order dated 16/10/2012 in Complaint No. 14/2011 of the State Commission Andhra Pradesh)

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು