ವಿಮೆಯಲ್ಲಿ ರಿಸ್ಕ್ ಘೋಷಣೆಯಾದ ದಿನಕ್ಕೆ ಬೆಲೆ ಇಲ್ಲ, ಪಾಲಿಸಿ ನೀಡಿದ ದಿನವೇ ಲೆಕ್ಕಕ್ಕೆ

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮರಾನಿ ಗ್ರಾಮದ ಜಸ್ವಂತ್ ಸಿಂಗ್ ಮತ್ತು ಬಬಿತಾ ಅವರದು ಅನ್ಯೋನ್ಯ ದಾಂಪತ್ಯ. ಬಬಿತಾ ಅವರು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದಿಂದ ೧ ಲಕ್ಷ ರುಪಾಯಿಯ ವಿಮೆಯನ್ನು ಇಳಿಸಿದ್ದರು. ದುರ್ದೈವವಶಾತ್ ಅವರು ೨೦೦೨ರ ಅಕ್ಟೋಬರ್ ೯ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಮೆ ಪಾಲಿಸಿಯನ್ನು ನೀಡಿದ ದಿನಾಂಕ ೨೮-೧೧-೧೯೯೯. ಆದರೆ ರಿಸ್ಕ್ ಘೋಷಣೆಯಾದ ದಿನಾಂಕ ೨೮-೦೯-೧೯೯೯ ಎಂದಿತ್ತು. ಜಸ್ವಂತ್ ಸಿಂಗ್ ಅವರು ವಿಮೆ ಪರಿಹಾರ ನೀಡುವಂತೆ ಎಲ್‌ಐಸಿಯನ್ನು ಕೋರುತ್ತಾರೆ. ವಿಮೆ ಮೊತ್ತವನ್ನು ನೀಡುವುದಕ್ಕೆ ಎಲ್‌ಐಸಿ ತಕರಾರು ಎತ್ತುತ್ತದೆ. ವಿಮೆ ಪಾಲಿಸಿಯ ಷರತ್ತುಗಳು ಮತ್ತು ನಿಬಂಧನೆಗಳ ನಿಯಮ ೪(ಬಿ) ಪ್ರಕಾರ ಪಾಲಿಸಿ ನೀಡಿದ ಮೂರು ವರ್ಷಗಳ ಒಳಗೆ ವಿಮೆ ಹೊಂದಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ ವಿಮೆಯನ್ನು ನೀಡಲು ಬರುವುದಿಲ್ಲ. ಬಬಿತಾ ಅವರು ಮೂರು ವರ್ಷ ತುಂಬುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾರಣ ನೀಡಿತು. ಆದರೆ ಪಾಲಿಸಿಗೆ ಅದುವರೆಗೆ ತುಂಬಿದ್ದ ೨೪,೪೪೦ ರು.ಗಳನ್ನು ಮಾತ್ರ ನೀಡಿತು. ಇದರ ವಿರುದ್ಧ ಜಸ್ವಂತ್ ಸಿಂಗ್ ಅವರು ಸಾಗರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ಸಲ್ಲಿಸಿದರು. ದೂರನ್ನು ಜಿಲ್ಲಾ ವೇದಿಕೆ ಪುರಸ್ಕರಿಸಿತು. ವಿಮೆ ಕಂಪನಿಯು ಈಗಾಗಲೆ ನೀಡಿರುವ ಮೊತ್ತವನ್ನು ಕಳೆದು ಉಳಿದ ೭೫,೫೬೦ ರು.ಗಳನ್ನು ಮತ್ತು ಅದಕ್ಕೆ ಸಿಗಬೇಕಾದ ಬೋನಸ್ ಸಹಿತ ಒಂದು ತಿಂಗಳೊಳಗೆ ನೀಡಬೇಕು. ಸೇವಾ ನ್ಯೂನತೆಗಾಗಿ ೧,೦೦೦ ರು. ಮತ್ತು ವ್ಯಾಜ್ಯದ ವೆಚ್ಚವೆಂದು ೫೦೦ ರು. ನೀಡಬೇಕು ಎಂದು ಆದೇಶಿಸಿತು. ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ಎಲ್‌ಐಸಿಯು ಮಧ್ಯಪ್ರದೇಶ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ತನ್ನ ವಾದದ ಸಮರ್ಥನೆಗಾಗಿ ಅದು ರಾಷ್ಟ್ರೀಯ ಆಯೋಗವು ಎಲ್‌ಐಸಿ ವಿರುದ್ದ ಸೂರತ್ ಮಲ್ ತಕ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಹಾಗೂ ಸುಪ್ರೀಂ ಕೋರ್ಟ್ ಎಲ್‌ಐಸಿ ವಿರುದ್ಧ ಧರಮ್ ವೀರ್ ಆನಂದ್ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಒದಗಿಸಿತು. ಇದನ್ನು ಒಪ್ಪಿದ ರಾಜ್ಯ ಆಯೋಗ ಮೇಲ್ಮನವಿಯನ್ನು ಪುರಸ್ಕರಿಸಿ ದೂರನ್ನು ವಜಾಗೊಳಿಸಿತು. ಇದರಿಂದ ನೊಂದ ಜಸ್ವಂತ್ ಸಿಂಗ್ ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ಅವರ ವಕೀಲರು, ರಾಜ್ಯ ಆಯೋಗವು ವಿಮೆ ಕರಾರಿನ ಷರತ್ತು ೪(ಬಿ)ಯನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ವಾದಿಸಿದರು. ವಿಮೆದಾರರಿಗೆ ನೀಡಿದ ಪಾಲಿಯಲ್ಲಿ ರಿಸ್ಕ್ ಘೋಷಣೆ ದಿನಾಂಕ ೨೮-೯-೧೯೯೯ ಎಂದಿದೆ. ಕಾರಣ ಇದೇ ದಿನಾಂಕವನ್ನೇ ಪಾಲಿಸಿ ಶುರುವಾದ ದಿನವೆಂದು ರಾಜ್ಯ ಆಯೋಗ ಪರಿಗಣಿಸಬೇಕಿತ್ತು. ವಿಮೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದು ೯-೧೦-೨೦೦೨ರಂದು. ಅಂದರೆ ಆಗಲೆ ಮೂರು ವರ್ಷ ಮುಗಿದಿದೆ. ಹೀಗಿರುವಾಗ ವಿಮೆ ನಿರಾಕರಿಸುವುದು ನ್ಯಾಯಯುತವಲ್ಲ. ಇದು ಸೇವಾನ್ಯೂನತೆ ಎಂದು ಪ್ರತಿಪಾದಿಸಿದರು. ಇದನ್ನು ವಿಮೆ ಕಂಪನಿಯ ವಕೀಲರು ಒಪ್ಪಲಿಲ್ಲ. ವಿಷಯ ತಿಳಿಯಲು ವಿಮೆ ಪಾಲಿಸಿಯೇ ಲಭ್ಯವಿದೆ. ಪಾಲಿಸಿಯ ಪ್ರಸ್ತಾವನೆಯ ಫಾರ್ಮ್ ಸಲ್ಲಿಸಿದ್ದೇ ೨೫-೧೧-೧೯೯೯ರಂದು. ಅದೇ ದಿನ ಪಾಲಿಸಿಯನ್ನು ವಿತರಿಸಲಾಗಿದೆ. ರಾಜ್ಯ ಆಯೋಗ ಕೂಡ ಇದೇ ದಿನಾಂಕವನ್ನು ಒಪ್ಪಿಕೊಂಡಿದೆ. ವಿಮೆ ಹೊಂದಿದವರು ಮೂರು ವರ್ಷ ತುಂಬುವ ಮೊದಲೇ ಆತ್ಮಹತ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಕಾರಣ ವಿಮೆ ನಿರಾಕರಿಸಲಾಗಿದೆ ಎಂದು ಹೇಳಿದರು. ದಾಖಲೆಗಳನ್ನು ಪರಿಗಣಿಸಿದ ರಾಷ್ಟ್ರೀಯ ಆಯೋಗವು ವಿಮೆ ಕಂಪನಿಯ ವಾದವನ್ನು ಒಪ್ಪಿಕೊಂಡಿತು. ಪ್ರಸ್ತುತ ಪ್ರಕರಣದಲ್ಲಿ ರಿಸ್ಕ್ ಘೋಷಣೆಯಾದ ದಿನಾಂಕ ೨೮-೯-೧೯೯೯ನ್ನು ಪರಿಗಣಿಸಬೇಕೋ ಅಥವಾ ಪಾಲಿಸಿಯನ್ನು ವಿತರಿಸಿದ ದಿನ ೨೫-೧೧-೧೯೯೯ನ್ನು ಪರಿಗಣಿಸಬೇಕೋ ಎಂಬುದನ್ನಷ್ಟೇ ನಿರ್ಣಯಿಸಬೇಕಿತ್ತು. ಎಲ್‌ಐಸಿ ವಿರುದ್ಧ ಧರಮ್ ವೀರ್ ಆನಂದ್ ಪ್ರಕರಣವೂ ಇದೇ ರೀತಿ ಇದ್ದು ಸುಪ್ರೀಂ ಕೋರ್ಟ್ ಇದರಲ್ಲಿ ನೀಡಿದ ತೀರ್ಪನ್ನು ರಾಷ್ಟ್ರೀಯ ಆಯೋಗ ಪರಿಶೀಲಿಸಿತು. ಅದರಲ್ಲಿ ಪಾಲಿಸಿಯನ್ನು ನೀಡಿದ್ದು ೩೧-೩-೧೯೯೦ರಂದು. ರಿಸ್ಕ್ ಘೋಷಣೆಯಾಗಿದ್ದು ೧೦-೫-೧೯೮೯ರಂದು. ವಿಮೆ ಪಡೆದ ವ್ಯಕ್ತಿ ಸಾವಿಗೀಡಾಗಿದ್ದು ೧೫-೧೧-೧೯೯೨ರಂದು. ಇದು ಪಾಲಿಸಿ ನೀಡಿದ್ದ ಮೂರು ವರ್ಷದ ಒಳಗೇ ಆಗಿದ್ದರಿಂದ ವಿಮೆ ನಿರಾಕರಿಸಲಾಗಿತ್ತು. ರಿಸ್ಕ್ ಘೋಷಣೆಯಾದ ದಿನ ಲೆಕ್ಕಕ್ಕೆ ತೆಗೆದುಕೊಂಡರೆ ಮೂರು ವರ್ಷ ದಾಟಿ ಹೋಗಿತ್ತು. ರಿಸ್ಕ್ ಘೋಷಣೆಯಾದ ದಿನ ಮತ್ತು ಪಾಲಿಸಿ ನೀಡಿದ ದಿನ ಎರಡನ್ನೂ ವಿಮೆ ಕರಾರಿನ ನಿಯಮ ೪(ಬಿ)ಯನ್ನು ವಿವರಿಸುವಾಗ ಒಂದೇ ಎಂದು ಪರಿಗಣಿಸಲು ಬರುವುದಿಲ್ಲ. ಪಾಲಿಸಿ ನೀಡಿದ ದಿನವನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎಂದು ತೀರ್ಪು ನೀಡಿತ್ತು. ಅದೇ ಮಾನದಂಡವನ್ನು ಇಲ್ಲಿ ಅನ್ವ ಯಿಸುವುದಾದರೆ ವಿಮೆ ಪಡೆದ ಬಬಿತಾ ಮೂರು ವರ್ಷ ತುಂಬುವ ಮೊದಲೇ ಸಾವನ್ನಪ್ಪಿದ್ದಾರೆ. ಕಾರಣ ಅವರಿಗೆ ವಿಮೆಯನ್ನು ನಿರಾಕರಿಸಿದ ಎಲ್‌ಐಸಿ ಸರಿಯಾದ ನಿರ್ಣಯ ಕೈಗೊಂಡಿದೆ. ರಾಜ್ಯ ಆಯೋಗ ಜಿಲ್ಲಾ ವೇದಿಕೆಯ ತೀರ್ಪನ್ನು ತಳ್ಳಿಹಾಕಿ ದೂರನ್ನು ವಜಾ ಮಾಡಿದ್ದು ಸರಿಯಾಗಿಯೇ ಇದೆ. ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು