ನೀರಿನ ಬಾಟಲಿಗೆ 1 ರು. ಜಿಎಸ್‌ಟಿ ಪಡೆದ ಹೊಟೇಲಿಗೆ 8 ಸಾವಿರ ದಂಡ
* ಎರಡನೆ ಬಾರಿ ಜಿಎಸ್‌ಟಿ ಪಡೆದದ್ದು ಕಾನೂನು ಬಾಹಿರ
ಹೊಟೇಲಿನವರು ನೀರಿನ ಬಾಟಲಿಗೆ 1 ರುಪಾಯಿ ಜಿಎಸ್‌ಟಿ ಸೇರಿಸಿ ಬಿಲ್ ಮಾಡಿದ್ದಕ್ಕೆ ಗ್ರಾಹಕ ಆಯೋಗದಿಂದ 8 ಸಾವಿರ ರುಪಾಯಿ ದಂಡಕ್ಕೆ ಒಳಗಾದ ಘಟನೆ ಭೋಪಾಲಿನಲ್ಲಿ ನಡೆದಿದೆ. ನೀರಿನ ಬಾಟಲಿನ ಮೇಲೆ ಇರುವ ಮುದ್ರಿತ ಬೆಲೆ 20 ರುಪಾಯಿ. ಇದು ಹೊಟೇಲಿನವರಿಂದಾದ ಸೇವಾ ನ್ಯೂನತೆ ಎಂದು ಗ್ರಾಹಕ ಆಯೋಗ ಪರಿಗಣಿಸಿತು.
ದೂರುದಾರ ಐಶ್ವರ್ಯ ಅವರು ತಮ್ಮ ಸ್ನೇಹಿತರೊಂದಿಗೆ 2021ರ ಅಕ್ಟೋಬರ್‌ನಲ್ಲಿ ಭೋಪಾಲದಲ್ಲಿಯ ಒಂದು ಹೊಟೇಲಿಗೆ ಊಟಕ್ಕೆ ಹೋಗಿದ್ದರು. ಸ್ನೇಹಿತರೆಲ್ಲ ಸೇರಿ ಚೆನ್ನಾಗಿಯೇ ತಿಂದು ಮಜಾ ಮಾಡಿದ್ದರು. ಊಟದ ಕೊನೆಯಲ್ಲಿ ಬಿಲ್ ಬಂತು. ಇವರು ಕೇಳದಿದ್ದರೂ ಅದು ಬಂದೇ ಬರುತ್ತದೆ. ಆ ಬಿಲ್‌ನಲ್ಲಿ ನೀರಿನ ಬಾಟಲಿಗೆ 29 ರುಪಾಯಿ ಎಂದು ಬರೆಯಲಾಗಿತ್ತು. ಅದರಲ್ಲಿ ಜಿಎಸ್‌ಟಿ 1 ರುಪಾಯಿ ಎಂದಿತ್ತು. ಐಶ್ವರ್ಯ ಅವರಿಗೆ ಆಶ್ಚರ್ಯವಾಯಿತು. 20 ರುಪಾಯಿಯ ನೀರಿನ ಬಾಟಲಿಗೆ 9 ರುಪಾಯಿ ಹೆಚ್ಚಿಗೆ ಪಡೆದುದಲ್ಲದೆ 1 ರುಪಾಯಿ ಜಿಎಸ್‌ಟಿ ಹೇಗೆ ಸೇರಿಸಿದ್ದೀರಿ ಎಂದು ಅವರು ಆ ಹೊಟೇಲಿನವರೊಂದಿಗೆ ವಾದಿಸಿದರು.
ವಾತಾನುಕೂಲಿ ಕೋಣೆ, ಕುಳಿತುಕೊಳ್ಳಲು ಕುರ್ಚಿ. ಟೇಬಲ್ ಸರ್ವಿಸ್ ಇದೆಲ್ಲವೂ ಆ ಹೆಚ್ಚುವರಿ ಹಣದಲ್ಲಿ ಸೇರಿದೆ ಎಂಬುದು ಹೊಟೇಲಿನವರ ಸಮಜಾಯಿಸಿ. ಅವರೊಂದು ಹೇಳಿದರೆ ಇವರೊಂದು ಹೇಳುವುದು. ಕೊನೆಗೂ ಅವರು ಆ ಹಣವನ್ನು ಹಿಂದಕ್ಕೆ ಕೊಡಲೇ ಇಲ್ಲ. ಸಾಮಾನ್ಯದವರಾಗಿದ್ದರೆ ಹೋಗಲಿ ಬಿಡು ಎಂದು ಸುಮ್ಮನಾಗುತ್ತಿದ್ದರು. ಆದರೆ ಐಶ್ವರ್ಯ ಅವರು ಸುಮ್ಮನಾಗಲಿಲ್ಲ. ಅವರು ಭೋಪಾಲದ ಗ್ರಾಹಕ ವೇದಿಕೆಗೆ ದೂರನ್ನು ಒಯ್ದರು.
ಎರಡೂ ಕಡೆಯವರಿಗೂ ನೋಟಿಸ್ ಜಾರಿಯಾಯಿತು. ಇಬ್ಬರ ಕಡೆಯಿಂದಲೂ ವಕೀಲರು ಹಾಜರಾಗಿದ್ದರು. ನೀರಿನ ಬಾಟಲಿಯ ಬೆಲೆ 20 ರುಪಾಯಿ. ಅದರಲ್ಲಿ ಜಿಎಸ್‌ಟಿಯೂ ಸೇರಿರುತ್ತದೆ. ಒಮ್ಮೆ ಜಿಎಸ್‌ಟಿ ಆಕರಿಸಿದ ಮೇಲೆ ಅದೇ ವಸ್ತುವಿಗೆ ಜಿಎಸ್‌ಟಿ ಹಾಕಲು ಬರುವುದಿಲ್ಲ. ಇದು ಹೊಟೇಲಿನವರ ನ್ಯಾಯಯುತವಲ್ಲದ ವ್ಯವಹಾರ. ಇದು ಅವರ ಸೇವಾನ್ಯೂನತೆ ಎಂದು ವಾದಿಸಿದರು. ಹೊಟೇಲಿನ ವಕೀಲರು, ನೀರಿನ ಬಾಟಲಿಯ ಜೊತೆಗೆ ಹೊಟೇಲ್ ಅವರಿಗೆ ಹೆಚ್ಚುವರಿ ಸೇವೆಯನ್ನು ಒದಗಿಸಿದೆ. ಆ ಹೆಚ್ಚುವರಿ ಸೇವೆಗಾಗಿ 9 ರುಪಾಯಿ ಹೆಚ್ಚಿಗೆ ಪಡೆಯಲಾಗಿದೆ ಎಂದರು.
ಗ್ರಾಹಕ ವೇದಿಕೆಯು ಅದನ್ನು ಒಪ್ಪಿಕೊಳ್ಳಲಿಲ್ಲ. ಎರಡನೆ ಬಾರಿಗೆ ಜಿಎಸ್‌ಟಿ ಪಡೆದದ್ದು ತಪ್ಪು. ಅದು ಹೊಟೇಲಿನವರ ಸೇವಾನ್ಯೂನತೆ ಎಂದು ತೀರ್ಪು ನೀಡಿತು. ಗ್ರಾಹಕರಿಗೆ ಆಗಿರುವ ಮಾನಸಿಕ ಕಿರಿಕಿರಿ ಮತ್ತು ಸೇವಾನ್ಯೂನತೆಗಾಗಿ 5 ಸಾವಿರ ರುಪಾಯಿ ಮತ್ತು ವ್ಯಾಜ್ಯದ ವೆಚ್ಚವೆಂದು 3 ಸಾವಿರ ರುಪಾಯಿ, ಹೀಗೆ ಒಟ್ಟೂ ಎಂಟು ಸಾವಿರ ರುಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿತು.
ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಈ ಚಿಕ್ಕ ವ್ಯಾಜ್ಯದ ತೀರ್ಪು ಬಂದದ್ದು ಸರಿಸುಮಾರು ನಾಲ್ಕು ವರ್ಷಗಳ ಬಳಿಕ. ತ್ವರಿತ ನ್ಯಾಯದ ಭರವಸೆ ನೀಡುವ ಗ್ರಾಹಕ ವೇದಿಕೆಯಲ್ಲಿ ಇಷ್ಟು ಅವಧಿ ತೆಗೆದುಕೊಂಡಿದ್ದು ಸರಿಯೇ ಎಂಬುದು ಗಂಭೀರ ಪ್ರಶ್ನೆಯಾಗಿದೆ.
Comments
Post a Comment