ಬ್ಯಾಂಕ್‌ ಸಿಬ್ಬಂದಿ ತಪ್ಪೆಸಗಿದರೆ ನಷ್ಟವನ್ನು ಅವರಿಂದಲೇ ವಸೂಲು ಮಾಡಬೇಕು

* ಒಂದೇ ದಿನ ಒಬ್ಬರೇ ಒಂದೇ ಮೊತ್ತದ ಎರಡು ಎಫ್‌ಡಿ ಮಾಡಿದ್ದರಿಂದ ಆದ ಗೊಂದಲ ಇದು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮತ್ತು ಕೋಲ್ಕತಾದ ಸಮರ್‌ ರಾಯ್‌ ಚೌಧರಿ ನಡುವಿನ ಪ್ರಕರಣ. ದೂರುದಾರ ಸಮರ್‌ ರಾಯ್‌ ಚೌಧರಿ ಮತ್ತು ಅವರ ಪತ್ನಿ ಎಸ್‌ಬಿಐನಲ್ಲಿ ಎರಡು ನಿಶ್ಚಿತ ಠೇವಣಿಗಳನ್ನು ಮಾಡಿದ್ದರು. ಅವು TDcs0495619 ಮತ್ತು TDcs0495621. ಇವರೆಡನ್ನೂ ಠೇವಣಿ ಮಾಡಿದ ದಿನಾಂಕ 17-03-2007 ಹಾಗೂ ಅವುಗಳ ಮುಕ್ತಾಯದ ದಿನಾಂಕ 17-03-2011 ಆಗಿತ್ತು. ಠೇವಣಿ ಮೊತ್ತ ಕ್ರಮವಾಗಿ 54,425 ರು. ಮತ್ತು 5,59,668 ರು. ಹಾಗೂ ಅವುಗಳ ಪಕ್ವತೆಯ ಮೊತ್ತ 81,480 ರು. ಮತ್ತು 8,,22,762 ರು. ಆಗಿದ್ದವು. ಈ ಎರಡು ನಿಶ್ಚಿತ ಠೇವಣಿ ಮತ್ತು ಇನ್ನೊಂದು ನಿಶ್ಚಿತ ಠೇವಣಿಯ ಸರ್ಟಿಫಿಕೇಟುಗಳನ್ನು ಅಡವು ಮಾಡಿ ಚೌಧರಿಯವರು 2009ರ ಜನವರಿಯಲ್ಲಿ ಅದೇ ಬ್ಯಾಂಕಿನಲ್ಲಿ ಡಿಮಾಂಡ್‌ ಲೋನ್‌ ಪಡೆದುಕೊಳ್ಳುತ್ತಾರೆ. ಅವರು ಸಾಲ ತೀರಿಸಿದ ಬಳಿಕ ಆ ಸರ್ಟಿಫಿಕೇಟುಗಳನ್ನು ಅವರಿಗೆ ಮರಳಿಸಲಾಗುತ್ತದೆ. 17-03-2011ರಂದು ಈ ನಿಶ್ಚಿತ ಠೇವಣಿಗಳು ಪಕ್ವಗೊಂಡಾಗ ಅವುಗಳನ್ನು ಮತ್ತೊಂದು ಅವಧಿಗೆ ನವೀಕರಿಸಲು ಚೌಧರಿಯವರು ಬ್ಯಾಂಕಿಗೆ ಹೋಗುತ್ತಾರೆ. ಆದರೆ ಬ್ಯಾಂಕು, ಇವರ ಹೆಸರಿನಲ್ಲಿದ್ದ ಠೇವಣಿ ಖಾತೆಗಳು ನಿರ್ವಹಣೆಯಲ್ಲಿ ಇಲ್ಲ ಎಂದು ಹೇಳಿ ನವೀಕರಿಸುವುದಿಲ್ಲ. ಇದಕ್ಕೆ ಯಾವುದೇ ವಿವರಣೆಯನ್ನೂ ನೀಡುವುದಿಲ್ಲ. ಬಳಿಕ ಚೌಧರಿಯವರು ಬ್ಯಾಂಕಿನ ಮೆನೇಜರ್‌ಗೆ 23-05-2011 ರಂದು ಒಂದು ಪತ್ರ ಬರೆದು ಎಲ್ಲವನ್ನೂ ವಿವರಿಸಿ, ತಮಗೆ ಠೇವಣಿಯನ್ನು ನವೀಕರಿಸುವ ಆಸಕ್ತಿ ಉಳಿದಿಲ್ಲ. ತಮ್ಮ ಹಣವನ್ನು ತಮ್ಮ ಹಾಗೂ ತಮ್ಮ ಪತ್ನಿಯ ಜಂಟಿ ಖಾತೆಗೆ ಜಮಾ ಮಾಡಿ ಎಂದು ಕೋರುತ್ತಾರೆ. ಇದಕ್ಕೆ ಮೆನೇಜರ್‌ ಹಾರಿಕೆಯ ಮತ್ತು ದಾರಿತಪ್ಪಿಸುವ ಉತ್ತರ ನೀಡುತ್ತಾರೆ. ನೀವು ಹೇಳಿರುವ ಎರಡು ಠೇವಣಿ ಖಾತೆಗಳನ್ನು ಮುಚ್ಚಲಾಗಿದೆ ಎಂಬುದು ಅವರ ಉತ್ತರವಾಗಿತ್ತು. ಆ ಬಳಿಕ ದೂರುದಾರರು 25-06-2011ರಂದು ಬ್ಯಾಂಕಿನ ಜನರಲ್‌ ಮೆನೇಜರ್‌ಗೆ ಮತ್ತು ಡೆಪ್ಯೂಟಿ ಜನರಲ್‌ ಮೆನೇಜರ್‌ಗೆ ಪತ್ರವನ್ನು ಬರೆಯುತ್ತಾರೆ. ಡೆಪ್ಯೂಟಿ ಜನರಲ್‌ ಮೆನೇಜರ್‌ ಬರೆದ ಉತ್ತರದಲ್ಲಿ ಬ್ಯಾಂಕಿನ ಕೋಲ್ಕತಾದಲ್ಲಿರುವ ಸ್ಥಳೀಯ ಮುಖ್ಯ ಕಚೇರಿ ಇದಕ್ಕೆ ಉತ್ತರಿಸುವುದು ಎಂದು ತಿಳಿಸುತ್ತಾರೆ. ಆದರೆ ಡಿಜಿಎಂ ಪತ್ರದಂತೆ ಸ್ಥಳೀಯ ಕಚೇರಿ ಉತ್ತರಿಸಲು ವಿಫಲವಾಗುತ್ತದೆ. ನಂತರ ದೂರುದಾರರು 14-10-2011ರಂದು ಚೀಫ್‌ ಜನರಲ್‌ ಮೆನೇಜರ್‌ಗೆ ಪತ್ರ ಬರೆದು ತಮ್ಮ ಸಮಸ್ಯೆಯನ್ನು ವಿವರಿಸುತ್ತಾರೆ. ಆದರೆ ಏನೂ ಪ್ರಯೋಜನವಾಗುವುದಿಲ್ಲ. ಆ ಬಳಿಕ ದೂರುದಾರರು ಬ್ಯಾಂಕಿನಿಂದ ಸೇವಾನ್ಯೂನತೆ ತಲೆದೋರಿದೆ ಎಂದು ಜಿಲ್ಲಾ ಗ್ರಾಹಕ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ಪ್ರತಿವಾದಿಗಳು ತಮ್ಮ ಜಂಟಿ ಲಿಖಿತ ಉತ್ತರದಲ್ಲಿ ಆರೋಪಗಳನ್ನು ಅಲ್ಲಗಳೆಯುತ್ತಾರೆ. ದೂರುದಾರರು ನಿಶ್ಚಿತ ಠೇವಣಿ ಖಾತೆ ಸಂಖ್ಯೆ 30145154500 ತೆರೆದಿದ್ದರು. 17-03-2007ರಂದು 54,425 ರು. ನಿಶ್ಚಿತ ಠೇವಣಿ ಮಾಡಿದ್ದರು. ಅದರ ರಸೀದಿ ಸಂಖ್ಯೆ 0495619. ಅದೇ ದಿನ ಇನ್ನೊಂದು ನಿಶ್ಚಿತ ಠೇವಣಿ ಖಾತೆ ಸಂಖ್ಯೆ 30145154781 ತೆರೆದಿದ್ದರು. ಅದರಲ್ಲಿ 5,59,668 ರು. ನಿಶ್ಚಿತ ಠೇವಣಿ ಮಾಡಿದ್ದರು. ಅದರ ರಸೀದಿ ಸಂಖ್ಯೆ 0495621. ರಸೀದಿ ಸಂಖ್ಯೆ 0495619ರ 54,425 ರು. ನಿಶ್ಚಿತ ಠೇವಣಿಯು 26-03-2011ರಂದು ಪಕ್ವಗೊಂಡಿತ್ತು. ಅದರ ಮೊತ್ತ 80,026 ರು.ಗಳನ್ನು ನಿಶ್ಚಿತ ಠೇವಣಿಗೆ ನವೀಕರಿಸಲಾಗಿತ್ತು. ಅದರ ಪಕ್ವತೆಯ ದಿನ 01-10-2012 ಆಗಿತ್ತು. ನಿಶ್ಚಿತ ಠೇವಣಿ ರಸೀದಿ ಸಂಖ್ಯೆ 0495621ಯನ್ನು ಅವಧಿಗೆ ಮುನ್ನವೇ 07-07-2008ರಂದು ಮುಚ್ಚಲಾಗಿತ್ತು. ಅದರ ಬಡ್ಡಿ ಸಹಿತ ಮೊತ್ತ 6,12,113 ಗಳನ್ನು ಉಳಿತಾಯ ಖಾತೆ ನಂ. 10559521717 ಗೆ 07-07-2008ರಂದೇ ಜಮಾ ಮಾಡಲಾಗಿದೆ ಎಂದು ತಿಳಿಸಿದರು. ದೂರಿನಲ್ಲಿಯ ಇತರ ಎಲ್ಲ ಆರೋಪಗಳನ್ನು ಕಾರಣ ಸಹಿತ ನಿರಾಕರಿಸಿದರು. ಜಿಲ್ಲಾ ವೇದಿಕೆಯು ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿತು. ಪ್ರತಿವಾದಿಗಳ ಹೇಳಿಕೆಯಲ್ಲಿ ತಿಳಿಸಿದಂತೆ ರಸೀದಿ ಸಂಖ್ಯೆ 0495621ರ ನಿಶ್ಚಿತ ಠೇವಣಿ 6,12,113 ರು. ಬದಲಿಗೆ ರಸೀದಿ ಸಂಖ್ಯೆ 0495623ರ ನಿಶ್ಚಿತ ಠೇವಣಿಯನ್ನು ಅವಧಿ ಪೂರ್ವ ಮುಕ್ತಾಯಗೊಳಿಸಲಾಗಿತ್ತು. ಈ ಎರಡೂ ನಿಶ್ಚಿತ ಠೇವಣಿಗಳ ಅಂಕಿಗಳು 0495621 ಮತ್ತು 0495623 ಹೋಲಿಕೆಯದಾಗಿವೆ. ಬ್ಯಾಂಕು ರಸೀದಿ ಸಂಖ್ಯೆ 0495621 ರ ನಿಶ್ಚಿತ ಠೇವಣಿ 5,59,668 ರು.ಗಳನ್ನು ಅವಧಿ ಪೂರ್ವ ಮುಕ್ತಾಯಗೊಳಿಸಲಾಗಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಬ್ಯಾಂಕು ದೂರುದಾರರಿಗೆ ಎರಡು ನಿಶ್ಚಿತ ಠೇವಣಿಗಳ ಬಾಬ್ತು 9,04,602 ರು.ಗಳನ್ನು ನೀಡಬೇಕು. 17-03-2011ರಿಂದ ಅನ್ವಯವಾಗುವಂತೆ ಶೇ.9.75ರಷ್ಟು ಬಡ್ಡಿಯನ್ನೂ ನೀಡಬೇಕು. ದೂರುದಾರರಿಗೆ ಪರಿಹಾರವೆಂದು 1 ಲಕ್ಷ ರು. ನೀಡಬೇಕು. ಇವನ್ನು ಒಂದು ತಿಂಗಳ ಅವಧಿಯಲ್ಲಿ ನೀಡದಿದ್ದರೆ ಬಡ್ಡಿಯನ್ನು ಶೇ.10ರಂತೆ ನೀಡಬೇಕು. ತಪ್ಪು ಮಾಡಿದ ಬ್ಯಾಂಕ್‌ ಸಿಬ್ಬಂದಿಯಿಂದ ಪರಿಹಾರ ಮತ್ತು ವೆಚ್ಚದ ಹಣವನ್ನು ವಸೂಲಿ ಮಾಡುವ ಅಧಿಕಾರ ಬ್ಯಾಂಕಿಗೆ ಇದೆ ಎಂದು ತೀರ್ಪು ನೀಡಿತು. ಇದರ ವಿರುದ್ಧ ಬ್ಯಾಂಕು ರಾಜ್ಯ ಗ್ರಾಹಕ ವೇದಿಕೆಯಲ್ಲಿ ಮೇಲ್ಮನವಿ ಸಲ್ಲಿಸಿತು. ದಾಖಲೆಗಳನ್ನು ಪರಿಶೀಲಿಸಲಾಗಿ ಆಶ್ಚರ್ಯಕರ ಎನ್ನುವಂತೆ 17-03-2007ರಂದು ಖಾತೆ ಸಂಖ್ಯೆ 30145154781ಕ್ಕೆ ರಸೀದಿ ಸಂಖ್ಯೆ 0495623ರ ಮೂಲಕ ಅವಧಿ ಪೂರ್ವ ಹಿಂತೆಗೆತದ 6,12,113 ರು. ಜಮೆ ಆಗಿತ್ತು. ಅದೇ ದಿನ ಅಂದರೆ 17-03-2007ರಂದು ದೂರುದಾರ ಮತ್ತು ಅವರ ಪತ್ನಿಯ ಅದೇ ಖಾತೆಗೆ ಅದೇ ಮೊತ್ತ ಅಂದರೆ 5,59,668 ರು. ಜಮಾ ಮಾಡಿರುವುದಕ್ಕೆ ರಸೀದಿ (ಸಂಖ್ಯೆ 0495621) ನೀಡಲಾಗಿತ್ತು. ಬ್ಯಾಂಕು 0495621 ಈ ನಂಬರಿನ ರಸೀದಿಗೆ ಆಕ್ಷೇಪ ವ್ಯಕ್ತಪಡಿಸಿತು. ಇದು ಬ್ಯಾಂಕ್‌ ಸಿಬ್ಬಂದಿಯ ತಪ್ಪಿನಿಂದ ಆಗಿರುವುದು ಎಂದು ಹೇಳಿತು. ಆದರೆ ಒಂದೇ ದಿನ ಒಂದೇ ಖಾತೆಗೆ ಎರಡು ಬೇರೆಬೇರೆ ರಸೀದಿ ತೆಗೆದಿರುವುದು ಏಕೆ ಎಂಬುದಕ್ಕೆ ಬ್ಯಾಂಕಿನಿಂದ ಸಮಜಾಯಿಷಿ ದೊರೆಯಲಿಲ್ಲ. ಆದಕಾರಣ ಜಿಲ್ಲಾ ವೇದಿಕೆಯ ತೀರ್ಪನ್ನು ಬದಲಿಸಲು ರಾಜ್ಯ ಆಯೋಗ ಒಪ್ಪಲಿಲ್ಲ. ಆದರೆ ಪರಿಹಾರವನ್ನು 1 ಲಕ್ಷದಿಂದ 30 ಸಾವಿರ ರು.ಗೆ ಇಳಿಸಿತು ಮತ್ತು ವ್ಯಾಜ್ಯದ ವೆಚ್ಚವೆಂದು ದೂರುದಾರರಿಗೆ 10 ಸಾವಿರ ರು. ಘೋಷಿಸಿತು. ಇದರಿಂದ ಅಸಮಾಧಾನಗೊಂಡ ಬ್ಯಾಂಕು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. ತನ್ನ ಹೊಸ ಹೇಳಿಕೆಯಲ್ಲಿ ಅದು, ದೂರುದಾರರು 17-03-2007ರಂದು ಬ್ಯಾಂಕಿಗೆ ಬಂದು ಖಾತೆ ಸಂಖ್ಯೆ 30145154781 ರಲ್ಲಿ 5,59,668 ರು. ನಿಶ್ಚಿತ ಠೇವಣಿ ಮಾಡಿದರು. ಅದರ ರಸೀದಿ ಸಂಖ್ಯೆ 0495621. ಅವರು ತಮಗೆ ರಸೀದಿ ಸಿಕ್ಕಿಲ್ಲ ಎಂದು ಹೇಳಿದ ಕಾರಣ ಬ್ಯಾಂಕು ಪ್ರಮಾದವಶಾತ್‌ 0495623 ನಂಬರಿನ ಇನ್ನೊಂದು ರಸೀದಿಯನ್ನು ನೀಡಿತು. ಇಬ್ಬರು ಅಧಿಕಾರಿಗಳು ವ್ಯವಹಾರ ನಿರ್ವಹಿಸಿದ್ದರಿಂದ ಈ ಅಚಾತುರ್ಯ ಸಂಭವಿಸಿದೆ. ಬ್ಯಾಂಕಿನ ವೋಚರ್‌ ಎಂಟ್ರಿ ಪುಸ್ತಕದಲ್ಲಿ ಒಂದು ಬಾರಿ ಮಾತ್ರ 5,59,668 ರು. ದಾಖಖಲಾಗಿದೆ. ದೂರುದಾರರ ಕೋರಿಕೆಯ ಮೇರೆಗೆ ಖಾತೆ ಸಂಖ್ಯೆ 30145154781 ರ ಠೇವಣಿ ನಂ.0495623ನ್ನು ಅವಧಿಗೆ ಮೊದಲೇ ಮುಕ್ತಾಯಗೊಳಿಸಿ ಅದರ ಮೊತ್ತ 6,12,113 ರು.ಗಳನ್ನು ಉಳಿತಾಯಯ ಖಾತೆ ಸಂಖ್ಯೆ 10559521717ಗೆ ಜಮಾ ಮಾಡಲಾಗಿದೆ. ಇದೀಗ ದೂರುದಾರರು ಕೇಳುತ್ತಿರುವ ನಿಶ್ಚಿತ ಠೇವಣಿ ನಂ.0495621ರನ್ನು ಈ ಮೊದಲೇ ನಿಶ್ಚಿತ ಠೇವಣಿ ನಂ.0495623ರ ಮೂಲಕ ಅವಧಿಪೂರ್ವದಲ್ಲಿಯೇ ಖಾತೆ ಸಂಖ್ಯೆ 30145154781ಗ ಜಮಾ ಮಾಡಡಲಾಗಿದೆ. ಜಿಲ್ಲಾ ವೇದಿಕೆ ಮತ್ತು ರಾಜ್ಯ ಆಯೋಗ ಈ ಅಂಶಗಳನ್ನು ಕಡೆಗಣಿಸಿದೆ. ನಿಶ್ಚಿತ ಠೇವಣಿ ವಿಷಯದಲ್ಲಿ ಖಾತೆ ಸಂಖ್ಯೆ ಮುಖ್ಯವೇ ಹೊರತು ಠೇವಣಿ ರಸೀದಿಯಲ್ಲ. ದೂರುದಾರರು ತಮ್ಮ ದೂರಿನಲ್ಲಿ ಖಾತೆ ಸಂಖ್ಯೆಯನ್ನು ನಮೂದಿಸಿಲ್ಲ. ಅವತ್ತು ಖಾತೆ ಸಂಖ್ಯೆ 30145154781ರಲ್ಲಿ ಒಂದೇ ಮೊತ್ತ ಜಮಾ ಆಗಿರುವುದು. ಕಾರಣ ಎರಡು ಎಫ್‌.ಡಿ. ಮಾಡಡಲಾಗಿದೆ ಎಂಬುದು ಸುಳ್ಳು. ಎರಡು ರಸೀದಿ ನೀಡಿದ್ದರ ಲಾಭವನ್ನು ಪಡೆದುಕೊಳ್ಳಲು ದೂರುದಾರರು ಪ್ರಯತ್ನಿಸಿದ್ದಾರೆ. ಕಾರಣ ದೂರನ್ನು ವಜಾ ಮಾಡಬೇಕು ಎಂದು ಕೋರಿತು. ಇದಕ್ಕೆ ಪ್ರತಿಯಾಗಿ ದೂರುದಾರ ಸಮರ್‌ ರಾಯ್‌ ಚೌಧರಿಯವರು ತಮ್ಮ ಹೇಳಿಕೆಯಲ್ಲಿ, 17-03-2007ರಂದು ತಾವು ಮತ್ತು ತಮ್ಮ ಪತ್ನಿ ಪಕ್ವಗೊಂಡಿದ್ದ ತಮ್ಮ ಎರಡು ಎಫ್‌ಡಿಗಳನ್ನು ಅವುಗಳ ಸರ್ಟಿಫಿಕೇಟ್‌ ನೀಡಿ ನವೀಕರಿಸಿದ್ದೆವು. ಅವುಗಳ ಮೊತ್ತ ಪ್ರತಿಯೊಂದೂ 5,59,668 ರು.ಗಳಾಗಿತ್ತು. ಆ ಎಫ್‌ಡಿ ಸರ್ಟಿಫಿಕೇಟುಗಳ ಬೆನ್ನುಭಾಗದಲ್ಲಿ ಸಮ್ಮತಿ ಸಹಿಯನ್ನು ಮಾಡಿ ಕೊಟ್ಟಿದ್ದೆವು. ಇವುಗಳಿಗೆ 0495621 ಮತ್ತು 0495623 ನಂಬರಿನ ರಸೀದಿ ನೀಡಿದ್ದರು. 2008ರಲ್ಲಿ ರಸೀದಿ ಸಂಖ್ಯೆ 0495623ರ ಠೇವಣಿಯನ್ನು ಅವಧಿಪೂರ್ವ ಹಿಂದಕ್ಕೆ ಪಡೆಯಲಾಗಿತ್ತು. ಇದೀಗ ರಸೀದಿ ಸಂಖ್ಯೆ 0495621ರ ಠೇವಣಿ ಹಿಂದಕ್ಕೆ ಕೇಳುತ್ತಿದ್ದೇವೆ. ಬ್ಯಾಕು ನಿರಾಕರಣೆಗೆ ಕೊಡುತ್ತಿರುವ ಕಾರಣಗಳಲ್ಲಿ ಸತ್ಯಾಂಶವಿಲ್ಲ. ನಾವು ಈಗ ಸಲ್ಲಿಸುತ್ತಿರುವ ಎಫ್‌ಡಿ ರಸೀದಿ ನಕಲು ಪ್ರತಿ ಎಂದು ಹೇಳುತ್ತಿರುವುದು ಆಧಾರಹಿತ. ಏಕೆಂದರೆ ನಕಲು ಪ್ರತಿ ಪಡೆಯಲು ಕೆಲವು ವಿಧಾನಗಳಿರುತ್ತವೆ. ಮೂಲ ಪ್ರತಿ ಕಳೆದುಹೋಗಿರುವ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಬೇಕು. ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ನೀಡಬೇಕು. ಆ ರೀತಿ ಯಾವುದೂ ಇಲ್ಲದಿರುವುದರಿಂದ ಪ್ರಶ್ನಿಸಲಾಗಿರುವ ಎಫ್‌ಡಿ ನಿಜವಾದದ್ದು, ನಕಲು ಅಲ್ಲ ಎಂಬುದು ತಿಳಿಯುತ್ತದೆ. ದೂರುದಾರರು ಮೋಸ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಆಧಾರರಹಿತ. ಏಕೆಂದರೆ ಆ ರೀತಿ ಆಗಿದ್ದರೆ ದೈನಂದಿನ ಲೆಕ್ಕದಲ್ಲಿ, ಇಲ್ಲವೆ ತಿಂಗಳ ಕೊನೆಯಲ್ಲಿ ವ್ಯತ್ಯಾಸ ತಿಳಿಯುತ್ತಿತ್ತು. ಅಥವಾ ಆಡಿಟ್‌ನಲ್ಲಾದರೂ ಪತ್ತೆಯಾಗುತ್ತಿತ್ತು. ಹೀಗಿದ್ದಾಗ ಅವರ ವಿರುದ್ಧ ಕ್ರಿಮಿನಲ್‌ ಕಂಪ್ಲೇಂಟ್‌ ಕೊಡಬೇಕಿತ್ತು. ಅಲ್ಲದೆ ಬ್ಯಾಂಕ್‌ ಮೆನೇಜರ್‌ 06.06.2011ರ ತಮ್ಮ ಉತ್ತರದಲ್ಲೂ ಅದರ ಪ್ರಸ್ತಾಪ ಮಾಡಿಲ್ಲ. ಸುಪ್ರೀಂ ಕೋರ್ಟ್‌ ಪಿಶೋರಾ ಸಿಂಗ್‌ ವಿರುದ್ಧ ಬ್ಯಾಂಕ್‌ ಆಫ್‌ ಪಂಜಾಬ್‌ ಪ್ರಕರಣದಲ್ಲಿ, ತಪ್ಪು ಮಾಡಿದ ಬ್ಯಾಂಕ್‌ ಸಿಬ್ಬಂದಿಯ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಬ್ಯಾಂಕಿನ ಕಾನೂನುಬದ್ಧ ಹೊಣೆಗಾರಿಕೆಯಾಗಿದೆ ಎಂದು ಹೇಳಿದೆ. ಪ್ರಸ್ತುತ ಪ್ರಕರಣದಲ್ಲಂತೂ ದೂರುದಾರರ ಬಳಿ ಬ್ಯಾಂಕು ನೀಡಿರುವ ಎಫ್‌ಡಿ ರಸೀದಿ ಇದೆ. ಅದರ ಹೊರತಾಗಿ ಬೇರೇನನ್ನೂ ಬ್ಯಾಂಕಿಗೆ ಸಲ್ಲಿಸಬೇಕಾಗಿಯೇ ಇಲ್ಲ ಎಂದು ತಿಳಿಸಿದರು. ಎಲ್ಲವನ್ನೂ ಪರಿಶೀಲಿಸಿದ ರಾಷ್ಟ್ರೀಯ ಆಯೋಗವು, ದಾಖಲೆಗಳನ್ನು ಪರಿಶೀಲಿಸಿದಾಗ, ಎಫ್‌ಡಿ ರಸೀದಿ ನಂ. 0495621 ಹೊಂದಿರುವ ಠೇವಣಿ ಮೊತ್ತ 5,59,668 ರು. ಹಾಗೂ ಪಕ್ವತೆಯ ಮೊತ್ತ 8,22,762 ರು. ನಿಶ್ಚಿತ ಠೇವಣಿಯನ್ನು ದೂರುದಾರರು ಅವಧಿಗೂ ಮುನ್ನವೇ ಹಿಂದಕ್ಕೆ ಪಡೆದಿರುವುದಿಲ್ಲ. 29-0502014ರಂದು ಪ.ಬಂಗಾಳ ರಾಜ್ಯ ಗ್ರಾಹಕ ಆಯೋಗವು ನೀಡಿರುವ ತೀರ್ಪಿನಲ್ಲಿ ಯಾವುದೇ ಕಾನೂನುಬಾಹಿರ ಅಂಶಗಳಾಗಲಿ, ವಿಷಯಕ್ಕೆ ಸಂಬಂಧಿಸಿದಂತೆ ಅಕ್ರಮ ನಡವಳಿಕೆಯಾಗಲಿ ಅಥವಾ ನ್ಯಾಯಕ್ಕೆ ಸಂಬಂಧಿಸಿದ ಲೋಪಗಳಾಗಲಿ ಕಂಡುಬಂದಿಲ್ಲ. ಇಂಥ ಸಂದರ್ಭದಲ್ಲಿ ಮಾತ್ರ ಈ ಆಯೋಗ ಕೆಳಗಿನ ಆಯೋಗ, ವೇದಿಕೆಯ ತೀರ್ಪಿನಲ್ಲಿ ಮಧ್ಯಪ್ರವೇಶಿಸಬಹುದು. ಸುನಿಲ್‌ ಕುಮಾರ್‌ ಮೈತಿ ವಿರುದ್ಧ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಆದೇಶ ಇಂಥ ಮಿತಿವಿಧಿಸಿದೆ. ಪ್ರಸ್ತುತ ಪ್ರಕರಣದಲ್ಲಿ ಮೇಲ್ಮನವಿದಾರ ಬ್ಯಾಂಕು ರಾಜ್ಯ ಆಯೋಗ ಇಂಥ ತಪ್ಪು ಮಾಡಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮೇಲ್ಮನವಿಯಲ್ಲಿ ಯಾವುದೇ ಹುರುಳಿಲ್ಲದ ಕಾರಣ ಅವನ್ನು ವಜಾ ಮಾಡುವುದಾಗಿ ಆದೇಶಿಸಿತು. ತೀರ್ಪು- 31 Jan 2022

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ