ಸರ್ವೆ ವರದಿ ಬಂದ 30 ದಿನದೊಳಗೆ ವಿಮೆ ಪರಿಹಾರ ನೀಡುವುದು ಕಡ್ಡಾಯ

* ಸರ್ವೆಯರ್‌ ತನ್ನ ವರದಿಯನ್ನು 30ರಿಂದ45 ದಿನಗಳೊಳಗೆ ನೀಡಲೇಬೇಕು ವಿಮೆ ಕಂಪನಿಗಳು ಅಥವಾ ವಿಮೆ ಪಡೆದವರು ಹಾನಿಯ ಅಂದಾಜಿಗೆ ಸರ್ವೆಯರನ್ನು ನೇಮಿಸಿದಾಗ ಅವರು ಮನಬಂದಂತೆ ವಿಳಂಬ ಮಾಡಲು ಬರುವುದಿಲ್ಲ. ನೇಮಕ ಪತ್ರ ಸಿಕ್ಕ ಬಳಿಕ 30 ದಿನಗಳೊಳಗೆ ಹೆಚ್ಚೆಂದರೆ 45 ದಿನಗಳೊಳಗೆ ವರದಿ ಸಲ್ಲಿಸಬೇಕು. ಹೀಗೆ ವರದಿ ಸಲ್ಲಿಕೆಯಾದ 30 ದಿನಗಳೊಳಗೆ ವಿಮೆ ಕಂಪನಿ ಪರಿಹಾರ ಸಂದಾಯ ಮಾಡಬೇಕು. ಇದನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌‌ಡಿಎ)ದ ನಿಯಮ 9 ಹೇಳುತ್ತದೆ. ಹಾಗೆಯೇ ಪರಿಹಾರ ನೀಡುವುದು ಆರು ತಿಂಗಳಿಗೂ ವಿಳಂಬವಾದರೆ ಬ್ಯಾಂಕ್‌ ಬಡ್ಡಿ ದರಕ್ಕಿಂತ ಶೇ.2ರಷ್ಟು ಹೆಚ್ಚಿಗೆ ನೀಡಬೇಕಾಗುತ್ತದೆ. ಈ ಪ್ರಕರಣ ಹೈದ್ರಾಬಾದದ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಮತ್ತು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ನಡುವಿನದು. ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಇದು ಒಂದು ಪಬ್ಲಿಕ್‌ ಲಿ. ಕಂಪನಿ. ಇದು ಯಂತ್ರೋಪಕರಣಗಳು ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಾಗಿತ್ತು. ಟೆಲ್ಕೋ, ಅಶೋಕ್‌ ಲೇಲ್ಯಾಂಡ್‌, ಎಲ್‌ ಆ್ಯಂಡ್‌ ಟಿ, ಜಾಂಡೀರ್‌, ಮಹೀಂದ್ರಾ ಮತ್ತು ಮಹೀಂದ್ರಾ, ಎಸ್ಕಾರ್ಟ್‌, ಬಜಾಜ್‌ ಆಟೋ ಮತ್ತು ಹೊಂಡಾ ಮೋಟಾರ್ಸ್‌ನಂಥ ಪ್ರಮುಖ ಕಂಪನಿಗಳಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿತ್ತು. ಇವರ ಹೆಚ್ಚಿದ ಬೇಡಿಕೆಗಳನ್ನು ಪೂರೈಸಲು ಮತ್ತು ತನ್ನ ವ್ಯವಹಾರವನ್ನು ವಿಸ್ತರಿಸಲು ಕಂಪನಿಯು ಜರ್ಮನಿಯಿಂದ ಕೆಲವು ಯಂತ್ರಗಳನ್ನು ತರಿಸಲು ಮುಂದಾಯಿತು. ಇದಕ್ಕೆ ಐಡಿಬಿಐ ಬ್ಯಾಂಕ್‌ ಹಣಕಾಸಿನ ನೆರವನ್ನು ನೀಡಿತು. ಆಮದು ಮಾಡಿಕೊಳ್ಳಲು ಉದ್ದೇಶಿಸಿದ್ದ ಯಂತ್ರವು ಜರ್ಮನಿಯಲ್ಲಿ ಸಿದ್ಧವಾದಮೇಲೆ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಅದಕ್ಕೆ ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂಪನಿಯಿಂದ ಮರೈನ್‌ ಕಾರ್ಗೋ ಸ್ಪೆಸಿಫಿಕ್‌ ವೋಯೇಜ್‌ ಪಾಲಿಸಿಯನ್ನು 29-01-2001ರಂದು ಪಡೆದುಕೊಂಡಿತು. ಈ ಪಾಲಿಸಿಯ ಮೌಲ್ಯ 5.7 ಕೋಟಿ ರುಪಾಯಿ ಆಗಿತ್ತು. ಇದರಲ್ಲಿ ವಿಮೆಯ ಪಾಲಿಸಿ ಕಂತು, ಯಂತ್ರದ ಮೌಲ್ಯ ಮತ್ತು ಸೀಮಾ ಸುಂಕ ಸೇರಿತ್ತು. ಯಂತ್ರದ ಬಿಡಿಭಾಗಗಳನ್ನು ಸುರಕ್ಷಿತವಾಗಿ 11 ಪ್ಯಾಕ್‌ ಮಾಡಿ ಹ್ಯಾಂಬರ್ಗ್‌ ಬಂದರಿನಿಂದ 03-03-2001ರಂದು ಚೆನ್ನೈ ಬಂದರಿಗೆ ರವಾನಿಸಲಾಯಿತು. 25-04-2001ರಂದು ಅದು ಚೆನ್ನೈ ಬಂದರು ತಲುಪಿತು. ಅಲ್ಲಿ ಹಡಗಿನಿಂದ ಇಳಿಸುವಾಗ ಮಿಲ್ಲಿಂಗ್‌ ಮತ್ತು ಬೋರಿಂಗ್‌ ಹೆಡ್‌ ಇದ್ದ 5ನೆ ಪ್ಯಾಕ್‌ ಫೋರ್ಕ್‌ ಲಿಫ್ಟ್‌ನಿಂದ ಜಾರಿ ಕೆಳಕ್ಕೆ ಬಿತ್ತು. ಇದಕ್ಕೆ ಹಾನಿಯಾಗಿರಬಹುದು ಎಂಬ ಪೂರ್ವಾನುಮಾನದಿಂದ ವಿಮೆ ಕಂಪನಿಗೆ 02-05-2001ರಂದೇ ಪತ್ರಮುಖೇನ ತಿಳಿಸಲಾಯಿತು. ವಿಮೆ ಕಂಪನಿಯು ಅದೇ ದಿನ ಸರ್ವೆ ಮಾಡುವುದಕ್ಕೆಂದು ಮೆ. ಸುವೇಗಾ ಸರ್ವೆಯರ್ಸ್‌ರನ್ನು ನೇಮಿಸಿತು. ಹಾನಿಗೊಳಗಾದ ಪ್ಯಾಕೇಜನ್ನು 4 ದಿನ ತಪಾಸಣೆ ಮಾಡಿದ ಅವರು 7-05-2001ರಂದು ತಮ್ಮ ವರದಿ ನೀಡಿದರು. ಕಾರ್ಡ್‌ಬೋರ್ಡಿನ ದೊಡ್ಡದಾದ ಬಾಕ್ಸ್‌ ಹರಿದಿದೆ. ಅದೇ ರೀತಿಯ ಕಾರ್ಡ್‌ಬೋರ್ಡಿನ ಬಾಕ್ಸ್‌ಗಳು ಚೆನ್ನಾಗಿರುವ ರೀತಿಯಲ್ಲಿಯೇ ಇವೆ.‌ ಇಳಿಜಾರು ಚೌಕಟ್ಟಿನ ತುದಿಭಾಗದಲ್ಲಿ ಒಂದು ಸೀಳು ಹಾಗೂ ಬಾಗಿರುವುದು ಕಂಡುಬಂದಿದೆ. ಪ್ಲಂಗರ್‌ ಪಂಪಿನ ಬ್ರಾಕೆಟ್‌ನಲ್ಲಿ ಬಾಗುವಿಕೆ ಕಂಡಿದೆ. ತಳದ ಕಟ್ಟಿಗೆಯ ಹಲಗೆ ಎಣ್ಣೆಯಿಂದ ತೊಯ್ದಿರುವುದು ಕಾಣುತ್ತಿದ್ದು, ಸೋರಿಕೆ ಇದೆ ಎಂದು ಹೇಳಬಹುದು. ಕ್ರಾಸ್‌ ರೇಲ್‌ ಗೈಡ್‌ನ ತಳಭಾಗದಲ್ಲಿ ಆಳವಾದ ಗೀರು ಇದೆ. ಇವೆಲ್ಲ ಕಾರಣಗಳಿಂದ ಅವುಗಳ ರಿಪೇರಿಯಾಗದೆ ಒಂದಕ್ಕೊಂದು ಹೊಂದಿಕೊಳ್ಳುವ ಹಾಗೆ ಕಾಣುವುದಿಲ್ಲ. ಅವುಗಳ ಕಾರ್ಯನಿರ್ವಹಣೆಯ ದೋಷವನ್ನು ಅದರ ಪ್ಲಾಂಟಿನಲ್ಲಿ ಜೋಡಿಸಿದ ಮೇಲಷ್ಟೇ ಗೊತ್ತಾಗುವುದು. ಅಲ್ಲದೆ ಹಾನಿಗೊಳಗಾದ ಬಾಕ್ಸನ್ನು ಹಡಗಿನಿಂದ ಸುರಕ್ಷಿತವಾಗಿಯೇ 26-04-2001ರಂದು ದಡಕ್ಕೆ ಇಳಿಸಲಾಗಿತ್ತು. ಆದರೆ 30-04-2001ರಂದು ವಾಹನಕ್ಕೆ ಅದನ್ನು ಬಂದರಿನ ಸಿಬ್ಬಂದಿ ಏರಿಸುವಾಗ ಫೋರ್ಕ್‌ಲಿಫ್ಟ್‌ನಿಂದ ಜಾರಿ 4-5 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿರುವುದು ಎಂದು ವರದಿಯಲ್ಲಿ ಹೇಳಲಾಗಿತ್ತು. ಸರ್ವೇಯರ್‌ ಸಲಹೆಯಂತೆ ಮದ್ರಾಸ್‌ ಪೋರ್ಟ್‌ ಟ್ರಸ್ಟ್‌ನಿಂದ ಲ್ಯಾಂಡಿಂಗ್‌ ರಿಮಾರ್ಕ್ಸ್ ಪಡೆದುಕೊಳ್ಳಲಾಯಿತು. ನಂತರ ಅವುಗಳನ್ನು ಚೆನ್ನೈ ಹತ್ತಿರದ ತಿರುವೊತ್ತಿಯುರ್‌ನ ಕಸ್ಟಮ್ಸ್‌ನವರ ದಾಸ್ತಾನು ಮಳಿಗೆಗೆ ಸಾಗಿಸಲಾಯಿತು. ಸುಂಕದ ವಿಷಯದಲ್ಲಿ ಚರ್ಚೆ ನಡೆದು ಇತ್ಯರ್ಥವಾಗಲು 03-12-2001ರ ವರೆಗೆ ಸಮಯ ಹಿಡಿಯಿತು. ಆ ಬಳಿಕ 06-12-2001ರ ವರೆಗೆ ಹೈದ್ರಾಬಾದದ ಬಾಲನಗರಕ್ಕೆ ಯಂತ್ರಗಳನ್ನು ಸಾಗಿಸಲಾಯಿತು. ವಿಮೆ ಪಡೆದ ಮೆ.ಲೋಕೇಶ್‌ ಮೆಷಿನ್ಸ್‌ ಲಿ. ಯಂತ್ರದ ಉತ್ಪಾದಕರಾದ ಜರ್ಮನಿಯ ಮೆ.ಅಡಾಲ್ಪ್ ವಾಲ್ಡ್ರಿಚ್‌ ಕೋಬರ್ಗ್‌ಗೆ ಯಂತ್ರಕ್ಕೆ ಹಾನಿಯಾಗಿರುವ ಮಾಹಿತಿಯನ್ನು ಮುಟ್ಟಿಸುತ್ತಾರೆ. ಕಂಪನಿಯ ಪ್ರತಿನಿಧಿಗಳು 18-10-2002ರಂದು ಭೇಟಿ ನೀಡಿ, ಹಾನಿಯಾಗಿರುವ ಯಂತ್ರದ ಭಾಗಗಳನ್ನು ಜರ್ಮನಿಗೆ ವಾಪಸ್ಸು ಕಳುಹಿಸಲು ಸೂಚಿಸುತ್ತಾರೆ. ಅಲ್ಲಿ ಅದನ್ನು ದುರಸ್ತಿ ಮಾಡಿ ಕಳುಹಿಸುವುದದಾಗಿ ತಿಳಿಸುತ್ತಾರೆ. ಹಾಗೆ ಮರಳಿ ಕಳುಹಿಸಿದ ಯಂತ್ರದ ಭಾಗಗಳನ್ನು ದುರಸ್ತಿ ಮಾಡಿ ಜರ್ಮನಿಯಿಂದ ಭಾರತಕ್ಕೆ 20-08-2003ರಂದು ಕಳುಹಿಸಿಕೊಡುತ್ತಾರೆ. ಮೆ.ಲೋಕೇಶ್‌ ಮೆಷಿನ್ಸ್‌ ಲಿ.ನವರು 12-10-2002ರಂದು ವಿಮೆ ಕಂಪನಿಗೆ ಹಾನಿಯ ಅಂದಾಜು ಸಲ್ಲಿಸಿ ವಿಮೆ ಪರಿಹಾರ ಕೋರುತ್ತಾರೆ. ಆಗ ವಿಮೆ ಕಂಪನಿಯು ಸಿಕಂದರಾಬಾದದ ಅಶೋಕ ವಿದ್ಯಾರ್ಥಿ ಎಂಬವರನ್ನು ಮತ್ತೊಂದು ಸರ್ವೆಗೆ ನೇಮಿಸುತ್ತದೆ. ಅವರು ಸರ್ವೆ ಮಾಡುತ್ತಾರೆ. ಆದರೆ ವರದಿಯನ್ನು ಮೆ.ಲೋಕೇಶ್‌ ಮೆಷಿನ್ಸ್‌ ಲಿ.ಗೆ ನೀಡುವುದಿಲ್ಲ. ವಿಮೆ ಕಂಪನಿಯು 20-03-2003ರಂದು ಪತ್ರ ಬರೆದು, ವಿಮೆ ಪರಿಹಾರ ನೀಡಲು ಬರುವುದಿಲ್ಲ. ಏಕೆಂದರೆ ದಾಸ್ತಾನು ಮಳಿಗೆಯಿಂದ ಹೈದ್ರಾಬಾದಕ್ಕೆ ಒಯ್ಯುವಾಗ ನಮಗೆ ತಿಳಿಸಿಲ್ಲ. ಹಾನಿಯನ್ನು ಕಡಿಮೆ ಮಾಡುವುದು ವಿಮೆ ಪಡೆದವರ ಜವಾಬ್ದಾರಿಯಾಗಿದೆ. ವಿಮೆ ಪಡೆದವರು 12-10-2002ರ ವರೆಗೂ ಹಾನಿಯ ವಿವರವನ್ನು ಸಲ್ಲಿಸಲು ವಿಫಲರಾಗಿದ್ದಾರೆ. ಇದು ಅನಗತ್ಯ ವಿಳಂಬ. ಕಾರಣ ವಿಮೆ ಪರಿಹಾರ ನೀಡುವುದಿಲ್ಲ ಎಂದು ಹೇಳಿತು. ಅಸಲಿಗೆ ದೂರುದಾರರು 1986ರ ಗ್ರಾಹಕ ರಕ್ಷಣೆ ಕಾಯ್ದೆಯ ಅಡಿಯಲ್ಲಿ ಗ್ರಾಹಕರೇ ಅಲ್ಲ ಎಂದೂ ವಾದಿಸಿತು. ಮೆ.ಲೋಕೇಶ್‌ ಮೆಷಿನ್ಸ್‌ ಲಿ.ನವರು ವಿಮೆ ಕಂಪನಿಗೆ 17-04-2003ರಂದು ಒಂದು ಮನವಿಯನ್ನು ನೀಡಿ, ಅದರ ತಕರಾರುಗಳಿಗೆ ಸಮಜಾಯಯಿಷಿ ನೀಡಿದರು. ಆದರೆ ವಿಮೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದುದರಿಂದ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ವಿಮೆ ಕಂಪನಿಯಿಂದ ಸೇವಾನ್ಯೂನತೆ ತಲೆದೋರಿದೆ ಎಂದು 22-04-2004ರಂದು ದೂರನ್ನು ದಾಖಲಿಸಿದರು. 2,08,36,791 ರುಪಾಯಿ ಪರಿಹಾರವನ್ನು ಶೇ.18ರಷ್ಟು ಬಡ್ಡಿ ಸಹಿತ ನೀಡಬೇಕು. ತಮಗಾಗಿರುವ ಮಾನಸಿಕ ಕಿರಿಕಿರಿಗೆ 30 ಲಕ್ಷ ರುಪಾಯಿ, ವ್ಯಾಜ್ಯ ವೆಚ್ಚ ಮತ್ತು ಬರಬಹುದಾದ ಇತರ ಪರಿಹಾರಗಳನ್ನು ಕೊಡಿಸಬೇಕು ಎಂದು ಕೋರಿದರು. ರಾಷ್ಟ್ರೀಯ ಆಯೋಗವು ಎರಡೂ ಕಡೆಯ ವಾದ ಪ್ರತಿವಾದಗಳನ್ನು ಪರಿಶೀಲಿಸಿತು. ಸುವೇಗಾ ಸರ್ವೇಯರ್‌ ತನ್ನ ಸರ್ವೆ ವರದಿಯನ್ನು ವಿಮೆ ಕಂಪನಿಗೆ ನೀಡದೆ ಇರುವುದಕ್ಕೆ ಯಾವುದೇ ಕಾರಣಗಳು ಕಂಡು ಬರಲಿಲ್ಲ. ಹಾನಿಯಾಗಿರುವುದು ಬಂದರಿನಲ್ಲಿಯೇ ಎಂಬುದು ಸ್ಪಷ್ಟವಾಗಿದೆ. ಹಾನಿಯ ಅಂದಾಜು ಅದರ ತಯಾರಕರ ವರದಿಯ ಬಳಿಕವಷ್ಟೇ ದೊರೆಯಬೇಕಾದುದು. ಸೀಮಾ ಸುಂಕ ರಿಯಾಯಯ್ತಿಗಾಗಿ ಯಂತ್ರಗಳು ಕಸ್ಟಮ್ಸ್‌ ಅಧಿಕಾರಿಗಳ ಬಳಿಯೇ ಏಳು ತಿಂಗಳು ಇದ್ದವು. ವಿಮೆ ಅವಧಿಯು ಯಂತ್ರಗಗಳು ಚೆನ್ನೈ ತಲುಪಿದ ಎರಡು ತಿಂಗಳಿಗೆ ಮುಗಿಯುತ್ತದೆ. ನಿಜ. ಆದರೆ ಯಂತ್ರಗಳಿಗೆ ಹಾನಿ ಸಂಭವಿಸಿದ್ದು ಬಂದರಿನಲ್ಲಿಯೇ, ಅಂದರೆ ವಿಮೆ ಅವಧಿಯಲ್ಲಿಯೇ. ಹಾನಿಯನ್ನು ಕಡಿಮೆ ಮಾಡುವುದು ವಿಮೆ ಪಡೆದವರ ಕರ್ತವ್ಯ ಎಂದು ವಿವಿಧ ನಿಯಮಗಳನ್ನು ಹೇಳಿ ವಿಮೆ ನಿರಾಕರಿಸಲು ಈ ಪ್ರಕರಣದಲ್ಲಿ ಬರುವುದಿಲ್ಲ. 07-05-2001ರ ಸರ್ವೆ ವರದಿಯಲ್ಲಿ ಹಾನಿಯಾಗಿರುವುದು ಸಿದ್ಧವಾಗಿದೆ. ಯಂತ್ರ ತಯಾರಿಸಿದ ಕಂಪನಿಯ ಪ್ರತಿನಿಧಿಗಳೇ ಬಂದು ಅದನ್ನು ಜರ್ಮನಿಗೆ ಹಿಂದಕ್ಕೆ ಕಳುಹಿಸಲು ಸಲಹೆ ನೀಡಿದ್ದಾರೆ. ಯಂತ್ರ ತಯಾರಕರು ದುರಸ್ತಿ ಶುಲ್ಕ 1,27,60,000 ರುಪಾಯಿ ಎಂದು ಹೇಳದ್ದಾರೆ. 46 ಸಾವಿರ ರು. ಸಾಗಾಟದ ವಿಮೆ, ವಿಮೆದಾರರಿಗೆ ಆದ ಆತಂಕಕ್ಕೆ 1,04,520.00 ರು. ಮತ್ತು ಸರ್ವೆ ಶುಲ್ಕ 3600.00 ರು. ವಿಮೆ ಕಂಪನಿ ನೀಡಬೇಕು. ದೂರುದಾರರು ಸೀಮಾ ಸುಂಕ 50,46,739.00 ರು. ಕೇಳಿದ್ದಾರೆ. ಆದರೆ ಅವರು ವಿಮೆ ಪಡೆದಿರುವುದು 30 ಲಕ್ಷಕ್ಕೆ. ಕಾರಣ ಆ ಮೂವತ್ತು ಲಕ್ಷವನ್ನು ಸೇರಿಸಿ ಒಟ್ಟೂ 1,59,14,120.00 ರುಪಾಯಿಗಳನ್ನು ವಿಮೆ ಕಂಪನಿ ನೀಡಬೇಕು. ಹಾನಿ ಅಂದಾಜಿಗೆ ನೇಮಿಸಲ್ಪಡುವ ಸರ್ವೆಯರ್‌ ತನ್ನ ವರದಿಯನ್ನು ನೇಮಕಗೊಂಡ 30 ದಿನಗಳೊಳಗೆ ನೀಡಬೇಕು. ಹೆಚ್ಚೆಂದರೆ 45 ದಿನ ಮೀರ ಬಾರದು. ಮತ್ತು ವರದಿ ಸಲ್ಲಿಕೆಯಾದ ಬಳಿಕ 30 ದಿನಗಳೊಳಗೆ ವಿಮೆ ಕಂಪನಿ ಪರಿಹಾರ ಇತ್ಯರ್ಥಪಡಿಸಬೇಕು. ಹೀಗೆಂದು ವಿಮೆ ಪಡೆದವರ ಹಿತರಕ್ಷಣೆಗೆ ಇರುವ ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ (ಐಆರ್‌‌ಡಿಎ)ದ ನಿಯಮ 9 ಹೇಳುತ್ತದೆ. ಅಲ್ಲದೆ ವಿಮೆ ಕಂಪನಿಯ ಪ್ರಸ್ತಾಪವನ್ನು ವಿಮೆ ಪಡೆದವರು ಒಪ್ಪಿಕೊಂಡ ಏಳು ದಿನಗಳೊಳಗೆ ಹಣ ಸಂದಾಯ ಆಗಬೇಕು. ಅದಕ್ಕಿಂತ ವಿಳಂಬವಾದರೆ ಪ್ರಚಲಿತದಲ್ಲಿರುವ ಬ್ಯಾಂಕ್‌ ಬಡ್ಡಿ ದರಕ್ಕಿಂತ ಶೇ.2ರಷ್ಟು ಹೆಚ್ಚಿನ ಬಡ್ಡಿಯೊಂದಿಗೆ ನೀಡಬೇಕಾಗುತ್ತದೆ. ಹೆಚ್ಚಿನ ಬಡ್ಡಿ 6 ತಿಂಗಳ ನಂತರದ ದಿನದಿಂದ ನೀಡಬೇಕು. ಈ ಪ್ರಕರಣದಲ್ಲಿ ಸರ್ವೆ ವರದಿ ನೀಡಿದ ದಿನ. 12-10-2002. ಈ ಹಿನ್ನೆಲೆಯಲ್ಲಿ ವಿಮೆ ಕಂಪನಿಯು ದೂರುದಾರರಿಗೆ 1,59,14,120.00 ರುಪಾಯಿಗಳನ್ನು ಏಪ್ರಿಲ್‌2003 ರಿಂದ ಶೇ.9ರಷ್ಟು ಬಡ್ಡಿಯೊಂದಿಗೆ ಎರಡು ತಿಂಗಳ ಒಳಗಾಗಿ ಸಂದಾಯ ಮಾಡಬೇಕು ಎಂದು ಆದೇಶಿಸಿತು. ತೀರ್ಪು-01 Jul 2022

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ