ಕೈಬೆರಳಿಗೆ ಗ್ಯಾಂಗ್ರಿನ್ ಬರಲು ಕಾರಣನಾದ ವೈದ್ಯನಿಗೆ ೧ ಲಕ್ಷ ರು. ದಂಡ

ಉತ್ತರ ಪ್ರದೇಶದ ಶಹರಾನ್‌ಪುರ ಜಿಲ್ಲೆಯ ನಾಗಲ್ ಗ್ರಾಮದ ವಿಜೇಂದ್ರ ಕುಮಾರ್ ಸಾಹಲ್ ಎನ್ನುವವರಿಗೆ ವೃಷಣದಲ್ಲಿ ನೋವು ಕಾಣಿಸಿಕೊಂಡು ಕಿಶೋರ್‌ಭಾಗ್‌ದಲ್ಲಿಯ ಕೆ.ಕೆ. ಆಸ್ಪತ್ರೆಗೆ ತೋರಿಸಿಕೊಳ್ಳಲು ತೆರಳಿದರು. ಅವರು ಡಾ.ಕೆ.ಎಸ್. ವರ್ಮಾ ಅವರನ್ನು ೧೨-೧-೨೦೦೨ರಂದು ಭೆಟ್ಟಿಯಾದರು. ೫೦ ರು. ನೀಡಿ ರಸೀದಿಯನ್ನೂ ಪಡೆದರು. ವೃಷಣದಲ್ಲಿ ನೀರು ತುಂಬಿಕೊಂಡಿದೆ. ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಡಾ.ವರ್ಮಾ ಹೇಳಿದರು. ಇದಕ್ಕಾಗಿ ಅವರು ೧೬-೧-೨೦೦೨ರಂದು ಆಸ್ಪತ್ರೆಗೆ ದಾಖಲಾದರು. ಅದೇ ದಿನ ಶಸ್ತ್ರಚಿಕಿತ್ಸೆ ನಡೆಯಿತು. ಚಿಕಿತ್ಸೆಯ ಸಮಯದಲ್ಲಿ ವೈದ್ಯರು ನೋವುನಿವಾರಕ ಚುಚ್ಚುಮದ್ದು ಮತ್ತು ಗ್ಲುಕೋಸ್‌ಅನ್ನು ಸೂಜಿ ಮೂಲಕ ಎಡಗೈಗೆ ನೀಡದರು. ಅವರ ಕೈ ಊದಿಕೊಂಡಿತು. ಕೈಬೆರಳುಗಳು ನೀಲಿ ಬಣ್ಣಕ್ಕೆ ತಿರುಗಿದವು. ಶಸ್ತ್ರಚಿಕಿತ್ಸೆಯ ಬಳಿಕವೂ ವಿಜೇಂದ್ರಕುಮಾರ್‌ಗೆ ನೋವು ನಿಲ್ಲಲಿಲ್ಲ. ಇದಕ್ಕಾಗಿ ಅವರಿಗೆ ನೋವುನಿವಾರಕಗಳನ್ನು ನೀಡಲಾಯಿತು. ೨೦-೧-೨೦೦೨ರ ವರೆಗೂ ಅಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿಯಿತು. ೨೩-೧-೨೦೦೨ರಂದು ವಿಜೇಂದ್ರಕುಮಾರ್ ಡಾ.ಪ್ರವೀಣ್ ಜೈನ್ ಎಂಬ ಸರ್ಜನ್‌ರನ್ನು ಭೆಟ್ಟಿಮಾಡಿದರು. ಪರಿಶೀಲನೆ ಬಳಿಕ ರೋಗಿಯ ಕೈ ಬೆರಳುಗಳಿಗೆ ಗ್ಯಾಂಗ್ರಿನ್ ಆಗಿದ್ದು, ಪ್ರಾರಂಭಿಕ ಹಂತದಲ್ಲಿದೆ ಎಂದು ಗೊತ್ತಾಯಿತು. ೨೯-೧-೨೦೦೨ರ ವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ತೆರಳಲು ಅವರಿಗೆ ಸೂಚಿಸಲಾಯಿತು. ವಿಜೇಂದ್ರಕುಮಾರ್ ೫-೨-೨೦೦೨ರಂದು ಪಿಜಿಐ ಚಂಡೀಗಡಕ್ಕೆ ತೆರಳಿದರು. ಅಲ್ಲಿ ಪರಿಶೀಲನೆ ಮಾಡಿದಾಗ ಬೆರಳುಗಳಲ್ಲಿ ಊತ ಬಂದಿರುವುದಕ್ಕೆ ಅಪಧಮನಿಗೆ ಚುಚ್ಚುಮದ್ದು ಚುಚ್ಚಿರುವುದು ಕಾರಣ ಎಂದು ತಿಳಿಯಿತು. ಗ್ಯಾಂಗ್ರಿನ್ ಹಬ್ಬಿದ ಎಡಗೈನ ಎರಡು ಬೆರಳುಗಳನ್ನು ಕತ್ತರಿಸಲಾಯಿತು. ಈ ದುರಂತಕ್ಕೆ ಡಾ.ವರ್ಮಾ ಅವರ ನಿರ್ಲಕ್ಷ್ಯವೇ ಕಾರಣ ಎಂದು ವಿಜೇಂದ್ರಕುಮಾರ್ ಅವರು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿದರು. ತಮಗೆ ೪ ಲಕ್ಷ ರು. ಪರಿಹಾರ, ವ್ಯಾಜ್ಯದ ವೆಚ್ಚವೆಂದು ೨ ಸಾವಿರ ರು. ನೀಡಬೇಕು ಎಂದು ಕೋರಿದರು. ಲಿಖಿತ ಪ್ರಮಾಣಪತ್ರ ಸಲ್ಲಿಸಿದ ವೈದ್ಯರು, ತಾವು ಅಪಧಮನಿಗೆ ಚುಚ್ಚಿಲ್ಲ. ಚುಚ್ಚುವ ಮೊದಲು ಕೆನ್ನುಲಾ ಅಳವಡಿಸಿದ್ದೆವು. ಮೊಣಕೈಯ ಹಿಂಭಾಗದಲ್ಲಿ ಇದನ್ನು ಅಳವಡಿಸಿದ್ದೆವು. ಹೀಗಿರುವಾಗ ಅಪಧಮನಿಯಲ್ಲಿ ಚುಚ್ಚುವುದು ಸಾಧ್ಯವಾಗುವುದಿಲ್ಲ. ಊತವನ್ನು ಇಳಿಸಲು ರೋಗಿಗೆ ಸ್ನಾಯುಗಳಿಗೆ ಚುಚ್ಚುವ ಚುಚ್ಚುಮದ್ದನ್ನು ಅಂಡು ಮತ್ತು ತೋಳುಗಳಿಗೆ ನೀಡಿದ್ದೆವು. ರೋಗಿಯಿಂದ ೫೦ ರುಪಾಯಿ ಪಡೆದಿಲ್ಲ. ಶಸ್ತ್ರಚಿಕಿತ್ಸೆಯ ವೆಚ್ಚ ೭ ಸಾವಿರ ರು. ಪಡೆದಿಲ್ಲ. ಚುಚ್ಚುಮದ್ದಿನ ಮೂಲಕ ನೋವುನಿವಾರಕ ನೀಡಿಲ್ಲ. ಕೇವಲ ಔಷಧ ನೀಡಲಾಗಿತ್ತು. ಆಸ್ಪತ್ರೆಯಿಂದ ತೆರಳುವಾಗ ಅವರು ಚೆನ್ನಾಗಿಯೇ ಇದ್ದರು. ನಾಲ್ಕು ದಿನ ಬಿಟ್ಟು ಬರುವಂತೆ ಅವರಿಗೆ ತಿಳಿಸಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ವಾದಿಸಿದರು. ರೋಗಿಯ ಅಪಧಮನಿಯಲ್ಲಿ ಏನೋ ಅಡೆತಡೆ ಇದ್ದಕಾರಣ ಅದರಿಂದಲೇ ಗ್ಯಾಂಗ್ರಿನ್ ಆಗಿರಬಹುದು. ಚುಚ್ಚುಮದ್ದು ಮತ್ತು ನೋವುನಿವಾರಕಗಳಿಂದ ಆಗಿಲ್ಲ ಎಂದು ಹೇಳಿದರು. ಆದರೆ ಇದನ್ನು ಒಪ್ಪದ ಜಿಲ್ಲಾ ವೇದಿಕೆಯು ಡಾ.ವರ್ಮಾ ರೋಗಿಗೆ ೧ ಲಕ್ಷ ರು. ಪರಿಹಾರವನ್ನು ದೂರು ದಾಖಲಾದ ದಿನದಿಂದ ಶೇ.೯ರ ಬಡ್ಡಿಯೊಂದಿಗೆ ನೀಡಬೇಕು. ಜೊತೆಗೆ ವ್ಯಾಜ್ಯದ ವೆಚ್ಚವೆಂದು ೫ ಸಾವಿರ ರು. ನೀಡಬೇಕು. ಇದನ್ನು ಒಂದು ತಿಂಗಳೊಳಗೆ ನೀಡದಿದ್ದರೆ ಬಡ್ಡಿಯನ್ನು ಶೇ.೧೨ರಂತೆ ನೀಡಬೇಕು ಎಂದು ಆದೇಶಿಸಿತು. ಇದರ ವಿರುದ್ಧ ವೈದ್ಯರು ರಾಜ್ಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ರಾಜ್ಯ ಆಯೋಗ ಮೇಲ್ಮನವಿಯನ್ನು ಪುರಸ್ಕರಿಸಿತು. ಅಪಧಮನಿಯಲ್ಲಿ ಚುಚ್ಚಿದ್ದರಿಂದಲೇ ತನಗೆ ಗ್ಯಾಂಗ್ರಿನ್ ಉಂಟಾಗಿದೆ ಎಂದು ಸಾಬೀತುಪಡಿಸುವಲ್ಲಿ ರೋಗಿ ವಿಫಲರಾಗಿದ್ದಾರೆ ಎಂದು ಅದು ಹೇಳಿತು. ವೈದ್ಯರ ನಿರ್ಲಕ್ಷ್ಯವನ್ನು ಅದು ಅಲ್ಲಗಳೆಯಿತು. ರೆಸ್ ಇಸ್ಪಾ ಲೊಕ್ವಿಟುರ್ (ವಸ್ತುಸ್ಥಿತಿಯೇ ಎಲ್ಲವನ್ನೂ ಹೇಳುತ್ತದೆ) ಎಂಬ ವಾದವನ್ನು ಇಲ್ಲಿ ಅನ್ವಯಿಸಲು ಬರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿತು. ಇದರ ವಿರುದ್ಧ ವಿಜೇಂದ್ರಕುಮಾರ್ ಅವರು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ಅವರ ವಕೀಲರು ತಮ್ಮ ವಾದವನ್ನು ಮಂಡಿಸಿದರು. ಶಸ್ತ್ರಚಿಕಿತ್ಸೆಯ ಪೂರ್ವದಲ್ಲಿ ಎಡಗೈಯಲ್ಲಿ ಊತವಾಗಲಿ ನೋವಾಗಲೀ ಇರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರವೇ ಇದೆಲ್ಲ ಆಗಿರುವುದು. ಅರ್ಜಿದಾರರು ಆಸ್ಪತ್ರೆಗೆ ಸೇರಿದ್ದು ೧೬-೧-೨೦೦೨ರಂದು. ಅಲ್ಲಿಯೇ ಅವರು ೨೦-೧-೨೦೦೨ರ ವರೆಗೂ ಚಿಕಿತ್ಸೆ ಪಡೆದಿದ್ದರು. ಒಂದು ವೇಳೆ ಅವರಿಗೆ ಮೊದಲೇ ಗ್ಯಾಂಗ್ರಿನ್ ಇದ್ದಿದ್ದರೆ ಅದನ್ನು ವೈದ್ಯರು ತಮ್ಮ ಕೇಸ್ ಹಿಸ್ಟರಿಯಲ್ಲಿ ನಮೂದಿಸಬೇಕಿತ್ತವೆ? ನೋವು ಮತ್ತು ಊತಕ್ಕೆ ಕಾರಣವೇನೆಂದು ಕುಂಡುಹಿಡಿಯುವುದು ಚಿಕಿತ್ಸೆ ನೀಡುವ ವೈದ್ಯನ ಕರ್ತವ್ಯ. ತಪ್ಪಾಗಿ ಚುಚ್ಚುಮದ್ದು ಚುಚ್ಚಿದ್ದರಿಂದಲೇ ಊತ ಮತ್ತು ನೋವು ಬಂದಿದ್ದು. ಇದಕ್ಕಾಗಿಯೇ ನೋವುನಿವಾರಕಗಳಾದ ವೋವೆರಾನ್ ಮತ್ತು ಟ್ರಮೆಡೊಲ್ ನೀಡಿರುವುದು. ಈ ಹಿನ್ನೆಲೆಯಲ್ಲಿ ರೆಸ್ ಇಸ್ಪಾ ಲೊಕ್ವಿಟುರ್ ತತ್ವವನ್ನು ಇಲ್ಲಿ ಅನ್ವಯಿಸಬಹುದು. ಚಿಕಿತ್ಸೆ ನೀಡುತ್ತಿರುವ ವೈದ್ಯರು ನೋವಿನ ಮತ್ತು ಊತದ ಕಾರಣವನ್ನು ನಮೂದಿಸಿಲ್ಲವಲ್ಲ ಎಂದು ವಾದಿಸಿದರು. ವೈದ್ಯರ ಪರ ವಕೀಲರು, ದೂರುದಾರ ರೋಗಿಯು ಬರ್ಗರ್ಸ್ ಡಿಸೀಸ್‌ನಿಂದ ಬಳಲುತ್ತಿದ್ದರು. ಇದು ಚರ್ಮ ಮತ್ತು ಅಂಗಾಂಶದ ಸಾವಿಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಅವರಿಗೆ ಗ್ಯಾಂಗ್ರಿನ್ ಆಗಿರುವುದು. ಕೆಳ ವೇದಿಕೆಯಲ್ಲಿ ರೋಗಿಯು ಇದನ್ನು ಒಪ್ಪಿಕೊಂಡಿದ್ದಾರೆ. ಅಬಿಧಮನಿಯ ಬದಲಿಗೆ ಅಪಧಮನಿಯಲ್ಲಿ ಎಡಗೈಯ ಹಿಂಭಾಗದಲ್ಲಿ ಚುಚ್ಚುಮದ್ದು ಮತ್ತು ಗ್ಲುಕೋಸ್ ನೀಡಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಯನ್ನು ದೂರುದಾರ ರೋಗಿ ಸಿದ್ಧಪಡಿಸಿಲ್ಲ. ವೈದ್ಯರು ಸರಿಯಾಗಿಯೇ ಚುಚ್ಚುಮದ್ದು ನೀಡಿದ್ದಾರೆ ಎಂದು ವಾದಿಸಿದರು. ಅಲ್ಲದೆ ಸುಪ್ರೀಂ ಕೋರ್ಟ್ ಐ್ಞಜಿಚ್ಞ ಛಿಜ್ಚಿಚ್ಝ ಅಟ್ಚಜಿಠಿಜಿಟ್ಞ ್ಖ. ್ಖ.. ಖಚ್ಞಠಿ ಚ್ಞ ಣ್ಟ., ಅಐ್ಕ ೧೯೯೬ ಖಇ ೫೫೦ ಚ್ಞ ಒಚ್ಚಟಚಿ ಠಿಛಿಡಿ ್ಖ. ಖಠಿಠಿಛಿ ಟ್ಛ ಕ್ಠ್ಞೃ್ಜಚಿ ಚ್ಞ ಅ್ಞ್ಟ., (೨೦೦೫) ೬ ಖಇಇ ೧ ನೀಡಿದ ತೀರ್ಪನ್ನು ಉದಾಹರಿಸಿದರು. ಆಸ್ಪತ್ರೆಯ ದಾಖಲೆಗಳ ಪರಿಶೀಲನೆಯಲ್ಲಿ, ಊತ ಮತ್ತು ನೋವಿನ ವಿವರಗಳನ್ನು ನಮೂದಿಸರಲೇ ಇಲ್ಲ. ಅಲ್ಲದೆ ನಾಲ್ಕು ದಿನ ಬಿಟ್ಟು ಬರುವಂತೆಯೂ ಸೂಚಿಸಿರಲಿಲ್ಲ. ಹೀಗಾಗಿ ನಾವು ಬರಲು ಹೇಳಿದರೂ ರೋಗಿ ಬರಲಿಲ್ಲ ಎಂಬ ವೈದ್ಯರ ಪ್ರತಿಪಾದನೆ ಬಿದ್ದು ಹೋಯಿತು. ನಂತರ ಅವರು ಡಾ.ಪ್ರವೀಣ್ ಜೈನ್ ಅವರಲ್ಲಿ ತೋರಿಸಿಕೊಂಡರು. ಅಲ್ಲಿ ಅವರು ಗ್ಯಾಂಗ್ರೀನ್ ಲಕ್ಷಣ ಇದೆ ಎಂಬುದನ್ನು ನಮೂದಿಸಿ ಹೆಚ್ಚಿನ ಚಿಕಿತ್ಸೆಗೆ ಪಿಜಿಐ ಚಂಡೀಗಡಕ್ಕೆ ಕಳುಹಿಸಿದರು. ಅಲ್ಲಿ ರೋಗಿಯ ರೋಗದ ವಿವರ ಬರೆಯುವಾಗ ೧೬-೧-೨೦೦೨ರಂದು ಅರಿವಳಿಕೆಯನ್ನು ನೀಡುವಾಗ ಸರಿಯಾದ ರಕ್ತನಾಳಕ್ಕೆ ಚುಚ್ಚದೇ ಇದ್ದುದೇ ಗ್ಯಾಂಗ್ರಿನ್‌ಗೆ ಕಾರಣ ಎಂದು ನಮೂದಿಸಲಾಗಿತ್ತು. ಪ್ರತಿವಾದಿ ವೈದ್ಯರು ಬರ್ಗರ್ಸ್ ಡಿಸೀಸ್ ವಿಷಯವನ್ನು ಜಿಲ್ಲಾ ವೇದಿಕೆಯಲ್ಲಾಗಲಿ ರಾಜ್ಯ ಆಯೋಗದಲ್ಲಾಗಲಿ ಪ್ರಸ್ತಾಪಿಸದೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಆಯೋಗದಲ್ಲಿ ಪ್ರಸ್ತಾಪಿಸಿದ್ದರು. ರೋಗಿಗೆ ನಾಲ್ಕು ದಿನ ಬಿಟ್ಟು ಮತ್ತೊಮ್ಮೆ ತಪಾಸಣೆ ಬಾ ಎಂದೂ ಹೇಳಿರಲಿಲ್ಲ. ಇದನ್ನೆಲ್ಲ ಗಮನಿಸಿದಾಗ ವೈದ್ಯರು ಚಿಕಿತ್ಸೆ ನೀಡುವಾಗ ಕನಿಷ್ಠ ಕಾಳಜಿಯನ್ನೂ ಪೂರೈಸಿಲ್ಲ ಎಂಬುದು ವೇದ್ಯವಾಗುತ್ತದೆ. ಇದು ವೈದ್ಯಕೀಯ ನಿರ್ಲಕ್ಷ್ಯವೇ ಹೌದು. ಕಾರಣ ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿ ಹಿಡಿಯುವುದಾಗಿ ರಾಷ್ಟ್ರೀಯ ಆಯೋಗ ಹೇಳಿತು. ದೂರುದಾರ ರೋಗಿಗೆ ೧ ಲಕ್ಷ ಪರಿಹಾರ, ದೂರು ದಾಖಲಾದ ದಿನದಿಂದ ಅದಕ್ಕೆ ಶೇ.೯ರಂತೆ ಬಡ್ಡಿ, ವೆಚ್ಚವೆಂದು ೨೫ ಸಾವಿರ ರು. ನೀಡಬೇಕು. ನಾಲ್ಕು ವಾರಗಳೊಳಗೆ ಇದನ್ನು ನೀಡದೆ ಇದ್ದರೆ ಬಡ್ಡಿಯನ್ನು ಶೇ.೧೨ರಂತೆ ನೀಡಬೇಕು ಎಂದು ಆದೇಶಿಸಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ಗ್ರಾಹಕ ರಕ್ಷಣೆ ಒಂದು ಆಂದೋಲನ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ