ಕಳುವಾದ ವಾಹನಕ್ಕೆ ಪರಿಹಾರ ನಿರಾಕರಿಸುವ ವಿಮೆ ಕಂಪನಿಯ ಯತ್ನ ವಿಫಲ

* ಕಳುವಾದ ನಂತರ ವಿಮೆ ಪಡೆಯಲಾಯಿತೆಂಬ ಅದರ ವಾದ ನಿಲ್ಲಲಿಲ್ಲ. ವಾಹನ ಕಳುವಾದ ಮಾರನೆ ದಿನ ವಿಮೆ ಪಡೆದು ಪರಿಹಾರ ಕೇಳಲಾಗುತ್ತಿದೆ ಎಂದು ವಿಮೆ ಕಂಪನಿಯು ವಾದಿಸಿ ಪರಿಹಾರವನ್ನು ನಿರಾಕರಿಸುವುದಕ್ಕೆ ಯತ್ನಿಸಿ ಜಿಲ್ಲಾ ವೇದಿಕೆಯ ತೀರ್ಪಿನ ವಿರುದ್ಧ ರಾಷ್ಟ್ರೀಯ ವೇದಿಕೆಯ ವರೆಗೂ ಹೋಗಿದ್ದು ತ್ವರಿತ ನ್ಯಾಯದಾನದ ಆಶಯಕ್ಕೆ ವಿರುದ್ಧವಾದದ್ದು ಮತ್ತು ಉದ್ದೇಶಪೂರ್ವಕ ವಿಳಂಬ ನೀತಿ ಅನುಸರಿಸಿದ್ದಕ್ಕೆ ಒಂದು ಉದಾಹರಣೆಯಾಗಿದೆ. ಈ ಪ್ರಕರಣ ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ಲಿ. ಮತ್ತು ಬಿಹಾರದ ಬೋಧಗಯಾದ ನೃಪೇಂದ್ರಕುಮಾರ ಇಂದ್ರಜಿತ್‌ ಸಿಂಗ್‌ ನಡುವಿನದು. ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು 64 ದಿನ ವಿಳಂಬವಾಗಿ ಸಲ್ಲಿಸಲಾಗಿತ್ತು. ಆದರೆ ಪ್ರತಿವಾದಿ ವಕೀಲರಿಂದ ಯಾವುದೇ ಆಕ್ಷೇಪ ಇರದ ಕಾರಣ, ಅರ್ಹತೆಯ ಆಧಾರದಲ್ಲಿ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ವಿಳಂಬವನ್ನು ಮನ್ನಾ ಮಾಡಿ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಗಿತ್ತು. ಜಿಲ್ಲಾ ಗ್ರಾಹಕ ವೇದಿಕೆಯು 12-02-2008ರಂದು ನೀಡಿದ ತೀರ್ಪಿನಲ್ಲಿ ದೂರುದಾರರು ಸೂಕ್ತ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರ ಕಂಡುಕೊಳ್ಳಲು ಆದೇಶಿಸಿತ್ತು. ಇದರ ವಿರುದ್ಧ ಬಿಹಾರ ರಾಜ್ಯ ಗ್ರಾಹಕ ಆಯೋಗದಲ್ಲಿ ನೃಪೇಂದ್ರಕುಮಾರ ಅವರು ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ರಾಜ್ಯ ಆಯೋಗವು ದೂರನ್ನು ಅಂಗೀಕರಿಸುತ್ತದೆ. 04-02-2016ರಂದು ನೀಡಿದ ತೀರ್ಪಿನಲ್ಲಿ ವಿಮೆ ಕಂಪನಿಗೆ ಕಳುವಾಗಿರುವ ವಾಹನಕ್ಕೆ ವಿಮೆ ಮೊತ್ತವನ್ನು ಶೇ.10ರಷ್ಟು ಬಡ್ಡಿಯೊಂದಿಗೆ ನೀಡುವುದಕ್ಕೆ ಆದೇಶಿಸುತ್ತದೆ. ವಾಹನವನ್ನು 29-11-2002ರಂದು ಖರೀದಿಸಿದ್ದು ಎಂಬ ವಿಷಯದಲ್ಲಿ ದೂರುದಾರ ಮತ್ತು ವಿಮೆ ಕಂಪನಿಗೆ ಭಿನ್ನಾಭಿಪ್ರಾಯ ಇರಲಿಲ್ಲ. ಇದಕ್ಕೆ 19-12-2002ರಂದು ವಿಮೆ ಪಡೆಯಲಾಗಿತ್ತು. ಈ ವಾಹನವನ್ನು ಬೋಧಗಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 23-12-2002ರಂದು ಕಳವು ಮಾಡಲಾಗಿತ್ತು. ಇದಕ್ಕೆ ವಿಮೆ ಕಂಪನಿ ಆಕ್ಷೇಪವಿತ್ತು. ವಾಹನ ಕಳುವಾಗಿದ್ದು ಕೋಹ್ಹರ್‌ ಕೈನೂರು ಪಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮತ್ತು ಕಳುವಾಗಿದ್ದು 18-12-2002ರಂದು. ಅಂದರೆ ವಿಮೆ ಪಡೆಯುವುದಕ್ಕೆ ಒಂದು ದಿನ ಮೊದಲು. ಈ ಪ್ರಕರಣದ ಮಹತ್ವದ ಮುದ್ದೆ ಎಂದರೆ ವಾಹನ ಕಳುವಾಗಿರುವ ದಿನಾಂಕ ಮತ್ತು ಸ್ಥಳ. ದೂರುದಾರರು ವಾಹನ ಪಡೆದ ಕೂಡಲೇ ಏಕೆ ವಿಮೆ ಮಾಡಿಸಿರಲಿಲ್ಲ ಎಂಬುದು ಪ್ರಶ್ನೆ. ಅದಕ್ಕೆ ಅವರು ಹೇಳಿದ್ದು, ವಾಹನ ಮಾರಿದವರು ವಿಮೆ ಮಾಡಿಸಿ ಕೊಡುತ್ತೇವೆ ಎಂದು ಹೇಳುತ್ತ ವಿಳಂಬ ಮಾಡಿದ್ದರು. ಈ ಕಾರಣಕ್ಕೆ ತಾವೇ ಅಂತಿಮವಾಗಿ ವಿಮೆಯನ್ನು ಮಾಡಿಸಿಕೊಂಡೆವು ಎಂದು. ವಾಹನ ಕಳುವಾಗಿರುವ ಕುರಿತು ಪೊಲೀಸರು ತನಿಖೆ ನಡೆಸಿ ಸಂಬಂಧಿಸಿದ ಕೋರ್ಟಿಗೆ ವರದಿ ಸಲ್ಲಿಸಿದ್ದರು. ಅದರಲ್ಲಿ ದೂರುದಾರರು ಕಳುವಾಗಿದೆ ಎಂದು ಹೇಳಿರುವ ದಿನಾಂಕ ಮತ್ತು ಸ್ಥಳದ ವಿಷಯದಲ್ಲಿ ವ್ಯತಿರಿಕ್ತವಾದುದು ಏನೂ ಇರಲಿಲ್ಲ. ಪೊಲೀಸರು ತಮ್ಮ ಅಂತಿಮ ವರದಿಯಲ್ಲಿ ವಾಹನವನ್ನು ಹಾಗೂ ಅದನ್ನು ಕಳವು ಮಾಡಿದವರನ್ನು ಪತ್ತೆಹಚ್ಚುವುದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದರು. ವಿಮೆ ಕಂಪನಿಯು ವಾಹನ ಕಳುವಾಗಿರುವ ಸ್ಥಳ ಮತ್ತು ದಿನಾಂಕದ ಕುರಿತು ಕೋರ್ಟಿನಲ್ಲಿ ತಕರಾರು ಸಲ್ಲಿಸಿತ್ತು. ಅದರ ಪ್ರಕಾರ ದೂರುದಾರರು ತಮ್ಮ ಪ್ರತಿನಿಧಿ ವಾಹನದ ವೀಕ್ಷಣೆಗೆ ಹೋದಾಗ ಬೇರೆ ವಾಹನವನ್ನು ತೋರಿಸಿದ್ದಾರೆ. ಈ ಸಂಬಂಧ ತಮ್ಮ ಪ್ರತಿನಿಧಿಯ ವಿರುದ್ಧ ಇಲಾಖಾ ತನಿಖೆಯನ್ನು ನಡೆಸಿ ದಂಡ ವಿಧಿಸಲಾಗಿದೆ. ಇದರ ವಿರುದ್ಧ ಆತ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದ. ಅಲ್ಲಿಯೂ ಆತನ ವಿರುದ್ಧವೇ ತೀರ್ಪು ಬಂದಿರುವುದು. ವಾಹನ ಕಳುವಾದ ಮಾರನೆ ದಿನ ವಿಮೆ ಪಡೆದಿರುವುದು ಎಂದು ವಾದಿಸಿತ್ತು. ಆದರೆ ಕೋರ್ಟ್‌ ಪೊಲೀಸರ ವರದಿಯನ್ನು ಒಪ್ಪಿತ್ತು. ಅದಕ್ಕೆ ವಿಮೆ ಕಂಪನಿ ಪ್ರತಿ ಹೇಳಿರಲಿಲ್ಲ. ಈ ಆಧಾರದಲ್ಲಿ ದೂರುದಾರರು ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಗ್ರಾಹಕ ಆಯೋಗ ಕೂಡ ಚೀಫ್‌ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಅವರು ನೀಡಿದ ತೀರ್ಪನ್ನು ಆಧರಿಸಿಯೇ ದೂರನ್ನು ಪುರಸ್ಕರಿಸಿತು. ಮತ್ತು ವಿಮೆ ಕಂಪನಿ ದೂರುದಾರರಿಗೆ ವಿಮೆ ಪರಿಹಾರ ನೀಡಬೇಕು, ಅದಕ್ಕೆ ಶೇ.10ರಂತೆ ಬಡ್ಡಿ ನೀಡಬೇಕು. ಒಂದು ವೇಳೆ ವಿಮೆ ಮೊತ್ತವನ್ನು ಈಗಾಗಲೇ ಠೇವಣಿ ಮಾಡಿರದೆ ಇದ್ದಲ್ಲಿ ಶೇ.12ರಂತೆ ಬಡ್ಡಿಯನ್ನು ನೀಡಬೇಕು ಎಂದು ಆದೇಶಿಸಿತು. ಇದೀಗ ರಾಷ್ಟ್ರೀಯ ಆಯೋಗದಲ್ಲಿ ವಿಚಾರಣೆಗೆ ಬಂದಾಗ ವಿಮೆ ಕಂಪನಿಯ ಬಳಿ ಹೊಸ ವಿಷಯಗಳು ಏನೂ ಇರಲಿಲ್ಲ. ಇನ್ನೊಂದು ವಿಷಯವೆಂದರೆ ಅದು ನ್ಯಾಯಾಲಯದ ಆದೇಶದ ವಿರುದ್ಧ ಎಲ್ಲಿಯೂ ಮೇಲ್ಮನವಿ ಸಲ್ಲಿಸಿರಲಿಲ್ಲ. ಕಳುವಿನ ವಿಷಯದಲ್ಲಿ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡ ಮೇಲೆ ವಿವಾದ ಇನ್ನೆಲ್ಲಿ ಉಳಿಯಿತು? ಕಾರಣ ಮೇಲ್ಮನವಿಯನ್ನು ವಜಾ ಮಾಡುವುದಾಗಿ ಆದೇಶಿಸಿತು. ವಿಮೆ ಕಂಪನಿ ಜಿಲ್ಲಾ ವೇದಿಕೆಯಲ್ಲಿ ವಿಮೆಯ ಹಣವನ್ನು ಠೇವಣಿ ಮಾಡಿದ್ದಲ್ಲಿ ಅದನ್ನು ಪೇಯೀಸ್ ಅಕೌಂಟ್‌ ಓನ್ಲಿ ಡಿಮಾಂಡ್ ಡ್ರಾಫ್ಟ್‌ ಮೂಲಕ ಸಂದಾಯವಾಗುವಂತೆ ನೋಡಿಕೊಳ್ಳಲು ಜಿಲ್ಲಾ ವೇದಿಕೆಗೆ ತಿಳಿಸಿತು. ತೀರ್ಪು-06 Jul 2022

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ