ವಿಶ್ವವಿದ್ಯಾಲಯಗಳು ನೀಡುವ ಶಿಕ್ಷಣ ಸೇವೆಯಲ್ಲ

* ಶಿಕ್ಷಣ ಸಂಸ್ಥೆಗಳ ವ್ಯಾಜ್ಯ ಗ್ರಾಹಕ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ ಶಿಕ್ಷಣ ಸಂಸ್ಥೆಗಳಿಂದ ನಡೆಯುವ ಸೇವಾನ್ಯೂನತೆಗೆ ಗ್ರಾಹಕ ನ್ಯಾಯಾಲಯಗಳಲ್ಲಿ ಪರಿಹಾರ ಸಿಗಬಹುದೆ ಎಂದು ಕೇಳಿದರೆ ಇಲ್ಲ ಎಂದೇ ಹೇಳಬೇಕು. ಒಂದು ಪ್ರಕರಣದಲ್ಲಿ ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ದೂರುದಾರರ ಪರವಾಗಿ ನೀಡಿದ ತೀರ್ಪನ್ನು ರಾಷ್ಟ್ರೀಯ ಆಯೋಗ ರದ್ದುಪಡಿಸಿದೆ. ಇದು ಪಶ್ಚಿಮ ಬಂಗಾಳದ ಹೌರಾದ ಶ್ರೇಯೋಸಿ ಚಟರ್ಜಿ ಮತ್ತು ರೆಜಿಸ್ಟ್ರಾರ್‌, ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, ಅಭಿಷೇಕಪಟ್ಟಿ, ತಿರುನೆಲ್ವೇಲಿ ನಡುವಿನ ಪ್ರಕರಣ. ಶ್ರೇಯೋಸಿ ಟರ್ಜಿಯವರು ಮೇಲೆ ಹೇಳಿದ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡುತ್ತಿದ್ದರು. ಅವರು 2012ರ ಡಿಸೆಂಬರ್‌ನಲ್ಲಿ ಕೋರ್ಸ್‌ ಮುಗಿಸಿದರೂ ಪ್ರಮಾಣಪತ್ರ ನೀಡಿ ಪದವಿಯನ್ನು ದೃಢೀಕರಿಸಿಲ್ಲ ಎಂಬುದು ದೂರು. ಇದರಲ್ಲಿ ಸೇವಾನ್ಯೂನತೆ ತಲೆದೋರಿದೆ ಎಂದು 1.ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿ, 2.ಪಿಎಸ್‌ಎಸ್‌ ಪ್ರೊಫೆಶನಲ್‌ ಕಾಲೇಜು, ಕೋಲ್ಕತಾ ಮತ್ತು 3.ದುರ್ಗಾಪುರ ಸ್ಕೂಲ್‌ ಆಫ್‌ ಸೈನ್ಸ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌, ದುರ್ಗಾಪುರ, ಪ.ಬಂಗಾಳ ಇವರನ್ನು ಪ್ರತಿವಾದಿಗಳನ್ನಾಗಿ ಮಾಡಿ ಜಿಲ್ಲಾ ವೇದಿಕೆಯಲ್ಲಿ ದೂರನ್ನು ದಾಖಲಿಸಲಾಯಿತು. ತಮಗೆ ತಕ್ಷಣ ಮಾರ್ಕ್ಸ್‌ಕಾರ್ಡ್‌ ಹಾಗೂ ತಾತ್ಕಾಲಿಕ ಪ್ರಮಾಣಪತ್ರ ನೀಡುವಂತೆ ಆದೇಶಿಸಬೇಕು. ಜೊತೆಗೆ ತಮಗೆ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವನ್ನು ಕೊಡಿಸಬೇಕು ಎಂದು ಕೋರಿದರು. ಪ್ರತಿವಾದಿಗಳು ಜಿಲ್ಲಾ ವೇದಿಕೆಯ ಕಡೆ ತಲೆಹಾಕಲೇ ಇಲ್ಲ. ತಮ್ಮ ಪರವಾಗಿ ಯಾವುದೇ ಉತ್ತರವನ್ನು ಸಲ್ಲಿಸಲಿಲ್ಲ. ಜಿಲ್ಲಾ ವೇದಿಕೆಯು ಪ್ರತಿವಾದಿಗಳ ಗೈರುಹಾಜರಿಯಲ್ಲಿ ದೂರನ್ನು ಪುರಸ್ಕರಿಸಿತು. ಪ್ರತಿವಾದಿಗಳು ತಕ್ಷಣ ಮಾರ್ಕ್ಸ್‌ ಕಾರ್ಡ್‌ ಮತ್ತು ತಾತ್ಕಾಲಿಕ ಪ್ರಮಾಣಪತ್ರವನ್ನು ಈ ಆದೇಶದ 30 ದಿನಗಳೊಳಗೆ ದೂರುದಾರರಿಗೆ ನೀಡಬೇಕು. ದೂರುದಾರರಿಗೆ ಆಗಿರುವ ಕಿರಿಕಿರಿಗೆ 70 ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚವೆಂದು 10 ಸಾವಿರ ರು. ಪರಿಹಾರ ನೀಡಬೇಕು ಎಂದು ಆದೇಶ ನೀಡಿತು. ಆಗ ಎಚ್ಚೆತ್ತುಕೊಂಡ ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿಯು ಪ.ಬಂಗಾಳ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ದೂರುದಾರ ವಿದ್ಯಾರ್ಥಿನಿ ಒಂದು ಪರೀಕ್ಷೆಯಲ್ಲಿ ಪಾಸಾಗಿಲ್ಲ. ಅಲ್ಲದೆ ಅವಳು ತನ್ನ ಪ್ರಾಜೆಕ್ಟ್‌ ವರ್ಕ್‌ ಸಲ್ಲಿಸಿಲ್ಲ. ಎರಡು ಅಸೈನ್ಮೆಂಟ್‌ ಪೂರ್ಣಗೊಳಿಸಿಲ್ಲ. ಈ ಕಾರಣಕ್ಕೆ ಅವಳಿಗೆ ಪ್ರಮಾಣಪತ್ರ ನೀಡಿಲ್ಲ ಎಂದು ತಿಳಿಸಿತು. ರಾಜ್ಯ ಆಯೋಗ ಮೇಲ್ಮನವಿಯನ್ನು ವಜಾ ಮಾಡಿತು. ಅಲ್ಲದೆ ವೆಚ್ಚವೆಂದು 30 ಸಾವಿರ ರು. ವಿಧಿಸಿತು. ರಾಜ್ಯ ಆಯೋಗ ಈ ಕೆಳಗಿನ ಕಾರಣಗಳನ್ನು ನೀಡಿತು. ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿಯ ವಕೀಲರು, ಶಿಕ್ಷಣಕ್ಕೆ ಸಂಬಂಧಿಸಿದ ವಿಷಯವು ಗ್ರಾಹಕ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು. 2ನೆ ಪ್ರತಿವಾದಿಯ ವಕೀಲರು, ತಾವು ಪ್ರತಿವಾದಿ ನಂ.3ರಿಂದ ಬಂದ ಕೌನ್ಸೆಲಿಂಗ್‌ ಮತ್ತು ದಾಖಲೆಗಳನ್ನು ಒದಗಿಸಿದ್ದು ಮಾತ್ರ. ನಾವು ಪ್ರತಿವಾದಿ ನಂ.3ರ ಫ್ರಾಂಚೈಸಿ. ಈ ಕಾರಣಕ್ಕೆ ಪ್ರಮಾಣಪತ್ರ ಮತ್ತು ಮಾರ್ಕ್ಸ್‌ಕಾರ್ಡ್‌ ಸಿಗದಿರುವುದಕ್ಕೆ ನಮ್ಮನ್ನು ಜವಾಬ್ದಾರಿ ಮಾಡಲು ಬರುವುದಿಲ್ಲ ಎಂದು ವಾದಿಸಿದರು. ಒಟ್ಟಾರೆ ದೂರಿನ ಸಾರಾಂಶ ಪ್ರತಿವಾದಿ ನಂ.1 ಇವರಿಂದ ಸರ್ಟಿಫಿಕೇಟ್‌/ಮಾರ್ಕ್ಸ್‌ಶೀಟ್‌ ಬಂದಿಲ್ಲ ಎನ್ನುವುದು. ಇದರಲ್ಲಿ ಉತ್ತರಪತ್ರಿಕೆಯ ಮೌಲ್ಯಮಾಪನ, ಫಲಿತಾಂಶ ಘೋಷಣೆ ಇತ್ಯಾದಿ ಒಳಗೊಂಡಿಲ್ಲ. ಯುಜಿಸಿಯ 25-1-1985ರ ನಿಯಮಾವಳಿಗಳು ಅಸಾಂಪ್ರದಾಯಿಕ/ ದೂರಶಿಕ್ಷಣದಲ್ಲಿ ಪದವಿ ನೀಡುವುದಕ್ಕೆ ಕನಿಷ್ಠ ಮಾನದಂಡಗಳು ಏನಿರಬೇಕು ಎಂದು ಹೇಳಿವೆ. ಹಾಗೆಯೇ ಖಾಸಗಿ ವಿಶ್ವವಿದ್ಯಾಲಯಗಳ ವಿಷಯದಲ್ಲಿ 2003ರಲ್ಲಿ ನಿಯಮಗಳನ್ನು ಮಾಡಿದೆ. ಈ ಎರಡೂ ನಿಯಮಗಳ ಪ್ರಕಾರ, ಖಾಸಗಿ ವಿಶ್ವವಿದ್ಯಾನಿಲಯಗಳು ರಾಜ್ಯಗಳ ಕಾಯ್ದೆಯಡಿ ರಚನೆಯಾಗುವುದರಿಂದ ಅವುಗಳ ಕಾರ್ಯವ್ಯಾಪ್ತಿ ಆಯಾ ರಾಜ್ಯಗಳಿಗಷ್ಟೇ ಸೀಮಿತವಾಗಿರುತ್ತವೆ. ಪ್ರೊ.ಯಶಪಾಲ್‌ ವಿರುದ್ಧ ಚಂಡೀಗಡ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ರಾಜ್ಯಗಳ ಕಾಯ್ದೆಯಡಿ ಸ್ಥಾಪನೆಯಾಗುವ ಕ್ಯಾಂಪಸ್‌ ಆಚೆಯ ಕೇಂದ್ರಗಳು, ಸಾಗರೋತ್ತರ ಕ್ಯಾಂಪಸ್‌ಗಳು ಮತ್ತು ಸ್ಟಡಿ ಸೆಂಟರ್‌ಗಳ ಕಾರ್ಯವ್ಯಾಪ್ತಿಯ ವಿಷಯವನ್ನು ವಿಶೇಷವಾಗಿ ಪರಿಗಣಿಸಿದೆ. ಸಂವಿಧಾನದ ಆರ್ಟಿಕಲ್‌ 245(1) ಪ್ರಕಾರ ರಾಜ್ಯಗಳು ಯಾವರೂಪದ ಕಾಯ್ದೆ ರಚಿಸಬೇಕು ಎಂಬುದಕ್ಕೆ ಸಂಸತ್ತು ಮಾತ್ರ ಕಾನೂನು ರಚಿಸಬಹುದು ಎಂದು ಅದು ಹೇಳಿದೆ. ಈ ತೀರ್ಪಿನ ಪರಿಣಾಮವಾಗಿ, ಪ್ರತಿ ವಿಶ್ವವಿದ್ಯಾಲಯಕ್ಕೆ ಪ್ರಾದೇಶಿಕ ಮೇರೆ ಇರುತ್ತದೆ. ರಾಜ್ಯಗಳ ಕಾಯ್ದೆಯಡಿ ರಚನೆಯಾಗುವ ರಾಜ್ಯದ ವಿಶ್ವವಿದ್ಯಾಲಯಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಆಚೆಗೆ ಯಾವುದೇ ಸಂಸ್ಥೆಗೆ ತನ್ನ ಸಂಲಘ್ನತೆ(ಅಫಿಲಿಯೇಶನ್‌)ಯನ್ನು ನೀಡುವಂತಿಲ್ಲ. ಇದಾದಬಳಿಕ ಯುಜಿಸಿಯು 16-04-2009ರಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಬರೆದು, ಸುಪ್ರೀಂ ಕೋರ್ಟಿನ ಈ ತೀರ್ಪಿಗೆ ಅನುಗುಣವಾಗಿ ರಾಜ್ಯಗಳ ವಿ.ವಿ.ಗಳು ಮತ್ತು ಅವುಗಳಲ್ಲಿಯ ಖಾಸಗಿ ವಿವಿಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿ ಕ್ಯಾಂಪಸ್‌, ಸ್ಟಡಿ ಸೆಂಟರ್‌, ಸಂಲಘ್ನ ಕಾಲೇಜುಗಳು ಮತ್ತು ಫ್ರಾಂಚೈಸಿಗಳ ಮೂಲಕ ಕೇಂದ್ರಗಳನ್ನು ತೆರೆಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಗಮನಿಸಿದಾಗ ಈ ರೀತಿಯ ದೂರಶಿಕ್ಷಣ ಕೇಂದ್ರಗಳನ್ನು ಪ್ರತಿವಾದಿಗಳು ನಡೆಸುತ್ತಿರುವುದು ಅನುಮೋದಿತವಲ್ಲದ ವ್ಯವಹಾರ ಕ್ರಮವಾಗಿದೆ. ಕಾರಣ ಇದು ಗ್ರಾಹಕ ವ್ಯಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಈ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದ್ದು ಸರಿಯಾಗಿಯೇ ಇದೆ ಎಂದು ದೂರುದಾರರ ವಕೀಲರು ಹೇಳಿದರು. ರಾಜ್ಯ ಆಯೋಗದ ತೀರ್ಪು ಇದನ್ನು ಅನುಸರಿಸಿ ಇತ್ತು. ರಾಜ್ಯ ಆಯೋಗದ ತೀರ್ಪಿನ ವಿರುದ್ಧ ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿಯು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ಶಿಕ್ಷಣ ವಿಷಯವು ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದದಿಲ್ಲ. ಕಾರಣ ದೂರನ್ನು ವಜಾ ಮಾಡಬೇಕು ಎಂಬುದು ಅದರ ಮುಖ್ಯ ಕೋರಿಕೆಯಾಗಿತ್ತು. 1986ರ ಗ್ರಾಹಕ ರಕ್ಷಣೆ ಕಾಯ್ದೆಯ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಅರ್ಜಿದಾರ ವಿವಿಯಂಥ ಶಿಕ್ಷಣ ಸಂಸ್ಥೆಗಳು ಬರುತ್ತವೆಯೆ ಎಂಬುದು ಪ್ರಮುಖ ಮುದ್ದೆಯಾಯಿತು. ಇದೇ ಆಯೋಗದ ಮೂವರು ಸದಸ್ಯರ ವಿಸ್ತೃತ ಪೀಠವು ಮನು ಸೋಳಂಕಿ ವಿರುದ್ಧ ವಿನಾಯಕ ಮಿಶನ್‌ ಯುನಿವರ್ಸಿಟಿ ಪ್ರಕರಣದಲ್ಲಿ 20-01-2020ರಂದು ಶಿಕ್ಷಣ ವಿಷಯವು ಗ್ರಾಹಕ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ಉಭಯ ಪಕ್ಷಗಳು ಎತ್ತಿರುವ ಪ್ರಶ್ನೆಗಳು ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನಿನ ಈ ಪ್ರಶ್ನೆಗಳು ಉದ್ಭವವಾಗಿವೆ. ಪ್ರವೇಶ ನೀಡಿದ ಬಳಿಕ ಯಾವುದೇ ಶಿಕ್ಷಣ ಸಂಸ್ಥೆಯಿಂದ ಆಗಬಹುದಾದ ಲೋಪಗಳು, ನ್ಯೂನತೆಗಳು, ಸಾಧುವಲ್ಲದ ವ್ಯವಹಾರ ನೀತಿಗಳು, ಅವು ಯಾವವೂ ಪದವಿ ಪ್ರದಾನ ಆಗುವವರೆಗೆ ಜ್ಞಾನಹಂಚಿಕೆ ಪ್ರಕ್ರಿಯೆಯ ಭಾಗವಾಗಿರುವುದಿಲ್ಲವೋ ಅಂಥವು ಶಿಕ್ಷಣ ಎಂಬುದರ ವ್ಯಾಪ್ತಿಗೆ ಬರುತ್ತವೆಯೆ? ಉದಾಹರಣೆಗೆ ಪಠ್ಯೇತರ ಚಟುವಟಿಕೆಗಳು ನೇರವಾಗಿ ಪ್ರವೇಶ ಶುಲ್ಕದೊಂದಿಗೆ, ಪಠ್ಯಕ್ರಮದೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಇವನ್ನು `ತಿರುಳು ಶಿಕ್ಷಣ'ವೆಂದು ವ್ಯಾಖ್ಯಾನಿಸಬೇಕೆ? ವಿದ್ಯಾರ್ಥಿಯೊಬ್ಬ ಪ್ರವಾಸಕ್ಕೆ ಹೋದಾಗ ಅಪಘಾತ ಸಂಭವಿಸಿದರೆ, ಇದು ತಿರುಳು ಶಿಕ್ಷಣದ ಭಾಗವಾಗಿ ಸೇವಾನ್ಯೂನತೆಯಾಗುತ್ತದೆಯೆ? ಪ್ರವಾಸಗಳು `ಶಿಕ್ಷಣ'ದ ವ್ಯಾಖ್ಯೆಯಲ್ಲಿ ಸೇರುತ್ತವೆಯೆ? ಬೋರ್ಡಿಂಗ್‌, ಹಾಸ್ಟೆಲ್‌ ಸೌಲಭ್ಯದ ಲೋಪಗಳು ಶಿಕ್ಷಣದ ವ್ಯಾಪ್ತಿಗೆ ಬರುತ್ತವೆಯೆ? ಕೋಚಿಂಗ್‌ ಸೆಂಟರ್‌ಗಳು, ಸಂಸ್ಥೆಗಳು `ಶೈಕ್ಷಣಿಕ ಸಂಸ್ಥೆಗಳು' ಎಂಬ ವ್ಯಾಖ್ಯೆಗೆ ಒಳಪಡುತ್ತವೆಯೆ? ವೃತ್ತಿ ತರಬೇತಿಯನ್ನು ನೀಡುವ ನರ್ಸಿಂಗ್‌, ಡಿಸೈನಿಂಗ್‌ ಇತ್ಯಾದಿಗಳು ಕಟ್ಟುನಿಟ್ಟಾಗಿ `ಶಿಕ್ಷಣ ಸಂಸ್ಥೆಗಳು' ವ್ಯಾಖ್ಯೆಗೆ ಸೇರುತ್ತವೆಯೆ? ಸುಪ್ರೀಂ ಕೋರ್ಟಿನ ಏಳು ಸದಸ್ಯರ ಪೀಠವು ಪಿ.ಎ.ಇನಾಂದಾರ ಪ್ರಕರಣದಲ್ಲಿ ಕೋಚಿಂಗ್‌ ಸೆಂಟರುಗಳನ್ನು ನಿಯಮಿತ ಶಾಲೆ ಅಥವಾ ಕಾಲೇಜಿಗೆ ಸಮಾನವಾಗಿ ಪರಿಗಣಿಸಲಾಗದು. ಕೋಚಿಂಗ್‌ ಸೆಂಟರುಗಳು ಶಿಕ್ಷಣ ಸಂಸ್ಥೆಗಳು ಅಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಕೋಚಿಂಗ್‌ ಸೆಂಟರುಗಳು ನಿರ್ದಿಷ್ಟ ಸೇವೆಯನ್ನು ನೀಡುತ್ತವೆ. ಅವು ನೀಡುವ ಸೇವೆಯಲ್ಲಿ ದೋಷ ಅಥವಾ ನ್ಯೂನತೆ ಕಂಡುಬಂದರೆ ಅದು ಗ್ರಾಹಕ ವೇದಿಕೆಯ ವ್ಯಾಪ್ತಿಗೆ ಬರುತ್ತದೆ. ಈ ಎಲ್ಲ ಅಂಶಗಳ ಪರಿಶೀಲನೆಯ ಬಳಿಕ, ಕೋಚಿಂಗ್‌ ಸಂಸ್ಥೆಗಳನ್ನು ಹೊರತುಪಡಿಸಿ ವೃತ್ತಿಪರ ಕೋರ್ಸ್‌ಗಳೂ ಸೇರಿದಂತೆ ಶಿಕ್ಷಣವನ್ನು ನೀಡುವ ಸಂಸ್ಥೆಗಳು ಮತ್ತು ಅವು ಪ್ರವೇಶ ನೀಡುವುದಕ್ಕೆ ಮುನ್ನ ಮತ್ತು ಪ್ರವೇಶದ ಬಳಿಕ ನಡೆಸುವ ಚಟುವಟಿಕೆಗಳು, ಹಾಗೂ ಪ್ರವಾಸ ಹೋಗುವುದು, ಪಿಕ್ನಿಕ್, ಪಠ್ಯೇತರ ಚಟುವಟಿಕೆಗಳು, ಈಜು, ಕ್ರೀಡೆ ಮೊದಲಾದವು ಗ್ರಾಹಕ ರಕ್ಷಣೆ ಕಾಯ್ದೆ 1986ರ ಅಡಿಯಲ್ಲಿ ವಿಚಾರಣೆಗೆ ಬರುವುದಿಲ್ಲ ಎಂಬ ನಿರ್ಧಾರಕ್ಕೆ ತಲುಪಿತು. ರಾಷ್ಟ್ರೀಯ ಆಯೋಗ ಈ ಎಲ್ಲ ಅಂಶಗಳನ್ನು ಪರಿಶೀಲಿಸಿತು. ಮತ್ತು ಈ ಪ್ರಕರಣದಲ್ಲಿ ಮನು ಸೋಳಂಕಿ ಪ್ರಕರಣದಲ್ಲಿ ಆಯೋಗದ ವಿಸ್ತೃತ ಪೀಠ ನೀಡಿರುವ ತೀರ್ಪು ಹೊಂದಿಕೆಯಾಗುತ್ತದೆ. ಮೂಲ ದಾವೆಯಲ್ಲಿ ಪ್ರತಿವಾದಿ ನಂ.1 ಆಗಿರುವ ಮನೋನ್ಮನಿಯಮ್‌ ಸುಂದರನಾರ್ ಯುನಿವರ್ಸಿಟಿಯು ವಿದ್ಯಾರ್ಥಿಗಳಿಗೆ ಮತ್ತು ದೂರುದಾರ/ಪ್ರತಿವಾದಿ ನಂ.1ಗೆ ಶಿಕ್ಷಣ ಹಂಚಿಕೆ ಮಾಡುತ್ತಿದ್ದು, ಪ್ರತಿವಾದಿ ನಂ.1 ಮಾರ್ಕೆಟಿಂಗ್‌ನಲ್ಲಿ ಎಂಬಿಎಗೆ ಪ್ರವೇಶ ಪಡೆದಿದ್ದರು. ಆದರೆ ವಿವಿಯು ಯಾವುದೇ ಸೇವೆಯನ್ನು ನೀಡುತ್ತಿಲ್ಲವಾದ್ದರಿಂದ ಪ್ರಕರಣವು ಗ್ರಾಹಕ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ಪುರಸ್ಕರಿಸಿತು. ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗದ ತೀರ್ಪನ್ನು ರದ್ದುಗೊಳಿಸಿತು. ಆದರೆ ದೂರದಾರರು ಕಾನೂನಿನಲ್ಲಿ ಲಭ್ಯವಿರುವ ಇತರ ಮಾರ್ಗಗಳ ಮೂಲಕ ನ್ಯಾಯಪಡೆಯಲು ಸ್ವತಂತ್ರರಿದ್ದಾರೆ ಎಂದೂ ಹೇಳಿತು.

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ