ಬಸ್‌ನಲ್ಲಿ ೨ ರು.ಹೆಚ್ಚಿಗೆ ಪಡೆದ ಕಂಡಕ್ಟರ್ ೫ ಸಾವಿರ ರು. ಪರಿಹಾರ ಪಡೆದ ಗ್ರಾಹಕ
೬೮ ರು. ಬದಲಿಗೆ ೭೦ ರು. ಪಡೆದು ಚಿಲ್ಲರೆ ವಾಪಸ್ ನೀಡಿರಲಿಲ್ಲ. ಪ್ರಯಾಣಿಕ ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ದೂರನ್ನು ಒಯ್ದರು. ಜೊತೆಗೆ ಚಾಲಕ ಧೂಮ್ರಪಾನ ಮಾಡಿದ್ದನ್ನೂ ಅವರು ಪ್ರಶ್ನಿಸಿದರು.
----
ಹರ್ಯಾಣದ ಹಿಸಾರ್ ಜಿಲ್ಲೆಯ ಅಶೋಕ ಕುಮಾರ್ ಪರ್ಜಾಪತ್ ಎಂಬವರು ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಬಸ್ ಡ್ರೈವರ್ ಸಿಗರೇಟು ಸೇವನೆ ಮಾಡಿದನೆಂದೂ ಮತ್ತು ಅದನ್ನು ನಿಲ್ಲಿಸುವಂತೆ ಮೂರು ಬಾರಿ ಮನವಿ ಮಾಡಿದರೂ ಆತ ಪ್ರತಿ ಬಾರಿಯೂ ತಮ್ಮನ್ನು ನಿರ್ಲಕ್ಷಿಸಿ ಧೂಮ್ರಪಾನ ಮುಂದುವರಿಸಿದನೆಂದೂ ಹಾಗೂ ಬಸ್‌ನ ನಿರ್ವಾಹಕ ನಿಗದಿಗಿಂತ ೨ ರುಪಾಯಿ ಹೆಚ್ಚಿಗೆ ಪಡೆದನೆಂದು ಗ್ರಾಹಕ ವೇದಿಕೆಗೆ ದೂರು ಒಯ್ದಿದ್ದರು. ಇದರಲ್ಲಿ ಅವರು ಹರ್ಯಾಣ ಸಾರಿಗೆ ಇಲಾಖೆ ಮತ್ತು ಹರ್ಯಾಣ ಆರೋಗ್ಯ ಇಲಾಖೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು.
ದೂರುದಾರ ಅಶೋಕಕುಮಾರ್ ಅವರು ೬-೩-೨೦೧೭ರಂದು ಕೈಥಾಲದಿಂದ ಅಂಬಾಲಾಕ್ಕೆ ಹರ್ಯಾಣ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣ ಹೊರಟಿದ್ದರು. ಈ ಪ್ರಯಾಣದ ಅವಧಿಯಲ್ಲಿ ಬಸ್ ಚಾಲಕನು ಮೂರು ಬಾರಿ ಧ್ರೂಮ್ರಪಾನ ಮಾಡಿದನು. ಪ್ರತಿ ಬಾರಿಯೂ ಇವರು ಹಾಗೆ ಮಾಡಬೇಡವೆಂದು ಮನವಿ ಮಾಡಿದರೂ ಆತನು ಅದನ್ನು ಧಿಕ್ಕರಿಸಿ ಧೂಮ್ರಪಾನ ಮುಂದುವರಿಸಿದನು. ಇದರಿಂದ ದೂರುದಾರರಿಗೆ ಬಸ್‌ನಲ್ಲಿ ಉಸಿರುಕಟ್ಟಿದಹಾಗೆ ಆಯಿತು. ಈ ಸಂಬಂಧ ಅವರು ಹರ್ಯಾಣ ರೋಡ್ ವೇಸ್‌ನ ಜನರಲ್ ಮ್ಯಾನೇಜರ್‌ಗೆ ದೂರು ಸಲ್ಲಿಸಿದರು. ಆದರೆ ಚಾಲಕನ ವಿರುದ್ಧ ಯಾವುದೇ ಕ್ರಮವನ್ನು ಜರುಗಿಸಲಿಲ್ಲ. ಹೆಚ್ಚಿನ ಹಣವನ್ನು ತೆಗೆದುಕೊಂಡ ವಿಷಯದಲ್ಲಿಯೂ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು.
ಜಿಲ್ಲಾ ವೇದಿಕೆಯು ದೂರನ್ನು ಪರಿಶೀಲಿಸಲಾಗಿ, ಧೂಮ್ರಪಾನ ಮಾಡಿದ ಚಾಲಕನಿಗೆ ದಂಡ ವಿಧಿಸಿದ್ದು ತಿಳಿಯಿತು. ೨೫-೦೧-೨೦೧೮ರಂದು ಅದು ನೀಡಿದ ತೀರ್ಪಿನಲ್ಲಿ, ದೂರುದಾರರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮ್ರಪಾನ ಮಾಡುವುದರಿಂದಾಗುವ ಸಮಸ್ಯೆಯನ್ನು ಬಿಂಬಿಸಲು ಅನುವು ಮಾಡಿಕೊಡುವುದಕ್ಕಾಗಿ ಜಿಲ್ಲಾ ಸಮಸ್ಯೆ ನಿವಾರಣೆ ಸಮಿತಿ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೇಂದ್ರದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕಲ್ಪಿಸಲಾಯಿತು.
ಇದರಿಂದ ಅಸಮಾಧಾನಗೊಂಡ ಅಶೋಕಕುಮಾರ್ ಅವರು ರಾಜ್ಯ ಗ್ರಾಹಕ ಆಯೋಗದಲ್ಲಿ ದೂರನ್ನು ದಾಖಲಿಸಿದರು. ೧೭-೦೭-೨೦೧೮ರಂದು ತೀರ್ಪು ನೀಡಿದ ರಾಜ್ಯ ಆಯೋಗವು, ಕೋಪ್ಟಾ ಕಾಯ್ದೆಯ ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರ ಈಗಾಗಲೇ ಕ್ರಮಗಳನ್ನು ಜರುಗಿಸುತ್ತಿದೆ. ಕೋಪ್ಟಾ ಕಾಯ್ದೆಯಡಿ ರಚನೆಯಾದ ಜಿಲ್ಲಾ ಮಟ್ಟದ ಧೂಮ್ರಪಾನ ಮತ್ತು ತಂಬಾಕು ಸೇವನೆ ನಿರ್ಮೂಲನ ಸಮಿತಿಯ ಪ್ರತಿ ಸಭೆಗೂ ಅವರಿಗೆ ಆಹ್ವಾನ ನೀಡುವಂತೆ ಆದೇಶಿಸಿತು.
ಇದರ ವಿರುದ್ಧ ಅಶೋಕಕುಮಾರ್ ಅವರು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ಇಲ್ಲಿ ವಿಚಾರಣೆ ವೇಳೆ ದೂರುದಾರರು ಧೂಮ್ರಪಾನ ಮಾಡಿದ ಚಾಲಕನನ್ನು ಪ್ರತಿವಾದಿಯನ್ನಾಗಿ ಮಾಡದಿರುವುದು ಗಮನಕ್ಕೆ ಬಂತು. ಆತನ ವಿರುದ್ಧ ಯಾವುದೇ ದೂರು ಇಲ್ಲದ ಕಾರಣ ಆತನ ಕುರಿತು ನಿಲವು ತಳೆಯುವುದು ಸರಿಯಲ್ಲ. ಇನ್ನು ಟಿಕೆಟ್ ಮೌಲ್ಯ ೬೮ರ ಬದಲು ೭೦ ರು. ಏಕೆ ತೆಗೆದುಕೊಳ್ಳಲಾಯಿತು ಮತ್ತು ಅದಕ್ಕಾಗಿ ಅವರಿಗೆ ಪರಿಹಾರವನ್ನು ಏಕೆ ನೀಡಲಿಲ್ಲ ಎಂಬ ಕುರಿತು ಪ್ರತಿವಾದಿಗಳಿಗೆ ನೋಟಿಸ್ ನೀಡಲಾಯಿತು.
ವಿಚಾರಣೆ ಕಾಲಕ್ಕೆ ಪ್ರತಿವಾದಿಗಳು ಹಾಜರಾಗಲಿಲ್ಲ. ೨ ರು.ಹೆಚ್ಚಿಗೆ ಪಡೆದದ್ದು ಅತಿ ಚಿಕ್ಕ ಮೊತ್ತವಾದರೂ ಈ ರೀತಿ ಮಾಡಿದ ನೌಕರನ ಪ್ರವೃತ್ತಿಯನ್ನು ಕ್ಷಮಿಸುವಹಾಗಿಲ್ಲ. ಇದು ಸಾರಿಗೆ ಸಂಸ್ಥೆಯ ಸೇವಾನ್ಯೂನತೆ. ಕಾರಣ ದೂರುದಾರರಿಗೆ ಪರಿಹಾರವನ್ನು ನೀಡಬೇಕಾಗುತ್ತದೆ. ಸಾರಿಗೆ ಸಂಸ್ಥೆಯು ಸಾಂಕೇತಿಕವಾಗಿ ೫ ಸಾವಿರ ರುಪಾಯಿಯನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಜೊತೆಗೆ ದೂರುದಾರರ ವ್ಯಾಜ್ಯದ ವೆಚ್ಚವನ್ನೂ ನೀಡಬೇಕು. ಇದನ್ನು ಆರು ವಾರಗಳೊಳಗೆ ನೀಡಬೇಕು. ಮತ್ತು ಪ್ರತಿವಾದಿಗಳು ಇಷ್ಟಪಟ್ಟರೆ ಅದನ್ನು ಸಂಬಂಧಿಸಿದ ಸಿಬ್ಬಂದಿಯಿಂದ ವಸೂಲು ಮಾಡಬಹುದು ಎಂದು ತೀರ್ಪು ನೀಡಿತು. (ತೀರ್ಪು ದಿನಾಂಕ ೧೬-೦೪-೨೦೧೯)
Comments
Post a Comment