ಅಪಘಾತ ಸಮಯದಲ್ಲಿ ಅಧಿಕೃತ ಚಾಲನಾ ಪರವಾನಿಗೆ ಚಾಲಕನ ಬಳಿ ಇಲ್ಲದಿದ್ದರೆ ವಿಮೆ ದೊರಕದು
ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿ ವಾಹನ ಚಲಾಯಿಸುತ್ತಿದ್ದಾಗ ಅಪಘಾತವಾದರೆ ಪರಿಹಾರ ಸಿಗುತ್ತದೆಯೇ? ಇಂಥ ಒಂದು ಪ್ರಕರಣ ರಾಷ್ಟ್ರೀಯ ಗ್ರಾಹಕ ಆಯೋಗದ ವರೆಗೂ ಹೋಗಿತ್ತು. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಜಯ ನವನಾಥ ಸೊಂಟಕ್ಕೆ ನ್ಯೂ ಇಂಡಿಯಾ ಅಶ್ಯೂಅರೆನ್ಸ್ ಕಂಪನಿ ವಿರುದ್ಧ ಗ್ರಾಹಕ ವೇದಿಕೆಗೆ ದೂರನ್ನು ಒಯ್ದಿದ್ದರು. ದೂರುದಾರರು ಟಾಟಾ ಇಂಡಿಕಾ ವಿಸ್ಟಾ (ಎಂಎಚ್ ೧೩ ಎಸಿ ೮೫೭೦) ತಮ್ಮ ಸ್ವಂತ ಬಳಕೆಗಾಗಿ ಖರೀದಿಸಿದ್ದರು. ಅವರು ನ್ಯೂ ಇಂಡಿಯಾ ಅಶ್ಯೂಅರೆನ್ಸ್ ಕಂಪನಿಯಿಂದ ಅಪಘಾತ ವಿಮೆಯನ್ನು ಮಾಡಿಸಿದ್ದರು. ವಿಮೆ ಅವಧಿಯಲ್ಲಿಯೇ ೧೦-೦೭-೨೦೧೧ರಂದು ಕಾರು ಅಪಘಾತಕ್ಕೆ ಒಳಗಾಯಿತು. ದೊಡ್ಡ ಪ್ರಮಾಣದಲ್ಲಿಯೇ ಹಾನಿಗೆ ಒಳಗಾಯಿತು. ದೂರುದಾರರು ೭೦,೬೯೦ ರುಪಾಯಿ ಮೆಚ್ಚ ಮಾಡಿ ಅದರ ದುರಸ್ತಿಯನ್ನೂ ಮಾಡಿಸಿಕೊಂಡರು. ಅದಾದ ಬಳಿಕ ಅವರು ವಿಮೆ ಪರಿಹಾರ ಕೋರಿದರು. ವಿಮೆ ಕಂಪನಿಯು ೧೩-೦೯-೨೦೧೧ರಂದು ಬರೆದ ಪತ್ರದಲ್ಲಿ ಅವರಿಗೆ ವಿಮೆ ನೀಡಲು ಬರುವುದಿಲ್ಲ ಎಂದು ತಿಳಿಸಿತು.
ಇದನ್ನು ಪ್ರಶ್ನಿಸಿ ಸೊಂಟಕ್ಕೆಯವರು ಜಿಲ್ಲಾ ಗ್ರಾಹಕ ವೇದಿಕೆಗೆ ದೂರನ್ನು ಒಯ್ದರು. ತಾವು ಮಾಡಿದ ವೆಚ್ಚದ ಮೊತ್ತ ೭೦,೬೯೦ ರು. ಅದಕ್ಕೆ ಶೇ.೧೨ರಂತೆ ಬಡ್ಡಿ, ತಮಗಾದ ಮಾನಸಿಕ ಕಿರಿಕಿರಿಗೆ ೧೦ ಸಾವಿರ ರು. ಪರಿಹಾರ, ವ್ಯಾಜ್ಯದ ವೆಚ್ಚವೆಂದು ೧೦ ಸಾವಿರ ರು. ಮತ್ತು ನ್ಯಾಯಯುತವಾಗಿ ತಮಗೆ ಇನ್ನೇನಾದರೂ ಬರುವುದಾದರೆ ಅದನ್ನೂ ಕೊಡಿಸಬೇಕು ಎಂದು ಕೋರಿದರು.
ಇದಕ್ಕೆ ಲಿಖಿತ ಉತ್ತರ ನೀಡಿದ ವಿಮೆ ಕಂಪನಿಯು, ಅಪಘಾತ ಸಂಭವಿಸಿ ದಿನದಂದು ಕಾರಿನ ಚಾಲಕನ ಬಳಿ ಅಧಿಕೃತವಾದ ಚಾಲನಾ ಪರವಾನಿಗೆ ಇರಲಿಲ್ಲ. ಇದು ವಿಮೆಯ ಷರತ್ತಿನ ಉಲ್ಲಂಘನೆಯಾಗಿದೆ. ಕಾರಣ ವಿಮೆ ನಿರಾಕರಿಸಲಾಗಿದೆ ಎಂದು ತಿಳಿಸಿತು. ಜಿಲ್ಲಾ ಗ್ರಾಹಕ ವೇದಿಕೆಯು ೧೨-೦೯-೨೦೧೪ರಂದು ಎರಡು ತೀರ್ಪುಗಳನ್ನು ನೀಡಿತು. ವೇದಿಕೆಯ ಮೂವರು ಸದಸ್ಯರು ದೂರನ್ನು ಭಾಗಶಃ ಪುರಸ್ಕರಿಸಿದರು. ವಿಮೆ ಕಂಪನಿಯು ದೂರುದಾರರಿಗೆ ೫೩,೦೭೭ ರು.ಗಳನ್ನು ಶೇ.೮ರ ಬಡ್ಡಿ ಸಹಿತ ೪೫ ದಿನಗಳೊಳಗೆ ನೀಡಬೇಕು. ಅದಕ್ಕೆ ತಪ್ಪಿದರೆ ಬಡ್ಡಿಯನ್ನು ಶೇ.೧೨ರಂತೆ ನೀಡಬೇಕು. ವಿಮೆ ಕಂಪನಿಯು ದೂರುದಾರರಿಗೆ ಆದ ಕಿರಿಕಿರಿಗೆ ೨ ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು ೧ ಸಾವಿರ ರು. ೩೦ ದಿನಗಳೊಳಗೆ ನೀಡಬೇಕು ಎಂದು ತೀರ್ಪು ನೀಡಿದರು. ವೇದಿಕೆಯ ಒಬ್ಬ ಸದಸ್ಯರು ಮಾತ್ರ ದೂರನ್ನು ವಜಾಗೊಳಿಸುವಂತೆ ತೀರ್ಪು ನೀಡಿದರು.
ಈ ಬಹುಮತದ ತೀರ್ಪಿನ ವಿರುದ್ಧ ವಿಮೆ ಕಂಪನಿಯು ಮಹಾರಾಷ್ಟ್ರ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿದ ರಾಜ್ಯ ಆಯೋಗವು ಈ ಅಂಶಗಳನ್ನು ಗಮನಿಸಿತು. ಜಿಲ್ಲಾ ವೇದಿಕೆಯು ನೀಡಿದ ಬಹುಮತದ ತೀರ್ಪಿನಲ್ಲಿ, ವಾಹನ ಚಾಲಕನೊಬ್ಬ ಅಧಿಕೃತ ಚಾಲನಾ ಪರವಾನಿಗೆ ಇಲ್ಲದೆ ಚಾಲನೆ ಮಾಡುವಾಗ ಅಪಘಾತಕ್ಕೆ ಈಡಾದರೆ ಅಂಥ ಸಂದರ್ಭದಲ್ಲಿ ವಿಮೆ ಕಂಪನಿಯು ನಿಗದಿ ಪಡಿಸಿದ ಮಾನದಂಡಗಳನ್ನು ಬಿಟ್ಟು ಪರಿಹಾರ ನಿಗದಿ ಮಾಡಿರುವಂಥ ಅನ್ಯಪ್ರಕರರಣಗಳನ್ನು ನಮೂದಿಸಿಲ್ಲ. ಈ ರೀತಿ ನಿಗದಿ ಪಡಿಸಿದ ಮಾನದಂಡಗಳನ್ನು ಬಿಟ್ಟು ಪರಿಹಾರ ನೀಡುವುದು ವಿಮೆ ಕಂಪನಿಗೆ ಬಂಧನಕಾರಿಯೇನಲ್ಲ. ಮೋಟಾರ್ ವಾಹನ ಕಾಯ್ದೆ ೧೯೮೮ರ ಸೆಕ್ಷನ್‌೩ರ ಪ್ರಕಾರ ಅಧಿಕೃತ ಚಾಲನಾ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ವಾಹನ ಚಾಲನೆ ಮಾಡಲೇ ಬಾರದು. ಆದರೆ ಇಂಥ ವಾಹನ ಚಾಲಕ ಚಾಲನಾ ಪರವಾನಿಗೆ ಇಲ್ಲದೆಯೇ ವಾಹನ ಚಾಲನೆ ಮಾಡಿದ್ದರೆ ಅಂಥವನಿಗೆ ಚಾಲನಾ ಪರವಾನಿಗೆ ನವೀಕರಿಸುವುದಕ್ಕೆ ಕಾಯಿದೆಯಲ್ಲಿ ಯಾವುದೇ ನಿರ್ಬಂಧವಿಲ್ಲ. ಆದರೆ ವಿಮಾ ಪಾಲಿಸಿಯಲ್ಲಿ ಚಾಲನಾ ಪರವಾನಿಗೆ ಇಲ್ಲದೆ ವಿಮೆಗೆ ಒಳಪಟ್ಟ ವಾಹನವನ್ನು ಚಲಾಯಿಸುವಾಗ ಅಪಘಾತವಾದರೆ ವಿಮೆ ಸಿಗುವುದಿಲ್ಲ ಎಂದು ತನ್ನ ಷರತ್ತಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಕಲಿಕೆಯ ಚಾಲನಾ ಪರವಾನಿಗೆ ಹೊಂದಿದ್ದರೂ ಒಪ್ಪಿಕೊಳ್ಳಬಹುದು. ಪ್ರಸ್ತುತ ಪ್ರಕರಣದಲ್ಲಿ ಚಾಲಕನ ಚಾಲನಾ ಪರವಾನಿಗೆ ಅವಧಿ ಮುಗಿದಿತ್ತು. ಅಪಘಾತವಾದ ನಂತರ ಅದನ್ನು ನವೀಕರಿಸಲಾಗಿದೆ. ಈ ರೀತಿ ನವೀಕರಿಸುವುದಕ್ಕೆ ಕಾಯ್ದೆಯಲ್ಲಿ ಅಡ್ಡಿ ಇಲ್ಲ. ಅಪಘಾತದ ಬಳಿಕವೂ ಆತನ ಚಾಲನಾ ಪರವಾನಿಗೆ ನವೀಕರಣಗೊಂಡಿದೆ ಎಂದ ಮಾತ್ರಕ್ಕೆ ನಿಗದಿಪಡಿಸಿದ ಮಾನದಂಡ ಬಿಟ್ಟು ಪರಿಹಾರ ನಿರ್ಧರಿಸಬೇಕೆಂದು ವಿಮೆ ಕಂಪನಿಗೆ ಹೇಳುವುದು ಸರಿಯಾಗಲಾರದು. ಕಾರಣ ಜಿಲ್ಲಾ ವೇದಿಕೆಯ ಬಹುಮತದ ತೀರ್ಪನ್ನು ಬದಿಗೆ ಸರಿಸಿ ಒಬ್ಬ ಸದಸ್ಯರು ನೀಡಿದ ದೂರನ್ನು ವಜಾಗೊಳಿಸುವ ತೀರ್ಪನ್ನು ಎತ್ತಿಹಿಡಿಯುವುದಾಗಿ ಹೇಳಿತು.
ಇದರ ವಿರುದ್ಧ ಮೂಲ ದೂರುದಾರರು ರಾಷ್ಟ್ರೀಯ ಗ್ರಾಹಕ ವ್ಯಾಜ್ಯನಿವಾರಣೆ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದರು. ೨೪ ದಿನ ತಡವಾಗಿ ಅರ್ಜಿ ಸಲ್ಲಿಕೆಯಾಗಿದ್ದರೂ ಸೂಕ್ತ ಕಾರಣ ನೀಡಿದ್ದರಿಂದ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಯಿತು. ಚಾಲನಾ ಪರವಾನಿಗೆ ನವೀಕರಿಸುವುದು ವಿಳಂಬವಾಗಿದೆ ಎಂಬ ಕಾರಣಕ್ಕೆ ರಾಜ್ಯ ಆಯೋಗವು ಜಿಲ್ಲಾ ವೇದಿಕೆಯ ತೀರ್ಪನ್ನು ಅನೂರ್ಜಿತಗೊಳಿಸಿದೆ. ಆದರೆ ಚಾಲನಾ ಪರವಾನಿಗೆ ನವೀಕರಿಸುವ ಪ್ರಕ್ರಿಯೆ ಆರಂಭಗೊಂಡಿತ್ತು ಎಂದು ಅವರ ಪರವಾಗಿ ವಾದ ಮಂಡಿಸಲಾಯಿತು. ವಿಚಾರಣೆಯ ಕಾಲಕ್ಕೆ ಅವರು, ತಮ್ಮ ಚಾಲನಾ ಪರವಾನಿಗೆ ೨೪-೦೬-೨೦೧೦ರಂದು ಮುಗಿದಿತ್ತು. ಅದನ್ನು ನವೀಕರಿಸಿದ್ದು ೧೭-೦೮-೨೦೧೧ರಂದು. ಅಪಘಾತ ನಡೆದದ್ದು ೧೦-೦೭-೨೦೧೧ರಂದು. ಆ ದಿನ ತಮ್ಮ ಬಳಿ ಚಾಲ್ತಿಯಲ್ಲಿದ್ದ ಚಾಲನಾ ಪರವಾನಿಗೆ ಇರಲಿಲ್ಲ. ಅವಧಿ ಮೀರಿದ ೩೦ ದಿನಗಳೊಳಗೆ ತಾವು ನವೀಕರಣಕ್ಕೆ ಅರ್ಜಿ ಸಲ್ಲಿಸಿರಲಿಲ್ಲ. ೩೦ ದಿನ ಕಳೆದ ಬಳಿಕವೇ ತಾವು ಅರ್ಜಿ ಸಲ್ಲಿಸಿದ್ದು ಎಂಬುದನ್ನು ಅವರು ಒಪ್ಪಿಕೊಂಡರು.
ಮೋಟಾರ್ ವಾಹನ ಕಾಯ್ದೆ ೧೯೮೮ರ ಸೆಕ್ಷನ್ ೩ ಪ್ರಕಾರ, ಯಾವನೇ ವ್ಯಕ್ತಿ ಅಧಿಕೃತ ಚಾಲನಾ ಪರವಾನಿಗೆ ಇಲ್ಲದೆಯೇ ಸಾರ್ವಜನಿಕ ಸ್ಥಳದಲ್ಲಿ ವಾಹನವನ್ನು ಚಲಾಯಿಸಕೂಡದು. ಹಾಗೆಯೇ ಸಾರಿಗೆ ವಾಹನವನ್ನು ತನ್ನ ಸ್ವಂತ ಬಳಕೆಗಾಗಲಿ ಅಥವಾ ಯಾವುದೇ ಯೋಜನೆಯಡಿ ಬಾಡಿಗೆಗೆ ನೀಡಿದ್ದರೆ ಆ ಸಂಬಂಧದ ಪರವಾನಿಗೆ ಹೊಂದಿರಬೇಕು. ಸೆಕ್ಷನ್ ೫ರಲ್ಲಿ, ವಾಹನದ ಮಾಲೀಕನು ತನ್ನ ವಾಹನವನ್ನು ಇತರರಿಗೆ ಚಾಲನೆ ಮಾಡುವುದಕ್ಕೆ ನೀಡುವಾಗ ಈ ಷರತ್ತುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಹೊಂದಿರುತ್ತಾನೆ.
ಇನ್ನು, ಚಾಲನಾ ಪರವಾನಿಗೆ ನವೀಕರಣ. ಸಂಬಂಧಿಸಿದ ಅಧಿಕಾರಿ ಆ ಕೆಲಸವನ್ನು ಮಾಡುತ್ತಾರೆ. ಚಾಲ್ತಿಯಲ್ಲಿದ್ದ ಚಾಲನಾ ಪರವಾನಿಗೆಯ ಅವಧಿ ಮುಗಿದ ೩೦ ದಿನಗಳೊಳಗೆ ನವೀಕರಣಕ್ಕೆ ಅನುಮತಿ ಕೋರದೆ ಇದ್ದಲ್ಲಿ, ನಂತರ ಕೋರಿಕೆ ಬಂದಲ್ಲಿ ಯಾವ ದಿನದಂದು ನವೀಕರಣ ಮಾಡಲಾಗುವುದೋ ಆ ದಿನದಿಂದಲೇ ನವೀಕರಣ ಚಾಲನೆಗೆ ಬರುತ್ತದೆ.
ಪ್ರಸ್ತುತ ಪ್ರಕರಣದಲ್ಲಿ ಚಾಲನಾ ಪರವಾನಿಗೆ ನವೀಕರಣ ಕೋರಿದ್ದು ಅದು ರದ್ದಾದ ೩೦ ದಿನಗಳ ನಂತರ. ಅದು ನವೀಕರಣಗೊಂಡಿದ್ದು ಅಪಘಾತ ನಡೆದ ಒಂದು ತಿಂಗಳು ಏಳು ದಿನಗಳ ಬಳಿಕ. ಅಂದರೆ ಅಪಘಾತ ನಡೆದ ದಿನ ಸೂಕ್ತ ಚಾಲನಾ ಪರವಾನಿಗೆ ಇರಲಿಲ್ಲ. ಇದು ವಿಮೆಯ ಷರತ್ತುಗಳ ಉಲ್ಲಂಘನೆ.
ಸುಪ್ರೀಂ ಕೋರ್ಟ್ ನ್ಯೂ ಇಂಡಿಯಾ ಅಶ್ಯೂಅರೆನ್ಸ್ ವಿರುದ್ಧ ಸುರೇಶಚಂದ್ರ ಅಗರವಾಲ ಪ್ರಕರಣದಲ್ಲಿ ಇದೇ ಅಂಶಗಳನ್ನು ಆಧರಿಸಿ ವಿಮೆಯನ್ನು ನೀಡಲು ಬರುವುದಿಲ್ಲ ಎಂದು ಹೇಳಿತ್ತು. ಆ ಪ್ರಕರಣದಲ್ಲಿ ಅಪಘಾತದ ಸಮಯದಲ್ಲಿ ಚಾಲಕನ ಬಳಿ ಅಧಿಕೃತವಾದ ಚಾಲನಾ ಪರವಾನಿಗೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಕರಣದ ಮೇಲ್ಮನವಿಯನ್ನು ವಜಾ ಮಾಡಿ ರಾಜ್ಯ ಆಯೋಗದ ತೀರ್ಪನ್ನು ಎತ್ತಿಹಿಡಿಯುವುದಾಗಿ ರಾಷ್ಟ್ರೀಯ ಆಯೋಗ ತೀರ್ಪು ನೀಡಿತು.
Comments
Post a Comment