ಐನಾಕ್ಸ್‌ಗೆ ನೀರಿಳಿಸಿದ ಗ್ರಾಹಕ

ಕುಡಿಯುವ ನೀರಿನ ಸೀಲ್ ಮಾಡಿದ ಬಾಟಲ್‌ಗಳನ್ನು ಅದರ ಮೇಲೆ ಮುದ್ರಿಸಿರುವ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದು ನಿಮ್ಮ ಗಮನಕ್ಕೂ ಬಂದಿರಬಹುದು. ಕೆಲವು ಸಲ ನೀವೇ ಅಧಿಕ ಹಣ ಪಾವತಿಸಿ ಖರೀದಿಸಿರಲೂ ಬಹುದು. ಹೈದ್ರಾಬಾದ್‌ನ ವ್ಯಕ್ತಿಯೊಬ್ಬರು ಇದರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಿ ಪರಿಹಾರ ಪಡೆದಿದ್ದಾರೆ. ಇಂಥದ್ದೇ ಎರಡು ಮೂರು ಪ್ರಕರಣಗಳಲ್ಲಿ ಗ್ರಾಹಕರು ವಿಜಯಿಯಾಗಿದ್ದಾರೆ. ------- ಹೈದ್ರಾಬಾದ್‌ನ ವಿಜಯ ಗೋಪಾಲ ಎನ್ನುವವರು ಅಲ್ಲಿಯ ಜಿವಿಕೆ ಮಾಲ್‌ನಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಹೋಗಿದ್ದರು. ತಮ್ಮೊಂದಿಗೆ ಅವರು ನೀರಿನ ಬಾಟಲನ್ನು ಒಯ್ದಿದ್ದರು. ಆದರೆ ಚಿತ್ರಮಂದಿರದವರು, ನೀರಿನ ಬಾಟಲನ್ನು ಥಿಯೇಟರ್ ಒಳಗೆ ಒಯ್ಯುವುದಕ್ಕೆ ನಿಷೇಧವಿದೆ ಎಂದು ಅವರನ್ನು ತಡೆದರು. ನೀರಿನ ಬಾಟಲನ್ನು ತಮ್ಮ ಬಳಿ ಇರಿಸಿಕೊಂಡು ಅವರನ್ನು ಒಳಗೆ ಬಿಟ್ಟರು. ಹೀಗೇಕೆ ನೀವು ಮಾಡುತ್ತಿದ್ದೀರಿ ಎಂದು ಕೇಳಿದಾಗ, ನೀರನ್ನು ಸ್ಫೋಟಕ ತಯಾರಿಕೆಗೆ ಬಳಸುತ್ತಾರೆ. ಅದಕ್ಕಾಗಿ ಒಳಗೆ ಬಿಡುತ್ತಿಲ್ಲ ಎಂಬ ಕಾರಣ ನೀಡಿದರು. ಇನ್ನೊಂದು ದಿನ ಅವರು ಮಹೇಶ್ವರಿ ಪರಮೇಶ್ವರಿ ಮಾಲ್‌ನಲ್ಲಿರುವ ಐನಾಕ್ಸ್ ಚಿತ್ರಮಂದಿರಕ್ಕೆ ಹೋದರು. ಅಲ್ಲಿಯೂ ಅದೇ ಅನುಭವ. ಅಲ್ಲಿ ೨೦ ರುಪಾಯಿಯ ನೀರಿನ ಬಾಟಲಿಗೆ ೫೦ ರುಪಾಯಿ ಅವರಿಂದ ವಸೂಲಿ ಮಾಡಿದರು. ಹೊರಗಿನಿಂದ ನೀರಿನ ಬಾಟಲಿಯನ್ನು ಒಯ್ಯುವುದಕ್ಕೆ ಬಿಡದಿರುವ ಮೂಲಕ ಐನಾಕ್ಸ್ ತಮ್ಮದೇ ನೀರಿನ ಬಾಟಲಿಯನ್ನು ಹೆಚ್ಚಿನ ಹಣ ಕೊಟ್ಟು ಪಡೆಯುವ ತಂತ್ರ ಮಾಡಿತ್ತು. ಇದು ನ್ಯಾಯಯುತವಲ್ಲದ ವ್ಯಾಪಾರ. ಜಿವಿಕೆ ಮಾಲ್‌ನಲ್ಲಿ ವಾಟರ್ ಡಿಸ್‌ಪೆನ್ಶರ್‌ಅನ್ನು ವಾಶ್ ರೂಂ ಹತ್ತಿರ ಇಟ್ಟಿದ್ದರು. ಕ್ಯಾಪಿಟೇರಿಯಾ ಬಳಿ ತಿಂಡಿ ತಿನ್ನುವವರು ಈ ಬಗ್ಗೆ ಅರಿವಿಲ್ಲದೆ ಅಲ್ಲಿಯೇ ದುಡ್ಡು ಕೊಟ್ಟು ನೀರು ಕುಡಿಯುವಂತೆ ಆಗುತ್ತಿತ್ತು. ಹೈದ್ರಾಬಾದ್‌ನ ಎಲ್ಲೆಡೆಯ ಐನಾಕ್ಸ್ ಚಿತ್ರಮಂದಿರಗಳಲ್ಲಿ ಈ ರೀತಿ ನಡೆಯುತ್ತಿರುವುದರ ವಿರುದ್ಧ ವಿಜಯ ಗೋಪಾಲ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ೨೦೧೬ರ ಆಗಸ್ಟ್ ೧೭ರಂದು ಅವರು ದಾಖಲಿಸಿದ ದೂರಿನಲ್ಲಿ, ಐನಾಕ್ಸ್, ತನ್ನ ಕೆಪಿಟೇರಿಯಾದಿಂದ ನೀರಿನ ಬಾಟಲನ್ನು ಖರೀದಿಸಲು ಇಷ್ಟಪಡದವರು ಹೊರಗಿನಿಂದ ಅದನ್ನು ತಂದರೆ ಒಳಗೆ ಬಿಡಬೇಕು, ವಾಟರ್ ಡಿಸ್ಪೆನ್ಶರನ್ನು ಎಲ್ಲರಿಗೂ ಕಾಣುವಂಥ ಸ್ಥಳದಲ್ಲಿ ಇಡಬೇಕು ಮತ್ತು ಮಲ್ಟಿಪ್ಲೆಕ್ಸ್‌ಗಳು ಬಾಟಲಿಯ ಮೇಲೆ ಮುದ್ರಿಸಿರುವ ದರಕ್ಕಿಂತ ಹೆಚ್ಚಿಗೆ ವಸೂಲು ಮಾಡಬಾರದು ಎಂಬ ಬೇಡಿಕೆಯನ್ನು ಮಂಡಿಸಿದರು. ವಿಜಯಗೋಪಾಲ್ ಮಾಡಿರುವ ಆರೋಪಗಳನ್ನು ಐನಾಕ್ಸ್ ಅಲ್ಲಗಳೆಯಿತು. ಅದರ ವಕೀಲರ ಪ್ರಕಾರ, ನೀರನ್ನು ಒಳಗೆ ಬಿಡದಿರುವುದು ಕೇವಲ ಸುರಕ್ಷತೆಯ ಕಾರಣಕ್ಕಾಗಿ. ಅದರಲ್ಲಿ ನ್ಯಾಯಯುತವಲ್ಲದ ವ್ಯವಹಾರ ಏನಿಲ್ಲ. ನೀರನ್ನು ಸ್ಫೋಟಕ ತಯಾರಿಕೆಯಲ್ಲಿ ಅಗತ್ಯವಸ್ತುವಾಗಿ ಬಳಕೆಯಾಗುತ್ತದೆ. ಐನಾಕ್ಸ್ ಮೂವೀಸ್ ತನ್ನ ಮಲ್ಟಿಪ್ಲೆಕ್ಸ್‌ಗಳಲ್ಲಿ ವೀಕ್ಷಕರಿಗೆ ಉಚಿತವಾಗಿ ಪೇಪರ್‌ಕಪ್‌ಗಳಲ್ಲಿ ಶುದ್ಧೀಕರಿಸಿದ ಸೋಸಿದ ನೀರನ್ನು ಒದಗಿಸುತ್ತಿದೆ. ವೀಕ್ಷಕರೊಬ್ಬರು ಪ್ಯಾಕ್ ಮಾಡಿದ ಬಾಟಲಿಯ ನೀರನ್ನು ಖರೀದಿಸಬಯಸಿದರೆ ಅದರ ಮುದ್ರಿತ ಬೆಲೆ ಮತ್ತು ನಾವು ಮಾರುವ ಬೆಲೆಯ ಅರಿವಿರಬೇಕು. ಅದನ್ನು ಕ್ಯಾಪಿಟೇರಿಯಾದ ಮೂಲೆಯಲ್ಲಿ ಪ್ರದರ್ಶಿಸಲಾಗಿದೆ. ಮಲ್ಟಿಪ್ಲೆಕ್ಸ್‌ನ ನಿರ್ವಹಣೆ ವೆಚ್ಚ, ಅಲ್ಲಿ ಒದಗಿಸುತ್ತಿರುವ ಸೌಲಭ್ಯ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ೫೦ ರುಪಾಯಿ ದರ ನಿಗದಿಪಡಿಸಲಾಗಿದೆ. ಕಾರಣ ದೂರನ್ನು ವಜಾ ಮಾಡುವಂತೆ ಕೋರಿದರು. ಆದರೆ ಹೈದ್ರಾಬಾದ್ ಗ್ರಾಹಕ ವೇದಿಕೆಯು ದೂರುದಾರ ವಿಜಯಗೋಪಾಲ ಪರವಾಗಿ ೨೦೧೭ರ ಏ.೪ರಂದು ತೀರ್ಪು ನೀಡಿತು. ಐನಾಕ್ಸ್ ತನ್ನ ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೀರಿನ ಬಾಟಲ್‌ಗಳನ್ನು ಒಯ್ಯಬಹುದು ಎಂಬುದನ್ನು ಕಾಣುವಹಾಗೆ ಬರೆದು ಹಾಕಬೇಕು, ಐನಾಕ್ಸ್ ಮೂವೀಸ್‌ನಲ್ಲಿ ಎಷ್ಟು ಪರದೆಗಳು ಇವೆ ಎಂಬುದನ್ನು ಗ್ರಾಹಕರಿಗೆ ಗೊತ್ತಾಗುವ ಹಾಗೆ ಮಾಡಬೇಕು. ಜಿವಿಕೆ ಮಾಲ್‌ನಲ್ಲಿ ಕೇವಲ ಒಂದು ಕಡೆ ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಅದನ್ನು ಕೂಡ ದೂರದಲ್ಲೆಲ್ಲೋ ಇಡಲಾಗಿತ್ತು. ಇಂಥ ವ್ಯವಹಾರವನ್ನು ತಕ್ಷಣ ನಿಲ್ಲಿಸಬೇಕು. ಒಂದೇ ಪ್ರಮಾಣ ಮತ್ತು ಗುಣಮಟ್ಟದ ವಸ್ತುವಿಗೆ ಎರಡು ಮಾರಾಟ ಬೆಲೆಯನ್ನು ಇಡುವುದಕ್ಕೆ ಅವಕಾಶವಿಲ್ಲ. ಇಂಥ ನಿರ್ಬಂಧಿತ ವ್ಯಾಪಾರವನ್ನು ಐನಾಕ್ಸ್ ಹೈದ್ರಾಬಾದ್ ಮತ್ತು ಸಿಕಂದರಾಬಾದ್‌ನಲ್ಲಿ ನಿಲ್ಲಿಸಬೇಕು ಎಂದು ಹೇಳಿತು. ಗೋಪಾಲ್ ಯಾವುದೇ ವಕೀಲರನ್ನು ನೇಮಿಸಿಕೊಳ್ಳದೆ ತಾವೇ ವಾದಿಸಿದ್ದರು. ವೇದಿಕೆಯು ಅವರಿಗೆ ವ್ಯಾಜ್ಯದ ವೆಚ್ಚವೆಂದು ೬,೦೦೦ ರು.ಗಳನ್ನು ಪರಿಹಾರವಾಗಿ ಘೋಷಿಸಿತು. ------- --ಕೆಎಫ್‌ಸಿ ಉಚಿತ ನೀರು ಕೊಡುವಂತೆ ಆದೇಶ-- ಬೆಂಗಳೂರಿನ ಗ್ರಾಹಕ ವೇದಿಕೆಯು ೨೦೧೭ರ ಏಪ್ರಿಲ್ ೬ರಂದು ನೀಡಿದ ತೀರ್ಪಿನಲ್ಲಿ ನಗರದ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಲು ಆದೇಶ ನೀಡಿದೆ. ಬಿಬಿಎಂಪಿ ಈ ಸಂಬಂಧದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ತಾನು ಕೈಗೊಂಡ ಕ್ರಮದ ಬಗ್ಗೆ ಮುಂದಿನ ೬೦ ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿದೆ. ಬೆಂಗಳೂರಿನ ನಿವಾಸಿ ಸುಧಾ ಕಟ್ವಾ ಎಂಬವರು ಯಶವಂತಪುರದ ಕೆಂಟುಕಿ ಫ್ರೈಡ್ ಚಿಕನ್ ಮಳಿಗೆಯಲ್ಲಿ ನೀರನ್ನು ಕೇಳಿದಾಗ ಸಿಗಲಿಲ್ಲ. ಅವರು ನೀರಿನ ಬಾಟಲಿಯನ್ನು ಹಣ ಕೊಟ್ಟು ಖರೀದಿಸುವ ಹಾಗೆ ಮಾಡಿದರು. ಮಾರನೆ ದಿನ ಅವರು ಬಿಬಿಎಂಪಿಯ ಲೈಸೆನ್ಸ್ ನೀಡುವ ಅಧಿಕಾರಿಯನ್ನು ಭೆಟ್ಟಿಯಾಗಿ, ನೀರು ಹೇಗೆ ಮೂಲಭೂತ ಹಕ್ಕು, ರೆಸ್ಟೋರೆಂಟ್‌ಗಳು ಅದನ್ನು ಉಚಿತವಾಗಿ ನೀಡಬೇಕು ಎಂಬುದನ್ನು ವಿವರಿಸಿ, ಈ ಕೆಂಟುಕಿ ಫ್ರೈಡ್ ಚಿಕನ್ ಮಳಿಗೆಯ ಮೇಲೆ ಕ್ರಮಕ್ಕೆ ಆಗ್ರಹಿಸಿದರು. ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ ಕ್ರಮಕೈಗೊಳ್ಳಲು ಮೀನ ಮೇಷ ಎಣಿಸುತ್ತಿದ್ದುದು ಗಮನಕ್ಕೆ ಬಂದಾಗ ಸುಧಾ ಅವರು ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿದರು. ಕೇವಲ ೧ ರುಪಾಯಿ ಪರಿಹಾರವನ್ನು ಅವರು ಕೋರಿದರು. ಕೆಎಫ್‌ಸಿ ಮತ್ತು ಬಿಬಿಎಂಪಿಗೆ ಉಚಿತ ನೀರನ್ನು ಪೂರೈಸುವಂತೆ ಆದೇಶಿಸಲು ಕೋರಿದರು. ಆಸ್ಪತ್ರೆ, ರೇಲ್ವೆ ನಿಲ್ದಾಣ, ಬಸ್‌ಸ್ಟಾಪ್‌ಗಳಲ್ಲೂ ಉಚಿತ ನೀರು ಲಭ್ಯವಿರಬೇಕು ಎಂದು ವಾದಿಸಿದರು. ಈ ಸಂಬಂಧದಲ್ಲಿ ಅವರು ರಾಷ್ಟ್ರೀಯ ಗ್ರಾಹಕ ಆಯೋಗವು ನೀಡಿದ ತೀರ್ಪೊಂದನ್ನು ಉಲ್ಲೇಖಿಸಿದರು. ಅದರಲ್ಲಿ ಜಸ್ಟಿಸ್ ವಿ.ಕೆ. ಜೈನ್ ನೇತೃತ್ವದ ಪೀಠವು, ನೀರು ಮನುಷ್ಯರ ಮೂಲಭೂತ ಅವಶ್ಯಕತೆಯಾಗಿದೆ. ಒಂದು ವೇಳೆ ಸಿನಿಮಾ ಮಂದಿರಗಳು ಹೊರಗಿನಿಂದ ನೀರನ್ನು ಒಳಕ್ಕೆ ಒಯ್ಯಲು ಬಿಡದಿದ್ದರೆ ಸಿನಿಮಾಕ್ಕೆ ಬಂದವರಿಗೆ ನೀರನ್ನು ಪೂರೈಸುವುದು ಸಿನಿಮಾಮಂದಿರಗಳಿಗೆ ಕಡ್ಡಾಯ. ಹೀಗೆ ನೀರನ್ನು ಪೂರೈಸಲು ಅವು ವಿಫಲವಾದರೆ ಅದು ಸೇವಾ ನ್ಯೂನತೆ ಎಂದು ಹೇಳಿತ್ತು. ಪ್ರಸ್ತುತ ಕೆಎಫ್‌ಸಿ ಪ್ರಕರಣದಲ್ಲಿ, ಸುಧಾ ಅವರು ಮಾಡಿರುವ ಆರೋಪಗಳನ್ನು ಕೆಎಫ್‌ಸಿ ಅಲ್ಲಗಳೆಯಿತು. ತಮ್ಮದು ಸ್ವಸಹಾಯ ಪದ್ಧತಿಯ ರೆಸ್ಟೋರೆಂಟ್. ನೀರು, ಕೆಚಪ್ ಇತ್ಯಾದಿಗಳನ್ನು ಗ್ರಾಹಕರ ಬೇಡಿಕೆಯ ಮೇಲೆ ಕೌಂಟರ್‌ನಲ್ಲಿ ನೀಡಲಾಗುತ್ತದೆ ಎಂದು ಹೇಳಿತು. ಆದರೆ ಅದಕ್ಕೆ ಯಾವುದೇ ಪುರಾವೆ ಒದಗಿಸಲಿಲ್ಲ. ಸುಧಾ ಕೇವಲ ೧ ರುಪಾಯಿ ಪರಿಹಾರ ಬೇಡಿರುವುದರಿಂದ ಅವರು ಹಣದಾಸೆಗಾಗಿ ದೂರು ದಾಖಲು ಮಾಡಿದ್ದಾರೆ ಎನ್ನುವುದಕ್ಕೂ ಅವಕಾಶವಿರಲಿಲ್ಲ. ಕಾರಣ ಗ್ರಾಹಕ ವೇದಿಕೆಯು ಸುಧಾ ಪರವಾಗಿ ತೀರ್ಪು ನೀಡಿತು. ಅವರು ಕೇಳಿದ ಒಂದು ರುಪಾಯಿಯ ಜೊತೆಗೆ ೫ ಸಾವಿರ ರುಪಾಯಿ ವ್ಯಾಜ್ಯದ ವೆಚ್ಚ ಪರಿಹಾರವನ್ನು ನೀಡುವಂತೆಯೂ ಆದೇಶಿಸಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು