ಗೃಹ ನಿರ್ಮಾಣ ಸಹಕಾರ ಸಂಘಗಳು ಮೋಸ ಮಾಡಿದರೆ ಗ್ರಾಹಕ ಕೋರ್ಟಲ್ಲಿ ಪ್ರಶ್ನಿಸಬಹುದು

ಕರ್ನಾಟಕದಲ್ಲಿ ಗೃಹನಿರ್ಮಾಣ ಸಹಕಾರ ಸಂಘಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಇವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವವರು ಯಾರು? ಸಾಮಾನ್ಯ ಸದಸ್ಯನಿಗೆ ಈ ಸೊಸೈಟಿಯಿಂದ ಮೋಸವಾದರೆ ಆತ ಎಲ್ಲಿಗೆ ಹೋಗಬೇಕು? ನಿವೇಶನವನ್ನು ಫ್ಲ್ಯಾಟನ್ನೋ ನೀಡುತ್ತೇನೆ ಎಂದು ಭರವಸೆ ನೀಡಿ ಕೊನೆಗೆ ಕೈ ಎತ್ತಿದರೆ ಆ ಸದಸ್ಯ ಇಂಥ ಗೃಹನಿರ್ಮಾಣ ಸಹಕಾರ ಸಂಘದ ವಿರುದ್ಧ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಬಹುದು. ಅಂಥದ್ದೊಂದು ಪ್ರಕರಣ ಇಲ್ಲಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಹಕಾರ ಸಂಘವು ತನ್ನ ಸದಸ್ಯರಿಗಾಗಿ ಬೆಂಗಳೂರಿನಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿತ್ತು. ಈ ಸಂಘದ ಸದಸ್ಯರಾದ ಎಸ್.ಬಿ.ಈಶ್ವರಪ್ಪ ಎಂಬವರಿಗೆ ನಿವೇಶನ ಸಿಕ್ಕಿತ್ತು. ನಿವೇಶನದ ಮೌಲ್ಯ ೯೯,೫೦೦ ರುಪಾಯಿ. ಇದರಲ್ಲಿ ಅವರು ಸಂಘಕ್ಕೆ ೬೪,೦೦೦ ರು. ತುಂಬಿದರು. ಆದರೆ ಸಂಘ ಕೊನೆಗೂ ಇವರಿಗೆ ನಿವೇಶನದ ಕ್ರಯಪತ್ರ ಮಾಡಿ ಕೊಡಲೇ ಇಲ್ಲ. ಇದನ್ನು ಪ್ರಶ್ನಿಸಿ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ಸೊಸೈಟಿಯ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಇವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿತ್ತು. ಆದರೂ ಯಾರೊಬ್ಬರೂ ಹಾಜರಾಗಲಿಲ್ಲ. ಅವರ ಗೈರು ಹಾಜರಿಯಲ್ಲೇ ಜಿಲ್ಲಾ ಗ್ರಾಹಕ ವೇದಿಯುೆ ಅರ್ಜಿದಾರರಿಗೆ ಸೊಸೈಟಿಯು ನಿವೇಶನವನ್ನು ನೀಡಬೇಕು. ಅವರಿಂದ ಉಳಿದ ಮೊತ್ತ ೩೫,೫೦೦ ರುಪಾಯಿ ಪಡೆದು ಅವರ ಹೆಸರಿಗೆ ಕ್ರಯಪತ್ರವನ್ನು ನೊಂದಾಯಿಸಿಕೊಡಬೇಕು ಎಂದು ಆದೇಶಿಸಿತು. ಇದಾದ ಬಳಿಕ ಸೊಸೈಟಿಯು ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಅರ್ಜಿ ಸಲ್ಲಿಸುವುದಕ್ಕೆ ೨೯೮ ದಿನಗಳಷ್ಟು ವಿಳಂಬವಾಗಿತ್ತು. ವಿಳಂಬ ಮನ್ನಿಸುವಂತೆ ಕೋರಿ ಒಂದು ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಆಯೋಗವು ವಿಳಂಬದ ಕಾರಣ ನೀಡಿ ಮೇಲ್ಮನವಿಯನ್ನು ವಜಾಗೊಳಿಸಿತು. ಅದರ ವಿರುದ್ಧ ಸೊಸೈಟಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಆದರೆ ಈ ಮೇಲ್ಮನವಿಯನ್ನೂ ೧೪೮ ದಿನ ವಿಳಂಬವಾಗಿ ಸಲ್ಲಿಸಲಾಗಿತ್ತು. ರಾಜ್ಯ ಆಯೋಗದಲ್ಲಿ ಸಮಾರು ಹತ್ತು ತಿಂಗಳು ವಿಳಂಬವಾಗಿ ಮೇಲ್ಮನವಿ ಸಲ್ಲಿಸಿದ್ದಕ್ಕೆ ಸೊಸೈಟಿ ನೀಡಿದ್ದ ಕಾರಣಗಳು ಹೀಗಿವೆ.- ೧೯-೦೧-೨೦೧೨ರಂದು ಸಹಕಾರ ಸಂಘಗಳ ಇಲಾಖೆಯು ಸೊಸೈಟಿಯನ್ನು ಸೂಪರ್‌ಸೀಡ್ ಮಾಡಿತ್ತು. ಹೀಗಾಗಿ ಸೊಸೈಟಿಗೆ ಆಗ ಆಯೋಗದ ಮುಂದೆ ಹಾಜರಾಗುವುದಕ್ಕೆ ಆಗಲಿಲ್ಲ. ಸೂಪರ್‌ಸೀಡ್ ವಿರುದ್ಧ ಹೈಕೋರ್ಟ್‌ಗೆ ತೆರಳಿ ಡಿಸೆಂಬರ್ ೨೦೧೨ರಲ್ಲಿ ತಡೆಯಾಜ್ಞೆಯನ್ನು ತರಲಾಯಿತು. ಈಗ ಎಲ್ಲ ದಾಖಲೆಗಳನ್ನು ಹೊಂದಿಸಿಕೊಂಡು ಬಂದಿರುವುದಾಗಿ ಹೇಳಿತು. ಈ ಸಂಕಷ್ಟದ ಸಮಯದಲ್ಲಿಯೇ ಆಫೀಸ್ ಬಾಯ್ ನೋಟಿಸ್ ಸ್ವೀಕರಿಸಿದ್ದ. ಅದನ್ನು ಮರೆತು ಎಲ್ಲಿಯೋ ಇಟ್ಟು ಬಿಟ್ಟ. ಆದೇಶದ ಜಾರಿ ಪ್ರಕ್ರಿಯೆ ನಡೆದಾಗಲೇ ಸೊಸೈಟಿಗೆ ಜಿಲ್ಲಾ ವೇದಿಕೆ ನೀಡಿದ್ದ ತೀರ್ಪು ಅರಿವಿಗೆ ಬಂದದ್ದು. ಪ್ರತಿವಾದಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು. ಜಿಲ್ಲಾ ವೇದಿಕೆಯ ಮುಂದೆ ಹಾಜರಾಗದೆ ಇದ್ದುದು ಉದ್ದೇಶಪೂರ್ವಕವಲ್ಲ. ಅನಿವಾರ್ಯದ ಕಾರಣಗಳಿಗಾಗಿ. ಕಾರಣ ವಾರಂಟ್ ರದ್ದುಪಡಿಸಬೇಕು. ಜಿಲ್ಲಾ ವೇದಿಕೆ ತೀರ್ಪನ್ನು ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿತು. ಜಿಲ್ಲಾ ವೇದಿಕೆ ತನ್ನ ತೀರ್ಪು ನೀಡಿದ್ದು ೩೧-೦೮-೨೦೧೨ರಂದು. ಪದ್ಧತಿಯಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ಜಿಲ್ಲಾ ವೇದಿಕೆಯಿಂದ ತೀರ್ಪಿನ ಒಂದು ಉಚಿತ ಪ್ರತಿ ಹೋಗುತ್ತದೆ. ಸೊಸೈಟಿ ಸೂಪರ್‌ಸೀಡ್ ಆಗಿದ್ದು ೨೦೧೨ರ ಜನವರಿಯಲ್ಲಿ. ಅದಕ್ಕೆ ಹೈಕೋರ್ಟ್ ತಡೆ ನೀಡಿದ್ದು ೨೦೧೨ರ ಡಿಸೆಂಬರ್‌ನಲ್ಲಿ. ಆ ಬಳಿಕವೂ ಸೊಸೈಟಿ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಿಲ್ಲ. ಸೂಪರ್‌ಸೀಡ್ ತೆರವಾದ ಆರು ತಿಂಗಳ ಬಳಿಕವಷ್ಟೇ ಮೇಲ್ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಲು ಇದ್ದ ಅವಧಿ ಮುಗಿದುಹೋಗಿದೆ. ಹೀಗೆ ವಿಳಂಬವಾಗಿರುವುದಕ್ಕೆ ಒಂದೊಂದು ದಿನಕ್ಕೂ ಕಾರಣಗಳನ್ನು ನೀಡಬೇಕಾಗುತ್ತದೆ. ಆದರೆ ಡಿಸೆಂಬರ್ ೨೦೧೨ರಿಂದ ಮೇಲ್ಮನವಿ ದಾಖಲಿಸಿದ ದಿನದ ವರೆಗೆ ವಿಳಂಬಕ್ಕೆ ಕಾರಣ ನೀಡಲು ಪ್ರತಿವಾದಿ ಪ್ರಯತ್ನಿಸಿಲ್ಲ. ತನ್ನ ಅನುಪಸ್ಥಿತಿಯಲ್ಲಿಯೇ ತೀರ್ಪು ಬಂದಿರುವುದು ೨೦೧೩ರ ಮಾರ್ಚ್ ವರೆಗೂ ಗೊತ್ತಾಗಲಿಲ್ಲ ಎಂದು ಸೊಸೈಟಿ ಹೇಳುತ್ತಿದೆ. ಆದರೆ ಅದಕ್ಕೂ ಮೊದಲೇ ತನಗೆ ತೀರ್ಪಿನ ಪ್ರತಿ ಸಿಕ್ಕಿಲ್ಲ ಎಂದು ಹೇಳುತ್ತಿಲ್ಲ. ಇದು ಸೊಸೈಟಿಯ ನಿರ್ಲಕ್ಷ್ಯನ್ನು ತೋರಿಸುತ್ತದೆ. ತನ್ನ ಸದಸ್ಯರಿಗೆ ಬಂಧನದ ವಾರಂಟ್ ಬರುವವರೆಗೂ ಅದು ರಾಜ್ಯ ಆಯೋಗಕ್ಕೆ ಮೇಲ್ಮನವಿಗೆ ಹೋಗಬೇಕು ಎಂದು ಆಲೋಚಿಸಿಯೇ ಇರಲಿಲ್ಲ. ಕಾರಣ ರಾಜ್ಯ ಆಯೋಗ ಈ ವಿಳಂಬವನ್ನು ಮನ್ನಿಸದೇ ಇದ್ದುದು ಸರಿಯಾಗಿಯೇ ಇದೆ. ಸೊಸೈಟಿಯ ನಿರ್ಲಕ್ಷ್ಯ ಇಷ್ಟಕ್ಕೇ ಮುಗಿದಿಲ್ಲ. ರಾಜ್ಯ ಆಯೋಗ ಮೇಲ್ಮನವಿಯನ್ನು ವಜಾ ಮಾಡಿದ್ದು ೧೪-೧೧-೨೦೧೬ರಂದು. ಅದು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದು ೨೦೧೭ರ ಆಗಸ್ಟ್‌ನಲ್ಲಿ. ಅದಕ್ಕಿದ್ದ ಕಾಲಾವಕಾಶಕ್ಕಿಂತ ಐದು ತಿಂಗಳು ವಿಳಂಬವಾಗಿ ಅರ್ಜಿ ಸಲ್ಲಿಸಿದೆ. ಕಾರಣ ಅವರ ವಿಳಂಬ ಮನ್ನಾ ಮಾಡುವ ಕೋರಿಕೆಗೆ ಮಾನ್ಯತೆ ನೀಡುವುದಿಲ್ಲ. ಅರ್ಜಿ ವಜಾ ಮಾಡುವುದಾಗಿ ರಾಷ್ಟ್ರೀಯ ಆಯೋಗ ಹೇಳಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು