ಹಾನಿ ಅಂದಾಜಿಗೆ ವಿಮೆ ಪಡೆದವರೂ ಸರ್ವೇಯರ್ ನೇಮಿಸಬಹುದು
* ಈ ಸಂಬಂಧ 2015ರಲ್ಲಿ ಐಆರ್‌ಡಿಎ ಸುತ್ತೋಲೆ ಹೊರಡಿಸಿದೆ
ವಿಮೆ ಪರಿಹಾರ ನೀಡುವುದನ್ನು ತಪ್ಪಿಸಿಕೊಳ್ಳಲು ವಿಮೆ ಕಂಪನಿಗಳು ನಾನಾ ರೀತಿಯ ನೆಪಗಳನ್ನು ಮುಂದೊಡ್ಡುತ್ತವೆ. ಸರ್ವೇಯರ್ ನೇಮಕ ಮಾಡುವುದನ್ನು ವಿಳಂಬ ಮಾಡುತ್ತವೆ. ಆಗ ವಿಮೆ ಪಡೆದವರು ತಾವೇ ಸರ್ವೇಯರನನ್ನು ನೇಮಿಸಬಹುದೆ? ವಿಮೆ ಕಾನೂನು ಈ ಕುರಿತು ಏನು ಹೇಳುತ್ತದೆ? ರಾಷ್ಟ್ರೀಯ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿ ಮುಖಭಂಗ ಅನುಭವಿಸಿದ ನ್ಯೂ ಇಂಡಿಯಾ ಅಶ್ಯೂ್ರೆನ್ಸ್ ಕಂಪನಿಯ ಪ್ರಕರಣ ಇಲ್ಲಿದೆ.
ಇದು ನ್ಯೂ ಇಂಡಿಯಾ ಅಶ್ಯೂ್ರೆನ್ಸ್ ಕಂಪನಿ ಮತ್ತು ದೆಹಲಿಯ ಮೆ.ಡೆಮ್ಮ್ ಅಟೋ ಇಂಜಿನಿಯರಿಂಗ್ ವರ್ಕ್ಸ್ ನಡುವಿನ ವ್ಯಾಜ್ಯ. ಮೆ.ಡೆಮ್ಮ್ ಅಟೋ ಇಂಜಿನಿಯರಿಂಗ್ ವರ್ಕ್ಸ್ ಇವರು 12-10-2006ರಿಂದ 11-10-2007ರ ಅವಧಿಗೆ ಬೆಂಕಿ ಮತ್ತು ಇತರ
ಅನಾಹುತಗಳಿಂದ ಆಗುವ ಹಾನಿಯಿಂದ ರಕ್ಷಿಸಿಕೊಳ್ಳಲು 70 ಲಕ್ಷ ರುಪಾಯಿಗೆ ವಿಮೆಯನ್ನು ಪಡೆದುಕೊಂಡಿದ್ದರು. ಇದರ ವ್ಯಾಪ್ತಿಗೆ ಅವರ ಅಂಗಡಿಯಲ್ಲಿಯ ಎಲ್ಲ ಅಟೋ ಸಾಮಗ್ರಿಗಳ ಸಂಗ್ರಹ ಸೇರಿತ್ತು. ಅಂಗಡಿಯ ಸಾಮಾನುಗಳು ಪಂಜಾಬ್ ನ್ಯಾಶನಲ್ ಬ್ಯಾಂಕಿನ ಅಡಮಾನಕ್ಕೆ ಒಳಪಟ್ಟಿತ್ತು.
13-05-2007ರಂದು ರಾತ್ರಿ 9 ಗಂಟೆಗೆ ಈ ವಿಮೆಗೆ ಒಳಪಟ್ಟ ಅಂಗಡಿ ಇದ್ದ ಗುರುನಾನಕ
ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಬೆಂಕಿ ಅನಾಹುತ ಸಂಭವಿಸಿತು. ಅಗ್ನಿಶಾಮಕ ದಳದವರು ಆಗಮಿಸಿ ಹಲವು
ಗಂಟೆಗಳ ಕಾಲ ಶ್ರಮಿಸಿ ಬೆಂಕಿಯನ್ನು ನಂದಿಸಿದರು. ಪೊಲೀಸರಿಗೂ ಸುದ್ದಿ ತಿಳಿಸಲಾಗಿತ್ತು.
ಮಾಧ್ಯಮದವರೂ ಆಗಮಿಸಿದ್ದರು. ಬೆಂಕಿಯ ಬಿಸಿ ಮತ್ತು ಅದನ್ನು ನಂದಿಸಲು ಸುರಿಸಿದ ನೀರಿನಿಂದಾಗಿ
ಪ್ಯಾಕ್ ಮಾಡಿ ಇರಿಸಿದ್ದ ವಿಮೆಗೆ ಒಳಗಾಗಿದ್ದ ಸಾಮಾನುಗಳು ನಾಶವಾದವು. ಅಗ್ನಿಶಾಮಕ ದಳದವರು
ಬೆಂಕಿ ನಂದಿಸುವಾಗ ಮೊದಲ ಮಹಡಿಯಲ್ಲಿದ್ದ ಸಾಮಾನುಗಳನ್ನು ರಸ್ತೆಗೆ ಎಸೆದಿದ್ದರು. ಇದು ಬೇರೆ
ಅಂಗಡಿಯವರ ಸಾಮಾನಿನೊಂದಿಗೆ ಸೇರಿಬಿಟ್ಟಿತು. ಬೆಂಕಿ ಅನಾಹುತದ ಬಗ್ಗೆ ಮೆ.ಡೆಮ್ಮ್ ಅಟೋ
ಇಂಜಿನಿಯರಿಂಗ್ ವರ್ಕ್ಸ್‌ನವರು ವಿಮೆ ಕಂಪನಿಗೆ ದೂರವಾಣಿಯ ಮೂಲಕ ತಿಳಿಸಿದರು. ನಂತರ ಅವರು
ಮರುದಿನವೇ ವಿಮೆ ಹಣಕ್ಕೆ ಕೋರಿಕೆ ಸಲ್ಲಿಸಿದರು. ಅದೇ ದಿನ ಪಂಜಾಬ್ ನ್ಯಾಶನಲ್ ಬ್ಯಾಂಕ್
ಮೂಲಕವೂ ಕೋರಿಕೆ ಸಲ್ಲಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿ ಸುರಕ್ಷಿತವಾಗಿ ಇರಿಸಲು ಸ್ಥಳವಿಲ್ಲದ
ಕಾರಣ ಅಳಿದುಳಿದ ಸಾಮಾನುಗಳನ್ನು ಗುರಗಾಂವ್‌ಗೆ ಸಾಗಿಸಲಾಯಿತು. ಹೀಗೆ ಮಾಡುತ್ತಿರುವುದನ್ನು ವಿಮೆ
ಕಂಪನಿಗೆ ದೂರವಾಣಿ ಮೂಲಕ ತಿಳಿಸಲಾಗಿತ್ತು. ಅನಾಹುತ ಸಂಭವಿಸಿದ ಕೂಡಲೇ ಮಾಡಲಾದ ಹಾನಿಯ ಅಂದಾಜು
52,94,510 ರುಪಾಯಿಗೂ ಅಧಿಕ. ವಿಮೆಕಂಪನಿಯು ಮೆ.ಎಚ್‌ಆರ್ಸಿ ಅಸೋಸಿಯೇಟ್ಸ್‌ನವರನ್ನು ಹಾನಿ
ಅಂದಾಜು ಮಾಡಲು ನಿಯೋಜಿಸಿತು. ಅವರು 28-06-2007ರಂದು ಮಧ್ಯಂತರರ ವರದಿಯನ್ನು ಸಲ್ಲಿಸಿದರು.
ಸರ್ವೇಯರ್‌ಗೆ ಹಾನಿಗೊಳಗಾದ ಸಾಮಾನುಗಳನ್ನು ಗುರಗಾಂವ್‌ಗೆ ಸಾಗಿಸಿದ್ದನ್ನು ತಿಳಿಸಿ ಅವರನ್ನು
ಅಲ್ಲಿಗೂ ಕರೆದೊಯ್ಯಲಾಯಿತು. ಅವರು ಹಲವು ಬಾರಿ ಬಂದರು, ನೋಡಿದರು, ನೂರಾರು ಪೋಟೋಗಳನ್ನು
ತೆಗೆದರು. ಇಷ್ಟಾದರೂ ಅವರಿಂದ ಅಂತಿಮ ವರದಿಯನ್ನು ಸಲ್ಲಿಸುವುದು ಆಗಲಿಲ್ಲ. 20-09-2007ರಂದು
ಮೆ.ಡೆಮ್ಮ್ ಅಟೋ ಇಂಜಿನಿಯರಿಂಗ್ ವರ್ಕ್ಸ್‌ನವರು ಇನ್ಸುರೆನ್ಸ್ ರೆಗ್ಯುಲೇಟರಿ ಆ್ಯಂಡ್
ಡೆವಲಪ್‌ಮೆಂಟ್ ಅಥಾರಿಟಿ (ಐಆರ್‌ಡಿಎ)ಗೆ ಪತ್ರ ಬರೆದು ಅದರ ಒಂದು ಪ್ರತಿಯನ್ನು ವಿಮೆ ಕಂಪನಿಯ
ಜನರಲ್ ಮ್ಯಾನೇಜರ್‌ಗೆ ಕಳುಹಿಸುತ್ತಾರೆ. ಆಗ ವಿಮೆ ಕಂಪನಿಯು ತಾನು ಬೇರೊಬ್ಬ ಸರ್ವೇಯರ್
ಮೆ.ಎಸ್.ಎಸ್. ಶರ್ಮಾ ಆ್ಯಂಡ್ ಅಸೋಸಿಯೇಟ್ಸ್ ಅವರನ್ನು ಕಳುಹಿಸುತ್ತಿರುವುದಾಗಿ ತಿಳಿಸುತ್ತದೆ.
ಇವರು 22-12-2007ರಂದು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬೆಂಕಿ ಅನಾಹುತ ಸಂಭವಿಸಿದಾಗ
ಹಾನಿಗೊಳಗಾದ ವಸ್ತುಗಳು ವಿಮೆಗೆ ಒಳಪಟ್ಟ ಸ್ಥಳದ ಹೊರಗಿತ್ತು ಎಂಬುದನ್ನು ಕಂಡುಹಿಡಿಯುತ್ತಾರೆ.
ವಿಮೆ ಪಡೆದವರು ವಿಮೆ ಕಂಪನಿ ಅಥವಾ ಸರ್ವೇಯರ್‌ಗೆ ತಿಳಿಸದೆಯೇ ಹಾನಿಗೊಳಗಾದ ವಸ್ತುಗಳನ್ನು
ತೆಗೆದುಹಾಕಿದ್ದಾರೆ. ಕಾರಣ ಪಾಲಿಸಿಯ ಅಡಿಯಲ್ಲಿ ಹಾನಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು
ತಿಳಿಸಿದರು. ಹಾನಿಗೊಳಗಾದ ವಸ್ತುಗಳು ವಿಮೆಗೆ ಒಳಪಟ್ಟ ಸ್ಥಳದಿಂದ ಹೊರಗೆ ಇದ್ದುದರಿಂದ ವಿಮೆ
ಪರಿಹಾರ ನೀಡಲು ಬರುವುದಿಲ್ಲ ಎಂದು ವಿಮೆ ಕಂಪನಿಯು 17-03-20008ರಂದು ತಿಳಿಸಿತು. ಮೆ.ಡೆಮ್ಮ್
ಅಟೋ ಇಂಜಿನಿಯರಿಂಗ್ ವರ್ಕ್ಸ್ ಇವರು ಮತ್ತೆ ಎರಡು ಬಾರಿ ವಿಮೆ ಕಂಪನಿಗೆ ಪತ್ರ ಬರೆದು
ಮರುಪರಿಶೀಲಿಸುವಂತೆ ಕೋರುತ್ತಾರೆ. ಎಲ್ಲವೂ ವ್ಯರ್ಥ. ಆಗ ಅವರು ತಾವೇ ಮೆ. ಕೇಜ್ರಿವಾಲ್ ಆ್ಯಂಡ್
ಕೋ. ಎಂಬ ಕಂಪನಿಯನ್ನು ಸರ್ವೆಗೆ ನೇಮಿಸುತ್ತಾರೆ. ಅವರು ಹಾನಿಯನ್ನು 34,52,596 ರುಪಾಯಿ ಎಂದು
ಅಂದಾಜು ಮಾಡುತ್ತಾರೆ. ಇದಾದ ಬಳಿಕ ಮೆ.ಡೆಮ್ಮ್ ಅಟೋ ಇಂಜಿನಿಯರಿಂಗ್ ವರ್ಕ್ಸ್‌ನವರು ರಾಜ್ಯ
ಗ್ರಾಹಕ ಆಯೋಗದಲ್ಲಿ ವಿಮೆ ಕಂಪನಿ ಸೇವಾನ್ಯೂನತೆ ತೋರಿಸಿದೆ ಎಂದು ಆರೋಪಿಸಿ ದೂರನ್ನು
ಸಲ್ಲಿಸುತ್ತಾರೆ. ಮತ್ತು ಈ ಮುಂದಿನ ಪರಿಹಾರಗಳನ್ನು ಕೋರುತ್ತಾರೆ. ವಿಮೆ ಕಂಪನಿ ತಮಗೆ 52,94,510
ರುಪಾಯಿ ಆಗಿರುವ ಹಾನಿಗೆ ಪರಿಹಾರ ನೀಡಬೇಕು, ತಾವು ನೇಮಿಸಿದ ಸರ್ವೇಯಯರ್ ಶುಲ್ಕ 56,536 ರುಪಾಯಿ
ನೀಡಬೇಕು, ದೂರು ನೀಡಿದ ದಿನದಿಂದ ಈ ಮೊತ್ತಕ್ಕೆ ಶೇ.18ರಂತತೆ ಬಡ್ಡಿಯನ್ನು ನೀಡಬೇಕು, ವ್ಯಾಜ್ಯದ
ವೆಚ್ಚವೆಂದು 1 ಲಕ್ಷ ರುಪಾಯಿ ಮತ್ತು ತಮಗಾಗಿರುವ ಕಿರುಕುಳಕ್ಕೆ 22 ಲಕ್ಷ ರು. ಹಾಗೂ ಆಯೋಗಕ್ಕೆ
ಸೂಕ್ತಕಂಡ ಇತರ ಪರಿಹಾರಗಳನ್ನು ಕೊಡಿಸಬೇಕು ಎಂದು ಕೋರಿದರು. ಇದಕ್ಕೆ ಆಕ್ಷೇಪ ವ್ಕಕ್ತಪಡಿಸಿದ
ವಿಮೆ ಕಂಪನಿ ತನ್ನ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿತು. ವಿಮೆಗೆ ಒಳಪಟ್ಟ ಜಾಗವನ್ನು
ಕೇವಲ ಆಫೀಸಿಗಾಗಿ ಬಳಸಲಾಗುತ್ತಿತ್ತು. ಬೆಂಕಿಯಿಂದ ಇದಕ್ಕೆ ಹೇಳಿಕೊಳ್ಳುವಂಥ ಹಾನಿಯಾಗಿಲ್ಲ.
ಕೆಲವು ಕಟ್ಟಿಗೆ ಸಾಮಾನುಗಳು, ಕೆಲವು ಫೈಲುಗಳ ಹೊರಗಿನ ಕವರು ಸುಟ್ಟುಹೋಗಿವೆ. ವಿಮೆ ಪಡೆದವರು
ಸರ್ವೇಯರಗೆ ಅಗತ್ಯ ದಾಖಲೆಗಳನ್ನು ನೀಡುವುದಕ್ಕೆ ವಿಫಲರಾಗಿದ್ದಾರೆ. ಯಾವ ಸಾಮಾನುಗಳು ಸುಟ್ಟು
ಹೋಗಿವೆ ಎಂದು ಹೇಳುತ್ತಿದ್ದಾರೋ ಅದನ್ನು ವಿಮೆಗೆ ಒಳಪಟ್ಟ ಕಟ್ಟಡದ ಹೊರ ಬಾಗದಲ್ಲಿ ಇಟ್ಟವು.
ಅದಕ್ಕೆ ವಿಮೆ ಪರಿಹಾರ ಕೊಡಲು ಬರುವುದಿಲ್ಲ. ಮತ್ತು ಗುರಗಾಂವದಲ್ಲಿ ಇದೆ ಎನ್ನಲಾದ ಸುಟ್ಟ
ವಸ್ತುಗಳನ್ನು ನೋಡುವುದಕ್ಕೆ ಸರ್ವೇಯರಗೆ ಅವಕಾಶ ನೀಡಲಿಲ್ಲ. ತಮ್ಮಿಂದ ಸೇವಾನ್ಯೂನತೆ ಆಗಿದೆ
ಎಂಬುದು ಸುಳ್ಳು. ನಾವು ತನಿಖೆಗಾಗಿ ಶ್ರೀ ಸ್ವಾಮಿ ಸರಣ್ ಎಂಬವರನ್ನು ಕಳುಹಿಸಿದ್ದೆವು. ಅವರು
07-01-2008ರಂದು ನೀಡಿದ ವರದಿಯಲ್ಲಿ ವಿಮೆಗೆ ಒಳಗಾದ ಪ್ರದೇಶವು ವಿಮೆ ಪಾಲಿಸಿಯ ಪರಿಹಾರಕ್ಕೆ
ಒಳಪಡುವುದದಿಲ್ಲ. ಅಂದರೆ ಅದರಲ್ಲಿಯ ವಸ್ತುಗಳಿಗೆ ಮಾತ್ರ ಪರಿಹಾರ ನೀಡಬಹುದು ಎಂದು
ತಿಳಿಸಿದ್ದಾರೆ. ಅದರ ಪ್ರಕಾರ ನಾವು ವಿಮೆ ನೀಡಲು ಬರುವುದಿಲ್ಲ ಎಂದು 01-03-2008ರಂದು
ತಿಳಿಸಿದ್ದೇವೆ ಎಂದು ವಿವರಿಸಿತು. ವಾದ ಪ್ರತಿವಾದಗಳನ್ನು ಪರಿಶೀಲಿಸಿದ ರಾಜ್ಯ ಆಯೋಗವು
02-07-2014ರಂದು ನೀಡಿದ ಆದೇಶದಲ್ಲಿ ದೂರನ್ನು ಭಾಗಶಃ ಪುರಸ್ಕರಿಸಿತು. ಮತ್ತು ಈ ಮುಂದಿನ
ಪರಿಹಾರಗಳನ್ನು ಪ್ರಕಟಿಸಿತು. ವಿಮೆ ಕಂಪನಿಯು 19,86,479 ರು.ಗಳನ್ನು ಪರಿಹಾರವಾಗಿ ನೀಡಬೇಕು
ಮತ್ತು ಇದಕ್ಕೆ ದೂರು ದಾಖಲಾದ ದಿನದಿಂದ ಶೇ.9ರಂತೆ ಬಡ್ಡಿಯನ್ನು ನೀಡಬೇಕು. ಅಲ್ಲದೆ ದೂರುದಾರರು
ನೇಮಕ ಮಾಡಿದ ಸರ್ವೇಯರ್ ಮೆ.ಕೇಜ್ರಿವಾಲ್ ಮತ್ತು. ಕಂ.ಗೆ 56,536 ರು.ಗಳನ್ನು ನೀಡಬೇಕು.
ದೂರುದಾರರಿಗೆ ಆಗಿರುವ ಮಾನಸಿಕ ಕಿರಿಕಿರಿಗೆ 50 ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚ 20 ಸಾವಿರ
ರು. ಒಂದು ತಿಂಗಳೊಳಗೆ ನೀಡಬೇಕು ಎಂದು ಆದೇಶಿಸಿತು. ವಿಮೆ ಪರಿಹಾರ ನಿರಾಕರಣೆಯು
ತಪ್ಪುಕಲ್ಪನೆಯಿಂದ ಕೂಡಿದ್ದು, ವಾಸ್ತವಾಂಶಗಳಿಗೆ ಹೊರತಾದುದು, ದುರುದ್ದೇಶಪೂರಿತವಾದುದು. ಇಲ್ಲಿ
ಸಂಪೂರ್ಣ ಸೇವಾನ್ಯೂನತೆ ತಲೆದೋರಿದೆ ಎಂದೂ ಹೇಳಿತು. ಇದನ್ನು ಪ್ರಶ್ನಿಸಿ ವಿಮೆ ಕಂಪನಿಯು
ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ರಾಜ್ಯ ಆಯೋಗದ ತೀರ್ಪು ಭಾರತೀಯ
ವಿಮೆ ಕಾಯ್ದೆ 1938ಕ್ಕೆ ವಿರುದ್ಧವಾಗಿದೆ ಎಂಬುದು ಅದರ ವಾದವಾಗಿತ್ತು. ವಿಮೆ ಕಂಪನಿಯ ಪ್ರಕಾರ
ವಿಮೆ ಪಡೆದ ಕಂಪನಿ ಗ್ರಾಹಕ ಕಾಯ್ದೆಯ ಪ್ರಕಾರ ಗ್ರಾಹಕ ಅಲ್ಲ. ಅಲ್ಲದೆ ಇದರಲ್ಲಿ ಪಂಜಾಬ್
ನ್ಯಾಶನಲ್ ಬ್ಯಾಂಕನ್ನು ಒಂದು ಪಕ್ಷವನ್ನಾಗಿ ಸೇರಿಸಬೇಕಿತ್ತು. ಅದನ್ನೂ ಮಾಡಿಲ್ಲ. ಈ ಕಾರಣಕ್ಕೂ
ದೂರನ್ನು ವಜಾ ಮಾಡಬಹುದು. ಸರ್ವೆ ಮತ್ತು ತನಿಖಾಧಿಕಾರಿಯ ವರದಿಯ ಬಳಿಕ, ವಿಮೆಯನ್ನು ಹೊಂದಿದ
ಅಂಗಡಿ ನಂ. 50ರೊಳಗೆ ಹಾನಿಗೊಳಗಾದ ಸಾಮಾನುಗಳನ್ನು ಇಟ್ಟಿರಲಿಲ್ಲ. ಅದನ್ನು ವರಾಂಡದಲ್ಲಿ
ಇರಿಸಲಾಗಿತ್ತು. ಅದು ಜನರು ತಿರುಗಾಡುವ ರಸ್ತೆಯಾಗಿತ್ತು. ಅಲ್ಲಿಟ್ಟ ವಸ್ತುವಿಗೆ ಪರಿಹಾರ ನೀಡಲು
ಬರುವುದದಿಲ್ಲ. ಕಾರಣ ದೂರನ್ನು ವಜಾಗೊಳಿಸಬೇಕು ಎಂದು ಕೋರಿತು. ಇದಕ್ಕೆ ಉತ್ತರ ನೀಡಿದ ಮೂಲ
ದಾವೆದಾರರು, ವಿಮೆ ಕಪನಿಯು ನೇಮಿಸಿದ ಸರರ್ವೇಯರ್ ವರದಿಯನ್ನೇ ನೀಡಲಿಲ್ಲ. ಅದಾದ ಬಳಿಕ ಏಳು
ತಿಂಗಳ ನಂತರ ಅದು ಇನ್ನೊಬ್ಬ ಸರ್ವೇಯರನ್ನು ನೇಮಿಸಿತು. ಅದು ತನಗೆ ಬೇಕಾದಂತೆ ವರದಿಯನ್ನು
ಪಡೆದುಕೊಳ್ಳಲು. ಈ ಕಾರಣಕ್ಕೆ ನಾವು ಮೆ.ಕೇಜ್ರಿವಾಲ್ ಮತ್ತು ಕಂ.ಯನ್ನು ಸರ್ವೆಗೆ
ನೇಮಿಸಬೇಕಾಯಿತು. ಹಾನಿಗೊಳಗಾದ ವಸ್ತುಗಳು ಕಳ್ಳತನವಾಗಬಾರದು ಎಂಬ ಉದ್ದೇಶದಿಂದ ಅದನ್ನು
ಗುರಗಾಂವ್‌ಗೆ ಸಾಗಿಸಿದ್ದು. ಅದನ್ನು ವಿಮೆ ಕಂಪನಿಗೆ ತಿಳಿಸಲಾಗಿತ್ತು. ಮತ್ತು ಹಾನಿಗೊಳಗಾದ
ಕೆಲವು ವಸ್ತುಗಳನ್ನು ಬೇರೆಬೇರೆ ಸ್ಥಳಗಳಿಗೆ ಕಳುಹಿಸುವ ಉದ್ದೇಶದಿಂದ ವರಾಂಡದಲ್ಲಿ
ಇರಿಸಲಾಗಿತ್ತು. ರಾಜ್ಯ ಆಯೋಗ ನೀಡಿದ ತೀರ್ಪು ಸರಿಯಾಗಿಯೇ ಇದೆ. ಕಾರಣ ಮೇಲ್ಮನವಿಯನ್ನು ವಜಾ
ಮಾಡಬೇಕು ಎಂದು ಕೋರಿದರು. ದೂರುದಾರರು ಗ್ರಾಹಕರೇ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಯಾವುದೇ
ಆಧಾರಗಳನ್ನು ನೀಡಿಲ್ಲ. ಗ್ರಾಹಕ ಮತ್ತು ಸೇವೆಯ ಪೂರೈಕೆದಾರ ಎಂಬ ಸಂಬಂಧವಂತೂ ಇದ್ದೇ ಇದೆ.
ಪಂಜಾಬ್ ನ್ಯಾಶನಲ್ ಬ್ಯಾಂಕನ್ನು ಒಂದು ಪಕ್ಷವನ್ನಾಗಿ ಸೇರಿಸಿಲ್ಲ ಎಂಬುದರಿಂದ ಆಗಿರುವ ನ್ಯೂನತೆ
ಏನು ಎಂಬುದನ್ನೂ ಮಂಡಿಸಿಲ್ಲ. ಕಾರಣ ಈ ಆಕ್ಷೇಪಗಳನ್ನು ತಳ್ಳಿಹಾಕಲಾಗುವುದು. ಅಗ್ನಿ ಅನಾಹುತ
ಸಂಭವಿಸಿದ್ದು ನಿಜ. ಆ ಸಮಯದಲ್ಲಿ ಅಗ್ನಿಶಾಮಕದಳದವರು ಮಾಳಿಗೆಯ ಮೇಲಿದ್ದ ವಸ್ತುಗಳನ್ನು ರಸ್ತೆಗೆ
ಚೆಲ್ಲಿದ್ದನ್ನು ವಿಮೆ ಕಂಪನಿ ಅಲ್ಲಗಳೆದಿಲ್ಲ. ಅಲ್ಲದೆ ಅದನ್ನು ಗುರಗಾಂವ್‌ಗೆ
ಸಾಗಿಸುತ್ತಿದ್ದುದನ್ನು ದೂರವಾಣಿ ಮೂಲಕ ತಿಳಿಸಿದ್ದನ್ನೂ ಅಲ್ಲಗಳೆದಿಲ್ಲ. ವಿಮೆ ಪಡೆದುಕೊಂಡವರು
ತಾವೇ ಸರ್ವೆಯರನ್ನು ನೇಮಿಸಿದ್ದು 1938ರ ವಿಮೆ ಕಾಯ್ದೆಯ ಪ್ರಕಾರ ತಪ್ಪು ಎನ್ನುವುದು ಅವರ ವಾದ.
ಆದರೆ 2015ರ ಜುಲೈ 14ರಂದು ಐಆರ್‌ಡಿಎ ಹೊರಡಿಸಿದ ಸುತ್ತೋಲೆಯ ಪ್ರಕಾರ, 20 ಸಾವಿರಕ್ಕಿಂತ ಅಧಿಕ
ಹಾನಿಯ ಪರಿಹಾರ ಕೋರಿದಾಗ ಘಟನೆ ನಡೆದ ಸುದ್ದಿ ತಿಳಿದ 72 ಗಂಟೆಯೊಳಗೆ ವಿಮೆ ಕಂಪನಿ ಸರ್ವೆಯರ್
ಅಥವಾ ಹಾನಿ ಅಂದಾಜು ಮಾಡುವವರನ್ನು ನೇಮಿಸಬೇಕು. ಇದನ್ನು ವಿಮೆ ಕಂಪನಿಯೂ ಮಾಡಬಹುದು, ವಿಮೆ
ಪಡೆದವರೂ ಮಾಡಬಹುದು ಎಂದು ಹೇಳುತ್ತದೆ. ಈ ಸುತ್ತೋಲೆಯ ಪ್ರಕಾರ ವಿಮೆ ಪಡೆದವರೂ ಸರ್ವೇಯರ್‌ಅನ್ನು
ನೇಮಿಸಬಹುದು ಎಂಬುದು ಸ್ಪಷ್ಟವಾಗಿದೆ. ಕಾರಣ ವಿಮೆ ಪಡೆದವರು ಸರ್ವೇಯರ್ ನೇಮಿಸಬಾರದು ಎಂಬ ವಿಮೆ
ಕಂಪನಿಯ ವಾದ ಬಿದ್ದುಹೋಗುತ್ತದೆ. ಈ ಸರ್ವೇಯರ್ ಹಾನಿಗೊಳಗಾದ ವಸ್ತುವನ್ನು ನೋಡಿ ಹಾನಿ ಅಂದಾಜು
ಮಾಡುವುದು ಕಷ್ಟವೆಂದು ಅಭಿಪ್ರಾಯ ಪಟ್ಟು ಲೆಕ್ಕದ ಪುಸ್ತಕದ ಆಧಾರದಲ್ಲಿ ಹಾನಿಯನ್ನು ಅಂದಾಜು
ಮಾಡಿದ್ದಾರೆ. ಅವರು ಹಾನಿಯನ್ನು 19,86,489 ರು. ಎಂದು ಹೇಳಿದ್ದಾರೆ. ರಾಜ್ಯ ಆಯೋಗ ನೀಡಿರುವ
ತೀರ್ಪು ಸರಿಯಾಗಿಯೇ ಇದೆ. ಕಾರಣ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು. ತೀರ್ಪು- 04 Jan
2022
Comments
Post a Comment