ಷರತ್ತು ಉಲ್ಲಂಘಿಸಿದ ವಾಹನ ಅಪಘಾತಕ್ಕೀಡಾದರೆ ವಿಮೆ ಸಿಗುವುದೆ?

* ಅಂದಾಜಿಸಿದ ಹಾನಿಯ ಶೇ.75ರಷ್ಟು ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶವೇ ಇದೆ. ಪ್ರತಿಯೊಂದು ವಾಹನಕ್ಕೂ ವಿಮೆಯನ್ನು ಮಾಡಿಸುವುದು ಕಡ್ಡಾಯ. ಅದು ಸ್ವಂತ ಬಳಕೆಗಿರಬಹುದು ಅಥವಾ ಬಾಡಿಗೆಗೆ ಬಳಸುವ ಉದ್ದೇಶದ್ದು ಇರಬಹುದು. ನೀವು ಪಡೆದುಕೊಳ್ಳುವ ಸೌಲಭ್ಯಗಳ ಆಧಾರದ ಮೇಲೆ ವಿಮೆಯ ಕಂತು ನಿರ್ಧಾರವಾಗುತ್ತದೆ. ವಿಮೆಯ ಪಾಲಿಸಿಯಲ್ಲಿ ಹಲವು ಷರತ್ತುಗಳು ಇರುತ್ತದೆ. ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸುವಂತಿಲ್ಲ. ಚಾಲಕನು ಸರಿಯಾಗಿರುವ ಚಾಲನೆ ಪರವಾನಿಗೆಯನ್ನು ಹೊಂದಿರಬೇಕು, ಅಪ್ರಾಪ್ತರು ವಾಹನ ಚಲಾಯಿಸಬಾರದು, ಪರವಾನಿಗೆ ಇರುವುದಕ್ಕಿಂತ ಹೆಚ್ಚಿನ ಜನರನ್ನು ತುಂಬಬಾರದು ಇತ್ಯಾದಿ ಇತ್ಯಾದಿ. ಈ ಷರತ್ತಿನ ಉಲ್ಲಂಘನೆಯಾದರೆ ವಿಮೆ ಸಿಗುವುದಿಲ್ಲವೆ? ಸಿಗುವುದಾದರೆ ಎಷ್ಟು ಸಿಗುತ್ತದೆ? ಖಾಸಗಿ ನೊಂದಣಿ ವಾಹನವನ್ನು ಬಾಡಿಗೆಗೆ ಬಳಸಿದಾಗ ಅಪಘಾತವಾದ ಒಂದು ಪ್ರಕರಣ ಇಲ್ಲಿದೆ. ಮಧ್ಯಪ್ರದೇಶದ ಇಂದೋರದ ಅನಿಲ್‌ ರಾಮ ಸ್ವರೂಪ್‌ ಅವರು ವಾಹನವೊಂದನ್ನು ಖಾಸಗಿ ಬಳಕೆಗೆಂದು ನೊಂದಾಯಿಕೊಂಡು ಅದಕ್ಕೆ ಐಎಫ್‌ಎಫ್‌ಸಿಐ ಟೋಕಿಯೋ ಜಿಐಸಿ ಲಿ.ನಿಂದ ವಿಮೆ ಪಡೆದುಕೊಂಡಿದ್ದರು. ಆದರೆ ಅವರು ಆ ವಾಹನವನ್ನು ದೂರದರ್ಶನದ ಸಿಬ್ಬಂದಿಯ ಸಾಗಾಟಕ್ಕೆ ಬಳಸುತ್ತಿದ್ದರು. ಆ ವಾಹನ ಅಪಘಾತಕ್ಕೆ ಈಡಾಗುತ್ತದೆ. ಅವರು ವಿಮೆ ಪರಿಹಾರವನ್ನು ಕೋರುತ್ತಾರೆ. ವಿಮೆ ಕಂಪನಿಯು ಸರ್ವೇಯರ್‌ ಒಬ್ಬರನ್ನು ನೇಮಿಸುತ್ತದೆ. ಅವರು ಹಾನಿಯನ್ನು 1,96,850 ರು. ಎಂದು ವರದಿ ನೀಡುತ್ತಾರೆ. ಆದರೆ ಅಪಘಾತಕ್ಕೆ ಈಡಾಗಿರುವ ವಾಹನವನ್ನು ಬಾಡಿಗೆಗೆ ಬಳಸುತ್ತಿದ್ದರು. ಅದು ವಿಮೆ ಷರತ್ತಿನ ಉಲ್ಲಂಘನೆಯಾಗಿದೆ. ಕಾರಣ ವಿಮೆಯನ್ನು ನೀಡಲು ಬರುವುದಿಲ್ಲ ಎಂದು ವಿಮೆ ಕಂಪನಿ ತಕರಾರು ಎತ್ತಿತು. ಆದರಿಂದ ನೊಂದ ಅನಿಲ್‌ ಅವರು ಇಂದೋರ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ವಿಮೆ ಕಂಪನಿಯ ವಾದವನ್ನು ಆಲಿಸಿದ ಜಿಲ್ಲಾ ವೇದಿಕೆಯು ನಾನ್-ಸ್ಟ್ಯಾಂಡರ್ಡ್‌ ಬೇಸಿಸ್‌ನಲ್ಲಿ ಸರ್ವೇಯರ್‌ ಮಾಡಿರುವ ಅಂದಾಜಿನ ಶೇ.75ರಷ್ಟನ್ನು ಪರಿಹಾರ ನೀಡುವಂತೆ ಆದೇಶ ನೀಡಿತು. ಇದರ ವಿರುದ್ಧ ವಿಮೆ ಕಂಪನಿ ಮಧ್ಯಪ್ರದೇಶ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ರಾಜ್ಯ ಆಯೋಗವು ಜಿಲ್ಲಾ ವೇದಿಕೆಯ ತೀರ್ಪನ್ನು ಅನುಮೋದಿಸಿತು. ಸುಪ್ರೀಂ ಕೋರ್ಟ್‌ ಅಮಲೇಂದು ಶಾಹೂ ವಿರುದ್ದ ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ಪ್ರಕರಣದಲ್ಲಿ ನೀಡಿರುವ ತೀರ್ಪು ಇಂಥ ಪ್ರಕರಣಗಳಿಗೆಲ್ಲ ಒಂದು ತೋರುಗಂಭ. ಜಿಲ್ಲಾ ವೇದಿಕೆಯ ತೀರ್ಪಿನಲ್ಲಿ ಯಾವುದೇ ತಪ್ಪುಗಳಿಲ್ಲ ಎಂದು ಹೇಳಿತು. ಅಮಲೇಂದು ಶಾಹೂ ಪ್ರಕರಣದಲ್ಲಿಯೂ ವಿಮೆ ಕಂಪನಿ ರಾಷ್ಟ್ರೀಯ ಗ್ರಾಹಕ ಆಯೋಗದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು. ಅಲ್ಲದೆ ನ್ಯೂ ಇಂಡಿಯಾ ಅಶ್ಯೂಅರೆನ್ಸ್‌ ಕಂಪನಿ ವಿರುದ್ಧ ನಾರಾಯಣ ಪ್ರಸಾದ ಪಾಠಕ ಪ್ರಕರಣದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನ ಅಪಘಾತಕ್ಕೆ ಈಡಾಗಿರುತ್ತದೆ. ಆದರೆ ಅದರ ಚಾಲಕನು ಸರಿಯಾದ ಚಾಲನೆ ಪರವಾನಿಗೆಯನ್ನು ಹೊಂದಿರಲಿಲ್ಲ. ಆಗಲೂ ಕೂಡ ಅದು ನಾನ್-ಸ್ಟ್ಯಾಂಡರ್ಡ್‌ ಬೇಸಿಸ್‌ನಲ್ಲಿ ಪರಿಹಾರ ನೀಡುವಂತೆ ತೀರ್ಪು ನೀಡಿತ್ತು. ಪರಿಹಾರದ ಶೇಕಡಾವಾರು ಹೀಗಿರಬೇಕು- 1.ಪರವಾನಿಗೆ ಪಡೆದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ, ಮೂರು ವರ್ಷಗಳ ಕಂತಿನ ಹಣದ ಮೊತ್ತ ಅಥವಾ ಅಂದಾಜು ಮಾಡಿದ ಹಾನಿಯ ಶೇ.25ರಷ್ಟು- ಇದರಲ್ಲಿ ಯಾವುದು ಅಧಿಕವೋ ಅಷ್ಟನ್ನು ಕಡಿತ ಮಾಡಿ ಪರಿಹಾರ ನೀಡಬೇಕು. 2.ಪರವಾನಿಗೆ ಪಡೆದ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಸಾಗಿಸುತ್ತಿದ್ದಾಗ ಅಪಘಾತವಾದರೆ ಅಂದಾಜು ಮಾಡಿದ ಹಾನಿಯ ಶೇ.75ರಷ್ಟು ಪರಿಹಾರ ನೀಡಬೇಕು. 3.ಬಳಕೆಯ ಮಿತಿಯೂ ಸೇರಿದಂತೆ ಇನ್ನಿತರ ಯಾವುದೇ ಷರತ್ತಿನ ಉಲ್ಲಂಘನೆಯಾದಲ್ಲಿ ಶೇ.75ರಷ್ಟು ಪರಿಹಾರ ನೀಡಬೇಕು. ಪ್ರಸ್ತುತ ಪ್ರಕರಣದಲ್ಲಿ ಖಾಸಗಿ ವಾಹನವನ್ನು ಬಾಡಿಗೆಗೆ ಬಳಸಿ ಷರತ್ತನ್ನು ಉಲ್ಲಂಘಿಸಲಾಗಿದೆ ಎಂಬುದು ವಿಮೆ ಕಂಪನಿಯ ವಾದವಾಗಿದೆ. ಮೇಲಿನ ಮಾರ್ಗದರ್ಶಿ ಸೂತ್ರದ ಪ್ರಕಾರ ಇದರಲ್ಲಿ ಪರಿಹಾರವನ್ನು ಸಾರಾಸಗಟಾಗಿ ನಿರಾಕರಿಸಲು ಬರುವುದಿಲ್ಲ. ಈ ಪ್ರಕರಣದಲ್ಲಿ 5 ಲಕ್ಷ ರುಪಾಯಯಿಗಳ ಪರಿಹಾರವನ್ನು ಕೋರಲಾಗಿದೆ. ಆದರೆ ಕ್ರೋಡೀಕೃತ ಪರಿಹಾರವೆಂದು 2.50 ಲಕ್ಷ ರುಪಾಯಿ ಪರಿಹಾರವನ್ನು ಯಾವುದೇ ಬಡ್ಡಿ ಇಲ್ಲದೆ ಆರು ವಾರಗಳ ಒಳಗೆ ನೀಡಬೇಕು. ಆರು ವಾರಗಳ ಮಿತಿ ಮೀರಿದರೆ ಆ ದಿನದಿಂದ ಸಂದಾಯ ಮಾಡುವ ವರೆಗೆ ಶೇ.9ರಷ್ಟು ಬಡ್ಡಿಯನ್ನು ಸೇರಿಸಿ ಕೊಡಬೇಕು ಎಂದು ಆದೇಶ ನೀಡಿತ್ತು. ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹಾಕಿಕೊಟ್ಟ ಈ ಸೂತ್ರವನ್ನು ಅನ್ವಯಿಸಿಯೇ ಮಧ್ಯಪ್ರದೇಶ ರಾಜ್ಯ ಆಯೋಗ ಈ ಪ್ರಕರಣದಲ್ಲಿ ತೀರ್ಪನ್ನು ನೀಡಿತ್ತು. ಆದರೆ ವಿಮೆ ಕಂಪನಿಯ ವಕೀಲರು, ಸುಪ್ರೀಂ ಕೋರ್ಟ್‌ ತೀರ್ಪು ಸರ್ಕಾರದ ವಿಮೆ ಕಂಪನಿಗಳಿಗೆ ಅನ್ವಯಿಸುತ್ತದೆ. ತಮ್ಮದು ಖಾಸಗಿ ಕಂಪನಿ. ಸರ್ಕಾರದ ವಿಮೆ ಕಂಪನಿಗಳ ಉದ್ದೇಶ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಾಗಿರುತ್ತದೆ. ಖಾಸಗಿ ವಿಮೆ ಕಂಪನಿಗಳ ಉದ್ದೇಶ ಅವುಗಳ ಲಾಭವಾಗಿರುತ್ತದೆ ಎಂದು ವಾದಿಸಿದರು. ಆದರೆ ಈ ವಾದ ರಾಷ್ಟ್ರೀಯ ಆಯೋಗಕ್ಕೆ ಮನದಟ್ಟಾಗಲಿಲ್ಲ. 1986ರ ಗ್ರಾಹಕ ಕಾಯ್ದೆಯ ಉದ್ದೇಶ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವುದಾಗಿದೆ. ಅದು ಸರ್ಕಾರಿ ಸಂಸ್ಥೆಯೇ ಇರಬಹುದು, ಖಾಸಗಿ ಸಂಸ್ಥೆಯೇ ಇರಬಹುದು. ಅವುಗಳಲ್ಲಿ ಭೇದ ಎಣಿಸಲು ಬರುವುದಿಲ್ಲ. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಈ ರೀತಿಯ ತಾರತಮ್ಯ ಪರಿಗಣಿಸುವಂತೆ ಹೇಳಿಲ್ಲ. ಹಾಗೇನಾದರೂ ತಾರತಮ್ಯ ಮಾಡುವುದಿದ್ದರೆ ಸುಪ್ರೀಂ ಕೋರ್ಟ್‌ ಆ ಕುರಿತು ಸ್ಪಷ್ಟನೆ ನೀಡಿರುತ್ತಿತ್ತು. ನ್ಯಾಯದಲ್ಲಿ ಸಮಾನತೆ ಇರಬೇಕು. ಸರ್ಕಾರಿ ಮತ್ತು ಖಾಸಗಿ ಎಂಬ ತಾರತಮ್ಯ ಇರುವುದಿಲ್ಲ. ಅಲ್ಲದೆ ಅಮಲೇಂದು ಶಾಹೂ ಪ್ರಕರಣದಲ್ಲಿ ತೀರ್ಪು ಬಂದಿರುವುದು 2010ರಲ್ಲಿ. ಇದು 2022. ಈ ಅವಧಿಯಲ್ಲಿ ವಿಮೆ ಕಂಪನಿಯು ಸ್ಪಷ್ಟೀಕರಣವನ್ನು ಸುಪ್ರೀಂ ಕೋರ್ಟ್‌ನಿಂದಲೇ ಪಡೆದುಕೊಳ್ಳಬಹುದಿತ್ತು. ನಮ್ಮ ಮಟ್ಟಿಗಂತೂ ಅಮಲೇಂದು ಶಾಹೂ ಪ್ರಕರಣ ಸ್ಪಷ್ಟವಾಗಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆ ನಡುವೆ ಭೇದ ಮಾಡಿಲ್ಲ. ಎರಡೂ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ಸಂಸ್ಥೆಗಳು. ಈ ಹಿನ್ನೆಲೆಯಲ್ಲಿ ವಿಮೆ ಕಂಪನಿಯು ಜಿಲ್ಲಾ ವೇದಿಕೆಯು 08-07-2014ರಂದು ನೀಡಿರುವ ತೀರ್ಪನ್ನು ನಾಲ್ಕು ವಾರಗಳೊಳಗೆ ತಪ್ಪದೆ ಪಾಲಿಸಬೇಕು ಎಂದು ಆದೇಶಿಸಿತು. ತೀರ್ಪು- 03 Jan 2022

Comments

Popular posts from this blog

ಬಸ್ಸಿನಲ್ಲಿ ತಿಗಣೆ ಕಚ್ಚಿದ್ದಕ್ಕೆ ಪರಿಹಾರ

ತಪ್ಪಾಗಿ ಖಾತೆ ತರೆದು ನಂತರ ಬಡ್ಡಿಗೆ ಕೈಎತ್ತಿದ ಅಂಚೆ ಇಲಾಖೆಗೆ ಮುಖಭಂಗ

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು