ಗ್ರಾಹಕ ರಕ್ಷಣೆ ಒಂದು ಆಂದೋಲನ

1. ಪ್ರಸ್ತಾವನೆ ಇವತ್ತು ಗ್ರಾಹಕ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದೆ. ನಾವೆಲ್ಲರೂ ದೈನಂದಿನ ವ್ಯವಹಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತೇವೆ. ವ್ಯಕ್ತಿಯೊಬ್ಬ ಯಾವುದಾದರೂ ಒಂದು ವಸ್ತುವನ್ನು ಖರೀದಿಸಿದಾಗ ಅಥವಾ ಒಂದು ಸೇವೆಯನ್ನು ಪಡೆದುಕೊಂಡಾಗ ಅವನು ಗ್ರಾಹಕನಾಗುತ್ತಾನೆ. ಸ್ವಯಂ ಬಳಕೆಗಾಗಿ ನಿರ್ದಿಷ್ಟ ಮೌಲ್ಯದ ಹಣಕ್ಕೆ ಸರಕುಗಳನ್ನು ಖರೀದಿಸಿದ ಯಾವುದೇ ವ್ಯಕ್ತಿ ಗ್ರಾಹಕ. ಇಲ್ಲಿ ಸ್ವಯಂ ಬಳಕೆಗೆ ಎಂಬ ಪದಗಳು ಬಳಕೆಯಾಗಿರುವುದನ್ನು ಗಮನಿಸಬೇಕು. ಮರುಮಾರಾಟದ ಉದ್ದೇಶದಿಂದ ವಸ್ತುವನ್ನು ಖರೀದಿ ಮಾಡಿದ್ದರೆ ಆತ ಗ್ರಾಹಕನಾಗಿರುವುದಿಲ್ಲ. ಆಕ್ಸ್‌ಫರ್ಡ್‌ ನಿಘಂಟುವಿನಲ್ಲಿ ಕನ್ಸೂಮರ್‌ ಎಂಬುದಕ್ಕೆ ವಸ್ತು ಅಥವಾ ಸೇವೆಯನ್ನು ಖರೀದಿಸುವವನು ಎಂಬ ಅರ್ಥವನ್ನು ಹೇಳಲಾಗಿದೆ. ಬ್ಲಾಕ್‌ ಅವರ ಕಾನೂನು ನಿಘಂಟುವಿನಲ್ಲಿ ಬಳಕೆದಾರ ಎಂಬ ಅರ್ಥವಿದೆ. ಇಂದು ವ್ಯಾಪಾರ ಕ್ಷೇತ್ರದಲ್ಲಿ ಮತ್ತು ಅರ್ಥಶಾಸ್ತ್ರದಲ್ಲಿ ಗ್ರಾಹಕರನ್ನು ರಾಜರೆಂದೇ ಪರಿಗಣಿಸಲಾಗುತ್ತಿದೆ. ಈಗ ಮಾರುಕಟ್ಟೆಯ ಜಾಲ ವ್ಯಾಪಕವೂ ವಿಸ್ತಾರವೂ ಆಗಿದೆ. ಮೊದಲು ಸ್ವತಃ ನಾವೇ ಅಂಗಡಿಗಳಿಗೆ ತೆರಳಿ ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಬಹುದಾಗಿತ್ತು. ಆದರೆ ಇಂದು ಆನ್‌ಲೈನ್‌ ವ್ಯಾಪಾರದ ಭರಾಟೆಯೂ ಜೋರಾಗಿದೆ. ಮನೆಯಲ್ಲಿಯೇ ಕುಳಿತು ತಮಗೆ ಬೇಕಾದ ವಸ್ತುವಿಗೆ ಆದೇಶ ನೀಡಿ ಅದನ್ನು ಪಡೆಯಬಹುದು. ಹೇಗೆ ವ್ಯಾಪಾರದ ಜಾಲವು ವಿಸ್ತಾರವಾಗುತ್ತದೆಯೋ ಅದೇ ರೀತಿಯಲ್ಲಿ ಗ್ರಾಹಕರಿಗೆ ಮೋಸಮಾಡುವ ಜಾಲವೂ ವಿಸ್ತಾರವಾಗುತ್ತದೆ. ಇದರಲ್ಲಿ ನಮಗೆ ಕಳಪೆ ಗುಣಮಟ್ಟದ, ಕಡಿಮೆ ಪ್ರಮಾಣದ ಅಥವಾ ಕಡಿಮೆ ತೂಕದ, ಹೆಚ್ಚಿನ ಬೆಲೆಯ ಉತ್ಪನ್ನಗಳನ್ನು ಪೂರೈಸಬಹುದು. ಕೃತಕ ಅಭಾವವನ್ನು ಸೃಷ್ಟಿಸಿ ಕಾಳಸಂತೆಗೆ ದಾರಿ ಮಾಡಬಹುದು. ಗ್ರಾಹಕರೆಂದರೆ ಬಳಕೆದಾರರು. ಅವರಿಗೋಸ್ಕರವೇ ವ್ಯಾಪಾರದಲ್ಲಿ ಒಂದು ವಿತರಣೆಯ ಸರಪಳಿಯೇ ನಿರ್ಮಾಣಗೊಂಡಿರುತ್ತದೆ. ಬಳಕೆದಾರನಾಗಿರುವ ಗ್ರಾಹಕನು ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ನಮ್ಮ ದೇಶದಲ್ಲಿ ಸಮ್ಮಿಶ್ರ ಅರ್ಥವ್ಯವಸ್ಥೆ ಇದೆ. ಬಂಡವಾಳಶಾಹಿ ಮತ್ತು ಸಮಾಜವಾದಿ ಎರಡೂ ರೀತಿಯಲ್ಲಿ ನಮ್ಮ ಅರ್ಥವ್ಯವಸ್ಥೆಯನ್ನು ರೂಪಿಸಲಾಗಿದೆ. ಬಂಡವಾಳಶಾಹಿ ಸಮಾಜದಲ್ಲಿ ಬಳಕೆದಾರರೇ ನಿಜವಾದ ಬಾಸ್‌ ಆಗಿರುತ್ತಾರೆ. ಸಮಾಜವಾದಿ ಸಮಾಜದಲ್ಲಿ ಬಳಕೆದಾರರಿಗೆ ಆಯ್ಕೆಯ ಸ್ವಾತಂತ್ರ್ಯ ಇರುವುದಿಲ್ಲ. ಆರೋಗ್ಯಕರ ಮತ್ತು ಸಂತುಷ್ಟ ಅರ್ಥವ್ಯವಸ್ಥೆಗೆ ಗ್ರಾಹಕರ ಹಿತರಕ್ಷಣೆ ಮಾಡುವುದು ಅತ್ಯಂತ ಅಗತ್ಯದ ಸಂಗತಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕ ಹಿತರಕ್ಷಣೆ ಎಂಬ ಪದವು 1960ರ ದಶಕದಲ್ಲಿ ಚಲಾವಣೆಗೆ ಬಂತು ಎಂದು ಫಿಲಿಪ್‌ ಕೋಟ್ಲರ್‌ ಎಂಬವರು ಹೇಳುತ್ತಾರೆ. ಗ್ರಾಹಕರ ಹಿತರಕ್ಷಣೆಯು ಇವತ್ತು ಒಂದು ಆಂದೋಲನದ ಸ್ವರೂಪವನ್ನು ಪಡೆದುಕೊಂಡಿದೆ. ಇದು ಗ್ರಾಹಕರನ್ನು ಶೋಷಣೆಯಿಂದ ರಕ್ಷಿಸುವ ಮತ್ತು ಅವರಲ್ಲಿ ತಮ್ಮ ಹಕ್ಕುಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಅನ್ಯಾಯದ ವ್ಯಾಪಾರ ಪದ್ಧತಿಗಳು, ತಪ್ಪು ಜಾಹೀರಾತುಗಳು ಇವುಗಳ ಬಗ್ಗೆ ಗ್ರಾಹಕರಲ್ಲಿ ಅಜ್ಞಾನ ಇರುತ್ತದೆ. ಬಳಕೆದಾರನ ಹಕ್ಕು ಮತ್ತು ವ್ಯಾಪಾರಿಯ ಹಕ್ಕು ಇವುಗಳ ಸಂಬಂಧದಲ್ಲಿ ಸರಿಯಾದ ಅರಿವು ಇರುವುದಿಲ್ಲ. ಬೆಲೆ ನಿಗದಿ ಮಾಡುವಾಗ ಸರಿಯಾದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲಾಗಿದೆಯೇ ಎಂಬುದೂ ಗೊತ್ತಿರುವುದಿಲ್ಲ. ಇವುಗಳ ಬಗ್ಗೆ ಜಾಗೃತಿ ಮೂಡಿಸುವುದೇ ಗ್ರಾಹಕ ಚಳವಳಿಯ ಉದ್ದೇಶವಾಗಿದೆ. 2.ಗ್ರಾಹಕ ರಕ್ಷಣೆ ಒಂದು ಆಂದೋಲನ ಗ್ರಾಹಕ ರಕ್ಷಣೆ ಎಂಬುದು ಒಂದು ಸಾಮಾಜಿಕ ಆಂದೋಲನವಾಗಿದೆ. ಮಾರಾಟಗಾರರೊಂದಿಗೆ ವ್ಯವಹರಿಸುವ ಗ್ರಾಹಕರ ಹಕ್ಕು ಮತ್ತು ಅಧಿಕಾರವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹಲವು ಸರ್ಕಾರಿ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ವ್ಯಾಪಾರದಲ್ಲಿ ಬಳಕೆದಾರರ ಒತ್ತಡವನ್ನು ಹೆಚ್ಚಿಸುವ ಮೂಲಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವ ಸಾಮಾಜಿಕ ಶಕ್ತಿಯನ್ನಾಗಿ ಇದನ್ನು ರೂಪಿಸಲಾಗಿದೆ. ಈ ಆಂದೋಳನದಿಂದ ಮಾರುಕಟ್ಟೆಯನ್ನು ನ್ಯಾಯಯುತವಾಗಿಸಬಹುದು. ಹೀಗಾದಾಗ ಗ್ರಾಹಕರಿಗೆ ಗುಣಮಟ್ಟದ ವಸ್ತುಗಳು ಮತ್ತು ಆ ವಸ್ತುಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತದೆ. ಗ್ರಾಹಕರಿಗೆ ಒದಗಿಸಲಾಗಿರುವ ಹಕ್ಕುಗಳು, ಅದಕ್ಕಿರುವ ಕಾನೂನಿನ ಚೌಕಟ್ಟು ಮತ್ತು ಆ ವಿಷಯದಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ರಮಗಳು ಬಳಕೆದಾರರ ಹಿತವನ್ನು ರಕ್ಷಿಸುತ್ತವೆ. ಗ್ರಾಹಕ ರಕ್ಷಣೆ ಅಥವಾ ಗ್ರಾಹಕ ಚಳವಳಿಯನ್ನು ವಸ್ತುಗಳ ವಿತರಣೆ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಸಂಸ್ಥೆ, ಚಟುವಟಿಕೆಗಳು ಮತ್ತು ಅವರ ಪ್ರವೃತ್ತಿಗಳು ಎಂದು ವರ್ಣಿಸಬಹುದೇನೋ. ಒಂದು ಕಾಲವಿತ್ತು, ವ್ಯಾಪಾರಿಯು ಗ್ರಾಹಕನಿಗೆ ಬೇಕಿದ್ದರೆ ತೆಗೆದುಕೋ, ಬೇಡದಿದ್ದರೆ ಜಾಗ ಖಾಲಿಮಾಡು ಎಂದು ಹೇಳುತ್ತಿದ್ದನು. ಮಾರುಕಟ್ಟೆಗಳು ಮತ್ತು ವ್ಯವಹಾರಗಳು ಎಷ್ಟು ಬೇಗನೆ ವಿಸ್ತರಿಸಿದವು ಎಂದರೆ ಅವು ಕಲಬೆರಕೆ ಮತ್ತು ದಾರಿತಪ್ಪಿಸುವ ಜಾಹೀರಾತಿನಂತಹ ಅನೈತಿಕ ಅಭ್ಯಾಸಗಳಿಗೆ ಫಲವತ್ತಾದ ನೆಲವಾಗಿತ್ತು. ಆಗ ಗ್ರಾಹಕನಿಗೆ ತನ್ನ ಹಕ್ಕುಗಳ ಅರಿವಿರಲಿಲ್ಲ. ಆತ ಆಗ ಅಸಹಾಯಕನಾಗಿದ್ದ. ಆದರೆ ಇವತ್ತು ಗ್ರಾಹಕ ಸಂಘಟಿತನಾಗಿದ್ದಾನೆ. ತನ್ನ ಹಕ್ಕುಗಳ ಬಗ್ಗೆ ಚೆನ್ನಾಗಿ ಅರಿತಿದ್ದಾನೆ. ವಾಣಿಜ್ಯದ ವ್ಯಾವಹಾರಿಕ ಜ್ಞಾನ ಅವನಿಗೆ ಚೆನ್ನಾಗಿಯೇ ಇದೆ. ಗ್ರಾಹಕ ರಕ್ಷಣೆಯು ಬೆಲೆಗಳ ವಿಷಯದಲ್ಲಿ, ವಸ್ತುಗಳ ಗುಣಮಟ್ಟದ ವಿಷಯದಲ್ಲಿ, ವಸ್ತುಗಳ ವಿತರಣೆಯ ವೆಚ್ಚ ಮತ್ತು ದಕ್ಷತೆಯ ವಿಷಯದಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ತಮ್ಮ ಈ ಹಕ್ಕುಗಳ ಬಗ್ಗೆ ಗ್ರಾಹಕರಿಗೆ ಯಾವಾಗ ಅರಿವಿರುತ್ತದೋ ಆಗ ಮಾತ್ರ ಗ್ರಾಹಕ ಚಳವಳಿಯು ಅವರಿಗೆ ರಕ್ಷಣೆಯನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಎಲ್ಲಿಯವರೆಗೆ ಗ್ರಾಹಕರಿಗೆ ತಮ್ಮ ಹಕ್ಕುಗಳ ಕುರಿತು ಮತ್ತು ತಮ್ಮನ್ನು ಯಾವ ಯಾವ ರೀತಿಯಲ್ಲಿ ಶೋಷಿಸಲಾಗುತ್ತಿದೆ ಎಂಬುದರ ಕುರಿತು ತಿಳಿವಳಿಕೆಯನ್ನು ಹೊಂದದೆ ಹೋದರೆ ಗ್ರಾಹಕ ರಕ್ಷಣೆ ಎಂಬುದು ಒಂದು ವೈಫಲ್ಯದ ಕತೆಯಾಗುತ್ತದೆ. ಅವರನ್ನು ರಕ್ಷಿಸಬೇಕು ಎಂದರೆ ಅವರಲ್ಲಿ ಗ್ರಾಹಕ ಶಿಕ್ಷಣದ ಬೀಜವನ್ನು ಬಿತ್ತಬೇಕು. 1958ರಲ್ಲಿ `ಇಂಡಿಯನ್‌ ಸ್ಟ್ಯಾಂಡರ್ಡ್‌ ಇನ್‌ಸ್ಟಿಟ್ಯೂಟ್‌' ದೆಹಲಿಯಲ್ಲಿ ಒಂದು ಸಮ್ಮೇಳನವನ್ನು ನಡೆಸಿತು. ಗ್ರಾಹಕರ ಹಿತರಕ್ಷಣೆಗೆ ಏನು ಮಾಡಬೇಕು ಎಂದು ಚಿಂತನಮಂಥನ ನಡೆಸುವುದು ಈ ಸಮ್ಮೇಳನದ ಉದ್ದೇಶವಾಗಿತ್ತು. ಅದಾದಬಳಿಕ 1959ರಲ್ಲಿ `ಭಾರತ ಗ್ರಾಹಕ ಸಂಸ್ಥೆ'ಯ ಉದಯವಾಗುತ್ತದೆ. ಮುಂಬಯಿಯಲ್ಲಿ 1966ರಲ್ಲಿ `ಗ್ರಾಹಕ ಮಾರ್ಗದರ್ಶಿ ಸೊಸೈಟಿ'ಯ ಸ್ಥಾಪನೆಯಾಗುತ್ತದೆ. ಗ್ರಾಹಕರಿಗೆ ಮಾರ್ಗದರ್ಶನ ಮಾಡಿ ಅವರ ಹಕ್ಕುಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ 1971ರಲ್ಲಿ `ದಿ ಇಂಡಿಯನ್‌ ಕನ್ಸೂಮರ್ಸ್‌ ಯೂನಿಯನ್‌' ಜನ್ಮತಳೆಯಿತು. ಉತ್ಪಾದಕರಿಂದ ನೇರವಾಗಿ ಖರೀದಿಸಿ ಯೋಗ್ಯ ದರದಲ್ಲಿ ಮಾರಾಟ ಮಾಡುವುದಕ್ಕಾಗಿ `ಗ್ರಾಹಕ ಪಂಚಾಯತ್‌' ಮತ್ತು ಸರ್ಕಾರಿ ನೌಕರರ ಗ್ರಾಹಕರ ಅಂಗಡಿಗಳಾದ `ಗ್ರಾಹಕರ ಸಹಕಾರ ಸಂಘ'ಗಳು ಹುಟ್ಟಿದವು. ನಗರ ಪ್ರದೇಶಗಳಲ್ಲಿ `ಸಹಕಾರಿ ಬಜಾರ್‌'ಗಳನ್ನು ಪರಿಚಯಿಸಲಾಯಿತು. ಹಾಗೆಯೇ ಪತ್ರಿಕೆಗಳಲ್ಲಿ ಗ್ರಾಹಕರಲ್ಲಿ ಅವರ ಹಕ್ಕುಗಳ ಬಗ್ಗೆ ಮತ್ತು ಹೊಣೆಗಾರಿಕೆಯ ಬಗ್ಗೆ ಅರಿವು ಮೂಡಿಸುವ ಬರೆಹಗಳು ಪ್ರಕಟವಾಗತೊಡಗಿದವು. ಭಾರತದ ಮಟ್ಟಿಗೆ ಹೇಳುವುದಾದರೆ ಗ್ರಾಹಕರು ಅಕ್ಷರಸ್ಥರೂ ಅನಕ್ಷರಸ್ಥರೂ ಇರಬಹುದು. ಅಕ್ಷರಸ್ಥರಲ್ಲಿಯೂ ಗ್ರಾಹಕರ ಹಕ್ಕು ಬಾಧ್ಯತೆಗಳ ಕುರಿತು ಅಜ್ಞಾನ ಇರುತ್ತದೆ. ಈ ಕಾರಣಕ್ಕೇ ಗ್ರಾಹಕ ರಕ್ಷಣೆಯೆಂಬುದರ ಮೂಲ ಆಶಯವೇ ಬಳಕೆದಾರರ ಹಿತವನ್ನು ರಕ್ಷಿಸುವುದಾಗಿದೆ. ಕೆಲವು ಮಹತ್ವದ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಲ್ಲಿ ಇಲ್ಲದಿರುವಾಗ ಅವುಗಳ ಅಕ್ರಮ ದಾಸ್ತಾನು ಮಾಡಿ ಕಾಳಸಂತೆಗೂ ವ್ಯಾಪಾರಿಗಳು ಕಾರಣರಾಗುತ್ತಾರೆ. ಇವುಗಳ ಬಗ್ಗೆ ಜನರು ದೂರುವುದಕ್ಕೆ ಹೋಗುವುದಿಲ್ಲ. ಕಾರಣ ಇಷ್ಟೇ ಪೊಲೀಸರು, ಕೋರ್ಟು ಕೇಸು ಇತ್ಯಾದಿಗಳ ರಗಳೆ ಅವರಿಗೆ ಬೇಕಾಗಿರುವುದಿಲ್ಲ. ಗ್ರಾಹಕ ರಕ್ಷಣೆ ಎಂಬುದು ಹಲವು ಕಾನೂನುಗಳ ಒಂದು ಗುಂಪಾಗಿದೆ. ಇವುಗಳ ಮೂಲಕ ಗ್ರಾಹಕರಿಗೆ ಅವರು ಹಕ್ಕುಗಳನ್ನು ನಿಜಗೊಳಿಸಲಾಗುತ್ತದೆ. ನ್ಯಾಯಯುತ ವ್ಯಾಪಾರವನ್ನು ನಡೆಸುವಂತೆ ಮತ್ತು ತಮ್ಮ ವಸ್ತುಗಳ ಕುರಿತು ಸರಿಯಾದ ಮಾಹಿತಿಯನ್ನು ಒದಗಿಸುವಂತೆ ವ್ಯಾಪಾರಿ ವರ್ಗದ ಮೇಲೆ ಅದು ಒತ್ತಡವನ್ನು ಹೇರುತ್ತದೆ. ಈ ಕಾನೂನುಗಳು ಮೋಸದ ಮತ್ತು ಅನ್ಯಾಯದ ವ್ಯಾಪಾರದ ವಿರುದ್ಧ, ಉದ್ಯಮಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ದಾರಿ ಮಾಡಿವೆ. ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಸರ್ಕಾರವು ರೂಪಿಸಿದ ನಿಯಮಗಳು ಆಗಿವೆ ಅವು. ಉದಾಹರಣೆಗೆ ಹೇಳಬೇಕೆಂದರೆ, ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಆಹಾರ ಮತ್ತು ಔಷಧಗಳು ಅಥವಾ ಸೇವೆಯ ಕುರಿತು ಯಾವುದೇ ಮಾಹಿತಿಯನ್ನು ಸರ್ಕಾರವು ಬಹಿರಂಗಪಡಿಸಬಹುದಾಗಿದೆ. ಗ್ರಾಹಕ ರಕ್ಷಣೆ ಎಂಬುದು ಗ್ರಾಹಕರ ಹಕ್ಕುಗಳಿಗೆ ಸಂಬಂಧಿಸಿದ್ದು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳನ್ನು ಹುಟ್ಟುಹಾಕುವುದಕ್ಕೆ ಸಂಬಂಧಿಸಿದ್ದು. ಈ ಸಂಸ್ಥೆಗಳು ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ ವ್ಯವಹರಿಸುತ್ತವೆ. ಮತ್ತು ಗ್ರಾಹಕರು ಸರಿಯಾದ ಮತ್ತು ಯೋಗ್ಯವಾದ ವಸ್ತು ಅಥವಾ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದು ಬಳಕೆದಾರ ಮತ್ತು ಮಾರಾಟಗಾರರ ನಡುವೆ ಉತ್ತಮ ಸಂಬಂಧ ಉಳಿದುಬರುವಂತೆ ಮಾಡುವ ಕಾನೂನಿನ ನಿಯಮಗಳಿಗೆ ಅನುಸಾರವಾಗಿ ಇರುತ್ತವೆ. ವ್ಯಾಪಾರದಲ್ಲಿ ಅನ್ಯಾಯದ ರೀತಿ ನೀತಿಗಳನ್ನು ಪ್ರತಿಬಂಧಿಸಲು ಉಗ್ರವಾದ ನಿಯಮಗಳನ್ನು ಮತ್ತು ಕಾನೂನುಗಳನ್ನು ಪ್ರತಿಪಾದಿಸುವಲ್ಲಿ ಗ್ರಾಹಕ ಚಳವಳಿಯು ಯಾವಾಗಲೂ ಒಂದು ಹೆಜ್ಜೆ ಮುಂದೆಯೇ ಇರುತ್ತದೆ. ಒಂದು ವಸ್ತುವನ್ನು ಖರೀದಿಸಿದಾಗ ಗ್ರಾಹಕನಿಗೆ ಏನೇನು ಲಾಭಗಳಾಗುತ್ತವೆ ಎಂಬುದನ್ನು ಉತ್ಪ್ರೇಕ್ಷಿಸುವ ಜಾಹೀರಾತುಗಳನ್ನು ನಿಕಷಕ್ಕೆ ಒಡ್ಡುವಲ್ಲಿ ಗ್ರಾಹಕ ಚಳವಳಿಯು ಮೈಯೆಲ್ಲ ಕಣ್ಣಾಗಿಸಿಕೊಂಡಿದೆ. ಉತ್ಪನ್ನಗಳ ಮೇಲೆ ಅಂಟಿಸುವ ಲೇಬಲ್ಲುಗಳು, ಅವುಗಳ ಬಗ್ಗೆ ನೀಡುವ ಜಾಹೀರಾತುಗಳು ಮತ್ತು ಖಾತ್ರಿಯನ್ನು ಖಚಿತಪಡಿಸುವ ಕರಾರುಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಇರುವುದನ್ನು ಗ್ರಾಹಕ ಚಳವಳಿ ಪ್ರಮುಖವೆಂದು ಭಾವಿಸುತ್ತದೆ. ಇದಕ್ಕೆ ಊನ ಬಂದಲ್ಲಿ ಗ್ರಾಹಕ ಹಕ್ಕುಗಳ ಸಂಸ್ಥೆಯ ಮೂಲಕ ಹೇಗೆ ಪರಿಪಾರ ಪಡೆಯಬಹುದು ಎಂಬುದನ್ನು ಅದು ಕಂಡುಕೊಳ್ಳುತ್ತದೆ. ಕೊಳ್ಳುಬಾಕ ಸಂಸ್ಕೃತಿಯ ಆಧುನಿಕ ಕಾಲದಲ್ಲಿ ಗ್ರಾಹಕರ ಕೊಳ್ಳುವ ಅಭಿರುಚಿಯನ್ನು ಅರಿಯುವುದಕ್ಕೆ ಅವರಿಗೆ ಗೊತ್ತಿಲ್ಲದಂತೆಯೇ ಸಮೀಕ್ಷೆಗಳನ್ನು ನಡೆಸಲಾಗುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ವಸ್ತುಗಳು ಮಾರುಕಟ್ಟೆಯಲ್ಲಿ ಸುರಿಮಳೆಯಾಗುತ್ತವೆ. ಈ ಮೂಲಕ ಮಾರುಕಟ್ಟೆಯಲ್ಲಿ ಒಂದು ತುರುಸಿನ ಸ್ಪರ್ಧೆ ಏರ್ಪಟ್ಟಿರುತ್ತದೆ. ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಸಾಧಿಸಲು ಪ್ರಯತ್ನಿಸುತ್ತವೆ. ಈ ಸ್ಪರ್ಧೆ ಆರೋಗ್ಯಕರವಾಗಿದ್ದರೆ ಸ್ವಾಗತಾರ್ಹ. ಆದರೆ ಅನಾರೋಗ್ಯಕರವಾದರೆ ಗ್ರಾಹಕ ಬಲಿಪಶು ಆಗಬೇಕಾಗುತ್ತದೆ. ಅಲ್ಪಕಾಲೀನ ಲಾಭವು ದೀರ್ಘಕಾಲೀನ ನಷ್ಟಕ್ಕೆ ದೂಡಬಹುದು. ಈ ಪೈಪೋಟಿಯ ಸ್ಪರ್ಧೆಯನ್ನು ನಿಯಂತ್ರಿಸುವುದಕ್ಕೆ ನಿಯಂತ್ರಣ ಕ್ರಮಗಳು ಅಗತ್ಯ. 3.ಮುಮ್ಮೈ ಹೊಣೆ ಗ್ರಾಹಕ ರಕ್ಷಣೆ ಎಂಬುದು ಮುಮ್ಮೈ ಹೊಣೆಯಾಗಿದೆ. ಗ್ರಾಹಕನಿಗೆ ಹೇಗೆ ಹಕ್ಕು ಮತ್ತು ಬಾಧ್ಯತೆಗಳು ಇರುತ್ತವೆಯೋ ಹಾಗೆಯೇ ವ್ಯಾಪಾರಿಗಳಿಗೂ ಹಲವು ಬಾಧ್ಯತೆಗಳಿರುತ್ತವೆ. ಉತ್ಪನ್ನದ ಉತ್ತರದಾಯಿತ್ವ ಅವರದಾಗಿರುತ್ತದೆ. ಖಾಸಗಿತನದ ಹಕ್ಕುಗಳನ್ನು ರಕ್ಷಿಸಬೇಕು. ನ್ಯಾಯಯುತವಲ್ಲದ ವ್ಯವಹಾರದಲ್ಲಿ ತೊಡಗಕೂಡದು. ಮೋಸವಂತೂ ಮಾಡಲೇಬಾರದು. ವಸ್ತುಗಳ ಕುರಿತು ತಪ್ಪಾದ, ದಾರಿತಪ್ಪಿಸುವಂಥ ವಿವರಣೆಗಳನ್ನು ನೀಡಲೇಬಾರದು. ನಮ್ಮ ದೇಶದಲ್ಲಂತೂ ಉತ್ತಮವಾದ ಮತ್ತು ಪರಿಣಾಮಕಾರಿಯಾದ ಗ್ರಾಹಕ ರಕ್ಷಣೆಯ ನಿಜವಾದ ಅಗತ್ಯವಿದೆ. ಬಲಿಷ್ಠವಾದ ಸಮತೋಲನದ ಅರ್ಥವ್ಯವಸ್ಥೆ ಉಳಿದುಬರುವುದಕ್ಕೆ ಬಳಕೆದಾರರು ಮತ್ತು ಮಾರಾಟಗಾರರ ನಡುವೆ ಉತ್ತಮ ಸಂಬಂಧ ಬೆಸೆಯುವುದಕ್ಕೆ ಗ್ರಾಹಕ ರಕ್ಷಣೆ ಮಹತ್ವದ ಪಾತ್ರವಹಿಸುತ್ತದೆ. ಉದ್ಯಮವು ಬೆಳೆದು ವೈವಿಧ್ಯಮಯವಾಗುತ್ತಿದ್ದಂತೆ, ಮಾರುಕಟ್ಟೆ ಹೆಚ್ಚು ಸಂಕೀರ್ಣವಾಗುತ್ತಿದ್ದಂತೆ, ಬಲವಾದ ಗ್ರಾಹಕ ಚಳುವಳಿಯ ಅವಶ್ಯಕತೆ ನಿರಂತರವಾಗಿದೆ. ಗ್ರಾಹಕರ ಹಕ್ಕುಗಳನ್ನು ಕಾಪಾಡಲು, ನೈತಿಕ ಅಭ್ಯಾಸಗಳನ್ನು ಕಾಪಾಡಿಕೊಳ್ಳಲು ಮತ್ತು ಅದೇ ಸಮಯದಲ್ಲಿ ಗ್ರಾಹಕರ ಸುರಕ್ಷತೆಗೆ ಇದು ಮುಖ್ಯವಾಗಿದೆ. ಪರಿಣಾಮಕಾರಿಯಾದ ಗ್ರಾಹಕ ರಕ್ಷಣೆಯನ್ನು ಹೊಂದುವುದಕ್ಕೆ ಉದ್ಯಮವಲಯ, ಸರ್ಕಾರ ಮತ್ತು ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯ ಅಗತ್ಯವಿರುತ್ತದೆ. ಅದು ಹೇಗೆ? ಎ. ಎಲ್ಲ ರೀತಿಯ ಉತ್ಪಾದಕರು ಮತ್ತು ವಿತರಕರ ಸಮೂಹವನ್ನು ಒಳಗೊಂಡಿರುವ ಉದ್ಯಮವು ಗ್ರಾಹಕ ಹಕ್ಕುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಗ್ರಾಹಕ ಹಕ್ಕುಗಳನ್ನು ಗೌರವಿಸಬೇಕು. ಬಿ. ವ್ಯಾಪಾರಿಯು ತಪ್ಪು ಮಾಹಿತಿ ನೀಡುವುದು, ಮೋಸಗೊಳಿಸುವುದು, ನಕಲಿ ವಸ್ತುಗಳನ್ನು ಮಾರುವುದು, ಶೋಷಣೆ ಮಾಡುವುದು ಮೊದಲಾದ ತಪ್ಪುಗಳನ್ನು ಮಾಡುತ್ತಿದ್ದರೆ ಅವುಗಳಿಂದ ಪಾರಾಗಲು ಸರ್ಕಾರವು ಗ್ರಾಹಕರಿಗೆ ನೆರವಾಗಬೇಕು. ಸುಳ್ಳು ಪ್ರಚಾರ ಮಾಡುವ ಜಾಹೀರಾತುಗಳ ರೂಪದರ್ಶಿಗಳೂ ಹೊಣೆಗಾರರಾಗುವ ಕಾನೂನುಗಳು ಇವತ್ತು ಬಂದಿವೆ. ಸಿ. ಗ್ರಾಹಕರು ತಮ್ಮ ಹಕ್ಕುಗಳನ್ನು ಮೊದಲಿಗೆ ಅರಿತುಕೊಳ್ಳಬೇಕು. ಗ್ರಾಹಕ ರಕ್ಷಣೆಯ ಆಶಯವನ್ನು ಅರಿತು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕು. ಗ್ರಾಹಕರಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌.ಎಫ್‌, ಕೆನಡಿ ನಾಲ್ಕು ಮೂಲಭೂತ ಹಕ್ಕುಗಳನ್ನು ಜಾರಿಗೆ ತಂದಿದ್ದರು. ಅವು, ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆ ಮಾಡಿಕೊಳ್ಳುವ ಹಕ್ಕು ಮತ್ತು ನ್ಯಾಯ ಕೇಳುವ ಹಕ್ಕು. ಇವುಗಳ ಹೊರತಾಗಿ ಭಾರತದಲ್ಲಿ ಇನ್ನೂ ಮೂರು ಮೂಲಭೂತ ಹಕ್ಕುಗಳಿವೆ. ಅವು ಪರಿಹಾರ ಕೇಳುವ ಹಕ್ಕು, ಮೂಲ ಸೌಲಭ್ಯಗಳ ಹಕ್ಕು ಮತ್ತು ಗ್ರಾಹಕ ಶಿಕ್ಷಣದ ಹಕ್ಕು. ಇವುಗಳ ಕುರಿತು ವಿವರವಾಗಿ ಈಗ ನೋಡೋಣ. ಸುರಕ್ಷತೆಯ ಹಕ್ಕು ಎಂದರೆ ಆರೋಗ್ಯ ಮತ್ತು ಜೀವಕ್ಕೆ ಅಪಾಯಕಾರಿಯಾದ ವಸ್ತುಗಳಿಂದ ಗ್ರಾಹಕರಿಗೆ ರಕ್ಷಣೆ. ನೀವೊಂದು ವಿದ್ಯುತ್ತಿನ ಉಪಕರಣವನ್ನು ಖರೀದಿಸಿರಬಹುದು, ಸಿಗರೇಟು, ತಂಬಾಕು, ಕುಕ್ಕರುಗಳು, ಮನೆ ಬಳಕೆಯ ವಸ್ತುಗಳು ಯಾವುದೇ ಇರಬಹುದು, ಗ್ರಾಹಕ ಗುಣಮಟ್ಟದ ವಸ್ತುಗಳನ್ನೇ ಖರೀದಿಸಬೇಕು. ಆ ವಸ್ತುಗಳು ಐಎಸ್‌ಐ, ಬಿಐಎಸ್‌, ಆಗ್ಮಾರ್ಕ್‌ ಇತ್ಯಾದಿ ಗುಣಮಟ್ಟದ ಪ್ರಮಾಣಪತ್ರ ಹೊಂದಿರಬೇಕು. ತಕ್ಷಣದ ಅಗತ್ಯಕ್ಕಲ್ಲ, ದೀರ್ಘ ಕಾಲ ಬಾಳಿಕೆ ಬರುವಂಥದ್ದಾಗಿರಬೇಕು. ಪ್ರತಿಯೊಬ್ಬ ಗ್ರಾಹಕನಿಗೆ ತಾನು ಖರೀದಿಸುವ ವಸ್ತುವಿನ ಬಗ್ಗೆ, ಪಡೆದುಕೊಳ್ಳುವ ಸೇವೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂಬ ಅರಿವು ಮೂಡುವಂತಾಗಬೇಕು. ಈ ಮಾಹಿತಿಯು ವಸ್ತು ಮತ್ತು ಸೇವೆಯ ಗುಣಮಟ್ಟ, ಪ್ರಮಾಣ, ಶುದ್ಧತೆ, ಬೆಲೆ, ಸಾಮರ್ಥ್ಯ ಪ್ರಮಾಣೀಕರಿಸಲ್ಪಟಿರುವುದರ ಬಗ್ಗೆ ಇರುತ್ತದೆ. ಇಂಥ ಮಾಹಿತಿಯನ್ನು ನೀಡುವುದರಿಂದ ಗ್ರಾಹಕರು ನ್ಯಾಯಯುತವಲ್ಲದ ವಹಿವಾಟಿನಿಂದ ಬಚಾವಾಗುವುದು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಗ್ರಾಹಕನಿಗೂ ತನ್ನ ಆಯ್ಕೆಯ ವಸ್ತು ಅಥವಾ ಸೇವೆಯನ್ನು ಆಯ್ಕೆಮಾಡಿಕೊಳ್ಳುವ ಹಕ್ಕು ಇರುತ್ತದೆ. ಇದು ಅವರ ಜನ್ಮಸಿದ್ಧ ಹಕ್ಕಾಗಿರುತ್ತದೆ. ಒಂದೇ ವಸ್ತು ವಿವಿಧ ವೈವಿಧ್ಯದಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುತ್ತಿರುವಾಗ ಈ ಆಯ್ಕೆಯ ಹಕ್ಕು ವ್ಯಾಪಾರಿಯ ಏಕಸ್ವಾಮ್ಯವನ್ನು ಮುರಿಯುತ್ತದೆ. ಈ ಮೂಲಕ ಉತ್ತಮ ಬೆಲೆಯಲ್ಲಿ ಗುಣಮಟ್ಟದ ತೃಪ್ತಿದಾಯಕ ಉತ್ಪನ್ನ ಗ್ರಾಹಕನಿಗೆ ಲಭ್ಯವಾಗುತ್ತದೆ. ಗ್ರಾಹಕ ತನ್ನ ಆಕ್ಷೇಪಗಳನ್ನು ಸಂಬಂಧಪಟ್ಟವರಿಗೆ ತಿಳಿಸಿ ಪರಿಹಾರವನ್ನು ಪಡೆದುಕೊಳ್ಳುವ ಅವಕಾಶ ಮಹತ್ವದ್ದು. ಇವಿಲ್ಲದಿದ್ದರೆ ಸುರಕ್ಷತೆ, ಮಾಹಿತಿ ಮತ್ತು ಆಯ್ಕೆಯ ಹಕ್ಕುಗಳು ಇದ್ದೂ ಇಲ್ಲದಂತೆ. ತನ್ನ ದೂರನ್ನು ಸಂಬಂಧಿಸಿದವರಿಗೆ ಕೇಳಿಸಲು ತನ್ನ ಹಕ್ಕನ್ನು ಚಲಾಯಿಸಿದಾಗ ಮಾತ್ರ ಗ್ರಾಹಕ ಯಶಸ್ವಿಯಾಗುವುದು. ಆ ಕಾರಣಕ್ಕೆ ಈ ಹಕ್ಕು ಪ್ರಮುಖವಾದದ್ದು. ಮೂಲಸೌಕರ್ಯಗಳ ಹಕ್ಕು ಎಂದರೆ ಆಹಾರ, ನೀರು, ಆರೋಗ್ಯ ಸೇವೆ, ಶಿಕ್ಷಣ ಇತ್ಯಾದಿಗಳನ್ನು ಸರ್ಕಾರ ಒದಗಿಸಬೇಕು. ಸುರಕ್ಷಿತವಾದ ಕುಡಿಯುವ ನೀರನ್ನು ಸರ್ಕಾರ ಒದಗಿಸಬೇಕು. ಪರಿಶುದ್ಧವಾದ ಗಾಳಿ ಸಿಗುವ ಹಾಗೆ ನೋಡಿಕೊಳ್ಳಬೇಕು. ಕಲಬೆರಕೆ ಇಲ್ಲದ ಆಹಾರವಸ್ತು ಸಿಗುವ ಹಾಗೆ ನೋಡಿಕೊಳ್ಳಬೇಕು. ಒಂದು ವಯಸ್ಸಿನ ವರೆಗೆ ಶಿಕ್ಷಣ, ಎಲ್ಲ ವಯಸ್ಸಿನವರಿಗೂ ಆರೋಗ್ಯ ಸೇವೆಯನ್ನು ಒದಗಿಸಬೇಕು. ಈ ಮೂಲಭೂತ ಸೌಕರ್ಯಗಳು ಎಲ್ಲ ನಾಗರಿಕರಿಗೂ ಸಿಗುವಂತಾಗಲು ಸರ್ಕಾರ ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಇನ್ನು, ಗ್ರಾಹಕ ಶಿಕ್ಷಣ. ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಹತ್ವದ್ದು. ಕೇವಲ ಕಾನೂನು ಇದ್ದರೆ ಸಾಲದು. ಆ ಕಾನೂನನ್ನು ಹೇಗೆ ಬಳಸಿಕೊಳ್ಳಬೇಕು, ಅದು ಹೇಗೆ ನ್ಯಾಯಪಡೆಯಲು ನೆರವಾಗುತ್ತದೆ ಎಂಬುದನ್ನು ತಿಳಿಸಿಕೊಡಬೇಕು. ಈ ಕಾರಣಕ್ಕಾಗಿಯೇ ಇಂದು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸರ್ಕಾರದ ವತಿಯಿಂದಲೇ ಗ್ರಾಹಕರಿಗೆ ಜ್ಞಾನ ನೀಡುವ ಜಾಹೀರಾತುಗಳು ಬರುತ್ತಿವೆ. ಸರ್ಕಾರ ಮಾತ್ರವಲ್ಲದೆ ಕೆಲವು ಖಾಸಗಿ ಸಂಸ್ಥೆಗಳೂ ಗ್ರಾಹಕರನ್ನು ಅರಿವಿನ ಕಡೆಗೆ ಒಯ್ಯಲು ಪ್ರಯತ್ನಿಸುತ್ತಿವೆ. ಮಾರುಕಟ್ಟೆ ತಂತ್ರಜ್ಞಾನ ಕಾಯ್ದೆಗಳು, ತರತಮ ಪರೀಕ್ಷೆ, ವಸ್ತುವಿನ ವಿವರವನ್ನೊಳಗೊಂಡಿರುವ ತಲೆಪಟ್ಟಿ ಇವುಗಳ ಜ್ಞಾನ ಇದ್ದರೆ ಗ್ರಾಹಕ ತನ್ನ ಖರೀದಿಯ ವಿಷಯದಲ್ಲಿ ಹೆಚ್ಚು ಜಾಗರೂಕನಾಗಿರಬಹುದು. ಗ್ರಾಹಕರನ್ನು ಅವರ ಹಕ್ಕುಗಳ ಬಗ್ಗೆ ಜಾಗೃತಗೊಳಿಸಲು ಸರ್ಕಾರವು ಕಿರುಹೊತ್ತಗೆಗಳನ್ನು ಪ್ರಕಟಿಸುತ್ತಿದೆ. ಶ್ರವ್ಯ ಮತ್ತು ದೃಶ್ಯ ಮಾಧ್ಯಮಗಳು ಎಂದರೆ ರೇಡಿಯೋ, ದೂರದರ್ಶನ, ಸಾಮಾಜಿಕ ಜಾಲತಾಣಗಳಲ್ಲಿ ಗ್ರಾಹಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆದಿದೆ. ಪ್ರತಿ ವರ್ಷ ಮಾರ್ಚ್‌ 15ನೆ ದಿನಾಂಕವನ್ನು ಗ್ರಾಹಕರ ದಿನ ಎಂದು ಆಚರಿಸಲಾಗುತ್ತಿದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರನ್ನು ರಾಷ್ಟ್ರೀಯ ಯುವ ಪ್ರಶಸ್ತಿಗೆ ಮತ್ತು ಗ್ರಾಹಕ ರಕ್ಷಣೆಗಾಗಿ ಇರುವ ರಾಷ್ಟ್ರೀಯ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಹಲವು ಗ್ರಾಹಕ ಸಂಘಟನೆಗಳು ಮತ್ತು ಕೆಲವು ಉದ್ಯಮಗಳ ಸಂಘಟನೆಗಳು ಗ್ರಾಹಕರನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. 4. ಗ್ರಾಹಕ ಸಂರಕ್ಷಣಾ ಕಾಯ್ದೆ ಗ್ರಾಹಕ ಚಳವಳಿಯಲ್ಲಿ ಮುಖ್ಯವಾದ ಅಂಶವೆಂದರೆ, ಕಾನೂನು ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕಾನೂನು ಚೌಕಟ್ಟುಗಳನ್ನು ಸ್ಥಾಪಿಸುವುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗ್ರಾಹಕ ವಕಾಲತ್ತು ಗುಂಪುಗಳು ಜಗತ್ತಿನಲ್ಲಿ ಎಲ್ಲೆಡೆ ಇದ್ದರೂ ಕಾನೂನಿನ ಬಲ ಅವಕ್ಕೆ ಇಲ್ಲದಿದ್ದರೆ ಅವು ಪರಿಣಾಮಕಾರಿಯಾಗುವುದಿಲ್ಲ. ಹೆಚ್ಚಿನ ದೇಶಗಳು ಗ್ರಾಹಕ ಹಕ್ಕುಗಳನ್ನು ರಕ್ಷಿಸುವುದಿಲ್ಲ. ಅನೇಕ ದೇಶಗಳು ಈಗ ಗ್ರಾಹಕರನ್ನು ರಕ್ಷಿಸುವ ಕಾನೂನುಗಳನ್ನು ಹೊಂದಿವೆ, ಅದರಲ್ಲಿ ಗ್ರಾಹಕ ದೋಷ ಪೂರಿತ ಅಥವಾ ಹಾನಿಕಾರಕ ಉತ್ಪನ್ನವನ್ನು ಖರೀದಿಸಿದರೆ, ಅವರಿಗೆ ಪರಿಹಾರ ಅಥವಾ ಮರುಪಾವತಿ ಪಡೆಯುವ ಹಕ್ಕಿದೆ. ಗ್ರಾಹಕರು ತಮ್ಮ ಹಕ್ಕುಗಳನ್ನು ಉಲ್ಲಂಘಿಸುವ ವ್ಯವಹಾರಗಳ ವಿರುದ್ಧ ದೂರುಗಳನ್ನು ಸಲ್ಲಿಸಲು ಮತ್ತು ಸೂಕ್ತ ಕಾನೂನು ಮಾರ್ಗಗಳ ಮೂಲಕ ಪರಿಹಾರವನ್ನು ಪಡೆಯಲು ಇದು ಅವಕಾಶ ಕಲ್ಪಿಸಿದೆ. ವ್ಯಾಪಾರಿಗಳ ಕುಕೃತ್ಯಗಳಿಂದ ಗ್ರಾಹಕರನ್ನು ರಕ್ಷಿಸಲು, ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರವು ಕೆಲವು ಕಾನೂನುಗಳನ್ನು ಜಾರಿಗೆ ತಂದಿದೆ. ಮುಗ್ಧ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಅಂತಹ ಒಂದು ವಿಶೇಷ ಕಾಯ್ದೆಯೆಂದರೆ "ಗ್ರಾಹಕ ಸಂರಕ್ಷಣಾ ಕಾಯ್ದೆ, 1986". ಈ ಕಾಯ್ದೆಯ ಮೂಲಕ ಗ್ರಾಹಕ ಆಯೋಗಗಳನ್ನು ಸ್ಥಾಪಿಸಲಾಗಿದೆ. ಇವು ಶಾಸನಬದ್ಧ ಸಂಸ್ಥೆಗಳು. ಯಾವ ಗ್ರಾಹಕನಾದರೂ ತೊಂದರೆಗೆ ಒಳಗಾದರೆ ಗ್ರಾಹಕ ಆಯೋಗದಲ್ಲಿ ದೂರನ್ನು ಸಲ್ಲಿಸಬಹುದಾಗಿದೆ. ಇದು ಗ್ರಾಹಕರ ದೂರುಗಳನ್ನು ಪರಿಶೀಲಿಸಿ ಪರಿಹಾರವನ್ನು ಒದಗಿಸುತ್ತದೆ. ಈ ಕಾಯ್ದೆಯು ಖಾಸಗಿ, ಸಾರ್ವಜನಿಕ ಅಥವಾ ಸಹಕಾರರಂಗದ ಎಲ್ಲ ವಸ್ತುಗಳು ಮತ್ತು ಸೇವೆಗಳನ್ನು ಒಳಗೊಳ್ಳುತ್ತದೆ. ಗ್ರಾಹಕ ಆಯೋಗವು ಗ್ರಾಹಕರ ವಿವಾದಗಳು ಮತ್ತು ಕುಂದುಕೊರತೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವ ವಿಶೇಷ ಉದ್ದೇಶದ ನ್ಯಾಯಾಲಯವಾಗಿದೆ. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸರ್ಕಾರವು ಇವುಗಳನ್ನು ಸ್ಥಾಪಿಸಿದೆ. ಮಾರಾಟಗಾರರು ನ್ಯಾಯಯುತವಾಗಿಯೇ ಕಾರ್ಯ ನಿರ್ವಹಿಸುವಂತೆ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಗ್ರಾಹಕರು ಪ್ರಕರಣವನ್ನು ದಾಖಲಿಸಲು ಸರಿಯಾದ ದಾಖಲೆಗಳನ್ನು ಹೊಂದಿರಬೇಕು. ಗ್ರಾಹಕ ರಕ್ಷಣೆ ಕಾಯ್ದೆ 1986ರ ಪ್ರಮುಖ ಅಂಶಗಳು ಹೀಗಿವೆ. ಇದೊಂದು ಸಮಾಜ ಕಲ್ಯಾಣ ಶಾಸನವಾಗಿದೆ. ಪರಿಣಾಮಕಾರಿಯಾದ ನಿಯಮಾವಳಿಗಳು ಮತ್ತು ಸುರಕ್ಷತೆಗಳಿವೆ. ವಿಶೇಷ ಗ್ರಾಹಕ ನ್ಯಾಯಾಲಯಗಳಿವೆ. ಅತ್ಯಂತ ಸರಳವಾದ, ತ್ವರಿತವಾದ ಮತ್ತು ವೆಚ್ಚರಹಿತ ಪರಿಹಾರದ ಕಾರ್ಯತಂತ್ರವಿದೆ. ಅನುಕೂಲಕರವಾದ ನಡಾವಳಿಗಳಿವೆ. ಇದು ವಸ್ತುಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಒಳಗೊಂಡಿದೆ. ಕಾಲಮಿತಿ ಇದೆ. ನ್ಯಾಯಯುತವಲ್ಲದ ವಹಿವಾಟಿಗೆ ತಡೆ ಹಾಕುತ್ತದೆ. ಬೆಲೆಗಳ ಮೇಲೆ ನಿಗಾ ಇಡುತ್ತದೆ. ಕಾಯ್ದೆಯ ಪ್ರಕಾರ "ಸರಕುಗಳು" ಎಂದರೆ ಗ್ರಾಹಕರು ಚಿಲ್ಲರೆ ವ್ಯಾಪಾರಿಗಳಿಂದ ಅಥವಾ ಸಗಟು ವ್ಯಾಪಾರಿಗಳಿಂದ ಚಿಲ್ಲರೆ ಅಥವಾ ಸಗಟು ರೂಪದಲ್ಲಿ ಖರೀದಿಸಿದ ಯಾವುದೇ ವಸ್ತು. ಅವುಗಳನ್ನು ಉತ್ಪಾದಿಸಿರಬಹುದು ಅಥವಾ ತಯಾರಿಸಿರಬಹುದು. ಕಾಯಿದೆಯ ಪ್ರಕಾರ "ಸೇವೆಗಳು" ಎಂದರೆ ಸಾರಿಗೆ , ದೂರವಾಣಿ , ವಿದ್ಯುತ್ , ವಸತಿ , ಬ್ಯಾಂಕಿಂಗ್ , ವಿಮೆ , ವೈದ್ಯಕೀಯ ಚಿಕಿತ್ಸೆ ಇತ್ಯಾದಿ ರೂಪದಲ್ಲಿರುವವುಗಳು . ತೊಂದರೆಗೆ ಒಳಗಾದ ಗ್ರಾಹಕ ಅಥವಾ ಅವನ ಪರವಾಗಿ ಯಾವುದಾದರೂ ಸ್ವಯಂಸೇವಾ ಸಂಸ್ಥೆ ಅಥವಾ ಸರ್ಕಾರ ದೂರನ್ನು ಸಲ್ಲಿಸಬಹುದಾಗಿದೆ. ಒಂದು ಬಿಳಿಯ ಹಾಳೆಯನ್ನು ತೆಗೆದುಕೊಳ್ಳಿ. ನಿಮಗಾಗಿರುವ ಅನ್ಯಾಯದ ವ್ಯವಹಾರದ ವಿವರಗಳನ್ನು ಅಥವಾ ದೋಷಪೂರಿತ ವಸ್ತುವಿನ ವಿವರ ಇಲ್ಲವೆ ಅಸಮರ್ಪಕ ಸೇವೆಯ ವಿವರಗಳನ್ನು ಬರೆಯಿರಿ. ಗ್ರಾಹಕ ವೇದಿಕೆಗೆ ಸ್ವತಃ ನೀವೇ ಹೋಗಿ ದೂರನ್ನು ದಾಖಲಿಸಬಹುದು. ಅಥವಾ ಯಾವುದಾದರೂ ನೊಂದಾಯಿತ ಮಧ್ಯವರ್ತಿಗಳ ಮೂಲಕ ಇಲ್ಲವೆ ಅಂಚೆ ಮೂಲಕವೂ ದೂರನ್ನು ಸಲ್ಲಿಸಬಹುದು. ನೀವು ದೂರು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪತ್ರವನ್ನು ಪಡೆಯಿರಿ. ಗ್ರಾಹಕ ವೇದಿಕೆ ವಿಚಾರಣೆಯನ್ನು ನಡೆಸಿ ನಿಮಗೆ ನ್ಯಾಯವನ್ನು ನೀಡುತ್ತದೆ. ವೇದಿಕೆಯು ದೋಷಪೂರಿತ ವಸ್ತುವನ್ನು ಹಿಂದಕ್ಕೆ ಪಡೆದು ಹೊಸದನ್ನು ನೀಡಲು ಹೇಳಬಹುದು, ಇಲ್ಲವೆ ಹಣವನ್ನು ವಾಪಸ್ಸು ನೀಡುವುದಕ್ಕೂ ಹೇಳಬಹುದು. ವಿಚಾರಣೆಯನ್ನು ನಡೆಸುವುದಕ್ಕೂ ಕಾಲಮಿತಿ ಇದೆ. ರಾಷ್ಟ್ರೀಯ ಆಯೋಗ, ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗ (ಮೊದಲು ವೇದಿಕೆ ಎನ್ನುತ್ತಿದ್ದರು), ಪ್ರತಿವಾದಿಯು ನೋಟೀಸನ್ನು ಸ್ವೀಕರಿಸಿದ ಮೂರು ತಿಂಗಳೊಳಗೆ ವಿಚಾರಣೆ ನಡೆಸುತ್ತವೆ. * ಯಾರು ದೂರು ದಾಖಲಿಸಬಹುದು? ಮೊದಲು ಗಮನಹರಿಸಬೇಕಾದ ಪ್ರಶ್ನೆಯೆಂದರೆ ಗ್ರಾಹಕರ ದೂರನ್ನು ಯಾರು ಸಲ್ಲಿಸಬಹುದು ಎಂಬುದು. ಕಾಯಿದೆಯಡಿಯಲ್ಲಿ, ಈ ಕೆಳಗಿನ ವ್ಯಕ್ತಿಗಳು ಗ್ರಾಹಕರ ದೂರನ್ನು ಸಲ್ಲಿಸಬಹುದು: - ಗ್ರಾಹಕನನ್ನು ಒಂದು ನಿರ್ದಿಷ್ಟ ಮೌಲ್ಯದ ಸರಕು ಅಥವಾ ಸೇವೆಗಳನ್ನು ಖರೀದಿಸಿದ ವ್ಯಕ್ತಿ ಎಂದು ಈ ಕಾಯ್ದೆ ವ್ಯಾಖ್ಯಾನಿಸುತ್ತದೆ. ಇದು ಸ್ವತಃ ಸರಕುಗಳನ್ನು ಖರೀದಿಸದೆ ಖರೀದಿದಾರರ ಅನುಮತಿಯೊಂದಿಗೆ ಸರಕುಗಳನ್ನು ಬಳಸಿದ ವ್ಯಕ್ತಿಯೂ ಆಗಿರಬಹುದು ಮತ್ತು ಮರುಮಾರಾಟದ ಉದ್ದೇಶಕ್ಕಾಗಿ ಖರೀದಿಸಿರದೆ ಸ್ವಯಂ ಉಪಯೋಗಕ್ಕಾಗಿ ಖರೀದಿಸಿದ ಸರಕುಗಳನ್ನು ಇದು ಒಳಗೊಂಡಿದೆ. - ಕಂಪನಿಗಳ ಕಾಯ್ದೆ, 1956 ರ ಅಡಿಯಲ್ಲಿ ನೋಂದಾಯಿಸಲಾದ ಸ್ವಯಂಸೇವಾ ಸಂಸ್ಥೆ. - ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ - ಒಂದೇ ರೀತಿಯ ಆಸಕ್ತಿ ಹೊಂದಿರುವ ಒಂದು ಅಥವಾ ಹೆಚ್ಚಿನ ಗ್ರಾಹಕರು. - ಗ್ರಾಹಕರ ಸರಕು/ಸೇವೆಗಳ ಫಲಾನುಭವಿ - ಮೃತ ಗ್ರಾಹಕರ ಕಾನೂನು ಪ್ರತಿನಿಧಿಗಳು - ಮೃತ ಗ್ರಾಹಕರ ಉತ್ತರಾಧಿಕಾರಿಗಳ ಕಾನೂನು ಪ್ರತಿನಿಧಿಗಳು - ಗ್ರಾಹಕರ ಸಂಗಾತಿ - ಗ್ರಾಹಕರ ಸಂಬಂಧಿ ನೀವು ಗ್ರಾಹಕರ ಆಯೋಗದಲ್ಲಿ ದೂರನ್ನು ದಾಖಲಿಸುವ ಪೂರ್ವದಲ್ಲಿ ವ್ಯಾಪಾರಿಯನ್ನು ಸಂಪರ್ಕಿಸಿ ನಿಮ್ಮ ದೂರನ್ನು ತಿಳಿಸಬೇಕು. ದೋಷಪೂರಿತ ವಸ್ತು ಅಥವಾ ಸೇವೆಯನ್ನು ಬದಲಿಸಿ ಕೊಡಲು ಅಥವಾ ಹಣವನ್ನು ಮರುಪಾವತಿಸಲು ವಿನಂತಿಸಬೇಕು. ನಿರ್ಲಕ್ಷಿಸಿದರೆ ಅಥವಾ ಆರೋಪಗಳನ್ನು ನಿರಾಕರಿಸಿದರೆ ನೀವು ಮುಂದಿನ ಹಂತಕ್ಕೆ ಮುಂದುವರಿಯಬೇಕು. * ದೂರು ಸಲ್ಲಿಸುವುದು ಹೇಗೆ? ನೀವು ದೂರು ಸಲ್ಲಿಸಬಹುದು ಎಂದು ಖಚಿತವಾದ ನಂತರ ಏನೇನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕ ದೂರು ಸಲ್ಲಿಸಲು ಸರಳ ಮತ್ತು ಸುಲಭವಾದ ವಿಧಾನವನ್ನು ಒದಗಿಸಿದೆ. ದೂರು ಸಲ್ಲಿಸುವ ಕಾರ್ಯವಿಧಾನಕ್ಕೆ ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ ಮತ್ತು ಕಾನೂನು ಹಿನ್ನೆಲೆ ಇಲ್ಲದಿದ್ದರು ಸಹ ಸ್ವತಃ ಮಾಡಬಹುದು. ಗ್ರಾಹಕ ದೂರು ಸಲ್ಲಿಸಲು ಅನುಸರಿಸಬೇಕಾದ ಹಂತಗಳು ಇವು. 1. ನ್ಯಾಯವ್ಯಾಪ್ತಿಯನ್ನು ಗುರುತಿಸಿ. ದೂರು ಸಲ್ಲಿಸುವಾಗ ನ್ಯಾಯ ವ್ಯಾಪ್ತಿಯನ್ನು ಗುರುತಿಸುವುದು ಮೊದಲ ಹೆಜ್ಜೆ. ಹಣಕಾಸಿನ ಮತ್ತು ಪ್ರಾದೇಶಿಕ ನ್ಯಾಯವ್ಯಾಪ್ತಿ ಎರಡನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಒಂದು ಕೋಟಿ ರುಪಾಯಿ ವರೆಗಿನ ವಸ್ತು ಮತ್ತು ಸೇವೆಗೆ ಸಂಬಂಧಿಸಿದಂತೆ ಪರಿಹಾರವನ್ನು ಜಿಲ್ಲಾ ಆಯೋಗದಲ್ಲಿಯೇ ನೀವು ಕೋರಬಹುದು. 1 ಕೋಟಿಗಿಂತಲೂ ಅಧಿಕ ಮತ್ತು 10 ಕೋಟಿ ರುಪಾಯಿಗೂ ಕಡಿಮೆ ಪರಿಹಾರವನ್ನು ಕೋರುವುದಿದ್ದರೆ ನೇರವಾಗಿ ರಾಜ್ಯ ಆಯೋಗದಲ್ಲಿ ದೂರು ಸಲ್ಲಿಸಬೇಕಾಗುತ್ತದೆ. 10 ಕೋಟಿಗಿಂತಲೂ ಹೆಚ್ಚಿನ ಪರಿಹಾರ ಕೋರಿಕೆಗೆ ನೇರವಾಗಿ ರಾಷ್ಟ್ರೀಯ ಆಯೋಗದಲ್ಲಿ ದೂರನ್ನು ದಾಖಲಿಸಬೇಕಾಗುತ್ತದೆ. 2. ಅರ್ಜಿ ಸಲ್ಲಿಕೆ ಶುಲ್ಕ ಜಿಲ್ಲಾ ಆಯೋಗದಲ್ಲಿ 5 ಲಕ್ಷ ರುಪಾಯಿವರೆಗಿನ ಪರಿಹಾರ ಕೋರಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಇನ್ನೂ ಹೆಚ್ಚಿನ ಮೊತ್ತದ ಪರಿಹಾರ ಕೋರಿಕೆಗೆ ಶುಲ್ಕವಿರುತ್ತದೆ. ಹಾಗೆಯೇ ರಾಜ್ಯ ಮತ್ತು ರಾಷ್ಟ್ರೀಯ ಆಯೋಗದಲ್ಲಿ ಅರ್ಜಿ ಸಲ್ಲಿಸುವಾಗ ಶುಲ್ಕ ಇರುತ್ತದೆ. 3. ದೂರು ಸಿದ್ಧಪಡಿಸುವುದು ದೂರಿನಲ್ಲಿ ನೀವು ಯಾವ ಕಾರಣಗಳಿಗಾಗಿ ಪರಿಹಾರವನ್ನು ಕೋರುತ್ತಿದ್ದೀರಿ ಎಂಬುದು ಮತ್ತು ಅದನ್ನು ಸಮರ್ಥಿಸುವ ದಾಖಲೆಗಳನ್ನು ಒಳಗೊಂಡಿರಬೇಕು. 4. ಗುರುತಿಸುವಿಕೆ ದೂರುದಾರರು ಮತ್ತು ಎದುರು ಪಕ್ಷದವರ ಹೆಸರು, ವಿಳಾಸ ಮತ್ತು ವಿವರಣೆಯನ್ನು ಅರ್ಜಿಯು ಒಳಗೊಂಡಿರಬೇಕು. 5. ಸಹಿ ದೂರುದಾರರ ಸಹಿ ಅಥವಾ ಪ್ರತಿನಿಧಿಯಿಂದ ಸಲ್ಲಿಸಲ್ಪಡುತ್ತಿದ್ದರೆ ಅದು ದೂರುದಾರರಿಂದ ಅಧಿಕಾರ ಪತ್ರವನ್ನು ಒಳಗೊಂಡಿರಬೇಕು. 6. ಲಗತ್ತುಗಳು ದೂರಿನಲ್ಲಿ ಕ್ಲೈಮ್ ಅನ್ನು ಬೆಂಬಲಿಸುವ ಎಲ್ಲಾ ಬಿಲ್‌ಗಳು ಮತ್ತು ರಶೀದಿಗಳನ್ನು ಲಗತ್ತಿಸಿ ಮತ್ತು ವಸ್ತುಗಳನ್ನು ಅಥವಾ ಸೇವೆಗಳನ್ನು ಸರಿಪಡಿಸಲು ವಿನಂತಿಸಿ ವ್ಯಾಪಾರಿಗೆ ಕಳುಹಿಸಲಾದ ನೋಟೀಸನ್ನು ಸಹ ಲಗತ್ತಿಸಿ. 7. ಪರಿಹಾರ ಕೇಳಿಕೆ ಕೇಳಲಾದ ಪರಿಹಾರ ಮೊತ್ತದಲ್ಲಿ ಮೊಕದ್ದಮೆ ಶುಲ್ಕಗಳು, ಬಡ್ಡಿ, ಮರುಪಾವತಿಗಳು, ಹಾನಿಗಳು ಇತ್ಯಾದಿಗಳು ಒಳಗೊಂಡಿರಬಹುದು. ಯಾವುದಕ್ಕೆ ಎಷ್ಟೆಷ್ಟು ಎಂದು ಒಟ್ಟು ಮೊತ್ತದ ವಿಭಜನೆ ಅಗತ್ಯವಿದೆ. 8. ಹೇಳಿಕೆಗಳು ಯಾವ ನ್ಯಾಯವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬುದರ ಹೇಳಿಕೆಗಳು ಮತ್ತು ಯಾವ ಪರಿಹಾರವನ್ನು ಕೋರಲಾಗಿದೆ ಎಂಬುದರ ಹೇಳಿಕೆಯನ್ನು ಒಳಗೊಂಡಿರಬೇಕು. 9. ಕಾಲಮಿತಿ ನೀವು ಅನ್ಯಾಯಕ್ಕೊಳಗಾದ ದಿನಾಂಕದಿಂದ 2 ವರ್ಷಗಳೊಳಗೆ ದೂರು ಸಲ್ಲಿಸಬಹುದು, ಈ ಅವಧಿಯ ನಂತರ ಸಲ್ಲಿಸಿದರೆ ನ್ಯಾಯಾಲಯವು ಕ್ಷಮಿಸಬಹುದಾದ ಅಥವಾ ಕ್ಷಮಿಸದಿರುವ ವಿಳಂಬವನ್ನು ವಿವರಿಸಬೇಕು. 10. ಪ್ರತಿಗಳು ಗ್ರಾಹಕ ಆಯೋಗದಲ್ಲಿ ಸಾಮಾನ್ಯವಾಗಿ ದೂರಿನ 4 ಪ್ರತಿಗಳನ್ನು ಸಲ್ಲಿಸಬೇಕು ಮತ್ತು ಹೇಳಲಾದ ಎಲ್ಲಾ ಸಂಗತಿಗಳು ನಿಜವೆಂದು ಹೇಳುವ ಅಫಿಡವಿಟ್ ಅನ್ನು ಸಹ ಸೇರಿಸಬೇಕು. ಪ್ರತಿವಾದಿಗಳ ಸಂಖ್ಯೆ ಅಧಿಕವಿದ್ದರೆ ಅವರೆಲ್ಲರಿಗೂ ಲಭ್ಯವಾಗುವಂತೆ ಅಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಗಳನ್ನು ಸಲ್ಲಿಸಬೇಕು. 11.ವ್ಯಾಪ್ತಿ ದೂರುದಾರರು ವಾಸಿಸುವ ಸ್ಥಳ ಮತ್ತು ಯಾವ ಪ್ರದೇಶದಲ್ಲಿ ವ್ಯವಹಾರ ಜರುಗಿದೆಯೋ ಆ ಸ್ಥಳವು ಒಳಗೊಳ್ಳುವ ಗ್ರಾಹಕ ಆಯೋಗದಲ್ಲಿ ದೂರನ್ನು ದಾಖಲಿಸಬೇಕು. ಆನ್‌ಲೈನ್‌ ವಹಿವಾಟಿನಲ್ಲಿ ಈ ಪ್ರಾದೇಶಿಕ ವ್ಯಾಪ್ತಿಯನ್ನು ನಿರಾಕರಿಸುವ ಸಾಧ್ಯತೆಗಳು ಹೆಚ್ಚಿಗೆ ಇವೆ. ದೂರು ಸಲ್ಲಿಸುವಾಗ ಅದನ್ನು ನಿರ್ದಿಷ್ಟಪಡಿಸಿಕೊಳ್ಳಬೇಕು. * ಮೇಲ್ಮನವಿ ನ್ಯಾಯವ್ಯಾಪ್ತಿ: ಜಿಲ್ಲಾ ವೇದಿಕೆ ತೆಗೆದುಕೊಂಡ ನಿರ್ಧಾರದಿಂದ ಗ್ರಾಹಕರು ತೃಪ್ತರಾಗದಿದ್ದರೆ, ಅವರು ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು. ರಾಜ್ಯ ಆಯೋಗದ ನಿರ್ಧಾರದಿಂದ ಗ್ರಾಹಕರು ಅಸಮಾಧಾನಗೊಂಡರೆ, ಅವರು ರಾಷ್ಟ್ರೀಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ನಿರ್ಧಾರದಿಂದ ಗ್ರಾಹಕರು ತೃಪ್ತರಾಗದಿದ್ದರೆ, ಅವರು ಮೇಲ್ಮನವಿಗಾಗಿ ಸುಪ್ರೀಂ ಕೋರ್ಟ್‌ಗೆ ಹೋಗಬಹುದು. * ವಿಚಾರಣೆಯ ಸಮಯದಲ್ಲಿ ದೂರುದಾರರು ಹಾಜರಿರಬೇಕು. ಪ್ರತಿವಾದಿ ಹಾಜರಿರುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಅವರ ಗೈರು ಹಾಜರಿಯಲ್ಲೂ ಆಯೋಗ ವಿಚಾರಣೆ ನಡೆಸುತ್ತದೆ. * ಇ-ಡಾಖಿಲ್- (https://edaakhil.nic.in). ಗ್ರಾಹಕರು ತಮ್ಮ ದೂರುಗಳನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಲ್ಲಿಸಬಹುದು ಮತ್ತು ವಿವಾದಿತ ಪಕ್ಷಗಳ ವಿಚಾರಣೆಯನ್ನು ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಮಾಡಲಾಗುತ್ತದೆ. ಇ-ಡಾಖಿಲ್‌ ದೂರು ವ್ಯವಸ್ಥೆಯನ್ನು ರಾಷ್ಟ್ರೀಯ ಗ್ರಾಹಕ ದೂರು ನಿವಾರಣೆ ಆಯೋಗವು 2020ರ ಸೆಪ್ಟೆಂಬರ್‌ 7ರಂದು ಚಾಲನೆಗೆ ತಂದಿತು. ಹಾಗೆಯೇ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯೂ ಜಾರಿಗೆ ಬಂದಿದೆ. ಇ-ಡಾಖಿಲ್‌ ವ್ಯವಸ್ಥೆಯಿಂದ ಗ್ರಾಹಕ ತಾನು ಯಾವ ಸ್ಥಳದಲ್ಲಿ ಇದ್ದೇನೆ ಎಂಬುದನ್ನು ಗಣನೆಗೆ ತಂದುಕೊಳ್ಳದೆ ತಾನಿರುವಲ್ಲಿಂದಲೇ ಯಾವ ಪ್ರದೇಶದಲ್ಲಾದರೂ ದೂರನ್ನು ದಾಖಲಿಸಬಹುದಾಗಿದೆ. ಬೆಂಗಳೂರಿನ ಗ್ರಾಹಕ ಕೋಲ್ಕತ್ತಾದ ವ್ಯಾಪಾರಿಯ ವಿರುದ್ಧವೂ ಇಲ್ಲಿಂದಲೇ ದೂರು ದಾಖಲಿಸಬಹುದಾಗಿದೆ. * ದಂಡಗಳು ಮತ್ತು ಜೈಲು ಶಿಕ್ಷೆ ಗ್ರಾಹಕರನ್ನು ತಪ್ಪುದಾರಿಗೆಳೆಯುವ ಮಾಹಿತಿ ನೀಡುವುದು ಅಥವಾ ಉತ್ಪನ್ನದ ತಪ್ಪು ಜಾಹೀರಾತು ನೀಡುವುದನ್ನು ತಯಾರಕರು ಮತ್ತು ಸೇವಾ ಪೂರೈಕೆದಾರರ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿದೆ. ಶಿಕ್ಷೆಯು 10 ಲಕ್ಷ ರು. ದಂಡ ಅಥವಾ 2 ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನೂ ಒಳಗೊಂಡಿರಬಹುದು. * ತನಿಖಾ ಸಂಸ್ಥೆ ಗ್ರಾಹಕರ ಹಕ್ಕುಗಳ ಉಲ್ಲಂಘನೆ ಅಥವಾ ಅನ್ಯಾಯದ ವ್ಯಾಪಾರ ಪದ್ಧತಿಗಳನ್ನು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (CCPA) ಮಹಾನಿರ್ದೇಶಕ ಮಟ್ಟದ ಹುದ್ದೆಯ ನೇತೃತ್ವದ ತನಿಖಾ ವಿಭಾಗವು ತನಿಖೆ ಮಾಡುತ್ತದೆ.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು