ವಿಮೆ ಮಾಡಿಸುವ ಮೊದಲೇ ರೋಗ ಇತ್ತು ಎಂಬುದನ್ನು ಸಾಬೀತು ಮಾಡಲು ಎಲ್ಐಸಿ ವಿಫಲ
ಸಾಮಾನ್ಯವಾಗಿ ಜೀವವಿಮೆ ಮಾಡಿಸುವವರು ತಮ್ಮ ಸ್ವಂತ ಲಾಭದ ವಿಚಾರ ಮಾಡುವುದಿಲ್ಲ. ತಮಗೇನಾದರೂ ಆದರೆ ತಮ್ಮ ಕುಟುಂಬದ ನೆರವಿಗೆ ಆ ಹಣ ಬರುತ್ತದೆ ಎಂದು ಮಾಡಿಸಿರುತ್ತಾರೆ. ಆದರೆ ವಿಮೆ ಕಂಪನಿ ಕೆಲವೊಮ್ಮೆ ಅನಗತ್ಯ ಕಿರಿಕಿರಿ ಮಾಡಿ ಹಣ ನೀಡಲು ನಿರಾಕರಿಸುತ್ತದೆ. ಆ ಸಂದರ್ಭದಲ್ಲಿ ವಿಮೆಯಲ್ಲಿ ನಾಮನಿರ್ದೇಶನಗೊಂಡವರು ಗ್ರಾಹಕ ವೇದಿಕೆಯಲ್ಲಿ ಪರಿಹಾರ ಪಡೆಯಬಹುದು. ಯಾವುದೇ ವಿಮೆ ಕಂಪನಿ ಸುಖಾಸುಮ್ಮನೆ ವಿಮೆ ನಿರಾಕರಿಸಲು ಬರುವುದಿಲ್ಲ. ತಾನು ನಿರಾಕರಿಸುವುದಕ್ಕೆ ಸರಿಯಾದ ಕಾರಣಗಳನ್ನು ಅದು ನೀಡಬೇಕಾಗುತ್ತದೆ. ತನ್ನ ಆರೋಪಗಳನ್ನು ಸಿದ್ಧಪಡಿಸುವ ಜವಾಬ್ದಾರಿ ವಿಮೆ ಕಂಪನಿಯದೇ ಆಗಿರುತ್ತದೆ.
ಹರ್ಯಾಣದ ರೋಹತಕ್ ಜಿಲ್ಲೆಯ ದಂಪತಿ ತಮ್ಮ ಮಗನ ವಿಮೆ ಹಣಕ್ಕಾಗಿ ಗ್ರಾಹಕ ವೇದಿಕೆಯಲ್ಲಿ ದೂರು ಸಲ್ಲಿಸಿ ವಿಜಯಿಯಾಗಿದ್ದಾರೆ. ಎಲ್‌ಐಸಿಯು ರಾಷ್ಟ್ರೀಯ ಗ್ರಾಹಕ ವ್ಯಾಜ್ಯನಿವಾರಣೆ ಆಯೋಗದ ವರೆಗೂ ಮೇಲ್ಮನವಿ ಸಲ್ಲಿಸಿದರೂ ಅದರ ಪರವಾಗಿ ತೀರ್ಪು ಬರಲಿಲ್ಲ.
ಸರೋಜಿನಿ ಮತ್ತು ರಾಜೇಶ್ ದಂಪತಿಯ ಪುತ್ರ ರವಿಕುಮಾರ್ ಎಲ್‌ಐಸಿಯಿಂದ ೫ ಲಕ್ಷ ರುಪಾಯಿಗೆ ಒಂದು ಪಾಲಿಸಿಯನ್ನು ೨೮-೦೫-೨೦೧೩ರಂದು ಮಾಡಿಸಿದ್ದರು. ಪಾಲಿಸಿ ಮಾಡಿಸುವ ವೇಳೆ ಅವರು ಎಲ್‌ಐಸಿಯ ವೈದ್ಯರಿಂದ ತಪಾಸಣೆಗೆ ಒಳಪಟ್ಟಿದ್ದಾಗಿ ಪಾಲಿಸಿಯಲ್ಲಿ ನಮೂದಾಗಿತ್ತು. ಅವರ ಆರೋಗ್ಯದಲ್ಲಿ ಗಮನಕ್ಕೆ ಬರಬಹುದಾದ ಯಾವುದೇ ರೋಗಲಕ್ಷಣಗಳಿರಲಿಲ್ಲ. ತಮಗೆ ಯಾವುದಾದರೂ ಕಾಯಿಲೆ ಇದೆ ಎಂದು ಅವರಾದರೂ ಪಾಲಿಸಿ ಮಾಡುವಾಗ ತಿಳಿಸಿರಲಿಲ್ಲ. ದುರ್ದೈವವಶಾತ್ ಅವರಿಗೆ ಕಾಯಿಲೆ ಬಂದು ಚಂಡೀಗಡದ ಆಸ್ಪತ್ರೆಯಲ್ಲಿ ಅವರು ೧೬-೦೭-೨೦೧೩ರಂದು ಸಾವನ್ನಪ್ಪಿದರು. ಅವರ ಪೋಷಕರಿಗೆ ವಿಮೆ ಹಣವನ್ನು ನೀಡಲು ಬರುವುದಿಲ್ಲ ಎಂದು ಎಲ್‌ಐಸಿಯು ೩೧-೦೩-೨೦೧೪ರಂದು ತಿಳಿಸಿತು. ಅದಕ್ಕೆ ಒಪ್ಪಿಕೊಳ್ಳಬಹುದಾದ ಯಾವುದೇ ಕಾರಣಗಳನ್ನು ಅದು ನೀಡಿರಲಿಲ್ಲ.
ಇದನ್ನು ಪ್ರಶ್ನಿಸಿ ರವಿಕುಮಾರ್ ಅವರ ಪೋಷಕರು ರೋಹತಕ್ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸಿದರು. ವಿಚಾರಣೆಯ ಕಾಲಕ್ಕೆ ಎಲ್‌ಐಸಿಯು ತಾನು ವಿಮೆ ಪಾಲಿಸಿ ನೀಡುವಾಗ ಮೃತ ಪಾಲಿಸಿದಾರರನ್ನು ಯಾವುದೇ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿರಲಿಲ್ಲ ಎಂದು ಹೇಳಿತು. ಚಂಡೀಗಡದ ಆಸ್ಪತ್ರೆ ನೀಡಿರುವ ಫಾರ್ಮ್ ನಂ.೩೮೧೬ರ ಪ್ರಕಾರ ರವಿಕುಮಾರ್ ಅವರು ಈಡಿಯೋಪೆಥಿಕ್ ಡಿಲೇಟೆಡ್ ಕಾರ್ಡಿಯೋಮೈಯೋಪಥಿ ರೋಗದಿಂದ ೨೦೧೩ರ ಫೆಬ್ರವರಿಯಿಂದಲೇ ಬಳಲುತ್ತಿದ್ದರು. ಅವರು ವಿಮೆ ಪಾಲಿಸಿ ಮಾಡಿಸಿದ್ದು ೨೮-೦೫-೨೦೧೩ರಂದು. ಅವರು ಚಂಡೀಗಡದ ಆಸ್ಪತ್ರೆಗೆ ದಾಖಲಾಗಿದ್ದು ೦೬-೦೫-೨೦೧೩ರಿಂದ ೨೮-೦೫-೨೦೧೩ರ ವರೆಗೆ. ಪಾಲಿಸಿ ಮಾಡಿಸುವ ಪೂರ್ವದಲ್ಲಿಯೇ ತಮಗಿದ್ದ ಕಾಯಿಲೆಯನ್ನು ಅವರು ಬಹಿರಂಗಪಡಿಸದ ಕಾರಣ ಅವರಿಗೆ ವಿಮೆ ಹಣವನ್ನು ನೀಡುವುದಿಲ್ಲ ಎಂಬುದು ಎಲ್‌ಐಸಿಯ ವಾದವಾಗಿತ್ತು.
ಜಿಲ್ಲಾ ಗ್ರಾಹಕ ವೇದಿಕೆಯು ೨೫-೦೪-೨೦೧೬ರಂದು ನೀಡಿದ ತೀರ್ಪಿನಲ್ಲಿ ಈ ಅಂಶಗಳನ್ನು ಗಮನಿಸಿತು.- ವಿಮೆ ಮಾಡಿಸುವಾಗಲೇ ಪಾಲಿಸಿದಾರರಿಗೆ ಈಡಿಯೋಪೆಥಿಕ್ ಡಿಲೇಟೆಡ್ ಕಾರ್ಡಿಯೋಮೈಯೋಪಥಿ ರೋಗವಿತ್ತು. ಆದರೆ ತನ್ನ ಈ ಆರೋಪವನ್ನು ಸಿದ್ಧಪಡಿಸಲು ಎಲ್‌ಐಸಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಮಾಣಪತ್ರದ ಪ್ರತಿಯನ್ನು ಮಾತ್ರ ನೀಡಿದೆ. ಆದರೆ ಅದು ಮಾಡಿರುವ ಆರೋಪವನ್ನು ಈ ದಾಖಲೆ ಸಮರ್ಥಿಸುತ್ತಿಲ್ಲ. ಸಂಬಂಧಿಸಿದ ವೈದ್ಯರು ನೀಡಿದ ಪ್ರಮಾಣಪತ್ರವೂ ಅದನ್ನು ಪುಷ್ಟೀಕರಿಸುತ್ತಿಲ್ಲ. ಎಲ್‌ಐಸಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿಮೆದಾರರ ಸರಿಯಾದ ವಿಳಾಸ ಕೂಡ ಇಲ್ಲ. ಅಲ್ಲದೆ ಅದರಲ್ಲಿ ದಿನಾಂಕವನ್ನು ತಿದ್ದಿ ಬರೆದ ಹಾಗಿತ್ತು. ಇತರ ವಿವರಗಳನ್ನೂ ತಿದ್ದಿರುವುದು, ಕಾಟು ಹೊಡೆದಿರುವುದೂ ಕಾಣುತ್ತಿತ್ತು. ರೋಗದ ವಿವರಗಳನ್ನು ಕೇಳಿಸಿಕೊಂಡ ವೈದ್ಯರ ಹೆಸರೂ ಇರಲಿಲ್ಲ ಮತ್ತು ಅವರು ಅದಕ್ಕೆ ಸಹಿ ಕೂಡ ಮಾಡಿರಲಿಲ್ಲ. ಹೀಗಿರುವಾಗ ಅದನ್ನು ಪುರಾವೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪಾಲಿಸಿ ಪಡೆಯುವುದಕ್ಕೂ ಪೂರ್ವದಲ್ಲಿ ರವಿಕುಮಾರ್ ಪಡೆದ ಚಿಕಿತ್ಸೆಯ ದಾಖಲೆಗಳನ್ನು ಹಾಜರುಪಡಿಸುವಲ್ಲಿ ಎಲ್‌ಐಸಿ ವಿಫಲವಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿವಾದಿ ಎಲ್‌ಐಸಿಯು ನಾಮನಿರ್ದೇಶಿತರಿಗೆ ಪಾಲಿಸಿಯ ಮೊತ್ತ ೫ ಲಕ್ಷ ರು.ಗಳನ್ನು ನೀಡಬೇಕು. ಪ್ರಕರಣ ದಾಖಲಾದ ದಿನದಿಂದ ಹಣ ಸಂದಾಯ ಮಾಡುವ ದಿನದ ವರೆಗೆ ಈ ಮೊತ್ತಕ್ಕೆ ಶೇ.೯ರಂತೆ ಬಡ್ಡಿಯನ್ನು ನೀಡಬೇಕು. ವ್ಯಾಜ್ಯದ ವೆಚ್ಚವೆಂದು ೩೫೦೦ ರು.ಗಳನ್ನು ನೀಡಬೇಕು. ಇದನ್ನೆಲ್ಲ ತೀರ್ಪು ಪ್ರಕಟವಾದ ದಿನದಿಂದ ಒಂದು ತಿಂಗಳೊಳಗೆ ನೀಡಬೇಕು. ವಿಳಂಬವಾದರೆ ಬಡ್ಡಿಯನ್ನು ಶೇ.೧೨ರಂತೆ ಲೆಕ್ಕಹಾಕಿ ನೀಡಬೇಕು ಎಂದು ಆದೇಶಿಸಿತು.
ಇದರ ವಿರುದ್ಧ ಎಲ್‌ಐಸಿಯು ಹರ್ಯಾಣ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಇದನ್ನು ವಜಾ ಮಾಡುವ ಪೂರ್ವದಲ್ಲಿ ರಾಜ್ಯ ಆಯೋಗವು ಹೀಗೆ ಹೇಳಿತು- ಸಾವಿಗೀಡಾದ ವ್ಯಕ್ತಿ ವಿಮೆ ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ರೋಗದಿಂದ ಬಳಲುತ್ತಿದ್ದ ಎಂಬುದನ್ನು ಸಾಬೀತುಪಡಿಸುವ ಪುರಾವೆಗಳು ಇಲ್ಲ. ಹೀಗಿರುವಾಗ ಆತನಿಗೆ ರೋಗ ಇತ್ತು ಎಂದು ಊಹಿಸಿಕೊಳ್ಳುವುದು ಸಾಧ್ಯವಿಲ್ಲ. ಪಂಜಾಬ್ ರಾಜ್ಯ ಗ್ರಾಹಕ ಆಯೋಗವು ಎಲ್‌ಐಸಿ ವಿರುದ್ಧ ಜೋಗಿಂದರ್ ಕೌರ್ ಪ್ರಕರಣ ಮತ್ತು ಎಲ್‌ಐಸಿ ವಿರುದ್ಧ ರಾಜ್‌ಕುಮಾರ್ ಶರ್ಮಾ ಪ್ರಕರಣಗಳಲ್ಲಿ ಎಲ್‌ಐಸಿಯು ಪಾಲಿಸಿದಾರ ಪಾಲಿಸಿ ಪಡೆಯುವುದಕ್ಕೆ ಪೂರ್ವದಲ್ಲಿಯೇ ರೋಗದಿಂದ ಬಳಲುತ್ತಿದ್ದ ಎಂಬುದನ್ನು ಸಾಬೀತು ಪಡಿಸುವಲ್ಲಿ ವಿಫಲ ಆಗಿರುವುದರಿಂದ ವಿಮೆ ಹಣವನ್ನು ನಿರಾಕರಿಸಲು ಬರುವುದಿಲ್ಲ ಎಂದು ತೀರ್ಪು ನೀಡಿದೆ. ಈ ಪ್ರಕರಣದಲ್ಲಿಯೂ ಅದೇ ಮಾನದಂಡ. ಜಿಲ್ಲಾ ವೇದಿಕೆ ನೀಡಿದ ತೀರ್ಪು ಸರಿಯಾಗಿಯೇ ಇದೆ ಎಂದು ಹೇಳಿತು.
ಇದರ ವಿರುದ್ಧ ಎಲ್‌ಐಸಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಅಲ್ಲಿಯೂ ಕೂಡ ಅದು ಪಾಲಿಸಿದಾರ ಪಾಲಿಸಿ ಪಡೆಯುವ ಮೊದಲೇ ಫೆಬ್ರವರಿ ತಿಂಗಳಿನಿಂದಲೇ ರೋಗದಿಂದ ಬಳಲುತ್ತಿದ್ದು ಸತ್ಯವನ್ನು ಮುಚ್ಚಿಟ್ಟಿದ್ದರು ಎಂಬ ವಾದವನ್ನು ವಕೀಲರು ಮಾಡಿದರು. ಇದಕ್ಕಾಗಿ ಚಂಡೀಗಡದ ಆಸ್ಪತ್ರೆ ನೀಡಿದ ವೈದ್ಯಕೀಯ ಪ್ರಮಾಣಪತ್ರವನ್ನು ಆಯೋಗ ಗಮನಿಸಿತು.
ಅದರಲ್ಲಿ ರೋಗದ ಸ್ವ ರೂಪ ಮತ್ತು ಎಷ್ಟು ಕಾಲದಿಂದ ಅದು ಇದೆ ಎಂಬುದಕ್ಕೆ ಏಪ್ರಿಲ್ ೨೦೧೩ರಿಂದ ಕಫ, ಉಸಿರಾಟದ ತೊಂದರೆ, ತಿಳಿಗುಲಾಬಿ ಕಫ, ಪಾದಗಳು ಊದಿಕೊಳ್ಳುವುದು ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂಬ ವಿವರಣೆ ಇತ್ತು. ಆಸ್ಪತ್ರೆಯಲ್ಲಿ ಯಾವ ರೋಗಕ್ಕೆಂದು ಚಿಕಿತ್ಸೆ ನೀಡಬೇಕೆಂದು ನಿರ್ಧರಿಸಲಾಯಿತು ಎಂಬುದಕ್ಕೆ ಈಡಿಯೋಪೆಥಿಕ್ ಡಿಲೇಟೆಡ್ ಕಾರ್ಡಿಯೋಮೈಯೋಪಥಿ ಎಂದು ನಮೂದಿಸಲಾಗಿತ್ತು. ಬೇರೆ ಯಾವುದಾದರೂ ಕಾಯಿಲೆ ಇದಕ್ಕೂ ಪೂರ್ವದಲ್ಲಿ ಇತ್ತೆ ಅಥವಾ ಇದರ ಜೊತೆಯಲ್ಲಿ ಬೇರೆ ಯಾವುದಾದರೂ ಕಾಯಿಲೆ ಇತ್ತೆ ಎಂಬುದಕ್ಕೆ ಇಲ್ಲ ಎಂದು ನಮೂದಿಸಿದ್ದರು. ರೋಗಿಗೆ ಇದು ಮೊದಲ ಬಾರಿ ಗಮನಕ್ಕೆ ಬಂದದ್ದು ಯಾವಾಗ ಎಂಬುದಕ್ಕೆ ಏಪ್ರಿಲ್ ೨೦೧೩ ಎಂದಿತ್ತು. ಆಸ್ಪತ್ರೆಗೆ ಮೊದಲ ಬಾರಿ ೬-೫-೧೩ರಂದು ಮತ್ತು ದಾಖಲಿಸಲಾಗಿತ್ತು. ಎರಡನೆ ಬಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು ೧೧-೬-೧೩ರಂದು. ರೋಗಿಗೆ ಕಫದ ಸಮಸ್ಯೆ ಆರಂಭವಾಗಿದ್ದು ಫೆಬ್ರವರಿಯಲ್ಲಿ. ಅದಕ್ಕೆ ಅವರು ಬೇರೆ ಕಡೆ ಚಿಕಿತ್ಸೆ ಪಡೆದಿದ್ದರು. ಚಂಡೀಗಡದ ಆಸ್ಪತ್ರೆಯಲ್ಲಿ ಕೋರೋನರಿ ಆ್ಯಂಜಿಯೋಗ್ರಫಿ ಮಾಡಿದಾಗ ನಾರ್ಮಲ್ ಎಂಬ ವರದಿ ಬಂದಿತ್ತು. ಕೊನೆಯದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ೭ ಜೂನ್ ೨೦೧೩ರಂದು. ಅದೇ ತಿಂಗಳ ೧೬ರಂದು ಅವರು ಸಾವಿಗೀಡಾದರು.
ಎಲ್‌ಐಸಿಯು ಸಲ್ಲಿಸಿದ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ ಫೆಬ್ರವರಿಯಲ್ಲಿಯೇ ರವಿಕುಮಾರ್‌ಗೆ ಈ ರೋಗವಿತ್ತು ಮತ್ತು ಅದರ ಸಂಪೂರ್ಣ ಅರಿವು ಅವರಿಗಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳು ಇರಲಿಲ್ಲ. ಮೇ ೨೦೧೩ರಕ್ಕೆ ಪೂರ್ವದಲ್ಲಿ ಅವರು ಯಾವ ವೈದ್ಯರಿಂದ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು ಎಂಬ ದಾಖಲೆ ಕೂಡ ಸಲ್ಲಿಸಿರಲಿಲ್ಲ. ಅಲ್ಲದೆ ಪಾಲಿಸಿಯನ್ನು ಪಡೆಯುವಾಗ ತುಂಬಿರುವ ಫಾರ್ಮ್‌ನಲ್ಲಿ ರವಿಕುಮಾರ್ ಆರೋಗ್ಯವಂತರಾಗಿದ್ದು ಉತ್ತಮ ಕ್ರೀಡಾಪಟು ಎಂದು ನಮೂದಿಸಲಾಗಿತ್ತು. ಅವರು ಪಾಲಿಸಿಯನ್ನು ಪಡೆದುಕೊಂಡ ನಂತರವಷ್ಟೇ ಕಾಯಿಲೆಗೆ ಒಳಗಾಗಿದ್ದು ಎಂದು ಎಲ್‌ಐಸಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ರವಿಕುಮಾರ್ ಅವರು ಪಾಲಿಸಿ ಪಡೆಯುವಾಗ ಉದ್ದೇಶಪೂರ್ವಕವಾಗಿ ತಮಗೆ ಈಡಿಯೋಪೆಥಿಕ್ ಡಿಲೇಟೆಡ್ ಕಾರ್ಡಿಯೋಮೈಯೋಪಥಿ ಕಾಯಿಲೆ ಇದ್ದುದ್ದನ್ನು ಮರೆಮಾಚಿದ್ದರು ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯ ಗ್ರಾಹಕ ಆಯೋಗವು ಎಲ್‌ಐಸಿಯ ಮೇಲ್ಮನವಿ ವಜಾ ಮಾಡಿದ್ದು ಸರಿಯಾಗಿಯೇ ಇದೆ ಎಂದು ತೀರ್ಪು ನೀಡಿತು.
Comments
Post a Comment