ಚಿಟ್ ಕಂಪನಿ ಚೀಟ್ ಮಾಡಿದರೆ ಗ್ರಾಹಕ ವೇದಿಕೆಯಲ್ಲಿ ಪರಿಹಾರ ಕೋರಬಹುದು
--
ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಚಿಟ್‌ಫಂಡ್ ಕಂಪನಿಗಳು ತನ್ನ ಗ್ರಾಹಕರಿಗೆ ಮೋಸಮಾಡುತ್ತವೆ ಎಂಬ ದೂರುಗಳು ಸಾಮಾನ್ಯ. ಹೀಗೆ ಮೋಸ ಹೋದ ವ್ಯಕ್ತಿಯೊಬ್ಬರು ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿ ನ್ಯಾಯ ಪಡೆದಿದ್ದಾರೆ.
--
ಬೆಂಗಳೂರಿನ ಎನ್.ಮಧುಸೂದನ ಎಂಬವರು ಮತ್ತಿಕೆರೆಯಲ್ಲಿರುವ ಮೆ.ಲೆನಾಕ್ಷಿಸ್ ಚಿಟ್ಸ್ ಪ್ರೈ.ಲಿ. ಇಲ್ಲಿ ೧೦ ಲಕ್ಷ ರುಪಾಯಿಗಳ ಒಂದು ಮತ್ತು ೧ ಲಕ್ಷ ರುಪಾಯಿಯ ಇನ್ನೊಂದು ಚಿಟ್‌ಗೆ ಸದಸ್ಯರಾಗಿದ್ದರು. ಅವರು ೧ ಲಕ್ಷ ರು. ಚಿಟ್‌ಗೆ ಬಿಡ್ ಮಾಡಿ ಯಶಸ್ವಿಯಾದರು. ಚಿಟ್ ಕಂಪನಿಯು ೧೫ ದಿನಗಳೊಳಗೆ ಹಣ ನೀಡುವುದಾಗಿ ಭರವಸೆ ನೀಡಿತು. ಆದರೆ ಹಣ ನೀಡಲಿಲ್ಲ. ಇಂದು ಕೊಡುತ್ತೇನೆ ನಾಳೆ ಕೊಡುತ್ತೇನೆ ಎಂದು ದಿನ ತಳ್ಳುತ್ತ ಬಂತು. ನಂತರ ಅಕ್ಟೋಬರ್ ೨೦೧೫ರಲ್ಲಿ ಆ ಮೊತ್ತವನ್ನು ನೀಡಿತು.
ಇದೊಂದು ಸೇವಾನ್ಯೂನತೆ ಎಂದು ಮಧುಸೂದನ ಅವರು ಭಾವಿಸಿದರು. ಚಿಟ್ ಕಂಪನಿಯವರ ಕೆಟ್ಟ ಧೋರಣೆಯಿಂದ ಬೇಸರವೂ ಆಯಿತು. ಕಾರಣ ತಮ್ಮ ೧೦ ಲಕ್ಷ ರುಪಾಯಿಯ ಚಿಟ್ ಸದಸ್ಯತ್ವವನ್ನು ರದ್ದುಗೊಳಿಸಲು ಅವರು ನಿರ್ಧರಿಸಿದರು. ಈ ಸಂಬಂಧ ಅವರು ೦೭-೦೫-೨೦೧೬ರಂದು ಚಿಟ್ ಕಂಪನಿಗೆ ಒಂದು ಪತ್ರ ಬರೆದು ತಮ್ಮ ಸದಸ್ಯತ್ವ ರದ್ದುಗೊಳಿಸಲು ಕೋರಿದರು. ಮತ್ತು ತಾವು ಈಗಾಗಲೆ ಸಂದಾಯ ಮಾಡಿರುವ ಹಣವನ್ನು ತಮಗೆ ಮರಳಿಸುವಂತೆಯೂ ಬೇಡಿಕೆ ಇಟ್ಟರು. ಚಿಟ್ ಕಂಪನಿಯು ಇವರಿಂದ ಪಾಸ್‌ಪುಸ್ತಕವನ್ನು ಮರಳಿ ಪಡೆದುಕೊಂಡು ಹಣ ವಾಪಸ್ ನೀಡುವುದಾಗಿ ತಿಳಿಸಿತು. ಈ ಖಾತೆಗಾಗಿ ಅವರು ಅದುವರೆಗೆ ೨,೮೫,೨೫೦ ರು. ತುಂಬಿದ್ದರು. ಅದಕ್ಕೆ ಲಾಭಾಂಶ ೬೪,೨೫೦ ರು.ಗಳನ್ನು ಚಿಟ್ ಕಂಪನಿ ನೀಡಬೇಕಿತ್ತು. ಇವನ್ನೆಲ್ಲ ಕೊಡುವುದಾಗಿ ಚಿಟ್ ಕಂಪನಿ ಒಪ್ಪಿಕೊಂಡಿತು. ಇದರ ಭಾಗಶಃ ಮೊತ್ತ ೨,೦೮,೦೫೦ ರು.ಗೆ ಬೆಂಗಳೂರಿನ ಗೋಕುಲದಲ್ಲಿರುವ ಕರ್ನಾಟಕ ಬ್ಯಾಂಕ್‌ನ ಶಾಖೆಗೆ ಚೆಕ್‌ಅನ್ನು ೨೭-೦೨-೨೦೧೭ರಂದು ನೀಡಿತು. ದೂರುದಾರರು ಈ ಚೆಕ್‌ಅನ್ನು ಗೋಕುಲ ಬ್ರ್ಯಾಂಚ್‌ಗೆ ನೀಡಿದಾಗ ಬ್ಯಾಂಕ್ ಅದನ್ನು ತನ್ನ ಬ್ಯಾಂಕರ್ ತಾವರೆಕೆರೆಯ ಫೆಡರಲ್ ಬ್ಯಾಂಕ್‌ಗೆ ಕಳುಹಿಸಿತು. ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂದು ಚೆಕ್ ಬೌನ್ಸ್ ಆಯಿತು. ಈ ಸಂಬಂಧದ ಮಾಹಿತಿಯನ್ನು ೦೧-೦೩-೨೦೧೭ರಂದು ನೀಡಲಾಯಿತು. ಮಧುಸೂದನ ಅವರು ತಮ್ಮ ಹಣವನ್ನು ಮರಳಿಸುವಂತೆ ಚಿಟ್ ಕಂಪನಿಗೆ ಸಾಕಷ್ಟು ಸಲ ಮನವಿ ಮಾಡಿದರು. ಕಾನೂನುಬದ್ಧವಾಗಿ ನೋಟಿಸ್ ನೀಡಿದರು. ಆದರೂ ಚಿಟ್ ಕಂಪನಿ ಹಣ ನೀಡಲಿಲ್ಲ.
ಇದರ ವಿರುದ್ಧ ಮಧುಸೂದನ ಅವರು ಬೆಂಗಳೂರಿನ ಶಾಂತಿನಗರದಲ್ಲಿರುವ ಬೆಂಗಳೂರು ೧ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ನಿವಾರಣೆ ವೇದಿಕೆಯಲ್ಲಿ ಚಿಟ್ ಕಂಪನಿ ವಿರುದ್ಧ ದೂರು ಸಲ್ಲಿಸಿದರು. ಪ್ರತಿವಾದಿ ಚಿಟ್ ಕಂಪನಿ ತಮಗೆ ೩,೪೯,೦೦೦ ರು. ನೀಡದೆ ಸೇವಾನ್ಯೂನತೆ ಎಸಗಿದೆ. ಈ ಹಣವನ್ನು ತಮಗೆ ನೀಡುವಂತೆ ಚಿಟ್ ಕಂಪನಿಗೆ ಆದೇಶಿಸಬೇಕು. ಇದಕ್ಕೆ ಶೇ.೨೪ರಂತೆ ಬಡ್ಡಿಯನ್ನು ನೀಡಬೇಕು. ತಮಗಾಗಿರುವ ನಷ್ಟಕ್ಕೆ ೧ ಲಕ್ಷ ರು. ಮತ್ತು ವ್ಯಾಜ್ಯದ ವೆಚ್ಚವೆಂದು ಬೇರೆ ಪರಿಹಾರ ಕೊಡಿಸಬೇಕು ಎಂದು ಕೋರಿದರು.
ದಾಖಲೆಗಳನ್ನು ಪರಿಶೀಲಿಸಲಾಗಿ, ದೂರುದಾರರು ೧೦ ಲಕ್ಷ ರು.ನ ಚಿಟ್ ಮಾಡಿಸಿದ್ದೇವೆ ಎಂದಿರುವುದಕ್ಕೆ ಚಿಟ್ ಕಂಪನಿಯಿಂದ ಯಾವುದೇ ತಕರಾರು ಇಲ್ಲ. ಪಾಸ್‌ಬುಕ್ ಪರಿಶೀಲಿಸಲಾಗಿ ೧೯-೧೧-೨೦೧೫ರ ವರೆಗೆ ೨,೮೫,೨೫೦ ರು. ಜಮೆಯಾಗಿದೆ. ಅದಕ್ಕೆ ಲಾಭಾಂಶ ೬೪,೨೫೦ ರು. ಒಟ್ಟೂ ಮೊತ್ತ ೩.೪೯,೫೦೦ ರು. ಕಾರಣ ಈ ಮೊತ್ತಕ್ಕೆ ೦೭-೦೫-೨೦೧೬ರಿಂದ ಶೇ.೧೮ರಂತೆ ಹಣ ಸಂದಾಯವಾಗುವ ದಿನದ ವರೆಗೆ ಬಡ್ಡಿಯನ್ನು ಸೇರಿಸಿ ನೀಡಬೇಕು ಎಂದು ವೇದಿಕೆಯು ಆದೇಶ ನೀಡಿತು.
ತಮಗಾದ ನಷ್ಟಕ್ಕೆ ೧ ಲಕ್ಷ ರು. ನೀಡಬೇಕು ಎಂದು ಕೋರಿದ ಪರಿಹಾರವನ್ನು ವೇದಿಕೆ ಒಪ್ಪಲಿಲ್ಲ. ತಮಗೆಇಷ್ಟೊಂದು ಹಾನಿಯಾಗಿದೆ ಎಂಬ ಬಗ್ಗೆ ಅರ್ಜಿದಾರರು ಯಾವುದೇ ದಾಖಲೆ ಒದಗಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗಾಗಿರುವ ಮಾನಸಿಕ ಕಿರಿಕಿರಿ ಹಾಗೂ ದೈಹಿಕ ಶ್ರಮವನ್ನು ಪರಿಗಣಿಸಿ ಸಾಂಕೇತಿಕವಾಗಿ ೧೦ ಸಾವಿರ ರು. ಪರಿಹಾರವನ್ನು ಪ್ರತಿವಾದಿಗಳು ನೀಡಬೇಕು. ವ್ಯಾಜ್ಯದ ವೆಚ್ಚವೆಂದು ೫ ಸಾವಿರ ರುಪಾಯಿ ನೀಡಬೇಕು ಎಂದು ಗ್ರಾಹಕ ವೇದಿಕೆ ಆದೇಶ ನೀಡಿತು.
---
(ತೀರ್ಪು ದಿನಾಂಕ-೦೧-೦೧-೨೦೧೯)
Comments
Post a Comment