ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು
ಬ್ಯಾಂಕಿನಲ್ಲಿ ನಿಮ್ಮ ಉಳಿತಾಯ ಖಾತೆ ಇರುತ್ತದೆ. ಆ ಖಾತೆಗೆ ನೀವು ಎಟಿಎಂ ಕಾರ್ಡ್ ಕೂಡ ಹೊಂದಿರುತ್ತೀರಿ. ಒಂದು ದಿನ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಖಾತೆಯಿಂದ ಯಾರೋ ಹಣವನ್ನು ತೆಗುದುಕೊಂಡು ಬಿಡುತ್ತಾರೆ. ನಿಮ್ಮ ಮೊಬೈಲಿಗೆ ಸಂದೇಶ ಬಂದ ಬಳಿಕವೇ ನಿಮಗೆ ವಂಚನೆಯಾಗಿರುವುದು ಗೊತ್ತಾಗುತ್ತದೆ. ಆಗ ನೀವು ಬ್ಯಾಂಕ್‌ಗೆ ಓಡುತ್ತೀರಿ. ದೂರು ನೀಡುತ್ತೀರಿ. ನೀವು ಕಳೆದುಕೊಂಡ ಹಣ ನಿಮಗೆ ಮರಳಿ ಸಿಗುತ್ತದೆಯೆ? ಬ್ಯಾಂಕ್‌ನವರು ಸುಲಭಕ್ಕೆ ನಿಮಗೆ ಹಣ ಕೊಡುತ್ತಾರೆಯೆ? ಕೊಡದಿದ್ದರೆ ನೀವು ಗ್ರಾಹಕ ವೇದಿಕೆಯಲ್ಲಿ ಪರಿಹಾರ ಕೋರಬಹುದು. ಇಲ್ಲಿ ಅಂಥದ್ದೊಂದು ಪ್ರಕರಣ ಇದೆ.
------
ಬೆಂಗಳೂರು ವಿವಿಯ ಕೋಲಾರದ ಕನ್ನಡ ಸ್ಟಡಿ ಸೆಂಟರ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ.ಡಿ.ಡಾಮಿನಿಕ್ ಎನ್ನುವವರು ಅಲ್ಲಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ೨೦೦೮ರಲ್ಲಿಯೇ ಉಳಿತಾಯ ಖಾತೆಯನ್ನು ತೆರೆದಿದ್ದರು. ಅವರ ಬಳಿ ಡೆಬಿಟ್ ಕಾರ್ಡ್ ಕೂಡ ಇತ್ತು. ಈ ಖಾತೆಯಲ್ಲಿಯೇ ಅವರ ಸಂಬಳದ ಹಣ ಜಮಾ ಆಗುತ್ತಿತ್ತು. ಇವರು ವಾಸ್ತವ್ಯ ಮಾಡುವುದು ಬೆಂಗಳೂರಿನಲ್ಲಿ. ಅವರು ಬೆಂಗಳೂರು ನಗರದಲ್ಲಿರುವ ಗ್ರಾಹಕ ವೇದಿಕೆಯಲ್ಲಿ ಗ್ರಾಹಕ ರಕ್ಷಣೆ ಕಾಯ್ದೆ ಸೆಕ್ಷನ್ ೧೨ರ ಅಡಿಯಲ್ಲಿ ಎಸ್‌ಬಿಎಂ ವಿರುದ್ಧ ದೂರೊಂದನ್ನು ದಾಖಲಿಸುತ್ತಾರೆ. ತಮಗೆ ಅರಿವಿಲ್ಲದೆ ತಮ್ಮ ಖಾತೆಯಿಂದ ತೆಗೆದಿರುವ ೮೦,೦೮೦ ರುಪಾಯಿಗಳನ್ನು ತಮಗೆ ಬಡ್ಡಿ ಸಹಿತ ಕೊಡಿಸಬೇಕು. ಬ್ಯಾಂಕಿನಿಂದ ಸೇವಾ ನ್ಯೂನತೆ ಆಗಿದೆ. ತಮಗಾಗಿರುವ ಮಾನಸಿಕ ಕಿರಿಕಿರಿಗೆ ೧೦ ಸಾವಿರ ರು.ಮತ್ತು ಇತರ ವೆಚ್ಚವನ್ನು ಕೊಡಿಸಬೇಕು ಎಂದು ಕೋರುತ್ತಾರೆ.
ಡಾ.ಡಾಮಿನಿಕ್ ಅವರ ಮೊಬೈಲಿಗೆ ೬-೨-೨೦೧೨ರಂದು ಬೆಳಿಗ್ಗೆ ೭-೦೨ಕ್ಕೆ ಎಂಟು ಸಂದೇಶಗಳು ಬರುತ್ತವೆ. ಆ ಸಂದೇಶಗಳ ಅರ್ಥ ಅವರ ಬ್ಯಾಂಕ್ ಖಾತೆಯಿಂದ ೮೦,೦೮೦ ರುಪಾಯಿ ಕಡಿತವಾಗಿದೆ ಎಂದು. ಇವರಿಗೆ ಅರಿವಿಲ್ಲದೆ, ಇವರು ಬೇರೆಯವರಿಗೆ ಹಣ ತೆಗೆಯುವ ಅಧಿಕಾರವನ್ನು ನೀಡದೆ ಇರುವಾಗ ಅಪರಿಚಿತರು ಯಾರೋ ಇವರ ಖಾತೆಯಿಂದ ಹಣ ತೆಗೆದಿದ್ದರು. ಆಘಾತಗೊಂಡ ಅವರು ತಕ್ಷಣವೇ ಬ್ಯಾಂಕ್‌ಗೆ ಇಂಟರ್‌ನೆಟ್ ಮೂಲಕ ದೂರನ್ನು ದಾಖಲಿಸಿದರು. ಅದೇ ದಿನ ಬ್ಯಾಂಕ್ ಶಾಖೆಗೂ ತೆರಳಿ ಮ್ಯಾನೇಜರ್‌ಗೆ ತಮ್ಮ ಖಾತೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಿದರು.
ಬ್ಯಾಂಕ್‌ನಿಂದ ಹಣವನ್ನು ಹಿಂದಕ್ಕೆ ಪಡೆದ ದಾಖಲೆಯ ಪ್ರತಿಯನ್ನು ಡಾಮಿನಿಕ್ ಪಡೆದುಕೊಂಡರು. ಅದರ ಪ್ರಕಾರ ೫-೨-೧೨ರ ರಾತ್ರಿ ೧೧-೪೬ ರಿಂದ ೧೧-೪೯ರ ನಡುವೆ ನಾಲ್ಕು ಬಾರಿ ತಲಾ ಹತ್ತು ಸಾವಿರದಂತೆ ೪೦ ಸಾವಿರ ರುಪಾಯಿ ಹಿಂದಕ್ಕೆ ಪಡೆದರೆ ೬-೨-೨೦೧೨ರ ೦೦-೧೧ ನಿಮಿಷದಿಂದ ೦೧-೧೧ರ ನಡುವೆ ನಾಲ್ಕು ಬಾರಿ ತಲಾ ಹತ್ತು ಸಾವಿರದಂತೆ ೪೦ ಸಾವಿರ ರು. ತೆಗೆಯಲಾಗಿತ್ತು. ಬ್ಯಾಂಕು ಹೆಚ್ಚುವರಿ ಹಣ ಹಿಂತೆಗೆತಕ್ಕೆ ೨೦ ರು.ನಂತೆ ನಾಲ್ಕು ಬಾರಿಗೆ ೮೦ ರು. ಶುಲ್ಕ ವಿಧಿಸಿತ್ತು. ಈ ಹಣವನ್ನು ಬೆಂಗಳೂರಿನ ಎಂ.ಜಿ. ರಸ್ತೆಯ ಇಂಡಿಯನ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಎಟಿಎಂನಿಂದ ತೆಗೆಯಲಾಗಿತ್ತು. ಡಾಮಿನಿಕ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ೭-೨-೨೦೧೨ರಂದು ಈ ಸಂಬಂಧ ದೂರು ನೀಡಿದರು. ಅಪರಿಚಿತರಿಂದ ನಡೆದ ಕೃತ್ಯವೆಂದು ಐಪಿಸಿ ಸೆಕ್ಷನ್ ೪೧೯ ಮತ್ತು ೪೨೦ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ೧೧-೬-೨೦೧೩ರಂದು ಪ್ರತಿವಾದಿ ಬ್ಯಾಂಕ್ ದೂರುದಾರ ಡಾಮಿನಿಕ್ ಅವರಿಗೆ ಪತ್ರವೊಂದನ್ನು ಬರೆದು ಹಣವನ್ನು ಮರಳಿಸುವ ಸಂಬಂಧದಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿತು. ಈಗಾಗಲೇ ಬ್ಯಾಂಕ್ ತನಿಖೆ ನಡೆಸಿದೆ ಮತ್ತು ಪೊಲೀಸರೂ ತನಿಖೆ ನಡೆಸುತ್ತಿದ್ದಾರೆ. ಇದುವರೆಗಿನ ಪತ್ತೇದಾರಿಯಿಂದ ನಕಲಿ ಕಾರ್ಡ್ ಬಳಸಿ ಹಣವನ್ನು ತೆಗೆಯಲಾಗಿದೆ ಎಂಬುದು ಸಾಬೀತಾಗಿಲ್ಲ. ಪೊಲೀಸರ ತನಿಖೆಯಿಂದ ಯಾವ ವರದಿ ಬರುತ್ತದೋ ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತು. ಡಾಮಿನಿಕ್ ಕಬ್ಬನ್‌ಪಾರ್ಕ್ ಪೊಲೀಸರಿಗೆ ಪತ್ರ ಬರೆದು ಈವರೆಗಿನ ತನಿಖೆಯ ವಿವರ ನೀಡುವಂತೆ ಕೋರಿದರು. ಪೊಲೀಸರು ತನಿಖೆಯ ವೇಳೆ ಈ ಪ್ರಕರಣದ ಸಂಬಂಧದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ೮ನೆ ಎಸಿಎಂಎಂ ಎದುರು ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಎಸ್‌ಬಿಎಂನ ಪ್ರಧಾನ ಕಚೇರಿಯಿಂದ ಶಿವರಾಮ ನಾಯಕ ಎನ್ನುವವರು ಪೊಲೀಸ್ ತನಿಖೆ ಯಾವ ಹಂತದಲ್ಲಿದೆ ಎಂದು ಕೇಳಿದ ಬಳಿಕ ದೂರುದಾರ ಡಾಮಿನಿಕ್ ಅವರು ಈ ವಿವರಗಳನ್ನು ಒದಗಿಸಿದರು. ಅಲ್ಲದೆ ೨೯-೩-೨೦೧೨ರಂದು ಕೂಡ ಅವರು ಬ್ಯಾಂಕ್ ಮ್ಯಾನೇಜರ್ ಅವರಿಗೆ ಪತ್ರ ಬರೆದು ತಮ್ಮ ಕಳೆದುಹೋಗಿರುವ ಹಣವನ್ನು ಮರಳಿ ಕೊಡುವಂತೆ ಕೋರಿದರು. ಇದಕ್ಕೆ ಪ್ರತಿಯಾಗಿ ಎಸ್‌ಬಿಎಂನ ಎಜಿಎಂ ೩-೪-೨೦೧೨ರಂದು ದೂರುದಾರರಿಗೆ ಪತ್ರವೊಂದನ್ನು ಬರೆದರು. ವಿಷಯವನ್ನು ಪ್ರಧಾನ ಕಚೇರಿಯ ಗಮನಕ್ಕೆ ತರಲಾಗಿದೆ. ಇಂಥ ಪ್ರಕರಣಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಆರ್‌ಬಿಐನಿಂದ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳಿಲ್ಲ ಎಂದು ತಿಳಿಸಿದರು. ದೂರುದಾರರು ೭-೫-೨೦೧೨ರಂದು ಎಸ್‌ಬಿಎಂನ ಡಿಜಿಎಂಗೆ ಒಂದು ಪತ್ರವನ್ನು ಬರೆಯುತ್ತಾರೆ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಬ್ಯಾಂಕ್‌ನ ಕೋಲಾರ್ ಶಾಖೆಯ ಎಜಿಎಂ ದೂರುದಾರರಿಗೆ ೨೦-೫-೨೦೧೨ರಂದು ಪತ್ರವೊಂದನ್ನು ಬರೆದು ಸ್ವಲ್ಪ ಕಾಲ ಕಾಯುವಂತೆ ತಿಳಿಸುತ್ತಾರೆ. ದೂರುದಾರರು ೧೦-೩-೨೦೧೩ರಂದು ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ದೂರು ನೀಡುತ್ತಾರೆ. ಅವರು ಪ್ರತಿವಾದಿ ಬ್ಯಾಂಕ್‌ಗೆ ಈ ವಿಷಯ ಇತ್ಯರ್ಥಪಡಿಸುವಂತೆ ತಿಳಿಸುತ್ತಾರೆ. ಆದರೆ ಎಸ್‌ಬಿಎಂ ಹಣ ಹಿಂತಿರುಗಿಸುವಲ್ಲಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತದೆ. ೨೬-೬-೨೦೧೩ರಂದು ಒಂಬುಡ್ಸ್‌ಮನ್ ದೂರುದಾರರಿಗೆ ಪತ್ರಬರೆದು, ಇದು ಒಂಬುಡ್ಸ್‌ಮನ್ ವ್ಯಾಪ್ತಿಗೆ ಬರುವುದಿಲ್ಲ. ನ್ಯಾಯಕ್ಕಾಗಿ ನೀವು ಬೇರೆ ಯಾವುದಾದರೂ ವೇದಿಕೆಗೆ ಹೋಗಿ ಎಂದು ತಿಳಿಸುತ್ತಾರೆ. ದೂರುದಾರರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಅಲೆದು ಸುಸ್ತಾದರು. ಕೊನೆಗೆ ಅವರು ಬೆಂಗಳೂರು ನಗರ ಜಿಲ್ಲೆಯ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ನೋಟಿಸಿನ ಬಳಿಕ ಪ್ರತಿವಾದಿ ಬ್ಯಾಂಕ್ ತನ್ನ ವಕೀಲರ ಮೂಲಕ ಎಲ್ಲ ಘಟನೆಯನ್ನು ವಿವರಿಸಿ ಪ್ರಮಾಣ ಪತ್ರ ಸಲ್ಲಿಸಿತು. ಈಗಾಗಲೆ ಪೊಲೀಸರು ಮೂವರನ್ನು ಬಂಧಿಸಿದ್ದು ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇಂಥ ಸಂದರ್ಭದಲ್ಲಿ ಹಣವನ್ನು ಮರಳಿಸುವ ಸಂಬಂಧದಲ್ಲಿ ಆರ್‌ಬಿಐನಿಂದ ಯಾವುದೇ ಮಾರ್ಗದರ್ಶಿ ಸೂತ್ರಗಳಿಲ್ಲ. ಅಲ್ಲದೇ ಹಣವನ್ನು ಹಿಂದಕ್ಕೆ ಪಡೆದಿರುವುದು ನಮ್ಮ ಬ್ಯಾಂಕಿನ ಎಟಿಎಂನಿಂದ ಅಲ್ಲ ಎಂದು ಹೇಳಿತು.
ಪ್ರತಿವಾದಿ ಬ್ಯಾಂಕ್ ಸಾರ್ವಜನಿಕ ಕ್ಷೇತ್ರದ್ದು, ಭಾರತ ಸರ್ಕಾರದ ಸ್ವಾಮಿತ್ವಕ್ಕೆ ಒಳಪಟ್ಟಿದ್ದು. ಸಾರ್ವಜನಿಕರು ಅದರ ಮೇಲೆ ವಿಶ್ವಾಸವಿಟ್ಟು ತಮ್ಮ ಹಣವನ್ನು ಅದರಲ್ಲಿಟ್ಟಿರುತ್ತಾರೆ. ಪ್ರಶ್ನೆಗೊಳಗಾಗಿರುವ ಹಿಂಪಡೆದ ಹಣವನ್ನು ತಾನು ಇಟ್ಟುಕೊಳ್ಳುವುದರಿಂದ ಅದರ ಶ್ರಿಮಂತಿಕೆಯೇನು ಹೆಚ್ಚುವುದಿಲ್ಲ. ಅವರ ಪಾಲಿನ ಯಾವುದೇ ನಿರ್ಲಕ್ಷ್ಯ ಅಥವಾ ಸೇವಾನ್ಯೂನತೆ ಇಲ್ಲದೆ ಅವರಿಗೆ ದಂಡ ವಿಧಿಸಲು ಬರುವುದಿಲ್ಲ. ಅಲ್ಲದೆ ಯಾವ ಎಟಿಎಂನಿಂದ ಹಣವನ್ನು ಹಿಂದಕ್ಕೆ ಪಡೆಯಲಾಗಿದೆಯೋ ಆ ಎರಡು ಬ್ಯಾಂಕ್‌ಗಳನ್ನು ಇದರಲ್ಲಿ ಪ್ರತಿವಾದಿ ಮಾಡದೆ ಇರುವುದರಿಂದ ದೂರನ್ನು ವಜಾಗೊಳಿಸಬೇಕು ಎಂದು ವಾದಿಸಿತು.
ಈಗ ವೇದಿಕೆಯು ಬ್ಯಾಂಕ್‌ನಿಂದ ಸೇವಾನ್ಯೂನತೆ ತಲೆದೋರಿರುವುದನ್ನು ದೂರುದಾರರು ಸಾಬೀತುಪಡಿಸಿದ್ದಾರೆಯೆ, ಹಾಗಿದ್ದರೆ ಏನು ಪರಿಹಾರ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಯಿತು. ವಾದಿ ಮತ್ತು ಪ್ರತಿವಾದಿಗಳು ಮಂಡಿಸಿದ ಪ್ರಮಾಣಪತ್ರ ಮತ್ತು ಖುದ್ದು ಹೇಳಿಕೆಗಳಿಂದ ವೇದಿಕೆಯು ಪ್ರತಿವಾದಿ ಬ್ಯಾಂಕ್‌ನಿಂದ ಸೇವಾನ್ಯೂನತೆ ತಲೆದೋರಿದೆ ಎಂಬ ನಿರ್ಣಯಕ್ಕೆ ಬಂತು. ಆರ್‌ಬಿಐನಿಂದ ಮಾರ್ಗಸೂಚಿ ಇಲ್ಲ ಎಂಬ ಕಾರಣ ನೀಡಿ ಬ್ಯಾಂಕ್ ಹಣ ನೀಡಿರಲಿಲ್ಲ. ಹಣ ಕಳೆದುಕೊಂಡಿರುವುದರಲ್ಲಿ ದೂರುದಾರರ ತಪ್ಪೇನೂ ಇಲ್ಲ. ಹಣ ತೆಗೆದ ಆರೋಪಿಯನ್ನು ಪೊಲೀಸರು ಬಂಧಿಸಿ ಆತನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಹೀಗಿರುವಾಗ ದೂರುದಾರರಿಗೆ ನಷ್ಟವನ್ನು ಹೊರಿಸುವುದು ಹೇಗೆ? ಇದು ಮೂರನೆ ವ್ಯಕ್ತಿಯ ಕೃತ್ಯ. ಬ್ಯಾಂಕ್‌ನಲ್ಲಿ ಹಣವನ್ನು ಇಡುವುದು ವಿಶ್ವಾಸದ ಮೇಲೆ. ಕಾರಣ ಬ್ಯಾಂಕ್ ಮಾತ್ರ ಈ ಹಣಕ್ಕೆ ಹೊಣೆ. ದೂರುದಾರರು ತಮ್ಮ ಪಿನ್ ನಂಬರ್ ಅಥವಾ ಒಟಿಪಿಯನ್ನು ಇತರರೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಇಲ್ಲ. ಆದರೆ ಬ್ಯಾಂಕ್ ಇಂದು ಆರ್‌ಬಿಐನ ಕೆಲವು ಮಾರ್ಗಸೂಚಿಗಳ ಪಟ್ಟಿಯನ್ನು ನೀಡಿದೆ.
ಅದರ ಪ್ರಕಾರ ಗ್ರಾಹಕನ ಶೂನ್ಯ ಬಾಧ್ಯತೆ ಯಾವಾಗ?
೧.ಬ್ಯಾಂಕಿನಿಂದಲೇ ಮೋಸ, ನಿರ್ಲಕ್ಷ್ಯ, ಸೇವಾನ್ಯೂನತೆ ತಲೆದೋರಿದಾಗ (ಇದನ್ನು ಗ್ರಾಹಕ ಬ್ಯಾಂಕಿನ ಗಮನಕ್ಕೆ ತಂದರೂ ಸರಿ ತರದಿದ್ದರೂ ಸರಿ).
೨.ಮೂರನೆ ವ್ಯಕ್ತಿ ಹಣ ಎತ್ತಿದ್ದರೆ, ದೋಷ ಬ್ಯಾಂಕಿನದೂ ಅಲ್ಲ ಗ್ರಾಹಕನದೂ ಅಲ್ಲ, ವ್ಯವಸ್ಥೆಯ ಇನ್ನೆಲ್ಲಿಯೋ ಇರುತ್ತದೆ. ಆಗ ಹಣ ಕಳೆದುಕೊಂಡ ಗ್ರಾಹಕ ಮೂರು ದಿನಗಳೊಳಗೆ ಬ್ಯಾಂಕಿಗೆ ತಿಳಿಸಬೇಕು ಮತ್ತು ಬ್ಯಾಂಕಿನಿಂದ ಪ್ರತಿಕ್ರಿಯೆ ಪಡೆದುಕೊಳ್ಳಬೇಕು.
ಆರ್‌ಬಿಐನ ಈ ಸುತ್ತೋಲೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದಲ್ಲಿ ಎಸ್‌ಬಿಎಂ ಗ್ರಾಹಕ ಡಾಮಿನಿಕ್ ಅವರಿಗೆ ೮೦೦೮೦ ರು.ಗಳನ್ನು ಶೇ.೯ರ ಬಡ್ಡಿಯೊಂದಿಗೆ (ಅವರ ಖಾತೆಯಿಂದ ಹಣ ಕಡಿತವಾದ ದಿನದಿಂದ ಸಂದಾಯ ಮಾಡುವ ದಿನದ ವರೆಗೆ) ನಾಲ್ಕು ವಾರಗಳೊಳಗೆ ನೀಡಬೇಕು. ಅವರಿಗೆ ಆಗಿರುವ ಮಾನಸಿಕ ಕಿರಿಕಿರಿಗೆ ೧೦ ಸಾವಿರ ರುಪಾಯಿ ಪರಿಹಾರ ನೀಡಬೇಕು ಎಂದು ೨೦೧೭ರ ಸೆ.೧ರಂದು ಆದೇಶ ನೀಡಿತು.
Comments
Post a Comment