ಸರ್ವಿಸ್‌ಸೆಂಟರ್‌ನವನಿಗೆ ಬಿಸಿ ಮುಟ್ಟಿಸಿದ ಮೈಕ್ರೋವೇವ್ ಓವನ್ ವ್ಯಾಜ್ಯ

ಮೈಕ್ರೋವೇವ್ ಓವನ್ ಕೆಟ್ಟುಹೋದಾಗ ಅದನ್ನು ಸರ್ವಿಸ್ ಸೆಂಟರ್‌ನವರು ದುರಸ್ತಿಮಾಡಿಕೊಡಲಿಲ್ಲವೆಂದು ಗ್ರಾಹಕರೊಬ್ಬರು ನ್ಯಾಯ ಕೇಳಿ ರಾಷ್ಟ್ರೀಯ ಗ್ರಾಹಕ ಆಯೋಗದ ಮೆಟ್ಟಿಲು ಏರಿದ್ದರು. ಆದರೆ ಪರಿಹಾರ ಹೆಚ್ಚಿಸಬೇಕೆಂಬ ಬೇಡಿಕೆಗೆ ಮನ್ನಣೆ ಸಿಗಲಿಲ್ಲ. ---------------- ಇದು ಗುಜರಾತ ರಾಜ್ಯದ ರಾಜಕೋಟದ ರಮೇಶ ಡಿ ಮೋಟ್ವಾನಿಯವರು ಐಎಫ್‌ಬಿ ಗ್ಲೋಬಲ್ ಇಂಡಿಯಾ ಲಿ. ಕೋಲ್ಕತಾ ಮತ್ತು ಅದರ ರಾಜಕೋಟದ ಮಾರಾಟಗಾರ ಹಾಗೂ ಅದರ ಸರ್ವಿಸ್ ಸೆಂಟರ್ ವಿರುದ್ಧ ಹೂಡಿರುವ ಮೊಕದ್ದಮೆ. ಇವರು ಕ್ರಮವಾಗಿ ಪ್ರತಿವಾದಿ ನಂ.೧, ನಂ.೨ ಮತ್ತು ನಂ.೩. ಅಹ್ಮದಾಬಾದ್‌ನ ಗುಜರಾತ ರಾಜ್ಯ ಗ್ರಾಹಕ ಆಯೋಗವು ೨೦೧೫ರಲ್ಲಿ ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಸಲ್ಲಿಸಿರುವ ಮೇಲ್ಮನವಿ. ಅರ್ಜಿದಾರರ ಪರವಾಗಿ ಯಾರೂ ಹಾಜರಾಗಿರಲಿಲ್ಲ. ಆದರೆ ಅವರು ಲಿಖಿತ ವಾದವನ್ನು ಸಲ್ಲಿಸಿದ್ದರು. ಅದರ ಆಧಾರದ ಮೇಲೆಯೇ ಪ್ರಕರಣವನ್ನು ಇತ್ಯರ್ಥಪಡಿಸಲು ಕೋರಿದ್ದರು. ಪ್ರತಿವಾದಿಗಳು ತಯಾರಿಸಿದ ಮೈಕ್ರೋವೇವ್ ಓವನ್ ಒಂದನ್ನು ಅರ್ಜಿದಾರರು ಖರೀದಿಸಿದ್ದರು. ಈ ಖರೀದಿ ನಡೆದದ್ದು ೨೦-೧೦-೨೦೦೮ರಂದು. ಅದರ ಬೆಲೆ ೭೪೦೦ ರುಪಾಯಿ. ಇದರಲ್ಲಿ ಕೆಲವು ದೋಷಗಳು ಕಂಡುಬಂದಿದ್ದರಿಂದ ಮಾರಾಟಗಾರರ ಪರವಾಗಿ ಪ್ರತಿವಾದಿ ನಂ.೩ ಸರ್ವಿಸ್ ಸೆಂಟರ್‌ನವರು ದುರಸ್ತಿಗೆಂದು ಒಯ್ದರು. ಅದನ್ನು ತಮ್ಮ ಬಳಿ ದೂರ್ಘ ಕಾಲ ಇರಿಸಿಕೊಂಡರು. ಆದರೆ ಯಾವುದೇ ದುರಸ್ತಿಯನ್ನೂ ಮಾಡಲಿಲ್ಲ ಮತ್ತು ಅದನ್ನು ಹಿಂದಕ್ಕೂ ಕೊಡಲಿಲ್ಲ. ಅರ್ಜಿದಾರರು ದುರಸ್ತಿಯ ಶುಲ್ಕವನ್ನು ಕೊಡುವುದಕ್ಕೆ ಸಿದ್ಧರಿದ್ದರೂ ಸರ್ವಿಸ್ ಸೆಂಟರ್‌ನವರು ಇವರಿಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮೋಟ್ವಾನಿಯವರು ರಾಜಕೋಟದ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ತಮ್ಮ ಮೈಕ್ರೋವೇವ್ ಓವನ್‌ಅನ್ನು ದುರಸ್ತಿ ಮಾಡಿ ತಮಗೆ ಮರಳಿಸಬೇಕು ಮತ್ತು ಪರಿಹಾರವೆಂದು ೧೦ ಸಾವಿರ ರುಪಾಯಿಗಳನ್ನು ನೀಡಬೇಕು ಹಾಗೂ ತಮಗಾದ ಮಾನಸಿಕ ಕಿರಿಕಿರಿಗೆ ೫೦ ಸಾವಿರ ರುಪಾಯಿ ನೀಡಬೇಕು ನೋಟಿಸ್ ಶುಲ್ಕವೆಂದು ೫೦೦೧ ರುಪಾಯಿ ನೀಡಬೇಕು ಎಂದು ಕೋರಿದರು. ಪ್ರತಿವಾದಿಗಳು ತಮ್ಮ ಸಮರ್ಥನೆಗೆ ಮಂಡಿಸಿದ ಪ್ರಮುಖ ವಾದವೆಂದರೆ, ಸಮಯ ಮೀರಿದ ಬಳಿಕ ದೂರು ಸಲ್ಲಿಸಲಾಗಿದೆ ಎಂಬುದು. ಪ್ರತಿವಾದಿಗೆ ಇ-ಮೇಲ್ ಮೂಲಕ ರಿಪೇರಿಯ ಅಂದಾಜು ವೆಚ್ಚವನ್ನು ಸಲ್ಲಿಸಲಾಗಿತ್ತು. ಅರ್ಜಿದಾರರು ೪,೨೮೭ ರು. ಸಂದಾಯ ಮಾಡಿದ್ದರೆ ನಾವು ಅದನ್ನು ದುರಸ್ತಿ ಮಾಡಲು ಸಿದ್ಧರಿದ್ದೆವು. ಆದರೆ ಅವರು ಹಣವನ್ನು ಸಂದಾಯ ಮಾಡಲಿಲ್ಲ. ಕಾರಣ ರಿಪೇರಿ ಮಾಡಲಿಲ್ಲ ಎಂದು ವಿವರಿಸಿದರು. ಪ್ರತಿವಾದಿ ನಂ.೨ ತಮ್ಮನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಎಳೆಯಲಾಗಿದೆ. ಓವನ್ ಖರೀದಿಸಿದ್ದು ೨೦-೧೦-೨೦೦೮ರಂದು. ದೂರು ನೀಡಿದ್ದು ಮೂರು ವರ್ಷ ಹತ್ತು ತಿಂಗಳ ನಂತರ. ಇಲ್ಲಿ ಕಾಲದ ಮಿತಿಯನ್ನು ದಾಟಲಾಗಿದೆ. ಕಾರಣ ದೂರನ್ನು ವಜಾ ಮಾಡಬೇಕು ಎಂದು ವಾದಿಸಿದರು. ವಾದ ಪ್ರತಿವಾದಗಳನ್ನು ವಿವರವಾಗಿ ಆಲಿಸಿದ ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿತು ಮತ್ತು ದೂರುದಾರರ ಪರವಾಗಿ ತೀರ್ಪನ್ನು ನೀಡಿತು. ದೂರನ್ನು ಒಪ್ಪಿಕೊಳ್ಳಲಾಗಿದೆ. ಪ್ರತಿವಾದಿಗಳು ಈ ಆದೇಶ ಹೊರಬಿದ್ದ ಒಂದು ತಿಂಗಳೊಳಗೆ ಮೈಕ್ರೋವೇವ್ ಓವನ್ ಅನ್ನು ದುರಸ್ತಿ ಮಾಡಿ ಹಿಂತಿರುಗಿಸಬೇಕು. ಇದು ವಾರಂಟಿ ಅವಧಿಯೊಳಗೆ ಇದ್ದರೆ ಉಚಿತವಾಗಿ ಮಾಡಿಕೊಡಬೇಕು. ವಾರಂಟಿ ಅವಧಿ ಮುಗಿದಿದ್ದರೆ ಅದರ ಶುಲ್ಕವನ್ನು ಪಡೆಯಬೇಕು. ಇದಕ್ಕೆ ತಪ್ಪಿದರೆ ಪ್ರತಿವಾದಿಗಳು ಮೈಕ್ರೋವೇವ್ ಓವನ್‌ನ ಬೆಲೆಯನ್ನು ದೂರುದಾರರಿಗೆ ನೀಡಬೇಕಾಗುತ್ತದೆ. ಅಲ್ಲದೆ ಪ್ರತಿವಾದಿಗಳು ಒಟ್ಟಾಗಿ ದೂರುದಾರರಿಗೆ ಆಗಿರುವ ಮಾನಸಿಕ ಕಿರಿಕಿರಿಗಾಗಿ ೫೦೦ ರುಪಾಯಿ ಮತ್ತು ವ್ಯಾಜ್ಯದ ವೆಚ್ಚವೆಂದು ೧೦೦೦ ರು. ನೀಡಬೇಕು ಎಂದು ಆದೇಶಿಸಿತು. ಇದರಿಂದ ತೃಪ್ತರಾಗದ ದೂರುದಾರರು ಹೆಚ್ಚಿನ ಪರಿಹಾರ ಕೋರಿ ಗುಜರಾತ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ದೂರನ್ನು ವಜಾ ಮಾಡಿದ ರಾಜ್ಯ ಆಯೋಗವು ಈ ರೀತಿ ಅಭಿಪ್ರಾಯ ಪಟ್ಟಿತು. ದೂರು ಇರುವುದು ಪ್ರತಿವಾದಿ ನಂ.೩ ಮೈಕ್ರೋವೇವ್ ಓವನ್ ದುರಸ್ತಿ ಮಾಡದೆ ಇರುವುದು ಮತ್ತು ಹಿಂದಕ್ಕೆ ಕೊಡದೆ ಇರುವ ವಿಷಯದಲ್ಲಿ. ಓವನ್‌ನಲ್ಲಿ ತಯಾರಿಕೆ ದೋಷ ಇದೆ ಎಂದು ದೂರುದಾರರು ಹೇಳಿಲ್ಲ. ಪ್ರತಿವಾದಿಗಳು ರಿಪೇರಿ ಶುಲ್ಕವೆಂದು ೨೧೦೦ ರು. ನಮೂದಿಸಿದ್ದರು. ದೂರುದಾರರು ಅದನ್ನು ಸಂದಾಯ ಮಾಡಲು ಸಿದ್ಧರಿದ್ದಾರೆ. ಅದನ್ನು ದೂರುದಾರರೇ ಹೇಳಿದ್ದಾರೆ. ಆದರೆ ಅದಕ್ಕೆ ಅವರು ಯಾವುದೇ ದಾಖಲೆಯನ್ನು ಸಲ್ಲಿಸಿಲ್ಲ. ಪ್ರತಿವಾದಿ ನಂ.೧ ಮತ್ತು ನಂ೩ ದೂರುದಾರರು ರಿಪೇರಿ ಶುಲ್ಕ ಸಂದಾಯ ಮಾಡಿದರೆ ತಾವು ದುರಸ್ತಿಗೆ ಸಿದ್ಧವೆಂದು ಹೇಳಿದ್ದಾರೆ. ದೂರುದಾರರು ಓವನ್‌ನ ವಾರಂಟಿ ಸಂಬಂಧದಲ್ಲಿ ಯಾವುದೇ ದಾಖಲೆ ಸಲ್ಲಿಸಿಲ್ಲ. ೩ ವರ್ಷ ೧೦ ತಿಂಗಳ ನಂತರ ದೋಷ ಕಂಡು ಬಂದಾಗ ಪ್ರತಿವಾದಿಗಳು ಅದನ್ನು ಶುಲ್ಕ ಪಡೆದು ರಿಪೇರಿ ಮಾಡಿಕೊಡಲು ಸಿದ್ಧರಿದ್ದರು. ಆದರೆ ಪ್ರತಿವಾದಿ ನಂ.೩ ಓವನ್‌ಅನ್ನು ತಮ್ಮ ಸರ್ವಿಸ್ ಸೆಂಟರ್‌ನಲ್ಲೇ ಇಟ್ಟುಕೊಂಡರು. ರಿಪೇರಿಯನ್ನೂ ಮಾಡಲಿಲ್ಲ ಹಿಂದಕ್ಕೂ ಕೊಡಲಿಲ್ಲ. ಈ ಮಟ್ಟಿಗೆ ಇಲ್ಲಿ ಸೇವಾ ನ್ಯೂನತೆ ತಲೆದೋರಿದೆ. ಇನ್ನೂ ಪರಿಹಾರ ಹಾಗೂ ಮಾನಸಿಕ ಕಿರಿಕಿರಿಯ ಪ್ರಶ್ನೆ. ಓವನ್‌ನ ಬೆಲೆ ಹಾಗೂ ಪ್ರಕರಣದ ವಿವರಗಳನ್ನು ಗಮನಿಸಿದಾಗ, ದೂರುದಾರರ ಬೇಡಿಕೆ ತುಂಬಾ ಹೆಚ್ಚು ಅನ್ನಿಸುತ್ತದೆ. ಜಿಲ್ಲಾ ವೇದಿಕೆಯು ನೀಡಿರುವ ಪರಿಹಾರ ಮೊತ್ತ ಮತ್ತು ಮಾನಸಿಕ ಪರಿಹಾರದ ಮೊತ್ತ ಸೂಕ್ತವಾಗಿದೆ. ಅದು ಎಲ್ಲ ವಿವರಗಳನ್ನೂ ಚರ್ಚಿಸಿದೆ. ಮೇಲ್ಮನವಿಯಲ್ಲಿ ಯಾವುದೇ ವಿಷಯವಿಲ್ಲ. ಜಿಲ್ಲಾ ವೇದಿಕೆಯ ನಿರ್ಣಯ ಸರಿಯಾಗಿದೆ. ಕಾರಣ ಮೇಲ್ಮನವಿಯನ್ನು ವಜಾಗೊಳಿಸುವುದಾಗಿ ಹೇಳಿತು. ಇದರ ವಿರುದ್ಧ ದೂರುದಾರರು ರಾಷ್ಟ್ರೀಯ ವೇದಿಕೆಯ ಕದ ತಟ್ಟಿದರು. ಸ್ವಲ್ಪ ವಿಳಂಬವಾಗಿದ್ದರಿಂದ ವಿನಾಯ್ತಿಯನ್ನೂ ಕೋರಿದ್ದರು. ಅರ್ಜಿಯಲ್ಲಿ ವಿವರಿಸಲಾದ ವಿಳಂಬದ ಕಾರಣವನ್ನು ಮನ್ನಿಸಿ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಇಲ್ಲಿಯೂ ಪರಿಹಾರವನ್ನು ಹೆಚ್ಚಿಸುವಂತೆ ಕೋರಲಾಗಿತ್ತು. ಮೈಕ್ರೋವೇವ್ ಓವನ್ ರಿಪೇರಿಗೆ ನೀಡಲಾಗಿದ್ದ ಅಂದಾಜು ವೆಚ್ಚ ಹೆಚ್ಚಿಗೆ ಇತ್ತು. ಅದರಲ್ಲಿ ಬಳಸಲಾಗುವ ಮೆಗ್ನೆಟೋನ್‌ಗೆ ೨೧೦೦ ರು. ನಮೂದಿಸಲಾಗಿತ್ತು. ಆದರೆ ಇದು ಮುಕ್ತ ಮಾರುಕಟ್ಟೆಯಲ್ಲಿ ಕೇವಲ ೬೦೦ ರುಪಾಯಿಗೆ ಲಭ್ಯವಿದೆ ಎಂದು ಹೇಳಿದ್ದರು. ದೂರುದಾರರು ಮೈಕ್ರೋವೇವ್ ಓವನ್ ತಯಾರಿಕೆಯಲ್ಲಿಯೇ ದೋಷವಿದೆ ಎಂದು ಹೇಳಿಲ್ಲ. ಅದನ್ನು ರಾಜ್ಯ ಆಯೋಗ ಕೂಡ ಗಮನಿಸಿದೆ. ದೂರುದಾರರ ಪ್ರಕಾರ ಪ್ರತಿವಾದಿಗಳು ರಿಪೇರಿ ಶುಲ್ಕ ೨೧೦೦ ರು. ನಮೂದಿಸಿದ್ದಾರೆ. ಆದರೆ ಪ್ರತಿವಾದಿಗಳ ಪ್ರಕಾರ ಅವರು ನಮೂದಿಸಿದ್ದು ೪೨೮೭ ರು. ಅಲ್ಲದೆ ಈ ಮೊತ್ತ ಪಾವತಿಸಿದರೆ ಅದನ್ನು ದುರಸ್ತಿ ಮಾಡುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಎರಡು ಕೆಳ ವೇದಿಕೆಗಳಲ್ಲಿ ಹೇಳಿರುವುದನ್ನೇ ಅರ್ಜಿದಾರರೂ ಇಲ್ಲಿಯೂ ಹೇಳಿದ್ದಾರೆ. ಹೊಸ ಕಾನೂನು ಮುದ್ದೆಗಳಾವವೂ ಇದರಲ್ಲಿ ಇಲ್ಲದಿರುವುದರಿಂದ ಈ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಹೇಳಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು