ವಿಮೆ ಕಂಪನಿಯೂ ಒಮ್ಮೊಮ್ಮೆ ದಾಖಲೆ ತಿದ್ದಿಬಿಡುತ್ತದೆ
ತನ್ನ ಲಾಭಕ್ಕಾಗಿ ವಿಮೆ ಕಂಪನಿಯೂ ಕೆಲವೊಮ್ಮೆ ದಾಖಲೆಗಳನ್ನು ತಿದ್ದಿಬಿಡುತ್ತದೆ. ಅಂಥ ಒಂದು ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದವರೆಗೂ ಹೋಗಿತ್ತು. ಆಂಧ್ರಪ್ರದೇಶದ ವಿಜಯವಾಡದ ಮೆ.ಸೋನೋವಿಷನ್ ಎಂಟರ್‌ಪ್ರೈಸಸ್ ಸಂಸ್ಥೆಯು ನ್ಯಾಶನಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಪಾಲಿಸಿಯನ್ನು ಪಡೆದುಕೊಂಡಿತ್ತು. ಈ ಸಂಸ್ಥೆ ಇದ್ದದ್ದು ಎಲುರು ರಸ್ತೆಯ ಸೋನೋವಿಷನ್ ಕಟ್ಟಡದಲ್ಲಿ. ಇಲ್ಲಿ ಸಂಸ್ಥೆಯ ಷೋರೂಂ ಮತ್ತು ಮೊದಲ ಮಹಡಿಯಲ್ಲಿ ಗೋಡೌನ್ ಇತ್ತು. ಇದೇ ಕಟ್ಟಡದ ಎರಡು ಮತ್ತು ಮೂರನೆ ಮಹಡಿಯಲ್ಲಿಯೂ ಗೋಡೌನ್ ಇದ್ದು, ಇವು ವಿಜಯ ಎಂಟರ್‌ಪ್ರೈಸಸ್ ಮತ್ತು ಸೋನೋವಿಷನ್ ಎಲೆಕ್ಟ್ರಾನಿಕ್ಸ್ ಹೆಸರಿನಲ್ಲಿದ್ದವು. ಆದರೆ ಇವು ಮೂರೂ ಸಂಸ್ಥೆಗೂ ಪೊಟ್ಲುರಿ ಭಾಸ್ಕರ ಮೂರ್ತಿ ಒಬ್ಬರೇ ಮಾಲೀಕರು. ವ್ಯವಹಾರದ ಕಾರಣಕ್ಕಾಗಿ ಮೂರು ಸಂಸ್ಥೆ ಮಾಡಿಕೊಂಡಿದ್ದರು. ಇವರೇ ಈ ಪ್ರಕರಣ ಮೂಲ ದಾವೆದಾರರು.
ಈ ಮೂರೂ ಸಂಸ್ಥೆಗಳಿಗೂ ಸೇರಿ ನ್ಯಾಶನಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಪಡೆದುಕೊಳ್ಳಲಾಗಿತ್ತು. ೨೫-೪-೨೦೦೨ರಂದು ಆ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ ನಡೆಯಿತು. ನೆಲಮಹಡಿಯ ಷೋರೂಂ ಹಾಗೂ ಮೊದಲ ಮಹಡಿಯ ಗೋಡೌನ್‌ನಲ್ಲಿದ್ದ ವಸ್ತುಗಳು ಸುಟ್ಟುಹೋದವು. ಹಾನಿ ಅಂದಾಜಿಗೆ ವಿಮೆ ಕಂಪನಿಯು ೨೬-೦೪-೨೦೦೨ರಂದು ಒಬ್ಬ ಸರ್ವೇಯರ್‌ನನ್ನು ನೇಮಿಸಿತು. ಸೋನೋವಿಷನ್ ಎಂಟರ್‌ಪ್ರೈಸಿಸ್ ಪ್ರಕಾರ ಆಗಿದ್ದ ಹಾನಿ ೨೩,೧೭,೪೦೦ ರು. ಆದರೆ ಸರ್ವೇಯರ್ ಈ ಹಾನಿಯನ್ನು ೫,೭೩,೬೯೯ ಎಂದು ಅಂದಾಜು ಮಾಡುತ್ತಾನೆ. ಅದೇ ರೀತಿ ವಿಜಯ ಎಂಟರ್‌ಪ್ರೈಸಿಸ್‌ನ ಹಾನಿ ೨,೧೨,೯೨೦ರು. ಎಂದು ಸಂಸ್ಥೆ ಹೇಳಿದರೆ ಸರ್ವೇಯರ್ ಇದನ್ನು ೧,೧೦,೧೬೦ ರು. ಎಂದು ಅಂದಾಜು ಮಾಡುತ್ತಾರೆ. ಹಾಗೆಯೇ ಸೋನೋವಿಷನ್ ಎಲೆಕ್ಟ್ರಾನಿಕ್ಸ್‌ಗೆ ೧೦,೨೯,೦೫೦ ರು. ಹಾನಿ ಆಗಿದೆ ಎಂದು ಸಂಸ್ಥೆ ಹೇಳಿದರೆ ಸರ್ವೇಯರ್ ಅಂದಾಜು ಮಾಡಿದ್ದು ೩,೮೧,೯೫೬ ರು. ಸರ್ವೇಯರ್ ಅಂದಾಜು ಮಾಡಿದ ಪ್ರಕಾರ ವಿಮೆ ಕಂಪನಿಯು ಪಾಲಿಸಿದಾರರಿಗೆ ಹಣ ಸಂದಾಯ ಮಾಡಿತು. ಆದರೆ ಮಾಲೀಕರಿಗೆ ಇದರಿಂದ ತೃಪ್ತಿಯಾಗಲಿಲ್ಲ. ಇದರ ವಿರುದ್ಧ ಮೂರು ಸಂಸ್ಥೆಗಳ ಪರವಾಗಿ ಪ್ರತ್ಯೇಕವಾಗಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಅವರು ದೂರನ್ನು ದಾಖಲಿಸಿ ತಮಗೆ ತಾವು ಅಂದಾಜು ಮಾಡಿದಷ್ಟು ವಿಮೆ ಹಣ ಕೊಡಿಸಬೇಕು ಎಂದು ಕೋರಿದರು.
ವಿಮೆ ಕಂಪನಿಯು ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಆದರೆ ಜಿಲ್ಲಾ ವೇದಿಕೆಯು ದೂರುದಾರರ ಪರವಾಗಿ ತೀರ್ಪು ನೀಡಿತು. ಇದರ ವಿರುದ್ಧ ವಿಮೆ ಕಂಪನಿಯು ಮೂರು ಪ್ರತ್ಯೇಕ ಮೇಲ್ಮನವಿಯನ್ನು ರಾಜ್ಯ ಗ್ರಾಹಕ ಆಯೋಗದಲ್ಲಿ ದಾಖಲಿಸಿತು. ರಾಜ್ಯ ಆಯೋಗವು ೨೭-೭-೨೦೧೬ರಂದು ನೀಡಿದ ತೀರ್ಪಿನಲ್ಲಿ ಜಿಲ್ಲಾ ವೇದಿಕೆ ನೀಡಿದ ತೀರ್ಪನ್ನು ಎತ್ತಿಹಿಡಿಯಿತು. ಆದರೆ ಬಡ್ಡಿಯನ್ನು ೧-೫-೨೦೦೩ರಿಂದ ಕೊಡುವುದರ ಬದಲು ೫-೧-೨೦೧೩ರಿಂದ ಕೊಟ್ಟರೆ ಸಾಕು ಎಂದು ಹೇಳಿತು. ಇದರ ವಿರುದ್ಧ ವಿಮೆ ಕಂಪನಿಯು ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ನಿವಾರಣೆ ಆಯೋಗದಲ್ಲಿ ಪುನರ್ವಿಮರ್ಶಾ ಅರ್ಜಿಯನ್ನು ದಾಖಲಿಸಿತು.
ತನ್ನ ಆಕ್ಷೇಪಕ್ಕೆ ವಿಮೆ ಕಂಪನಿಯು ಹೀಗೆ ವಾದ ಮಂಡಿಸಿತು- ದೂರುದಾರರು ವಿಜಯ ಎಂಟರ್‌ಪ್ರೈಸಿಸ್‌ನ ೩ ಲಕ್ಷ ರು. ಮೌಲ್ಯದ ವಸ್ತುಗಳನ್ನು, ಸೋನೋವಿಷನ್ ಎಂಟರ್‌ಪ್ರೈಸಿಸ್‌ನ ೩೦ ಲಕ್ಷ ರು. ಮೌಲ್ಯದ ವಸ್ತುಗಳನ್ನು ಹಾಗೂ ಸೋನೋ ಎಲೆಕ್ಟ್ರಾನಿಕ್ಸ್‌ನ ೫ ಲಕ್ಷ ರು. ಮೌಲ್ಯದ ವಸ್ತುಗಳನ್ನು ಬೆಂಕಿಗೆ ಆಹುತಿಯಾದ ಕಟ್ಟಡದ ಮೊದಲ ಮಹಡಿಯಿಂದ ಬೇರೆಡೆ ಸ್ಥಳಾಂತರಿಸಿದ್ದಾರೆ ಎಂದು ಹೇಳಿತು. ಹೀಗೆ ಸ್ಥಳಾಂತರಿಸಿದ್ದು ಎರಡು ಮತ್ತು ಮೂರನೆ ಮಹಡಿಯಲ್ಲಿಟ್ಟದ್ದ ವಸ್ತುಗಳನ್ನು. ಮೊದಲನೆ ಮಹಡಿ ಮತ್ತು ನೆಲ ಮಹಡಿಯಲ್ಲಿದ್ದ ವಸ್ತುಗಳನ್ನಲ್ಲ ಎಂದು ದೂರುದಾರರು ಸ್ಪಷ್ಟಪಡಿಸುತ್ತಾರೆ. ಈ ಸಂಬಂಧದಲ್ಲಿ ಅವರು ವಿಮೆ ಕಂಪನಿಯ ಅನುಮತಿಯನ್ನು ಕೋರಿ ೮-೪-೨೦೦೨ರಂದು ಒಂದು ಪತ್ರವನ್ನೂ ಬರೆದಿರುತ್ತಾರೆ. ಅದಕ್ಕೆ ವಿಮೆ ಕಂಪನಿಯು ಸಮ್ಮತಿಯನ್ನೂ ನೀಡಿರುತ್ತದೆ. ಆ ಪತ್ರವನ್ನು ಆಯೋಗಕ್ಕೆ ಸಲ್ಲಿಸಲಾಗಿತ್ತು. ಆದರೆ ವಿಮೆ ಕಂಪನಿಯು ಈ ಸಂಬಂಧದಲ್ಲಿ ಹಾಜರು ಪಡಿಸಿದ ದಾಖಲೆಯಲ್ಲಿ ನೆಲಮಹಡಿ ಎಂಬ ಪದ ಸೇರ್ಪಡೆಯಾಗಿತ್ತು. ವಿಚಾರಣೆಯ ಕಾಲಕ್ಕೆ ವಿಮೆ ಕಂಪನಿಗೆ ದೂರುದಾರರು ನೀಡಿದ್ದ ಮೂಲ ಪತ್ರವನ್ನು ಹಾಜರುಪಡಿಸುವಂತೆ ಆಯೋಗ ಸೂಚಿಸುತ್ತದೆ. ಅಲ್ಲದೆ ವಿಭಾಗೀಯ ಪ್ರಬಂಧಕ್ಕೆ ಖುದ್ದಾಗಿ ಆಯೋಗದೆದುರು ಹಾಜರಾಗುವಂತೆಯೂ ಸೂಚಿಸುತ್ತದೆ. ಆದರೆ ಅವರು ಹಾಜರಾಗುವುದೂ ಇಲ್ಲ, ಮೂಲ ಪತ್ರವನ್ನು ಸಲ್ಲಿಸುವುದೂ ಇಲ್ಲ. ಇದರರ್ಥ ವಿಮೆ ಕಂಪನಿಯು ‘ನೆಲ ಮಹಡಿ’ ಎಂಬ ಪದವನ್ನು ತಾನೇ ಸೇರಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ನೀಡಿರುವ ತೀರ್ಪಿನಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಆಯೋಗ ಭಾವಿಸಿತು.
ಸರ್ವೇಯರ್ ಸೋನೋವಿಷನ್ ಎಂಟರ್‌ಪ್ರೈಸಿಸ್‌ನ ಒಟ್ಟೂ ದಾಸ್ತಾನಿಗೆ ಆದ ಹಾನಿಯ ಲೆಕ್ಕದಲ್ಲಿ ೯,೨೨,೪೭೪ ರು. ಕಡಿತ ಮಾಡಿದ್ದನು. ಇದಕ್ಕೆ ತಕರಾರು ಎತ್ತಿದ ದೂರುದಾರರ ವಕೀಲರು, ಈ ಸರ್ವೇಯರ್ ಸೋನೋವಿಷನ್ ಎಂಟರ್‌ಪ್ರೈಸಿಸ್‌ನ ಲೆಕ್ಕದಲ್ಲಿ ವಿಡಿಯೋಕಾನ್ ಟೀವಿಗಳನ್ನು ಸೇರಿಸಿದ್ದಾನೆ. ವಾಸ್ತವವಾಗಿ ವಿಡಿಯೋಕಾನ್ ಟೀವಿಗಳ ವ್ಯವಹಾರ ಹೊಂದಿಲ್ಲ. ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಸಲ್ಲಿಸಿದ ದೂರಿನಲ್ಲಿ ಈ ವಿಷಯ ಸ್ಪಷ್ಟಪಡಿಸಲಾಗಿದೆ. ಸೋನೋವಿಷನ್ ಎಲೆಕ್ಟ್ರಾನಿಕ್ಸ್ ಫಿಲಿಪ್ಸ್ ಟೀವಿ, ವಿಡಿಯೋಕಾನ್ ಟೀವಿ ಮತ್ತು ರೆಫ್ರಿಜರೇಟರ್ ವ್ಯವಹಾರ ನಡೆಸುತ್ತದೆ. ಇದನ್ನು ನೋಡಿದಾಗ ಸರ್ವೇಯರ್ ಕೂಡ ಸುಳ್ಳು ವರದಿ ತಯಾಸಿದ್ದಾನೆ ಎಂಬುದು ಗೊತ್ತಾಗುತ್ತದೆ. ಆದರೆ ಇವೆರಡೂ ಸಂಸ್ಥೆಗಳಿಗೆ ಒಬ್ಬರೇ ಮಾಲೀಕರಾಗಿರುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ.
೮-೪-೨೦೦೨ರ ಪತ್ರದ ಪ್ರಕಾರ ತನ್ನಲ್ಲಿರುವ ದಾಸ್ತಾನನ್ನು ಸ್ಥಳಾಂತರಿಸಿರುವ ಸಂಬಂಧದಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ತಳೆದ ಅಭಿಪ್ರಾಯವನ್ನು ಬದಲಿಸುವ ಅಗತ್ಯವಿಲ್ಲ. ಸರ್ವೇಯರ್ ಅಂದಾಜು ಮಾಡಿರುವ ಉಳಿದ ದಾಸ್ತಾನಿನ ಮೌಲ್ಯವನ್ನು ದೂರುದಾರರಿಗೆ ಕೊಡಬೇಕಾಗಿರುವ ಮೊತ್ತದಲ್ಲಿ ವಜಾ ಮಾಡಬೇಕು.
ಸೋನೋವಿಷನ್ ಎಂಟರ್‌ಪ್ರೈಸಿಸ್ ಹಾನಿ ೨೩,೧೭,೪೦೦ ರು. ಸರ್ವೇಯರ್ ಅಂದಾಜು ಮಾಡಿದ್ದ ೫,೭೩,೬೯೯ ರು. ಈಗಾಗಲೆ ಸಂದಾಯ ಮಾಡಲಾಗಿದೆ. ಅಲ್ಲಿ ಉಳಿದಿರುವ ದಾಸ್ತಾನಿನ ಮೌಲ್ಯ ೯,೨೨,೪೭೪ ರು. ಇದನ್ನು ೧೭,೪೪,೩೪೮ ರು.ನಲ್ಲಿ ಕಳೆದು ೮,೨೧,೮೭೪ ರು. ನೀಡಬೇಕು. ಇನ್ನು ಸೋನೋವಿಷನ್ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದಂತೆ ಆಗಿರುವ ಹಾನಿ ೯,೬೮,೧೧೪ ರು. ಈಗಾಗಲೆ ಇದರಲ್ಲಿ ೩,೮೦,೦೦೦ ಪಾವತಿಸಿರುವ ಕಾರಣ ಉಳಿದ ಮೊತ್ತವನ್ನು ವಿಮೆ ಕಂಪನಿ ನೀಡಬೇಕು. ಹಾಗೆಯೇ ವಿಜಯ ಎಂಟರ್‌ಪ್ರೈಸಿಸ್‌ನ ಒಟ್ಟೂ ಹಾನಿ ೨,೧೨,೯೨೦ ರು.ನಲ್ಲಿ ಈಗಾಗಲೆ ನೀಡಿರುವ ೧.೧೦ ಲಕ್ಷವನ್ನು ವಜಾ ಮಾಡಿ ಉಳಿದ ಮೊತ್ತವನ್ನು ವಿಮೆ ಕಂಪನಿ ನೀಡಬೇಕು ಎಂದು ಆದೇಶಿಸಿತು.
Comments
Post a Comment