ಕರಾರಿನಂತೆ ಸಾಲದ ಹಣ ಬಿಡುಗಡೆ ಮಾಡದ ಹಣಕಾಸು ಸಂಸ್ಥೆಗೆ ದಂಡ

ಬ್ಯಾಂಕು ಅಥವಾ ಹಣಕಾಸು ಸಂಸ್ಥೆಯೊಂದು ಸಾಲ ಕೊಡುವುದಾಗಿ ಒಪ್ಪಂದ ಮಾಡಿಕೊಂಡು ನಡುವೆಯೇ ನಿಲ್ಲಿಸಿಬಿಟ್ಟರೆ ನೀವು ಏನು ಮಾಡಬಲ್ಲಿರಿ? ಇಂಥ ಅಡನಾಡಿ ಹಣಕಾಸು ಸಂಸ್ಥೆಯ ಕಿಮಿ ಹಿಂಡುವವರು ಇಲ್ಲವೆ? ಇಂಥ ಸಂಸ್ಥೆಗಳ ವಿರುದ್ಧ ನೀವು ನ್ಯಾಯ ಕೇಳಿ ಗ್ರಾಹಕ ವೇದಿಕೆಯ ಮೊರೆಹೋಗಬಹುದು. ಹೀಗೆ ಗ್ರಾಹಕ ವೇದಿಕೆಯ ಮೊರೆಹೋಗಿ ನ್ಯಾಯ ಪಡೆದ ಒಂದು ಪ್ರಕರಣ ಇಲ್ಲಿದೆ. ಮಹಾರಾಷ್ಟ್ರದ ವರ್ಧಾ ಜಿಲ್ಲೆಯ ಸಮುದ್ರಪುರ ತಾಲೂಕಿ ಗಿರದ್‌ನ ನಿವಾಸಿ ನಿರ್ಭಯ ವಿನೋದ ಪಾಂಡೆ ಎಂಬವರು ತಮ್ಮ ಮನೆ ನಿರ್ಮಾಣಕ್ಕಾಗಿ ಮಹಿಂದ್ರಾ ಹೌಸಿಂಗ್ ರೂರಲ್ ಫೈನಾನ್ಸ್ ಲಿ.ನಿಂದ ಸಾಲ ಪಡೆಯಲು ಯೋಚಿಸಿದರು. ಇದಕ್ಕಾಗಿ ಅವರು ಈ ಫೈನಾನ್ಸ್‌ನ ಕಚೇರಿಗೆ ತೆರಳಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸುವ ಶುಲ್ಕವೆಂದು ೬,೫೦೦ ರು.ಗಳನ್ನು ೨೦೧೦ರ ಡಿಸೆಂಬರ್ ೧೦ರಂದು ತುಂಬಿದರು. ಇದಾದ ಬಳಿಕ ೨೦೧೧ರ ಫೆಬ್ರವರಿಯಲ್ಲಿ ಫೈನಾನ್ಸ್ ಸಂಸ್ಥೆ ಇವರಿಗೆ ೧ ಲಕ್ಷ ರು. ಸಾಲವನ್ನು ಮಂಜೂರು ಮಾಡಿತು. ಈ ಸಾಲಕ್ಕೆ ಸುರಕ್ಷತೆ ಉದ್ದೇಶದಿಂದ ೭-೩-೨೦೧೧ರಂದು ನಿರ್ಭಯ ಅವರ ತಂದೆಯ ಹೆಸರಿನಲ್ಲಿದ್ದ ಮನೆಯನ್ನು ಫೈನಾನ್ಸ್ ಸಂಸ್ಥೆಯು ಒತ್ತೆ ಮಾಡಿಕೊಂಡಿತು. ೧೬-೦೪-೨೦೧೧ರಂದು ಸಾಲದ ಮೊದಲ ಕಂತು ೨೭,೫೦೦ ರು.ಗಳನ್ನು ಬಿಡುಗಡೆ ಮಾಡಿತು. ಅಷ್ಟೊತ್ತಿಗೆ ನಿರ್ಭಯ ಪಾಂಡೆ ೫೦ ಸಾವಿರ ರು. ವೆಚ್ಚಮಾಡಿ ಮನೆಯ ಅಡಿಪಾಯದ ಕೆಲಸವನ್ನು ಮುಗಿಸಿದ್ದರು. ಬಳಿಕ ಇವರು ೩-೧೦-೨೦೧೧ರಂದು ೧,೨೦೦ ರು. ಬಡ್ಡಿಯನ್ನು ತುಂಬಿದ ಮೇಲೆ ೫-೧೦-೨೦೧೧ರಂದು ಎರಡನೆ ಕಂತು ೩೦,೦೦೦ ರು. ಬಿಡುಗಡೆ ಮಾಡಿದರು. ಜನವರಿ ೨೦೧೨ರಲ್ಲಿ ನಿರ್ಭಯ ಪಾಂಡೆ ೫ ಲಕ್ಷ ರುಪಾಯಿ ವೆಚ್ಚ ಮಾಡಿ ತಮ್ಮ ಮನೆಯನ್ನು ಪೂರ್ಣಗೊಳಿಸಿದರು. ಆದರೆ ಫೈನಾನ್ಸ್ ಸಂಸ್ಥೆಯು ಅವರಿಗೆ ಹಲವು ಬೇಡಿಕೆ ಸಲ್ಲಿಸಿದರೂ ಉಳಿದ ಮೊತ್ತ ೪೨,೫೦೦ ರು. ಬಿಡುಗಡೆ ಮಾಡಲೇ ಇಲ್ಲ. ತನ್ನ ಹಣದ ಅಗತ್ಯಕ್ಕಾಗಿ ಅವರು ಬೇರೆ ಮೂಲವನ್ನು ಆಶ್ರಯಿಸಬೇಕಾಯಿತು. ಉಳಿದ ಸಾಲದ ಕಂತು ಬಿಡುಗಡೆಗೆ ೨ ಸಾವಿರ ಬಡ್ಡಿ ತುಂಬಿ ಎಂದರು. ಇವರು ತುಂಬಿದರು. ಮತ್ತೆ ೩ ಸಾವಿರ ಬಡ್ಡಿ ತುಂಬಿ ಎಂದರು. ಇವರು ತುಂಬಿದರು. ಆದರೂ ಸಾಲದ ಕಂತು ತುಂಬಲೇ ಇಲ್ಲ. ಸಾಲದ ಉಳಿದ ಕಂತನ್ನು ಬಿಡುಗಡೆ ಮಾಡಿ ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದರು. ಮುಖ್ಯ ಕಚೇರಿಗೆ ೩೧-೦೯-೨೦೧೨ರಂದು ಪತ್ರ ಬರೆದರು. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ನೊದ ನಿರ್ಭಯ ಅವರು ಗ್ರಾಹಕ ವೇದಿಕೆಗೆ ದೂರು ನೀಡಲು ನಿರ್ಧರಿಸಿದರು. ತಮಗೆ ಮಂಜೂರಾಗಿರುವ ಸಾಲದ ಕಂತು ೪೨,೫೦೦ ರು. ಬಿಡುಗಡೆ ಮಾಡಬೇಕು, ಸಕಾಲಕ್ಕೆ ಸಾಲದ ಕಂತು ಬಿಡುಗಡೆ ಮಾಡದ್ದಕ್ಕೆ ಪರಿಹಾರವಾಗಿ ೫೦ ಸಾವಿರ ರು. ನೀಡಬೇಕು, ತಮಗಾದ ಮಾನಸಿಕ ಕಿರಿಕಿರಿಗೆ ೨೦ ಸಾವಿರ ರು. ನೀಡಬೇಕು ಮತ್ತು ವ್ಯಾಜ್ಯದ ವೆಚ್ಚವೆಂದು ೨ ಸಾವಿರ ರು. ನೀಡಬೇಕು ಎಂದು ಕೋರಿದರು. ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ಪ್ರತಿವಾದಿಯಾದ ಹಣಕಾಸು ಸಂಸ್ಥೆಯು ತನ್ನ ಸಮರ್ಥನೆಗೆ ಯಾವುದೇ ದಾಖಲೆ ಸಲ್ಲಿಸಲಿಲ್ಲ. ಅದರ ಅನುಪಸ್ಥಿತಿಯಲ್ಲಿ ಗ್ರಾಹಕ ವೇದಿಕೆ ೨೦-೩-೨೦೧೪ರಂದು ಈ ಕೆಳಗಿನ ಪರಿಹಾರಗಳನ್ನು ಪ್ರಕಟಿಸಿತು. ಪ್ರತಿವಾದಿ ಹಣಕಾಸು ಸಂಸ್ಥೆ ಹಣ ಬಿಡುಗಡೆ ಮಾಡದೆ ತಪ್ಪೆಸಗಿದೆ. ಅದು ತನ್ನ ಸಮರ್ಥನೆಗೆ ವೇದಿಕೆಯ ಎದುರು ಬಂದಿಲ್ಲ. ಅಂದರೆ ದೂರುದಾರರ ಆರೋಪಗಳನ್ನು ಅದು ಒಪ್ಪಿಕೊಂಡಂತೆ. ಕಾರಣ ಹಣಕಾಸು ಸಂಸ್ಥೆಯು ಸಾಲದ ಉಳಿದ ಮೊತ್ತ ೪೨,೫೦೦ ರು.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಆಗಿರುವ ಹಾನಿಗೆ ಪರಿಹಾರವೆಂದು ೨೫ ಸಾವಿರ ರು. ನೀಡಬೇಕು. ಮತ್ತು ವೇದಿಕೆಯಲ್ಲಿ ಅರ್ಜಿ ಸಲ್ಲಿಸಿದ ದಿನದಿಂದ ಶೇ.೧೦ರಂತೆ ಈ ಮೊತ್ತಕ್ಕೆ ಬಡ್ಡಿಯನ್ನು ನೀಡಬೇಕು. ದೂರುದಾರರಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಕ್ಲೇಶಕ್ಕಾಗಿ ೧೦ ಸಾವಿರ ರು. ಪರಿಹಾರ ಮತ್ತು ವ್ಯಾಜ್ಯದ ವೆಚ್ಚವೆಂದು ೨ ಸಾವಿರ ರು. ನೀಡಬೇಕು. ಈ ಆದೇಶ ತಲುಪಿದ ೧ ತಿಂಗಳೊಳಗೆ ಇದನ್ನು ನೀಡಬೇಕು. ಇಲ್ಲದಿದ್ದರೆ ಬಡ್ಡಿಯ ಪ್ರಮಾಣ ಶೇ.೧೦ರ ಬದಲಿಗೆ ೧೫ಕ್ಕೆ ಏರಿಕೆಯಾಗುತ್ತದೆ ಎಂದು ಆದೇಶಿಸಿತು. ಇರದ ವಿರುದ್ಧ ಹಣಕಾಸು ಸಂಸ್ಥೆಯು ರಾಜ್ಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಆದರೆ ಅಲ್ಲಿ ಅದು ತಾನು ಹೇಳಿಕೊಂಡಂತೆ ದೂರುದಾರರು ಸಾಲದ ೩ನೆ ಕಂತನ್ನು ಸ್ವೀಕರಿಸಲು ತಾವೇ ನಿರಾಕರಿಸಿದರು ಎಂಬುದನ್ನು ಸಮರ್ಥಿಸುವುದಕ್ಕೆ ಯಾವುದೇ ದಾಖಲೆ ತೋರಿಸಲಿಲ್ಲ. ಅಲ್ಲದೆ ಅವರು ಸಾಲದ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎನ್ನುವುದನ್ನೂ ಸಿದ್ಧಪಡಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಜಾ ಮಾಡಿ ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿ ಹಿಡಿಯಿತು. ಇದರ ವಿರುದ್ಧ ಹಣಕಾಸು ಸಂಸ್ಥೆಯು ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿಯನ್ನು ಸಲ್ಲಿಸಿತು. ಆದರೆ ರಾಜ್ಯ ಆಯೋಗದಲ್ಲಿ ಈ ಸಂಸ್ಥೆಗೆ ತನ್ನ ಪಕ್ಷವನ್ನು ಮಂಡಿಸುವುದಕ್ಕೆ ಅವಕಾಶವನ್ನು ನೀಡಲಾಗಿತ್ತು. ಆದರೆ ಅದು ಅದನ್ನು ಬಳಸಿಕೊಳ್ಳಲಿಲ್ಲ. ಈಗ, ಸಾಲದ ಕರಾರು ಇನ್ನೂ ಚಾಲ್ತಿಯಲ್ಲಿದೆ. ತಾನು ಸಾಲ ಬಿಡುಗಡೆ ಮಾಡುವುದಕ್ಕೆ ಸಿದ್ಧ ಎಂದು ಹೇಳುತ್ತಿದೆ. ಸಾಲಗಾರನು ೩ನೆ ಕಂತನ್ನು ಸ್ವೀಕರಿಸಲು ತಾನೇ ನಿರಾಕರಿಸಿದ ಎಂಬುದಕ್ಕೆ ಪುರಾವೆಯನ್ನು ನೀಡಿಲ್ಲ. ಈ ಹಂತದಲ್ಲಿ ಅದಕ್ಕೆ ಅವಕಾಶ ನೀಡುವುದೂ ಸರಿಯಲ್ಲ. ರಾಜ್ಯ ಆಯೋಗದ ತೀರ್ಪು ಸರಿ ಇದೆ ಎಂದು ಹೇಳಿ ಮೇಲ್ಮನವಿಯನ್ನು ವಜಾ ಮಾಡಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ಗ್ರಾಹಕ ರಕ್ಷಣೆ ಒಂದು ಆಂದೋಲನ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ