ಫ್ಲ್ಯಾಟ್ ಕೊಡದ ಯುನಿಟೆಕ್‌ಗೆ ಹಣ ಮರಳಿಸಲು ಆದೇಶ

ಒಂದು ಕಾಲದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಯುನಿಟೆಕ್ ಕಂಪನಿಯದು ದೊಡ್ಡ ಹೆಸರಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅದು ತನ್ನ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಫ್ಲ್ಯಾಟ್‌ಗಳನ್ನು ಕೊಡುವಲ್ಲಿ ವಿಫಲವಾಗಿದೆ. ಇದರ ವಿರುದ್ಧ ನೂರಾರು ಗ್ರಾಹಕರು ಕೋರ್ಟ್‌ಕಟ್ಟೆ ಏರಿದ್ದಾರೆ. ಹಲವು ಪ್ರಕರಣಗಳು ಗ್ರಾಹಕ ವೇದಿಕೆಯ ಎದುರೂ ಇವೆ. ಇಲ್ಲಿ ಅಂಥದ್ದೊಂದು ಪ್ರಕರಣ ಇದೆ. ಯುನಿಟೆಕ್ ವಿರುದ್ಧ ಅನಿಲ್ ಮೆಹ್ರೋತ್ರಾ ಎಂಬವರು ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಹೂಡಿದ್ದ ಪ್ರಕರಣ ಇದು. ಇದೇ ಪ್ರಕರಣದ ಜೊತೆಯಲ್ಲಿ ಯುನಿಟೆಕ್ ವಿರುದ್ಧ ರಾಕೇಶ್ ಕುಮಾರ್ ಎಂಬವರು ದಾಖಲಿಸಿದ ಪ್ರಕರಣವನ್ನೂ ರಾ.ಗ್ರಾ.ಆಯೋಗ ಜೊತೆಯಾಗಿಯೇ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಅನಿಲ್ ಹಾಗೂ ರಾಕೇಶ್‌ಕುಮಾರ್ ಅವರು ಉತ್ತರ ಪ್ರದೇಶದ ನೊಯ್ಡಾದಲ್ಲಿ ಯುನಿಟೆಕ್ ನಿರ್ಮಸಿದ ‘ರೆಸಿಡೆನ್ಸೀಸ್’ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಇವರಲ್ಲದೆ ಇನ್ನೂ ಹಲವರು ಇಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಹೀಗೆ ಫ್ಲ್ಯಾಟ್ ಖರೀದಿಸಿದವರು ‘ರೆಸಿಡೆನ್ಸೀಸ್ ಫ್ಲ್ಯಾಟ್ ಬೈಯರ್ಸ್ ಅಸೋಸಿಯೇಶನ್’ ಸ್ಥಾಪಿಸಿಕೊಂಡಿದ್ದರು. ಈ ಅಸೋಸಿಯೇಶನ್ನಿನ ಯಾರಿಗೂ ಫ್ಲ್ಯಾಟ್ ಹಸ್ತಾಂತರವಾಗಿರಲಿಲ್ಲ. ಅವರೆಲ್ಲ ಈ ಸಂಘದ ಮೂಲಕ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು. ಅವರೆಲ್ಲರಿಗೂ ಅವರು ತುಂಬಿದ್ದ ಹಣವನ್ನು ವಾಪಸ್ ನೀಡಬೇಕು ಮತ್ತು ಅದಕ್ಕೆ ಅವರು ಹಣ ನೀಡಿದ ದಿನದಿಂದ ಶೇ.೧೦ರಂತೆ ಬಡ್ಡಿ ನೀಡಬೇಕು ಎಂದು ಆಯೋಗ ತೀರ್ಪು ನೀಡಿತ್ತು. ಅವರಿಗೆ ನೀಡಿದ ತೀರ್ಪೇ ಇವರಿಗೂ ಅನ್ವಯಿಸುತ್ತದೆ ಎಂದು ದೂರುದಾರರ ವಕೀಲರು ವಾದಿಸಿದರು. ಅನಿಲ್ ಮೆಹ್ರೋತ್ರಾ ಅವರು ಯುನಿಟೆಕ್ ಕಂಪನಿ ನೊಯ್ಡಾದಲ್ಲಿ ಅಭಿವೃದ್ಧಿ ಪಡಿಸಿದ ಯೋಜನೆಯಲ್ಲಿ ಟವರ್ ಸಿ-೧ರಲ್ಲಿ ೧೧೦೧ನೆ ನಂಬರಿನ ಫ್ಲ್ಯಾಟ್ ಬುಕ್ ಮಾಡಿದ್ದರು. ಇದರ ಬೆಲೆ ೭೬,೪೫,೦೬೭ ರು.ಎಂದು ನಿಗದಿಯಾಗಿತ್ತು. ಫ್ಲ್ಯಾಟ್ ಹಂಚಿಕೆಯಾದ ದಿನದಿಂದ ೬ ತಿಂಗಳೊಳಗೆ ಇವರ ಸ್ವಾಧೀನಕ್ಕೆ ನೀಡಬೇಕಿತ್ತು. ಹಂಚಿಕೆಯಾಗಿದ್ದು ೩೧-೧-೨೦೧೨ರಂದು. ಆದರೆ ಫ್ಲ್ಯಾಟ್ ನಿರ್ಮಾಣವಾಗಲೇ ಇಲ್ಲ. ಅನಿಲ್ ೭೫,೨೭,೬೬೧ ರು. ಸಂದಾಯ ಮಾಡಿಬಿಟ್ಟಿದ್ದರು. ಕೊನೆಗೆ ಅವರು ೨೦೧೫ರಲ್ಲಿ ಗ್ರಾಹಕ ಆಯೋಗದ ಮೆಟ್ಟಿಲೇರಿದರು. ತಮಗೆ ತಾವು ನೀಡಿದ ಹಣವನ್ನು ಪರಿಹಾರದ ಸಹಿತ ಮರಳಿ ಕೊಡಿಸಬೇಕು ಎಂದು ಕೋರಿದರು. ರಾಕೇಶ್‌ಕುಮಾರ್ ಕೂಡ ಇದೇ ಯೋಜನೆಯಲ್ಲಿ ಟವರ್ ಸಿ-೨ರಲ್ಲಿ ೦೦೦೧ ನಂಬರಿನ ಫ್ಲ್ಯಾಟ್ ಬುಕ್ ಮಾಡಿದ್ದರು. ಇದರ ಬೆಲೆ ೭೮,೨೧,೩೬೯ ರು. ೨೪-೭-೨೦೧೨ರಂದು ಅವರಿಗೆ ಫ್ಲ್ಯಾಟ್ ಹಂಚಿಕೆ ಪತ್ರವನ್ನು ನೀಡಲಾಗಿತ್ತು. ಅವರು ೭೭,೮೪,೭೯೨ ರು. ಸಂದಾಯ ಮಾಡಿದ್ದರು. ಹೇಳಿದ ಅವಧಿಯೊಳಗೆ ಫ್ಲ್ಯಾಟ್ ನೀಡದೆ ಇದ್ದಾಗ ಅವರು ಕೂಡ ಗ್ರಾಹಕ ಆಯೋಗದ ಮೆಟ್ಟಿಲು ಏರಿದರು. ದೂರುದಾರರಿಗೆ ಫ್ಲ್ಯಾಟ್ ಹಂಚಿಕೆ ಪತ್ರ ನೀಡಿ ಮೂರು ವರ್ಷವಾದರೂ ಅದನ್ನು ಹಸ್ತಾಂತರ ಮಾಡಿಲ್ಲ ಹಾಗೂ ಅವರಿಂದ ಹಣವನ್ನು ಪಡೆದದ್ದು ನಿಜ ಎಂದು ಯುನಿಟೆಕ್ ಒಪ್ಪಿಕೊಂಡಿತು. ವಿಚಾರಣೆಯ ದಿನದ ವರೆಗೂ ಯಾವುದೇ ಫ್ಲ್ಯಾಟ್ ಪೂರ್ಣಗೊಂಡಿರಲಿಲ್ಲ. ಕೆಲವು ಟವರ್‌ಗಳು ಭಾಗಶಃ ನಿರ್ಮಾಣವಾಗಿದ್ದವು. ದೂರುದಾರರ ವಿರುದ್ಧ ಯುನಿಟೆಕ್ ತನ್ನ ಸಮರ್ಥನೆಗಾಗಿ ಮಂಡಿಸಿದ ವಾದಗಳನ್ನೆಲ್ಲ ರೆಸಿಡೆನ್ಸೀಸ್ ಫ್ಲ್ಯಾಟ್ ಬೈಯರ್ಸ್ ಅಸೋಸಿಯೇಶನ್ ವಿರುದ್ಧ ಮೆ.ಯುನಿಟೆಕ್ ಲಿ. ಪ್ರಕರಣದಲ್ಲಿ ಇದೇ ಆಯೋಗ ತಿರಸ್ಕರಿಸಿತ್ತು. ತನ್ನ ಅಳವಿಗೆ ನಿಲುಕದ ಸಂಗತಿಗಳಂದಾಗಿ ವಿಳಂಬವಾಗಿದೆ. ನೊಯ್ಡಾ ಮತ್ತು ಗ್ರೇಟರ್ ನೊಯ್ಡಾ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿದರು ಮತ್ತು ಯೋಜನೆಯ ವಿರುದ್ಧ ಅಲಹಾಬಾದ್ ಹೈಕೋರ್ಟ್‌ಗೆ ಹೋಗಿ ರಿಟ್ ಅರ್ಜಿ ಸಲ್ಲಿಸಿದರು ಎಂದು ಹೇಳಿತ್ತು. ಆದರೆ ಫ್ಲ್ಯಾಟ್‌ಗೆ ಹಣ ನೀಡಿದ ೪೩ ಜನರಿಗೆ ಅದನ್ನು ಹಸ್ತಾಂತರಿಸುವಲ್ಲಿ ವಿಳಂಬವಾಗಿದೆ ಎಂಬುದನ್ನು ಅದು ನಿರಾಕರಿಸಲಿಲ್ಲ. ದೊಡ್ಡ ಸಂಖ್ಯೆಯ ಗ್ರಾಹಕರ ದೂರಿನ ಪ್ರಕರಣದಲ್ಲಿ ವಾದಿಸಿದ್ದನ್ನೇ ಪ್ರಸ್ತುತ ಪ್ರಕರಣದಲ್ಲಿಯೂ ಯುನಿಟೆಕ್ ವಕೀಲರು ಮಂಡಿಸಿದರು. ಕಾರಣ ಅದನ್ನು ತಿರಸ್ಕರಿಸುವುದಕ್ಕೆ ಆಯೋಗಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ಹಿಂದೆ ಕಾರಣಗಳನ್ನು ನೀಡಿ ಮೂರು ವರ್ಷ ಗತಿಸಿದರೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಲ್ಲದೆ ಯಾವುದೇ ನಿರ್ದಿಷ್ಟ ಕಾಲಮಿತಿಯಲ್ಲಿ ಫ್ಲ್ಯಾಟ್ ನೀಡುತ್ತೇನೆ ಎಂದು ಹೇಳುವ ಸ್ಥಿತಿಯಲ್ಲೂ ಅವರಿಲ್ಲ. ಫ್ಲ್ಯಾಟ್ ಖರೀದಿದಾರರು ಮತ್ತು ಯುನಿಟೆಕ್ ನಡುವೆ ಏರ್ಪಟ್ಟ ಒಪ್ಪಂದದ ಕ್ಲಾಸ್ ೫ (ಡಿ) ಹೀಗೆ ಹೇಳುತ್ತದೆ: ಒಂದು ವೇಳೆ ಡೆವಲಪರ್ ಘೋಷಣೆ ಮಾಡಿದ ಅಪಾರ್ಟ್‌ಮೆಂಟಿನಲ್ಲಿ ಫ್ಲ್ಯಾಟ್‌ಗಳನ್ನು ನೀಡುವುದಕ್ಕೆ ವಿಫಲರಾದರೆ ಅವರು ಬೇರೊಂದು ಯೋಜನೆಯಲ್ಲಿ ನೀಡಬಹುದು ಅಥವಾ ಹಣ ನೀಡಿದವರಿಗೆ ಶೇ.೧೦ರ ವಾರ್ಷಿಕ ಬಡ್ಡಿಯ ಸಹಿತ ಹಣವನ್ನು ಮರಳಿಸಬೇಕು. ಈ ಷರತ್ತಿಗನುಗುಣವಾಗಿ ಅಸೋಸಿಯೇಶನ್ ಆಯೋಗದ ಮುಂದೆ ಎಲ್ಲ ೪೩ ಜನರಿಗೆ ಅವರವರ ಹಣವನ್ನು ಶೇ.೧೦ರ ಬಡ್ಡಿಯೊಂದಿಗೆ ಕೊಡಿಸಬೇಕು. ಅಲ್ಲದೆ ವ್ಯಾಜ್ಯದ ವೆಚ್ಚವೆಂದು ೨೫ ಸಾವಿರ ರು. ಕೊಡಿಸಬೇಕು ಎಂದು ಕೇಳಿತ್ತು. ಅದೇ ರೀತಿ ಆಯೋಗವು ೩ ತಿಂಗಳೊಳಗೆ ಯುನಿಟೆಕ್ ದೂರುದಾರರಿಗೆ ಹಣವನ್ನು ಮರಳಿಸಬೇಕು ಎಂದು ಆದೇಶಿಸಿತ್ತು. ಇದೇ ಮಾನದಂಡವನ್ನು ಅನುಸರಿಸಿ ಪ್ರಸ್ತುತ ಪ್ರಕರಣದಲ್ಲಿ ಯುನಿಟೆಕ್ ಅನಿಲ್ ಮೆಹ್ರೋತ್ರಾ ಮತ್ತು ರಾಕೇಶ್ ಕುಮಾರ್ ಅವರಿಗೆ ಅವರು ನೀಡಿದ ಹಣವನ್ನು ಶೇ.೧೦ರ ಬಡ್ಡಿಯೊಂದಿಗೆ ನೀಡಬೇಕು. ಈ ಆದೇಶ ಹೊರಬಿದ್ದ ಮೂರು ತಿಂಗಳೊಳಗಾಗಿ ಹಣ ಸಂದಾಯವಾಗಬೇಕು, ವ್ಯಾಜ್ಯದ ವೆಚ್ಚವೆಂದು ಇಬ್ಬರಿಗೂ ತಲಾ ೧೦ ಸಾವಿರ ರು. ನೀಡಬೇಕು ಎಂದು ಆದೇಶ ನೀಡಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು