ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ

* ರಾಷ್ಟ್ರೀಯ ಆಯೋಗ ಕೂಡ ಜಿಲ್ಲಾ ವೇದಿಕೆಯ ತೀರ್ಪನ್ನು ಸಮ್ಮತಿಸಿತು ಗ್ರಾಹಕ ನ್ಯಾಯಾಲಯ ಕೆಲವೊಮ್ಮೆ ನಿಯಮಗಳ ಆಚೆಗೂ ಸಾಧ್ಯತೆಗಳ ಹುಡುಕಾಟ ನಡೆಸುತ್ತದೆ. ಗ್ರಾಹಕರಿಗೆ ನ್ಯಾಯ ಒದಗಿಸುವ ಕಟ್ಟಕಡೆಯ ಸಾಧ್ಯತೆಯನ್ನೂ ಅದು ಪರಿಶೀಲಿಸುತ್ತದೆ. ಮೆಡಿಕ್ಲೇಮ್‌ ಪಾಲಿಸಿಯಲ್ಲಿ ರೋಗಿ ಆಸ್ಪತ್ರೆಗೆ ಸೇರಿದಾಗ ಅದರ ವೆಚ್ಚ, ಔಷಧ ಎಲ್ಲದಕ್ಕೂ ವಿಮೆ ಸಿಗುತ್ತದೆ. ಆದರೆ ರೋಗಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ರೋಗಕ್ಕೆ ಸಂಬಂಧಿಸಿ ಬಳಸುವ ಉಪಕರಣ ಖರೀದಿಸಿದರೆ ಅದಕ್ಕೆ ಪರಿಹಾರ ಸಿಗಬಹುದೆ? ಉದಾಹರಣೆಗೆ ಸರಾಗವಾಗಿ ಉಸಿರಾಡಲು ಮನೆಯಲ್ಲಿ ಬಳಸುವ ಸಿಪಿಎಪಿ ಯಂತ್ರ. ರೋಗಕ್ಕೆ ಸಂಬಂಧಿಸಿ ವೈದ್ಯರೇ ಖರೀದಿಗೆ ಸೂಚಿಸಿದ್ದು. ಇದಕ್ಕೆ ವಿಮೆ ಪರಿಹಾರ ಕೋರಿದಾಗ ಆದದ್ದು ಏನು? ಈ ಪ್ರಕರಣ ನ್ಯೂ ಇಂಡಿಯಾ ಅಶ್ಯೂಅರೆನ್ಸ್‌ ಕಂಪನಿ ಮತ್ತು ಹರ್ಯಾಣದ ಸೋನಾಲಿ ಸರೀನ್‌ ಅವರ ನಡುವಿನದು. ಇದು ಮೆಡಿಕ್ಲೇಮ್‌ಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಜಿಲ್ಲಾ ವೇದಿಕೆ 08-03-2010ರಂದು ತೀರ್ಪು ನೀಡಿತ್ತು. ಮೇಲ್ಮನವಿಯಲ್ಲಿ ರಾಜ್ಯ ಆಯೋಗವು 09-12-2014ರಂದು ಜಿಲ್ಲಾ ವೇದಿಕೆಯ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ವಿಮೆ ಕಂಪನಿಯು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಈ ಮೇಲ್ಮನವಿಯನ್ನು 40 ದಿನ ವಿಳಂಬವಾಗಿ ಸಲ್ಲಿಸಿತ್ತು. ಆದರೆ ಅದನ್ನು ಮನ್ನಿಸುವಂತೆ ಮನವಿ ಮಾಡಿಕೊಂಡಿತ್ತು. ವಿಳಂಬವಾಗಿದೆ ಎಂಬ ಏಕೈಕ ಕಾರಣಕ್ಕೆ ಅದನ್ನು ವಜಾ ಮಾಡುವ ಬದಲು ಪ್ರಕರಣವನ್ನು ಅದರ ಅರ್ಹತೆಗೆ ಅನುಗುಣವಾಗಿ ತೀರ್ಮಾನಿಸುವ ನಿರ್ಧಾರವನ್ನು ರಾಷ್ಟ್ರೀಯ ಆಯೋಗ ಕೈಗೊಂಡಿತು. ಇಲ್ಲಿ ಮೆಡಿಕ್ಲೇಮ್‌ ಪಾಲಿಸಿಯನ್ನು ಪಡೆದ ವ್ಯಕ್ತಿಯು ಸಿಪಿಎಪಿ (ಮನೆಯಲ್ಲಿ ಸರಾಗವಾಗಿ ಉಸಿರಾಡಲು ಬಳಸುವ) ಯಂತ್ರವನ್ನು ಖರೀದಿಸಿದ್ದರು. ವಿಮೆಯ ಇತರ ಪರಿಹಾರಗಳ ಜೊತೆ ಈ ಯಂತ್ರಕ್ಕೂ ಪರಿಹಾರ ಕೇಳಿದ್ದರು. ವಿಮೆ ಕಂಪನಿ ಪಾಲಿಸಿಯ ನಿಯಮ 4.4.15ರ ಪ್ರಕಾರ ಈ ಯಂತ್ರಕ್ಕೆ ಪರಿಹಾರ ನೀಡಲು ಬರುವುದಿಲ್ಲ ಎಂದು ಹೇಳಿ ವಿಮೆಯನ್ನು ನಿರಾಕರಿಸಿತ್ತು. ಆದರೆ ಜಿಲ್ಲಾ ವೇದಿಕೆಯು ದೂರನ್ನು ಪುರಸ್ಕರಿಸಿ ವಿಮೆ ಕಂಪನಿಯು ದೂರುದಾರರಿಗೆ 70 ಸಾವಿರ ರು. ನೀಡಬೇಕು ಮತ್ತು ಪರಿಹಾರವಾಗಿ 50 ಸಾವಿರ ಹಾಗೂ ವ್ಯಾಜ್ಯದ ವೆಚ್ಚವೆಂದು 10 ಸಾವಿರ ರು. ನೀಡಬೇಕು ಎಂದು ಆದೇಶಿಸಿತ್ತು. ಜಿಲ್ಲಾ ವೇದಿಕೆಯು ತನ್ನ ತೀರ್ಪಿನಲ್ಲಿ, ವಿಮೆಯ ನಿಯಮಗಳನ್ನಷ್ಟೇ ಅಲ್ಲ, ಕೆಲವು ವಿಶಿಷ್ಟವಾದ ಅಂಶಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತ್ತು. ಜಿಲ್ಲಾ ವೇದಿಕೆಯ ತೀರ್ಪಿಗೆ ವಿಮೆ ಕಂಪನಿಯು ಮೇಲ್ಮನವಿ ಸಲ್ಲಿಸುವಾಗ ತನ್ನ ತೃಪ್ತಿಯನ್ನು ವ್ಯಕ್ತಪಡಿಸಿತ್ತು. ಹೀಗಿರುವಾಗ ಮೇಲ್ಮನವಿ ವಿಚಾರಣೆಯಲ್ಲಿ ತಾಂತ್ರಿಕವಾಗಿ ಯಾವುದೇ ಪ್ರಯೋಜನವಿಲ್ಲ. ಇದರಿಂದ ನ್ಯಾಯದಾನಕ್ಕೆ ದೊಡ್ಡಮಟ್ಟದಲ್ಲಿ ನೆರವಾಗುತ್ತದೆ ಎಂದೂ ಭಾವಿಸುವುದಿಲ್ಲ. ನ್ಯಾಯ ನೀಡುವುದೊಂದೇ ಅಲ್ಲ, ನ್ಯಾಯ ನೀಡಲಾಗಿದೆ ಎಂದು ತೋರಿಸುವುದೂ ಮುಖ್ಯ ಎಂಬ ಪ್ರಸಿದ್ಧ ಮಾತೊಂದು ಕಾನೂನಿನಲ್ಲಿದೆ. ಯಥಾಸ್ಥಿತಿಗೆ ಎರಡೂ ಪಕ್ಷದವರು ಒಪ್ಪಿಕೊಂಡಾಗಲೂ ಪ್ರದರ್ಶನಾತ್ಮಕ ನ್ಯಾಯ ಅಗತ್ಯವಿರುತ್ತದೆ. ವಿಮೆ ಕಂಪನಿ ತೀರ್ಪನ್ನು ಬಲವಂತವಾಗಿ ಒಪ್ಪಿಕೊಂಡಿದೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಿರುವಾಗ ಮೇಲ್ಮನವಿ ವಿಚಾರಣೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ರಾಜ್ಯ ಆಯೋಗ ಮೇಲ್ಮನವಿಯನ್ನು ವಜಾ ಮಾಡಿತ್ತು. ರಾಷ್ಟ್ರೀಯ ಆಯೋಗ ಇದನ್ನೆಲ್ಲ ಪರಿಗಣಿಸಿತ್ತಲ್ಲದೆ ವಿವಾದದ ಮೊತ್ತ 1.30 ಲಕ್ಷ ರು.ಗಳು ತುಂಬ ಚಿಕ್ಕದು. ಪ್ರಕರಣ ದಾಖಲಾಗಿದ್ದು 2007ರಲ್ಲಿ ಅಂದರೆ 15 ವರ್ಷಗಳಷ್ಟು ಹಿಂದೆ. ಪ್ರಕರಣದಲ್ಲಿಯ ವಿಶಿಷ್ಟ ಅಂಶಗಳನ್ನು ಪರಿಗಣಿಸಿ ರಾಜ್ಯ ಆಯೋಗ ವಿವಾದಕ್ಕೆ ಅಂತ್ಯ ಹಾಡುವುದು ಸೂಕ್ತ ಎಂದು ನಿರ್ಧರಿಸಿದೆ. ಅದರ ಆದೇಶವನ್ನು ಮಾರ್ಪಡಿಸಬೇಕು ಎಂದು ನಮಗೆ ಅನ್ನಿಸುತ್ತಿಲ್ಲ. ಆದರೆ ಈ ತೀರ್ಪನ್ನು ಒಂದು ಉದಾಹರಣೆಯಾಗಿ ಪರಿಗಣಿಸಬಾರದು ಎಂದು ಹೇಳಿತು. ತೀರ್ಪು-14 Jul 2022

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು