ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

* ಮೇಲ್ಮನವಿ ವಿಳಂಬವಾಗಿ ಸಲ್ಲಿಸಿದ್ದಕ್ಕೆ ಕಾರಣಗಳು ಬಲವಾಗಿರಬೇಕು ಗ್ರಾಹಕ ವೇದಿಕೆಗಳಲ್ಲಿ ದೂರು ಸಲ್ಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ಕಾಲಮಿತಿ ಇರುತ್ತದೆ. ಆ ಕಾಲಮಿತಿಯನ್ನು ಮೀರಿ ದೂರು ಸಲ್ಲಿಸುವುದು ಮತ್ತು ಮೇಲ್ಮನವಿ ಸಲ್ಲಿಸುವುದನ್ನು ಮಾಡಿದರೆ ದೂರನ್ನು ಅಥವಾ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸದೆಯೂ ಇರಬಹುದಾಗಿದೆ. ಸಾಮಾನ್ಯವಾಗಿ ಘಟನೆ ನಡೆದ ಎರಡು ವರ್ಷಗಳ ಒಳಗಾಗಿ ದೂರನ್ನು ಸಲ್ಲಿಸಬಹುದು. ಹಾಗೆಯೇ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಜ್ಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅದೇ ರೀತಿ ರಾಜ್ಯ ಆಯೋಗದ ತೀರ್ಪಿನ ವಿರುದ್ಧ ರಾಷ್ಟ್ರೀಯ ಆಯೋಗದಲ್ಲಿ ತೀರ್ಪು ಬಂದ 45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದು. ರಾಷ್ಟ್ರೀಯ ಆಯೋಗದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ 30 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಈ ಕಾಲಮಿತಿಯಿಂದಾಗಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿದೆ. ಅತಿ ವಿಳಂಬವಾಗಿ ಸಲ್ಲಿಸಿದ ಮೇಲ್ಮನವಿಯೊಂದನ್ನು ರಾಜ್ಯ ಆಯೋಗ ವಜಾ ಮಾಡಿದ ಪ್ರಕರಣವೊಂದು ಇಲ್ಲಿದೆ. ಇದು ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿ. ವಿರುದ್ಧ ಮಂಗಳೂರಿನ ಲೋಹಿತ್‌ ಶೆಟ್ಟಿ ಎಂಬವರ ದೂರು. ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ತೀರ್ಪಿನ ವಿರುದ್ಧ ವಿಹಾನ್‌ ಕಂಪನಿಯು ಸಲ್ಲಿಸಿದ ಮೇಲ್ಮನವಿಯಾಗಿತ್ತು. ಮೆ.ವಿಹಾನ್‌ ಡೈರೆಕ್ಟ್‌ ಸೆಲ್ಲಿಂಗ್‌ (ಇಂಡಿಯಾ) ಪ್ರೈವೇಟ್‌ ಲಿ. ಇದೊಂದು ಕ್ಯೂ ನೆಟ್‌ ಕಂಪನಿಯಾಗಿತ್ತು. ಇದರ ಸದಸ್ಯತ್ವವನ್ನು ಪಡೆದುಕೊಂಡರೆ ಐಶ್‌ಆರಾಮಿ ವಸ್ತುಗಳನ್ನು ಪೂರೈಸಲಾಗುತ್ತಿತ್ತು. ಸದಸ್ಯತ್ವ ಪಡೆಯಲು ದೂರುದಾರರನ್ನು ಪ್ರಿಯಾಂಕಾ ಬಾಬು ನಾಯ್ಡು ಎನ್ನುವವರು ಸೂಚಿಸಿದ್ದರು. ಅವರ ಪ್ರಕಾರ ಸೆಪ್ಟೆಂಬರ್ 2‌017ರಲ್ಲಿ ಅವರು ಈ ಕ್ಯೂ ನೆಟ್‌ ಕಂಪನಿಯ ಸದಸ್ಯರಾಗುತ್ತಾರೆ. ಇದಕ್ಕಾಗಿ ಅವರು 1.85 ಲಕ್ಷ ರುಪಾಯಿಗಳನ್ನು ಬೇರೆಬೇರೆ ದಿನಾಂಕಗಳಂದು ಟಿ.ಪಿ.ಕಿರಣ್‌ ಎಂಬವರ ಖಾತೆಗೆ ನೆಫ್ಟ್‌ ಮೂಲಕ ಸಂದಾಯ ಮಾಡಿರುತ್ತಾರೆ. ಇದಾದ ಬಳಿಕ ವಿಹಾನ್‌ ಕಂಪನಿಯು ವಿವಿಧ ಐಶ್‌ಆರಾಮಿ ವಸ್ತುಗಳ ಫೋಟೋಗಳನ್ನು ದೂರುದಾರರಿಗೆ ಕಳುಹಿಸುತ್ತದೆ. ಆದರೆ ಅವರಿಗೆ ಐಡಿ ಕಾರ್ಡ್‌ ಕೊಡುವುದಿಲ್ಲ. 1.85 ಲಕ್ಷ ರು. ಹಣವನ್ನು ಪಡೆದೂ ಐಡಿ ಕಾರ್ಡ್‌ ಕೊಡದೆ ಇರುವುದು ಸೇವಾ ನ್ಯೂನತೆ ಎಂದು ಲೋಹಿತ್‌ ಶೆಟ್ಟಿ ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ಮತ್ತು ತಮ್ಮ ಹಣವನ್ನು ಹಿಂತಿರುಗಿಸುವಂತೆ ಆದೇಶಿಸಬೇಕು ಎಂದು ಕೋರುತ್ತಾರೆ. ಇವರು ಹಣ ಸಂದಾಯ ಮಾಡಿದ ಟಿ.ಪಿ.ಕಿರಣ ಯಾರು ಎಂಬುದು ಇವರಿಗೆ ಗೊತ್ತಿರಲಿಲ್ಲ, ಈ ಕಿರಣ ಎನ್ನುವ ವ್ಯಕ್ತಿಯೇ ವಿಹಾನ್‌ ಕಂಪನಿಯಲ್ಲಿ ಸ್ವತಂತ್ರ ಪ್ರತಿನಿಧಿಯಾಗಿ ನೋಂದಣಿ ಮಾಡಿಸಿಕೊಂಡಿದ್ದ. ಜಿಲ್ಲಾ ವೇದಿಕೆಯಲ್ಲಿ ದೂರುದಾರ ಲೋಹಿತ್‌ ಶಟ್ಟಿ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಲಾಗಿ ಅವರು ಹಣ ಸಂದಾಯ ಮಾಡಿದ ವ್ಯಕ್ತಿಗೂ ವಿಹಾನ್‌ ಕಂಪನಿಗೂ ಸಂಬಂಧವಿರುವುದು ದೃಢಪಟ್ಟಿತು. ಹೀಗೆ ಹಣ ಪಡೆದು ವಸ್ತುಗಳನ್ನು ನೀಡದೆ ಇರುವುದು ಸೇವಾನ್ಯೂನತೆ ಮತ್ತು ನ್ಯಾಯಯುತವಲ್ಲದ ವ್ಯವಹಾರ ಎಂದು ತೀರ್ಮಾನಿಸಲಾಯಿತು. ದೂರುದಾರರು ಕಂಪನಿಯೊಂದಿಗೆ ಸಂಬಂಧ ಹೊಂದಿಲ್ಲ ಎಂದು ಹೇಳುವುದಕ್ಕೆ ಸೂಕ್ತವಾದ ಪುರಾವೆ ಅವರ ಬಳಿ ಇರಲಿಲ್ಲ. ಅವರು ಕಳುಹಿಸಿದ್ದ ಫೋಟೋಗಳು, ಐಡಿ ಕಾರ್ಡ್‌ ಸಂಬಂಧದಲ್ಲಿ ಕಳುಹಿಸಿದ್ದ ಮಾಹಿತಿ ಇವೆಲ್ಲ ಕಂಪನಿಗೂ ದೂರುದಾರರಿಗೂ ಇರುವ ಸಂಬಂಧವನ್ನು ಹೇಳುತ್ತಿತ್ತು. ಈ ಹಿನ್ನೆಲೆಯಲ್ಲಿ ವಿಹಾನ್‌ ಕಂಪನಿಯು ದೂರುದಾರರಿಗೆ 1.85 ಲಕ್ಷ ರು.ಗಳನ್ನು 02-09-2017ರಿಂದ ಶೇ.9ರಂತೆ ಬಡ್ಡಿ ಸೇರಿಸಿ ಕೊಡಬೇಕು ಎಂದು ಆದೇಶಿಸಿತು. ಜೊತೆಗೆ ಪರಿಹಾರವೆಂದು 30 ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು 5 ಸಾವಿರ ರು. ನೀಡುವಂತೆಯೂ ಹೇಳಿತು. ಈ ತೀರ್ಪನ್ನು ಪ್ರಶ್ನಿಸಿ ವಿಹಾನ್‌ ಕಂಪನಿಯು ಕರ್ನಾಟಕ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಆದರೆ ಮೇಲ್ಮನವಿಯನ್ನು 763 ದಿನಗಳಷ್ಟು ವಿಳಂಬವಾಗಿ ಸಲ್ಲಿಸಲಾಗಿತ್ತು. ಹೀಗೆ ವಿಳಂಬವಾಗಿ ಮೇಲ್ಮನವಿ ಸಲ್ಲಿಸುವಾಗ ಯಾವ ಕಾರಣದಿಂದ ವಿಳಂಬವಾಯಿತು ಎಂಬುದನ್ನು ಸಕಾರಣವಾಗಿ ವಿವರಿಸಬೇಕಾಗುತ್ತದೆ. ಅರ್ಜಿಯಲ್ಲಿ ವಿಳಂಬಕ್ಕೆ ವಿವರಿಸಲಾದ ಕಾರಣಗಳು ಸ್ಪಷ್ಟವಾಗಿ ಆಡಳಿತಾತ್ಮಕ ಸ್ವರೂಪದವಾಗಿದ್ದವು. ಆಡಳಿತಾತ್ಮಕ ವಿಳಂಬ ಮತ್ತು ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗುವಷ್ಟು ಕಾರಣಗಳಾಗಲಾರವು ಎಂಬುದನ್ನು ಗ್ರಾಹಕ ಆಯೋಗಗಳು ಆಗಾಗ ಸ್ಪಷ್ಟಪಡಿಸುತ್ತಲೇ ಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮೇಲ್ಮನವಿ ವಿಚಾರಣೆಗೆ ಯೋಗ್ಯವಲ್ಲ ಎಂದು ರಾಜ್ಯ ಆಯೋಗ ತೀರ್ಮಾನಿಸಿತು. ಈ ಸಂಬಂಧದಲ್ಲಿ ಅದು ರಾಷ್ಟ್ರೀಯ ಗ್ರಾಹಕ ಆಯೋಗವು ಮೆ.ಟಿಡಿಐ ಇನ್‌ಫ್ರಾಸ್ಟ್ರಕ್ಚರ್‌ ವಿರುದ್ಧ ಕುಲ್ವಿಂದರ್‌ ಸಿಂಗ್‌ ಬಹ್ಲ್‌ ಪ್ರಕರಣದಲ್ಲಿ ಮತ್ತು ಕೇರ್‌ ಹಾಸ್ಪಿಟಲ್‌ ನಾಗಪುರ ವಿರುದ್ಧ ನರೇಶ್‌ ಗೋಪಾಲಕೃಷ್ಣ ವ್ಯಾಸ್‌ ಪ್ರಕರಣದಲ್ಲಿ ಇದೇ ಮಾನದಂಡವನ್ನು ಬಳಸಿದ್ದನ್ನು ಉಲ್ಲೇಖಿಸಿತು. ಮತ್ತು ಮೇಲ್ಮನವಿಯನ್ನು ವಜಾ ಮಾಡಿತು.

Comments

Popular posts from this blog

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ