ಹರಾಜು ಖರೀದಿದಾರ ಗ್ರಾಹಕನಲ್ಲ; ಹರಾಜು ಪ್ರಕ್ರಿಯೆಯನ್ನು ಗೃಹಮಂಡಳಿ ರದ್ದುಮಾಡಬಹುದು

ಹರಾಜಿನಲ್ಲಿ ಹೆಚ್ಚು ಮೊತ್ತವನ್ನು ನಮೂದಿಸಿದ ಮಾತ್ರಕ್ಕೇ ಗೃಹಮಂಡಳಿ ನಿವೇಶನವನ್ನು ನೊಂದಾಯಿಸಿಕೊಡಬೇಕಾಗಿಲ್ಲ. ಅದನ್ನು ರದ್ದುಗೊಳಿಸುವ ಅಧಿಕಾರ ಗೃಹಮಂಡಳಿಗೆ ಇದೆ. ---------------- ಗೃಹಮಂಡಳಿಯ ಮನೆಯೇ ಇರಬಹುದು ಅಥವಾ ಇನ್ನಾವುದೇ ವಸ್ತು ಇರಬಹುದು ನೀವು ಅದನ್ನು ಹರಾಜಿನಲ್ಲಿ ಖರೀದಿಸಿದಾಗ ನೀವು ಗ್ರಾಹಕ ಅನ್ನಿಸಿಕೊಳ್ಳುತ್ತೀರಾ? ಅಲ್ಲಿ ನಿಮಗೆ ಅನ್ಯಾಯವಾದರೆ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಬಹುದೆ? ಗೃಹಮಂಡಳಿ ಹರಾಜಿನಲ್ಲಿ ನಿಮಗೆ ಮಂಜೂರಾಗಿದ್ದ ನಿವೇಶನವನ್ನು ರದ್ದುಮಾಡಿದರೆ ಅದು ಗ್ರಾಹಕ ಕಾಯ್ದೆಯಲ್ಲಿ ಹೇಳಿರುವ ಹಾಗೆ ಸೇವಾನ್ಯೂನತೆಯ ವ್ಯಾಪ್ತಿಯಲ್ಲಿ ಬರುತ್ತದೆಯೆ? ಹರಾಜಿನಲ್ಲಿ ಭಾಗವಹಿಸಿದ ವ್ಯಕ್ತಿ ಗ್ರಾಹಕ ಅನ್ನಿಸಿಕೊಳ್ಳುತ್ತಾನೆಯೆ? ಇಂಥದ್ದೊಂದು ಸ್ವಾರಸ್ಯಕರ ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದ ವರೆಗೂ ಹೋಗಿತ್ತು. ರಾಜಸ್ಥಾನದ ಚಿತ್ತೋರಗಡದ ಅಂಬಾವಾಡಿಯ ನಿವಾಸಿ ಭರ್ನ್ವ ಲಾಲ್ ಅಲ್ಲಿಯ ಗೃಹಮಂಡಳಿಯ ನಿವೇಶನ ಹರಾಜಿನಲ್ಲಿ ಪಡೆದುಕೊಳ್ಳುತ್ತಾರೆ. ನಂತರ ಗೃಹಮಂಡಳಿಯು ಆ ನಿವೇಶನವನ್ನು ಅವರಿಗೆ ನೊಂದಣಿ ಮಾಡಿಸಿಕೊಡದೆ ಹರಾಜನ್ನೇ ರದ್ದುಪಡಿಸುತ್ತದೆ. ಹೀಗೆ ನಿವೇಶನ ಕೈತಪ್ಪಿದಾಗ ಅವರು ಗ್ರಾಹಕ ವೇದಿಕೆಯ ಮೆಟ್ಟಿಲು ಏರಿದ್ದರು. ಭನ್ವರ್‌ಲಾಲ್ ವೃತ್ತಿಯಿಂದ ಪತ್ರಕರ್ತರು. ರಾಜಸ್ಥಾನ ಗೃಹಮಂಡಳಿಯ ಉದಯಪುರ ವಿಭಾಗವು ಚಿತೋರಗಡದಲ್ಲಿ ತನ್ನ ಸೆಂತಿ ವಿಸ್ತರಣೆ ಯೋಜನೆಯಲ್ಲಿ ಕೆಲವು ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡುವುದಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿತ್ತು. ಭನ್ವರ್‌ಲಾಲ್ ಈ ಜಾಹೀರಾತನ್ನು ನೋಡಿ ೨-ವಿ-೫೧-ಡಿಯಲ್ಲಿ ್ಡ೮೧೮ ಮೀರ್ಟ ನಿವೇಶನಕ್ಕಾಗಿ ೫೦ ಸಾವಿರ ರುಪಾಯಿ ಠೇವಣಿ ಜಮಾ ಮಾಡಿ ಹರಾಜಿನಲ್ಲಿ ಭಾಗವಹಿಸುತ್ತಾರೆ. ಅವರೂ ಸೇರಿದಂತೆ ಒಟ್ಟೂ ಎಂಟು ಜನರು ಹರಾಜಿನಲ್ಲಿ ಭಾಗಿಯಾಗಿರುತ್ತಾರೆ. ಕನಿಷ್ಠ ಮಾರಾಟ ಬೆಲೆ ಪ್ರತಿ ಚದರ ಮೀಟರ್‌ಗೆ ೧೦ ಸಾವಿರ ರು. ಎಂದು ನಿಗದಿ ಮಾಡಲಾಗಿತ್ತು. ಭನ್ವರ್‌ಲಾಲ್ ಅವರು ಎಲ್ಲರಿಗಿಂತ ಹೆಚ್ಚು ಎಂದರೆ ೧೧,೫೧೩ ರು. ನಮೂದಿಸಿರುತ್ತಾರೆ. ಗೃಹಮಂಡಳಿಯ ಸೂಚನೆಯಂತೆ ಅವರು ೧೫-೦೬-೨೦೧೨ರಂದು ೪೦ ಸಾವಿರ ರು. ಮತ್ತು ೧೬-೦೬-೨೦೧೨ರಂದು ೧.೬೦ ಲಕ್ಷ ರು.ಗಳನ್ನು ಐಸಿಐಸಿಐ ಬ್ಯಾಂಕ್‌ನಲ್ಲಿ ಠೇವಣಿ ಮಾಡುತ್ತಾರೆ. ತಾವೇ ಹೆಚ್ಚಿನ ಮೊತ್ತ ನಮೂದಿಸಿದ್ದರಿಂದ ತಮಗೇ ನಿವೇಶನದ ಮಂಜೂರು ಪತ್ರವನ್ನು ಗೃಹಮಂಡಳಿ ಕಳುಹಿಸುತ್ತದೆ ಎಂದು ಭನ್ವರ್‌ಲಾಲ್ ಭಾವಿಸಿದ್ದರು. ಉಳಿದ ಹಣವನ್ನು ಕಟ್ಟುವಂತೆ ಕೇಳಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಉಂಟಾಗುವಂತೆ ಗೃಹಮಂಡಳಿ ಅವರಿಗೆ ನಿವೇಶನ ಸಿಕ್ಕಿದ್ದನ್ನು ರದ್ದುಗೊಳಿಸುತ್ತದೆ. ಹರಾಜು ಪ್ರಕ್ರಿಯೆರದ್ದಾಗಿದೆ ಎಂಬ ಪತ್ರವನ್ನು ೩೧-೦೮-೨೦೧೨ರಂದು ಕಳುಹಿಸಿತು. ಗೃಹ ಮಂಡಳಿಯ ಕೇಂದ್ರ ಕಚೇರಿ ಈ ಹರಾಜನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣ ನೀಡಿತ್ತು. ಅದರಲ್ಲಿ ಅವರು ಠೇವಣಿ ಮಾಡಿದ್ದ ೨.೫ ಲಕ್ಷ ರುಪಾಯಿಯ ಚೆಕ್ ಕೂಡ ಇರಿಸಲಾಗಿತ್ತು. ಭನ್ವರ್‌ಲಾಲ್ ಆ ಚೆಕ್ ಸ್ವೀಕರಿಸುತ್ತಾರೆ. ಆದರೆ ಗೃಹಮಂಡಳಿಯಿಂದ ಸೇವಾನ್ಯೂನತೆ ತಲೆದೋರಿದೆ ಎಂದು ಅವರು ಜಿಲ್ಲಾ ಗ್ರಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ತಮ್ಮದೇ ಅತ್ಯಧಿಕ ಮೊತ್ತ ನಮೂದಾಗಿರುವಾಗ ಗೃಹಮಂಡಳಿ ತಮಗೆ ನಿವೇಶನ ನೀಡಿದೆ ತಪ್ಪೆಸಗಿದೆ ಎಂಬುದು ಅವರ ವಾದವಾಗಿತ್ತು. ನಿವೇಶನದ ಉಳಿದ ಮೊತ್ತವನ್ನು ಪಡೆದುಕೊಂಡು ತಮಗೆ ಅದನ್ನು ಕೊಡಿಸುವಂತೆ ಗೃಹಮಂಡಳಿಗೆ ಆದೇಶ ನೀಡಬೇಕು, ತಾವು ಠೇವಣಿ ಮಾಡಿದ ಮೊತ್ತಕ್ಕೆ ಶೇ.೨೪ರಂತೆ ಬಡ್ಡಿಯನ್ನು ಹಾಗೂ ತಮಗಾದ ಮಾನಸಿಕ ಕಿರಿಕಿರಿಗೆ ೫೦ ಸಾವಿರ ರು ಮತ್ತು ವ್ಯಾಜ್ಯದ ವೆಚ್ಚವೆಂದು ೧೦ಸಾವಿರ ರುಪಾಯಿ ಕೊಡಿಸಬೇಕು ಎಂದು ಕೋರಿದರು. ತಮಗೆ ನೋಟಿಸ್ ಜಾರಿಯಾದ ಬಳಿಕ ಗೃಹಮಂಡಳಿಯು ಗ್ರಾಹಕ ವೇದಿಕೆಗೆ ಉತ್ತರವನ್ನು ನೀಡಿತು. ಹರಾಜಿನ ನಿಯಮಗಳು ಮತ್ತು ಷರತ್ತುಗಳ ೭ನೆ ನಿಯಮದ ಪ್ರಕಾರ, ಹರಾಜಿನಲ್ಲಿ ಭಾಗವಹಿಸಿದವರು ನಮೂದಿಸಿದ ಮೊತ್ತವನ್ನು ಒಪ್ಪಿಕೊಳ್ಳುವ ಅಥವಾ ಬಿಡುವ ಸಂಪೂರ್ಣ ಅಧಿಕಾರವನ್ನು ಗೃಹಮಂಡಳಿ ಹೊಂದಿದೆ. ಕಾರಣ ಈ ದೂರು ವಿಚಾರಣೆಗೆ ಯೋಗ್ಯವಲ್ಲ. ಏಕೆಂದರೆ ರಾಜಸ್ಥಾನ ಗೃಹಮಂಡಳಿಯ ಅಧ್ಯಕ್ಷರು ಈ ಹರಾಜನ್ನು ಒಪ್ಪಿಕೊಂಡಿಲ್ಲ ಮತ್ತು ಮರು ಹರಾಜಿಗೆ ಆದೇಶ ನೀಡಿದ್ದಾರೆ. ಇನ್ನೂ ಹೆಚ್ಚಿನದೆಂದರೆ ದೂರುದಾರರು ಪಾವತಿಸಿದ ಮೊತ್ತವನ್ನು ಬಡ್ಡಿ ರಹಿಸತಾವಿ ಚೆಕ್ ಮೂಲಕ ಹಿಂತಿರುಗಿಸಲಾಗಿದೆ. ಅದನ್ನು ಯಾವುದೇ ತಕರಾರು ಇಲ್ಲದೆ ಅವರು ಸ್ವೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರನ್ನು ವಜಾಗೊಳಿಸಬೇಕು ಎಂದು ಕೋರಿತು. ಜಿಲ್ಲಾ ವೇದಿಕೆಯು ಎರಡೂ ಕಡೆಯವರ ವಾದವನ್ನು ಆಲಿಸಿ ದೂರನ್ನು ಭಾಗಶಃ ಪುರಸ್ಕರಿಸಿತು. ೧೭-೦೩-೨೦೧೫ರಂದು ನೀಡಿದ ಆದೇಶದಲ್ಲಿ, ಪ್ರತಿವಾದಿ ಗೃಹಮಂಡಳಿಯು ದೂರುದಾರರಿಗೆ ಅವರು ಠೇವಣಿ ಮಾಡಿದ ೨.೫ ಲಕ್ಷ ರುಪಾಯಿಗೆ ೧೬-೦೬-೨೦೧೨ರಿಂದ ೩೧-೦೮-೨೦೧೨ರ ಅವಧಿಗೆ ಶೇ.೯ರಂತೆ ಬಡ್ಡಿಯನ್ನು ನೀಡಬೇಕು. ಅವರಿಗಾದ ಮಾನಸಿಕ ಕಿರಿಕಿರಿಗೆ ೩ ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು ೨ ಸಾವಿರ ರು. ನೀಡಬೇಕು ಎಂದು ತಿಳಿಸಿತು. ಈ ತೀರ್ಪು ಭನ್ವರ್‌ಲಾಲ್ ಅವರಿಗೆ ತೃಪ್ತಿ ತರಲಿಲ್ಲ. ಅದರ ವಿರುದ್ಧ ಅವರು ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ಆದರೆ ಅದು ವಜಾಗೊಂಡಿತು. ಅಂತಿಮವಾಗಿ ಅವರು ರಾಷ್ಟ್ರೀಯ ಗ್ರಾಹಕ ಆಯೋಗಕ್ಕೂ ದೂರನ್ನು ಒಯ್ದರು. ತಾವೇ ಅತ್ಯಧಿಕ ಮೊತ್ತವನ್ನು ನಮೂದಿಸಿದ್ದರಿಂದ ಮತ್ತು ಅದಕ್ಕೆ ೨.೫ ಲಕ್ಷ ರು.ಗಳನ್ನು ಠೇವಣಿ ಮಾಡಿರುವುದರಿಂದ ಗೃಹಮಂಡಳಿಯು ನಿವೇಶನವನ್ನು ತಮಗೇ ನೀಡುವಂತೆ ಆದೇಶಿಸಬೇಕು. ಅಲ್ಲದೆ ಅವರು ಠೇವಣಿ ಮಾಡಿದ್ದ ಹಣಕ್ಕೆ ಯಾವುದೇ ಬಡ್ಡಿಯನ್ನು ನೀಡಿಲ್ಲ. ಸೂಕ್ತ ಬಡ್ಡಿಯನ್ನೂ ನೀಡುವಂತೆ ಆದೇಶಿಸಬೇಕು ಎಂದು ಭನ್ವರ್‌ಲಾಲ್ ಅವರ ವಕೀಲರು ಕೋರಿದರು. ರಾಷ್ಟ್ರೀಯ ಆಯೋಗ ಎರಡೂ ಕಡೆಯವರ ವಾದವನ್ನು ಆಲಿಸಿತು. ದೂರುದಾರರು ಅತಿಹೆಚ್ಚಿನ ಮೊತ್ತವನ್ನು ದಾಖಲಿಸಿದ್ದರೂ ಗೃಹಮಂಡಳಿ ತನಗಿರುವ ಅಧಿಕಾರವನ್ನು ಬಳಸಿ ಆ ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ಮರು ಹರಾಜಿಗೆ ಆದೇಶಿಸಿದೆ. ಅಲ್ಲದೆ ದೂರುದಾರರ ಠೇವಣಿ ಹಣವನ್ನು ಹಿಂತಿರುಗಿಸಿದೆ. ಅದನ್ನು ಅವರು ಸ್ವೀಕರಿಸಿಯೂ ಇದ್ದಾರೆ. ಹೀಗಿರುವಾಗ ಗೃಹಮಂಡಳಿಯಿಂದ ಯಾವುದೇ ಸೇವಾನ್ಯೂನತೆ ತಲೆದೋರಿಲ್ಲ. ಏಕೆಂದರೆ ಹರಾಜಿನಲ್ಲಿ ಭಾಗಿಯಾಗಿದ್ದ ದೂರುದಾರರು ಪ್ರತಿವಾದಿ ಗೃಹಮಂಡಳಿಯಿಂದ ಯಾವುದೇ ಸೇವೆಯನ್ನು ಪಡೆದುಕೊಂಡಿಲ್ಲ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಪ್ರಸ್ತುತ ಪ್ರಕರಣದಲ್ಲಿ ದೂರುದಾರರು ಗ್ರಾಹಕ ರಕ್ಷಣೆ ಕಾಯ್ದೆ ೧೯೮೬ರ ಸೆಕ್ಷನ್ ೨(ಡಿ) ಅಡಿಯಲ್ಲಿ ಹೇಳಿರುವ ಗ್ರಾಹಕ ಪದದ ವ್ಯಾಖ್ಯೆಯ ವ್ಯಾಪ್ತಿಗೆ ಬರುವುದಿಲ್ಲ. ಏಕೆಂದರೆ ನಿವೇಶನದ ಔಪಚಾರಿಕ ಮಂಜೂರಿಯು ಅವರ ಹೆಸರಿಗೆ ಆಗಿಯೇ ಇಲ್ಲ. ಸುಪ್ರೀಂ ಕೋರ್ಟ್ ಕೇಂದ್ರಾಡಳಿತ ಪ್ರದೇಶ ಚಂಡೀಗಡ ಆಡಳಿತ ವಿರುದ್ಧ ಅಮರ್ಜೀತ್ ಸಿಂಗ್ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ, ಹರಾಜಿನ ಖರೀದಿದಾರರು ಗ್ರಾಹಕ ರಕ್ಷಣೆ ಕಾಯ್ದೆಯಲ್ಲಿ ಹೇಳಿರುವ ಗ್ರಾಹಕ’ ಪದದ ವ್ಯಾಖ್ಯೆಯಲ್ಲಿ ಬರುವುದಿಲ್ಲ ಎಂದು ಹೇಳಿದೆ ಎಂಬುದನ್ನು ರಾಷ್ಟ್ರೀಯ ಆಯೋಗ ನಮೂದಿಸಿತು. ಇನ್ನು. ದೂರುದಾರರು ಠೇವಣಿ ಮಾಡಿರುವ ೨.೫ ಲಕ್ಷ ರುಪಾಯಿಗೆ ಶೇ.೯ರಂತೆ ಬಡ್ಡಿ ನೀಡಬೇಕು ಎಂದು ಜಿಲ್ಲಾ ವೇದಿಕೆಯೇ ತೀರ್ಪು ನೀಡಿದೆ. ಇದನ್ನು ರಾಜ್ಯ ಆಯೋಗ ಕೂಡ ದೃಢಪಡಿಸಿದೆ. ಹೀಗಿರುವಾಗ ಈ ಆದೇಶಗಳಲ್ಲಿ ಯಾವುದೇ ಗೊಂದಲವಾಗಲಿ, ಕಾನೂನುಬಾಹಿರವಾದುದಾಗಲಿ, ಅಸಮಂಜಸತೆಯಾಗಲಿ ಅಥವಾ ವ್ಯಾಪ್ತಿ ದೋಷವಾಗಲಿ ಕಂಡುಬಂದಿಲ್ಲ. ಕಾರಣ ಮೇಲ್ಮನವಿಯನ್ನು ವಜಾಗೊಳಿಸುವುದಾಗಿ ಆದೇಶ ನೀಡಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು