ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ
* ಆಸ್ಪತ್ರೆ ವೆಚ್ಚ ಮತ್ತು 1 ಲಕ್ಷ ರು. ಪರಿಹಾರ
ಜೀವನದಲ್ಲಿ ಒಮ್ಮೆಯಾದರೂ ಬಸ್ ಹತ್ತದವರು ಯಾರೂ ಇಲ್ಲ. ಬಸ್ ಪ್ರಯಾಣದಲ್ಲಿ ಇಲ್ಲದ ಅವಸ್ಥೆಪಟ್ಟು ಗೊಣಗಿಕೊಂಡು ಸುಮ್ಮನಾಗುವವರೇ ಎಲ್ಲರೂ. ಹರಿದ ಸೀಟು, ಮಳೆ ಬಂದರೆ ಕಿಟಕಿಯಿಂದ ಒಳ ಬರುವ ನೀರು, ತಿಗಣೆ ಕಾಟ, ಸ್ವಚ್ಛತೆ ಇಲ್ಲದಿರುವುದು ಇವೆಲ್ಲ ಹಲವರಿಗೆ ಮಾಮೂಲಿಯಾದರೆ ಕೆಲವರಿಗೆ ಕಿರಿಕಿರಿ. ಇದರ ಬಗ್ಗೆ ದೂರು ನೀಡಿ ಪರಿಹಾರ ಪಡೆಯಬಹುದು ಎಂದು ಯೋಚಿಸುವವರು ಇದ್ದಾರೆಯೆ? ಬಸ್ಸಲ್ಲಿ ತಿಗಣೆ ಕಡಿಯಿತು ಎಂದು ಗ್ರಾಹಕ ವೇದಿಕೆಗೆ ಹೋಗಿ ಪರಿಹಾರ ಪಡೆದವರು ಒಬ್ಬರಿದ್ದಾರೆ.
ಚಿತ್ರನಟ ಶೋಭರಾಜ್ ಮತ್ತು ಅವರ ಪತ್ನಿ ದೀಪಿಕಾ ಸುವರ್ಣ 2022ರ ಆಗಸ್ಟ್ 16ರಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಸೀಬರ್ಡ್ ಕಂಪನಿಯ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಸೀಟನ್ನು ಕಾಯ್ದಿರಿಸಿದ್ದರು. ರೆಡ್ ಬಸ್ ಆನ್ ಲೈನ್ ಆ್ಯಪ್ ಮೂಲಕ ಟಿಕೆಟ್ ಬುಕ್ ಆಗಿತ್ತು. ಬಸ್ ಚೆನ್ನಾಗಿದೆಯೇ ಎಂದೆಲ್ಲ ಮೊದಲೇ ವಿಚಾರಿಸಿಯೇ ನಂತರ ಹಣ ಸಂದಾಯ ಮಾಡಿದ್ದರು.
ಪ್ರಯಾಣ ಆರಂಭವಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಸೀಟಿನಲ್ಲಿ ಅಡಗಿದ್ದ ತಿಗಣೆಗಳು ರಕ್ತ ಹೀರಲು ಆರಂಭಿಸಿದವು. ಒಂದೆರಡನ್ನು ಅಲ್ಲಿಯೇ ಹೊಸಕಿ ಹಾಕಿದರು. ಆದರೆ ಅವು ಸುಮ್ಮನಾಗಲಿಲ್ಲ. ತಿಗಣೆಗೆ ಸಿಲೆಬ್ರಿಟಿಯಾದರೇನು, ಸಾಮಾನ್ಯ ಆದರೇನು? ದೀಪಿಕಾ ಬಸ್ಸಿನ ಸಿಬ್ಬಂದಿಯನ್ನು ಕೂಗಿ ಕರೆದು ವಿಷಯ ತಿಳಿಸಿದರು. ಚಲಿಸುವ ಬಸ್ಸಿನಲ್ಲಿ ಅವರೇನು ಮಾಡಬಲ್ಲರು. ಸಿಬ್ಬಂದಿ ಅಸಹಾಯಕವಾಗಿತ್ತು. ಬೆಳಿಗ್ಗೆ ಬಸ್ಸು ಬೆಂಗಳೂರು ತಲುಪುವ ಹೊತ್ತಿಗೆ ದೀಪಿಕಾ ಅವರ ಕುತ್ತಿಗೆ ಬೆನ್ನು ಸೇರಿದಂತೆ ದೇಹದ ತುಂಬ ನೋವು. ತಿಗಣಿ ಕಚ್ಚಿದ ಗುರುತುಗಳು. ಅನಾರೋಗ್ಯವುಂಟಾಗಿ ಅವರು ಆಸ್ಪತ್ರೆಗೆ ದಾಖಲಾದರು. ಹದಿನೈದು ದಿನ ಹಾಸುಗೆಯಲ್ಲಿಯೇ ಮಲಗಿದ್ದು ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದರು.
ಆ ಸಮಯದಲ್ಲಿ `ಕಲರ್ಸ್ ಕನ್ನಡ' ವಾಹಿನಿಯವರು `ರಾಜಾ-ರಾಣಿ' ಎಂಬ ರಿಯಾಲಿಟಿ ಶೋ ನಡೆಸುತ್ತಿದ್ದರು. ಅದರಲ್ಲಿ ಶೋಭರಾಜ್ ಮತ್ತು ದೀಪಿಕಾ ಭಾಗವಹಿಸುತ್ತಿದ್ದರು. ಈ ಕಾರ್ಯಕ್ರಮದ ಶೂಟಿಂಗಿಗಾಗಿಯೇ ಅವರು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದ್ದಾಗಿತ್ತು. ಈ ರಿಯಾಲಿಟಿ ಶೋ ನಲ್ಲಿ ಈ ಸ್ಟಾರ್ ದಂಪತಿಗೆ ಜನ ಮನ್ನಣೆ ಸಿಕ್ಕಿತ್ತು. ಆದರೆ ಬಸ್‌ನಲ್ಲಿ ತಿಗಣೆ ಕಚ್ಚಿಸಿಕೊಂಡು ಅನಾರೋಗ್ಯಕ್ಕೆ ಈಡಾದ ಅವರು ಎರಡು ವಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲ. ಇದು ಅವರಿಗೆ ಆರ್ಥಿಕ ನಷ್ಟವನ್ನು ತಂದೊಡ್ಡಿತು. ಇವರ ಗೈರು ಹಾಜರಿಯೇ ಅವರು ಮತ್ತು ಅವರ ತಂಡ ಕಾರ್ಯಕ್ರಮದಿಂದ ಹೊರಬೀಳುವುದದಕ್ಕೆ ಕಾರಣವಾಯಿತು. ಇದರಿಂದ ಆರ್ಥಿಕ ಹಾನಿಯಾಯಿತು ಎಂದು ಮತ್ತೆ ಹೇಳಬೇಕಾಗಿಲ್ಲ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಶೋಭರಾಜ್ ದಂಪತಿಗೆ ಒಂದು ಶೋಗೆ 40 ಸಾವಿರ ಸಂಭಾವನೆ ದೊರಕುತ್ತಿತ್ತು.
ತಿಗಣೆ ತುಂಬಿದ್ದ ಬಸ್‌ನವರಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ ದೀಪಿಕಾ ಸುವರ್ಣ ಅವರು ಮಂಗಳೂರಿನ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ 2023ರ ಏಪ್ರಿಲ್ 6ರಂದು ದೂರನ್ನು ದಾಖಲಿಸಿದರು. ಸೀಬರ್ಡ್ ಕಂಪನಿ ಮತ್ತು ಟಿಕೆಟ್ ಕಾಯ್ದಿರಿಸಿದ ರೆಡ್ ಬಸ್ ಸಂಸ್ಥೆ ಎರಡನ್ನೂ ಪ್ರತಿವಾದಿಯನ್ನಾಗಿ ಅವರು ಮಾಡಿದ್ದರು. ತಿಗಣೆ ಕಡಿತದಿಂದಾಗಿ ತಾವು ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ 18,650 ರುಪಾಯಿ ತೆರಬೇಕಾಯಿತು. ಈ ಮೊತ್ತವನ್ನು ತಮಗೆ ಶೇ.15ರ ಬಡ್ಡಿಯೊಂದಿಗೆ ಕೊಡಿಸಬೇಕು. ಅಲ್ಲದೆ ತಮಗಾದ ಮಾನಸಿಕ ಕಿರಿಕಿರಿ ಮತ್ತು ಇತರ ನಷ್ಟಗಳಿಗಾಗಿ 25 ಲಕ್ಷ ರುಪಾಯಿ ಪರಿಹಾರ ಕೊಡಿಸಬೇಕು ಎಂದು ಕೋರಿದರು.
ವಿಚಾರಣೆ ನಡೆಸಿದ ಮಂಗಳೂರಿನ ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷರಾಗಿದ್ದ ಸೋಮಶೇಖರಪ್ಪ ಮತ್ತು ಮಹಿಳಾ ಸದಸ್ಯೆ ಶಾರದಮ್ಮ ಎಚ್.ಜಿ. ಅವರು ದೂರನ್ನು ಪುರಸ್ಕರಿಸಿದರು. ಮತ್ತು ಈ ಮುಂದಿನಂತೆ ಪರಿಹಾರಗಳನ್ನು ಘೋಷಿಸಿದರು.
ದೂರುದಾರರ ಆಸ್ಪತ್ರೆ ವಾಸದ ವೆಚ್ಚ 18,650 ರು.ಗಳನ್ನು ದೂರು ದಾಖಲಾದ ದಿನದಿಂದ ವಾರ್ಷಿಕ ಶೇ.6ರ ಬಡ್ಡಿಯಂತೆ ನೀಡಬೇಕು. ಅಲ್ಲದೆ ಬಸ್ ಟಿಕೆಟಿನ ಮೊತ್ತ 840 ರು.ಗಳನ್ನೂ ಶೇ.6ರ ಬಡ್ಡಿ ಸೇರಿಸಿ ನೀಡಬೇಕು. ಅಲ್ಲದೆ ದೂರುದಾರರಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಕಿರಿಕಿರಿಗೆ ಒಂದು ಲಕ್ಷ ರುಪಾಯಿ ಪರಿಹಾರವನ್ನೂ ನೀಡಬೇಕು. ವ್ಯಾಜ್ಯದ ವೆಚ್ಚವಾಗಿ ಹತ್ತು ಸಾವಿರ ರುಪಾಯಿ ನೀಡಬೇಕು ಎಂದು ಆದೇಶಿಸಿದರು.
Comments
Post a Comment