ಪ್ರತಿವಾದಿ ವಿಚಾರಣೆಗೆ ಹಾಜರಾಗಿಲ್ಲ ಎಂದರೆ ದೂರಿನಲ್ಲಿಯ ಆರೋಪಗಳನ್ನು ಒಪ್ಪಿಕೊಂಡಂತೆ

ಗ್ರಾಹಕ ವ್ಯಾಜ್ಯಗಳಲ್ಲಿ ಸಾಮಾನ್ಯವಾಗಿ ಪ್ರತಿವಾದಿಗಳು ವಿಚಾರಣೆಗೆ ಹಾಜರಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ವಿಚಾರಣೆ ಏಕಪಕ್ಷೀಯವಾಗಿ ನಡೆಯುತ್ತದೆ. ಮತ್ತು ದೂರಿನಲ್ಲಿಯ ಆರೋಪಗಳನ್ನು ಪ್ರತಿವಾದಿ ಒಪ್ಪಿಕೊಂಡಿದ್ದಾರೆ ಎಂದೇ ಕಾನೂನುಪ್ರಕಾರವಾಗಿ ಭಾವಿಸಲಾಗುತ್ತದೆ. ಪ್ರಕರಣವೊಂದರಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗವೇ ಇದನ್ನು ಸ್ಪಷ್ಟಪಡಿಸಿದೆ. ಗುಡ್ ಲಕ್ ಡೆವೆಲಪರ್ಸ್ ಗೋವಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಒಂದು ಕಂಪನಿ. ಇವರ ಮಾರ್ಗೋವಾದ ‘ಕದಂಬ ಆರ್ಕೇಡ್ ಪ್ರಾಜೆಕ್ಟ್’ನಲ್ಲಿ ವಿಘ್ನೇಶ್ ಶಾನುಭಾಗ್ ಎನ್ನುವವರು ಒಂದು ಅಪಾರ್ಟ್‌ಮೆಂಟ್ ಖರೀದಿಸುತ್ತಾರೆ. ೨೦೧೨ರ ನವೆಂಬರ್‌ನಲ್ಲಿ ಅದು ಅವರ ವಶಕ್ಕೆ ಬರುತ್ತದೆ. ೨೧-೧-೨೦೧೩ರಂದು ವಿಘ್ನೇಶ್ ಹೆಸರಿಗೆ ಅದು ನೊಂದಣಿಯಾಗುತ್ತದೆ. ೨೦೧೩ರ ಮಳೆಗಾದಲ್ಲಿ ಅಪಾರ್ಟ್‌ಮೆಂಟ್‌ನ ಗೋಡೆಗಳು ತೇವವಾಗುತ್ತಿರುವುದು ಕಂಡುಬಂತು. ೨೦೧೪ರ ಜೂನ್‌ನಲ್ಲಿ ಭಾರೀ ಮಳೆಯ ಕಾರಣ ಗೋಡೆಗಳಲ್ಲಿ ನೀರು ಬರುವುದು ಹೆಚ್ಚಿತು. ಛಾವಣಿಯಲ್ಲೂ ಸೋರಿಕೆ ಕಂಡಿತು. ಗೋಡೆಯಲ್ಲಿ ನಿಲ್ಲಿಸಿದ್ದ ಕಟ್ಟಿಗೆಯ ಕಬೋರ್ಡ್ ಕೂಡ ಕೆಟ್ಟುಹೋಯಿತು. ಇದನ್ನು ಗುಡ್ ಲಕ್ ಡೆವಲಪರ್ಸ್ ಗಮನಕ್ಕೆ ತರಲಾಯಿತು. ಇದರ ದುರಸ್ತಿವೆಚ್ಚವೆಂದು ೩೦ ಸಾವಿರ ರುಪಾಯಿಯ ಚೆಕಅನ್ನು ವಿಘ್ನೇಶ್ ಅವರಿಗೆ ಕಂಪನಿ ನೀಡಿತು. ಇದು ತಮ್ಮ ಲಕ್ ಎಂದು ಕೊಂಡು ವಿಘ್ನೇಶ್ ಚೆಕ್‌ಅನ್ನು ಬ್ಯಾಂಕ್‌ಗೆ ಹಾಕಿದರೆ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣಕ್ಕೆ ಅದು ತಿರಸ್ಕೃತವಾಗುತ್ತದೆ. ಈಗ ವಿಘ್ನೇಶ್, ಇದು ತಮ್ಮ ಅನ್‌ಲಕ್ ಎಂದುಕೊಂಡು ದಕ್ಷಿಣ ಗೋವಾ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ಪ್ರತಿವಾದಿ ಗುಡ್‌ಲಕ್ ಡೆವಲಪರ್ಸ್ ನೋಟಿಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗುವುದಿಲ್ಲ. ಜಿಲ್ಲಾ ವೇದಿಕೆ ಏಕಪಕ್ಷೀಯವಾಗಿ ಪ್ರಕರಣವನ್ನು ಇತ್ಯರ್ಥಪಡಿಸುತ್ತದೆ. ಪ್ರತಿವಾದಿಯು ದೂರುದಾರರಿಗೆ ೩೦ ಸಾವಿರ ರುಪಾಯಿ ನೀಡಬೇಕು. ಪರಿಹಾರವಾಗಿ ೨೦ ಸಾವಿರ ರುಪಾಯಿ ಮತ್ತು ವೆಚ್ಚ ೫ ಸಾವಿರ ರುಪಾಯಿ ೩೦ ದಿನಗಳೊಳಗೆ ನೀಡಬೇಕು. ಇದಕ್ಕೆ ತಪ್ಪಿದರೆ ಈ ಎಲ್ಲ ಮೊತ್ತಕ್ಕೆ ಶೇ.೯ರಂತೆ ಬಡ್ಡಿಯನ್ನು ದೂರು ದಾಖಲಾದ ದಿನದಿಂದ ನೀಡಬೇಕು ಎಂದು ಆದೇಶಿಸುತ್ತದೆ. ಇದರ ವಿರುದ್ಧ ತಮ್ಮ ಲಕ್ ಪರೀಕ್ಷಿಸಿಕೊಳ್ಳಲು ಗುಡ್‌ಲಕ್ ಡೆವೆಲಪರ್ಸ್, ಗೋವಾ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸುತ್ತದೆ. ಆದರೆ ರಾಜ್ಯ ಆಯೋಗ ಜಿಲ್ಲಾ ವೇದಿಕೆಯ ತೀರ್ಪನ್ನೇ ಎತ್ತಿಹಿಡಿಯುತ್ತದೆ. ಅದು ತನ್ನ ಆದೇಶದಲ್ಲಿ, ಮೂಲ ದೂರಿನಲ್ಲಿ ಪ್ರತಿವಾದಿಯಾಗಿದ್ದವರು ದೂರುದಾರರಿಗೆ ತಾನು ಚೆಕ್ ನೀಡಿದ ದಿನದಿಂದ ಹಣ ಸಂದಾಯವಾಗುವ ದಿನದ ವರೆಗೆ ೩೦ ಸಾವಿರ ರು.ಗೆ ಶೇ.೯ರಂತೆ ಬಡ್ಡಿಯನ್ನು ನೀಡಬೇಕು. ವ್ಯಾಜ್ಯದ ವೆಚ್ಚ ೫ ಸಾವಿರ ರು.ಗೆ ಬದಲಾಗಿ ೧೫ ಸಾವಿರ ರು. ನೀಡಬೇಕು. ಅಲ್ಲದೆ ಪ್ರಸ್ತುತ ಮೇಲ್ಮನವಿ ವೆಚ್ಚವಾಗಿ ೧೦ ಸಾವಿರ ರು. ನೀಡಬೇಕು. ಇವೆಲ್ಲವನ್ನು ಈ ಆದೇಶದ ೩೦ ದಿನಗಳೊಳಗೆ ನೀಡಬೇಕು ಎಂದು ತೀರ್ಪಿತ್ತಿತು. ಇದರ ವಿರುದ್ಧ ಡೆವೆಲಪರ್ ಸಂಸ್ಥೆ ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಅದರ ವಕೀಲರು, ಕೆಳಗಿನ ಎರಡೂ ಗ್ರಾಹಕ ನ್ಯಾಯಾಲಯಗಳ ತೀರ್ಪನ್ನು ಅನೂರ್ಜಿತಗೊಳಿಸಬೇಕು. ಏಕೆಂದರೆ ಗ್ರಾಹಕ ಕಾಯ್ದೆಯ ಸೆಕ್ಷನ್ ೨೪-ಎ ಪ್ರಕಾರ ಎರಡು ವರ್ಷಗಳ ಅವಧಿಯೊಳಗೆ ದೂರು ಸಲ್ಲಿಸಬೇಕು. ಆದರೆ ಈ ಕಾಲ ಮಿತಿ ಇಲ್ಲಿ ಪಾಲನೆಯಾಗಿಲ್ಲ. ಅಪಾರ್ಟ್‌ಮೆಂಟ್ ಖರೀದಿಯ ವ್ಯವಹಾರ ಕುದುರಿದ್ದು ೨೧-೧-೨೦೧೩ರಂದು. ಗೋಡೆಯಲ್ಲಿ ಸೋರಿಕೆ ಕಂಡುಬಂದದ್ದು ಜುಲೈ ೨೦೧೩ರಲ್ಲಿ. ಇಲ್ಲಿಂದ ಎರಡು ವರ್ಷಗಳ ಅವಧಿ ಎಂದರೆ ೨೦೧೫ರ ಜುಲೈಯೊಳಗೆ ದೂರು ಸಲ್ಲಿಸಬೇಕಿತ್ತು. ಆದರೆ ೨೦೧೫ರ ಆಗಸ್ಟ್‌ನಲ್ಲಿ ದೂರು ಸಲ್ಲಿಕೆಯಾಗಿದೆ. ಕಾರಣ ದೂರನ್ನು ಅಮಾನ್ಯ ಮಾಡಬೇಕು ಎಂದು ಕೋರಿದರು. ಕಾಲಮಿತಿ ಮೀರಲಾಗಿದೆ ಎಂಬುದನ್ನು ರಾಷ್ಟ್ರೀಯ ಆಯೋಗ ಒಪ್ಪಲಿಲ್ಲ. ೨೦೧೩ರ ಜುಲೈನಲ್ಲಿ ಗೋಡೆಗಳಲ್ಲಿ ತೇವ ಕಂಡುಬಂತು. ಭಾರೀ ಮಳೆಯಿಂದ ಛಾವಣಿಯಲ್ಲಿ ನೀರು ಸೋರಿದ್ದು ೨೦೧೪ರ ಜೂನ್‌ನಲ್ಲಿ. ೨೦೧೫ರ ಆಗಸ್ಟ್‌ನಲ್ಲಿ ದೂರು ದಾಖಲಾಗಿದ್ದರೆ ಅದರಲ್ಲಿ ಕಾಲ ಮಿತಿ ಮೀರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ರಾಷ್ಟ್ರೀಯ ಆಯೋಗ ಹೇಳಿತು. ಇನ್ನು, ಮೇಲ್ಮನವಿದಾರರ ವಕೀಲರ ಮತ್ತೊಂದು ಆಕ್ಷೇಪ. ಅಪಾರ್ಟ್‌ಮೆಂಟ್ ಗುಣಮಟ್ಟದ ಬಗ್ಗೆ ಪರಿಣತರ ಅಭಿಪ್ರಾಯವನ್ನು ಕೆಳಗಿನ ನ್ಯಾಯಾಲಯ ಪಡೆದುಕೊಂಡಿಲ್ಲ ಎನ್ನುವುದು. ಇದರಲ್ಲಿಯೂ ಯಾವುದೇ ಹುರುಳಿಲ್ಲ. ಏಕೆಂದರೆ ಪ್ರತಿವಾದಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರೂ ಅವರು ಹಾಜರಾಗಲಿಲ್ಲ. ವಿಚಾರಣೆಗೆ ಹಾಜರಾಗಿಲ್ಲ ಎಂದರೆ ದೂರಿನಲ್ಲಿಯ ಆರೋಪಗಳನ್ನು ಒಪ್ಪಿಕೊಂಡಂತೆ ಎಂದು ನ್ಯಾಯಾಲಯ ಭಾವಿಸುತ್ತದೆ. ಇದರ ಹೊರತಾಗಿಯೂ ದೂರುದಾರರು ತಮ್ಮ ದೂರಿನಲ್ಲಿ ತಮ್ಮ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಿರುವಾಗ ದೂರುದಾರರು ಪ್ರತಿವಾದಿಯ ಸೇವಾನ್ಯೂನತೆ, ಅಂದರೆ, ಕಟ್ಟಡದಲ್ಲಿ ದೋಷವಿರುವುದನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲು ಬರುವುದಿಲ್ಲ. ಅಲ್ಲದೆ, ಪ್ರತಿವಾದಿಯು ಕಟ್ಟಡದಲ್ಲಿಯ ದೋಷವನ್ನು ಸರಿಪಡಿಸುವುದಕ್ಕಾಗಿಯೇ ದೂರುದಾರರಿಗೆ ೩೦ ಸಾವಿರ ರು.ನ ಚೆಕ್ ನೀಡಿದ್ದು. ಅದೇ ತಿರಸ್ಕೃತಗೊಂಡಿರುವುದು. ಇದನ್ನು ಗಮನಿಸಿದಾಗಲೂ ಕಟ್ಟಡದಲ್ಲಿ ದೋಷವಿರುವುದು ತಿಳಿಯುತ್ತದೆ. ಕಾರಣ, ಕೆಳ ನ್ಯಾಯಾಲಯಗಳ ತೀರ್ಪನ್ನು ತಿದ್ದುವ, ರದ್ದುಪಡಿಸುವ ಅಗತ್ಯ ಕಾಣುವುದಿಲ್ಲ ಎಂದು ಮೇಲ್ಮನವಿಯನ್ನು ವಜಾ ಮಾಡಿತು.

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು