ಚಾಲಕನೇ ವಾಹನ ಕದ್ದರೂ ವಿಮೆ ಕಂಪನಿ ಪರಿಹಾರ ನೀಡಬೇಕು

* ಕರಾರಿನ ಭಾಗವಲ್ಲದ, ಹೊರಗಿನ ನಿಯಮಗಳ ಲಾಭ ವಿಮೆ ಕಂಪನಿಗಿಲ್ಲ. ಪರಿಹಾರ ನೀಡಬೇಕಾಗಿ ಬಂದಾಗ ವಿಮೆ ಕಂಪನಿಗಳು ವಿಮೆಯ ಮೂಲ ಉದ್ದೇಶವನ್ನೇ ಮರೆತು ಪರಿಹಾರ ನೀಡುವುದನ್ನು ತಪ್ಪಿಸಲು ಇಲ್ಲದ ಕಾರಣಗಳನ್ನು ಹುಡುಕುತ್ತವೆ. ಕರಾರಿನ ಭಾಗವಲ್ಲದ ಮತ್ತು ಪಾಲಿಸಿದಾರರಿಗೆ ತಿಳಿಸದೇ ಇರುವ ನಿಯಮಗಳನ್ನು ಉುಲ್ಲೇಖಿಸುವುದನ್ನು ಪರಿಪಾಠ ಮಾಡಿಕೊಂಡಿವೆ. ಇವುಗಳ ಬಗ್ಗೆ ಗ್ರಾಹಕ ಆಯೋಗವಷ್ಟೇ ಅಲ್ಲ ಸುಪ್ರೀಂ ಕೋರ್ಟ್‌ ಕೂಡ ಮಾರ್ಗದರ್ಶಿಯಾಗುವಂಥ ತೀರ್ಪುಗಳನ್ನು ನೀಡಿದೆ. ಇದು ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂ.ಲಿ. ಮತ್ತು ಮಹಾರಾಷ್ಟ್ರದ ಗೊಂಡಿಯಾದ ರಾಜಗೋಪಾಲಾಚಾರಿ ವಾರ್ಡ್‌ನ ತೀರ್ಥಸಿಂಗ್‌ ಅವತಾರಸಿಂಗ್‌ ಭಾಟಿಯಾ ನಡುವಿನ ಪ್ರಕರಣ. ತೀರ್ಥಸಿಂಗ್‌ ಅವರು ತಮ್ಮ ಅಶೋಕ್‌ ಲೇಲ್ಯಾಂಡ್‌ ಟ್ರಕ್‌ಗೆ ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂಪನಿಯಿಂದ 03-05-2011 ರಿಂದ 02-05-2012ರ ಅವಧಿಗೆ ಕಮರ್ಷಿಯಲ್‌ ಪ್ಯಾಕೇಜ್‌ ವಿಮೆಯನ್ನು ಪಡೆದುಕೊಂಡಿದ್ದರು. ಪಾಲಿಸಿಯಲ್ಲಿ ಘೋಷಿಸಲಾದ ಮೌಲ್ಯ 21,66,000.00 ರುಪಾಯಿಗಳು. 28-06-2011ರಂದು ತೀರ್ಥಸಿಂಗ್‌ ಅವರ ಚಾಲಕ ಜುನೈದ್‌ ಇದ್ರಿಶ್ ಶೇಕ್‌ ಎನ್ನುವವ ರಸಗೊಬ್ಬರ ತುಂಬಿದ ಈ ಟ್ರಕ್‌ಅನ್ನು ಗೊಂಡಿಯಾದಿಂದ ಮಶಾಲ್‌ಗೆ ಒಯ್ದಿದ್ದ. ಅಲ್ಲಿ ರಾತ್ರಿ 7-30ರ ಸುಮಾರಿಗೆ ಮಾಲನ್ನು ಕೆಳಗಿಸಿ ಗಡ್ಚಿರೋಲಿಯ ದೇಸಾಯಿಗಂಜ್‌ಗೆ ಬರುತ್ತಾನೆ. ಅಲ್ಲಿ ಮೆ.ಸಾಯಿಬಾಬಾ ರೋಡ್‌ಲೈನ್ಸ್‌ನಲ್ಲಿ ಟ್ರಕ್‌ ನಿಲ್ಲಿಸಿ ನಿದ್ರೆಹೋಗುತ್ತಾನೆ. 29-06-2011ರ ಬೆಳಿಗ್ಗೆ ಆತ ಎದ್ದು ನೋಡಿದಾಗ ಟ್ರಕ್‌ ಅಲ್ಲಿ ಇರುವುದಿಲ್ಲ. ಈ ವಿಷಯ ಆತ ಮಾಲೀಕರಿಗೆ ತಿಳಿಸುತ್ತಾನೆ. ಮಾಲೀಕರು ಅಲ್ಲಿಗೆ ತಲುಪುತ್ತಾರೆ. ಟ್ರಕ್‌ ಹುಡುಕಾಟ ನಡೆಸುತ್ತಾರೆ. ಅದು ಸಿಗದೆಹೋದಾಗ ದೇಸಾಯಿಗಂಜ್‌ನ ಪೊಲೀಸರಿಗೆ ದೂರು ನೀಡುತ್ತಾರೆ. ಅಲ್ಲಿ ಪಡೆದ ಎಫ್‌ಐಆರ್‌ ಪ್ರತಿಯೊಂದಿಗೆ ವಿಮೆ ಕಂಪನಿಗೆ ಟ್ರಕ್‌ ಕಾಣೆಯಾಗಿರುವ ಕುರಿತು ಮಾಹಿತಿ ನೀಡುತ್ತಾರೆ. ಎರಡೂವರೆ ತಿಂಗಳ ಬಳಿಕ ವಿಮೆ ಕಂಪನಿಯು ಶ್ರೀಕಾಂತ್‌ ಆರ್‌.ಸಿವಾಂಕರ ಎಂಬ ಸರ್ವೇಯರ್‌ ಅವರನ್ನು ನೇಮಿಸುತ್ತದೆ. ವಿಮೆದಾರರು ಎಲ್ಲ ಅಗತ್ಯ ಮಾಹಿತಿಯನ್ನು ಅವರಿಗೆ ಸಲ್ಲಿಸಿ ತಮ್ಮ ವಿಮೆ ಇತ್ಯರ್ಥಪಡಿಸಲು ಕೋರುತ್ತಾರೆ. ಈ ನಡುವೆ ಪೊಲೀಸರು ಕಳುವಿನ ಆರೋಪದ ಮೇಲೆ ಒಬ್ಬನನ್ನು ಬಂಧಿಸಿ ತನಿಖೆ ಆರಂಭಿಸುತ್ತಾರೆ. ಟ್ರಕ್‌ನ ಚಾಲಕ ಕೂಡ ಈ ಕಳುವಿನಲ್ಲಿ ಶಾಮೀಲಾಗಿದ್ದು ಆತ ತಪ್ಪೊಪ್ಪಿಕೊಳ್ಳುತ್ತಾನೆ. ಆಗ ವಿಮೆ ಕಂಪನಿಯು 05-11-2012ರಂದು ತೀರ್ಥಸಿಂಗ್‌ ಅವರಿಗೆ ಪತ್ರ ಬರೆದು, ಚಾಲಕನೇ ಕಳುವಿನಲ್ಲಿ ಭಾಗಿಯಾಗಿರುವುದರಿಂದ ವಿಮೆ ನೀಡಲು ಬರುವುದಿಲ್ಲ. ವಿಮೆದಾರರ ನೌಕರನೇ ಕಳುವಿನಲ್ಲಿ ಭಾಗಿಯಾಗಿರುವುದು ನಂಬಿಕೆಯ ಉಲ್ಲಂಘನೆಯಾಗುತ್ತದೆ. ಇದು ವಿಮೆ ಪಾಲಿಸಿಯ ಪರಿಗಣನೆಯ ಆಚೆಗಿನ ವಿಷಯ. ಕಾರಣ ವಿಮೆ ನೀಡಲು ಬರುವುದಿಲ್ಲ ಎಂದು ತಿಳಿಸಿತು. ಇದು ವಿಮೆ ಕಂಪನಿಯಿಂದಾದ ಸೇವಾನ್ಯೂನತೆ ಎಂದು ಆರೋಪಿಸಿ ತೀರ್ಥಸಿಂಗ್‌ ಮಹಾರಾಷ್ಟ್ರ ರಾಜ್ಯ ಗ್ರಾಹಕ ಆಯೋಗದಲ್ಲಿ ದೂರನ್ನು ದಾಖಲಿಸುತ್ತಾರೆ. ಟ್ರಕ್‌ನ ಮೌಲ್ಯ ಪಾಲಿಸಿಯಲ್ಲಿ ನಮೂದಿಸಿದಂತೆ 21,66,000 ರು. ಮತ್ತು ಅದಕ್ಕೆ ಶೇ.18ರಷ್ಟು ಬಡ್ಡಿಯನ್ನು ಟ್ರಕ್‌ ಕಳುವವಾದ ದಿನದಿಂದದ ಲೆಕ್ಕಹಾಕಿ ಕೊಡಿಸಬೇಕು. ತಮಗಾದ ಕಿರುಕುಳಕ್ಕೆ 1 ಲಕ್ಷ ರು. ಪರಿಹಾರ, ವ್ಯಾಜ್ಯದ ವೆಚ್ಚ 25 ಸಾವಿರ ರು. ಮತ್ತು ಇತರ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಅವರು ಕೋರುತ್ತಾರೆ. ಇದಕ್ಕೆ ಲಿಖಿತ ಉತ್ತರ ನೀಡಿದ ವಿಮೆ ಕಂಪನಿಯು, ವಿಮೆದಾರರರು ಕಮರ್ಷಿಯಲ್‌ ಪ್ಯಾಕೇಜ್‌ ಪಾಲಿಸಿಯನ್ನು ಪಡೆದುಕೊಂಡಿದ್ದಾರೆ. ಪಾಲಿಸಿಯಲ್ಲಿ ಪರಿಹಾರವನ್ನು ಯಾವಾಗ ಕೋರಬಹುದು ಯಾವಾಗ ಅಲ್ಲ ಎಂಬುದರ ಅರಿವು ಅವರಿಗೆ ಇರಬೇಕು. ದೂರುದಾರರ ಚಾಲಕನೇ ವೈಯಕ್ತಿಕ ಲಾಭಕ್ಕಾಗಿ ಕಳ್ಳರೊಂದಿಗೆ ಸೇರಿಕೊಂಡಿದ್ದಾನೆ. ಅಲ್ಲದೆ ಪಾಲಿಸಿಯ ಷರತ್ತಿನ ಉಲ್ಲಂಘನೆ ಮಾಡಿ, ಪಾಲಿಸಿಯ ಭೌಗೋಳಿಕ ಸರಹದ್ದನ್ನು ಮೀರಿ ಅಂದರೆ ಮಹಾರಾಷ್ಟ್ರ ರಾಜ್ಯದ ವ್ಯಾಪ್ತಿಯನ್ನು ಮೀರಿ ಟ್ರಕ್‌ಅನ್ನು ಹೈದ್ರಾಬಾದಿಗೆ ಒಯ್ದಿದ್ದಾನೆ. ಇಂಥ ಸಂದರ್ಭದಲ್ಲಿ ವಿಮೆ ಕಂಪನಿ ಪರಿಹಾರ ನೀಡುವುದಕ್ಕೆ ಬಾಧ್ಯಸ್ಥ ಆಗುವುದಿಲ್ಲ. ಪೊಲೀಸರ ವರದಿಯ ಪ್ರಕಾರ ಕಳುವಾಗಿರುವ ಟ್ರಕ್‌ನ ಗೇರ್‌‌ಬಾಕ್ಸ್‌ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 95 ಸಾವಿರ ರುಪಾಯಿ. ಪರಿಹಾರ ಕೋರಿಕೆಯಲ್ಲಿ ಈ ಮೊತ್ತವನ್ನು ವಜಾ ಮಾಡಿಲ್ಲ ಎಂದು ವಿವರಿಸಿತು. ಎರಡೂ ಕಡೆಯ ವಾದ ಪ್ರತಿವಾದ ತಿಳಿದುಕೊಂಡ ರಾಜ್ಯ ಆಯೋಗವು 31-08-2015ರಂದು ನೀಡಿದ ತೀರ್ಪಿನಲ್ಲಿ ದೂರನ್ನು ಭಾಗಶಃ ಪುರಸ್ಕರಿಸಿತು. ವಿಮೆ ಕಂಪನಿಯು ದೂರುದಾರರಿಗೆ 20.71 ಲಕ್ಷ ರುಪಾಯಿ ನೀಡಬೇಕು. ಇದಕ್ಕೆ 05-11-2012 ರಿಂದ ಅನ್ವಯವಾಗುವಂತೆ ಶೇ.9ರಂತೆ ಬಡ್ಡಿಯನ್ನು ನೀಡಬೇಕು. ದೂರುದಾರರಿಗೆ ಆಗಿರುವ ಮಾನಸಿಕ ಮತ್ತು ದೈಹಿಕ ಕಿರಿಕಿರಿಗೆ 25 ಸಾವಿರ ರು. ಮತ್ತು ವ್ಯಾಜ್ಯದ ವೆಚ್ಚ 10 ಸಾವಿರ ರು. ನೀಡಬೇಕು ಎಂದು ಆದೇಶಿಸಿತು. ಇದರ ವಿರುದ್ಧ ವಿಮೆ ಕಂಪನಿ ರಾಷ್ಟ್ರೀಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿತು. ಅದರ ವಕೀಲರ ಪ್ರಕಾರ, ದೂರುದಾರರು ಸಾರಿಗೆ ವ್ಯವಹಾರ ನಡೆಸುತ್ತಿದ್ದಾರೆ. ಅವರ ಬಳಿ ವಾಹನಗಳ ಪಡೆಯೇ ಇದೆ. ಆದ್ದರಿಂದ ಗ್ರಾಹಕ ರಕ್ಷಣೆ ಕಾಯ್ದೆ 1986 ಸೆಕ್ಷನ್‌ 2(1)(ಡಿ) ಪ್ರಕಾರ ಅವರು ಗ್ರಾಹಕರಲ್ಲ. ರಾಜ್ಯ ಆಯೋಗವು ಅವರ ದೂರನ್ನು ಪುರಸ್ಕರಿಸಿ ತಪ್ಪು ಮಾಡಿದೆ. ಇದು ಕೇವಲ ಕಳವಿನ ಪ್ರಕರಣ ಮಾತ್ರವಲ್ಲ. ನಂಬಿಕೆ ದ್ರೋಹ. ಕಾರಣ ಪಾಲಿಸಿಯ ಪರಿಗಣೆಗೆ ಇದು ಬರುವುದಿಲ್ಲ. ಕಳವು ಮತ್ತು ಅಪರಾಧವಾಗಿರುವ ನಂಬಿಕೆದ್ರೋಹದ ನಡುವಿನ ವ್ಯತ್ಯಾಸವನ್ನು ಅರಿಯುವಲ್ಲಿ ರಾಜ್ಯ ಆಯೋಗ ತಪ್ಪು ಮಾಡಿದೆ ಎಂದು ವಿವರಿಸಿದರು. ವಿಮೆದಾರರ ವಕೀಲರು ತಮ್ಮ ವಾದದಲ್ಲಿ, ವಿಮೆ ಕಂಪನಿಯು ವಿಮೆದಾರರಿಗೆ ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ತಿಳಿಸಿಲ್ಲ. ವಿಮೆದಾರರ ಗಮನಕ್ಕೆ ತರದ, ಕರಾರಿನ ಭಾಗವಲ್ಲದ, ಹೊರಗಿನ ನಿಯಮಗಳ ಲಾಭವನ್ನು ವಿಮೆ ಕಂಪನಿ ಪಡೆದುಕೊಳ್ಳುವ ಹಾಗಿಲ್ಲ. ಈ ಸಂಬಂಧದಲ್ಲಿ ಅವರು ಸುಪ್ರೀಂ ಕೋರ್ಟ್‌ ನ್ಯೂ ಇಂಡಿಯಾ ಅಶ್ಯುಅರನ್ಸ್‌ ಕಂಪನಿ ವಿರುದ್ಧ ಜಗತಾರ್‌ ಸಿಂಗ್‌ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದರು. ಅದೇ ರೀತಿ ಮಾಡರ್ನ್‌ ಇನ್ಸುಲೇಟರ್ಸ್‌ ವಿರುದ್ಧ ಓರಿಯಂಟಲ್‌‌ ಇನ್ಸುರನ್ಸ್‌ ಕಂಪನಿ ಲಿ. ಪ್ರಕರಣದಲ್ಲಿಯೂ ಅದೇ ರೀತಿಯ ತೀರ್ಪು ಬಂದಿತ್ತು. ತಿಳಿಸದೇ ಇರುವ ಹೊರಗಿನ ನಿಯಮಗಳ ಲಾಭವನ್ನು ಪ್ರತಿವಾದಿಗಳು ಪಡೆಯುವಂತಿಲ್ಲ ಎಂದು ಆದೇಶ ನೀಡಿದೆ. ಟ್ರಕ್‌ ಕಳುವಾಗಿರುವ ಕುರಿತು ವಿಮೆ ಕಂಪನಿಗೆ ತಕ್ಷಣವೇ ತಿಳಿಸಿದರೂ ಅದು ಉದ್ದೇಶಪೂರ್ವಕವಾಗಿ ಅದನ್ನು ನಿರ್ಲಕ್ಷಿಸಿತ್ತು. ಎಫ್ಐಆರ್‌ ತರುವಂತೆ ಹೇಳಿತ್ತು. ಎಫ್‌ಐಆರ್‌ ನೀಡಿದ ಬಳಿಕವಷ್ಟೇ ಅದು ಮಾಹಿತಿಯನ್ನು ಸ್ವೀಕರಿಸಿತು. ಅಲ್ಲದೆ ಅದು ಎರಡೂರೆ ತಿಂಗಳು ಆದಮೇಲಷ್ಟೇ ತನಿಖೆಗೆ ಸಿಬ್ಬಂದಿಯನ್ನು ಕಳುಹಿಸಿದ್ದು. ಅದಾಗಿ 16 ತಿಂಗಳ ಬಳಿಕ ವಿಮೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತು. ಅಲ್ಲದೆ, ನ್ಯಾಶನಲ್ ಇನ್ಸುರನ್ಸ್‌ ಕಂಪನಿ ವಿರುದ್ಧ ನಿತಿನ್‌ ಖಂಡೇಲ್‌ವಾಲ್‌ ಪ್ರಕರಣದಲ್ಲಿ, ವಾಹನವನ್ನು ಕಸಿದುಕೊಂಡು ಹೋಗಿರಲಿ ಅಥವಾ ಕಳವು ಮಾಡಿರಲಿ, ಅಲ್ಲಿ ಪಾಲಿಸಿಯ ಷರತ್ತಿನ ಉಲ್ಲಂಘನೆಯಾಗಿದೆ ಎಂಬ ವಾದ ಸಂಗತವಾಗುವುದಿಲ್ಲ. ವಿಮೆ ಕಂಪನಿಯು ಪಾಲಿಸಿದಾರ ವಾಹನ ಮಾಲೀಕರಿಗೆ ಹಾನಿಯನ್ನು ತುಂಬಿಕೊಡಬೇಕಾಗುತ್ತದೆ ಎಂದು ಹೇಳಿದೆ. ಈ ತೀರ್ಪನ್ನು ರಾಷ್ಟ್ರೀಯ ಗ್ರಾಹಕ ಆಯೋಗ ತನ್ನ ಹಲವು ತೀರ್ಪುಗಳಲ್ಲಿ ಉದಾಹರಣೆಯಾಗಿ ಉಲ್ಲೇಖಿಸಿದೆ ಎಂದು ಹೇಳಿದರು. ಅಲ್ಲದೆ, ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) 20-09-2011ರಂದು ಹೊರಡಿಸಿದ ಸುತ್ತೋಲೆಯಲ್ಲಿ, ವಿಮೆ ಕಂಪನಿಗಳು ಪಾಲಿಸಿ ಇತ್ಯರ್ಥಗೊಳಿಸುವಾಗ ನಿರಾಕರಿಸುವ ಸಂದರ್ಭದಲ್ಲಿ ಬಲವಾದ ತಾರ್ಕಿಕ ಅಂಶಗಳು ಮತ್ತು ಸಶಕ್ತವಾದ ಕಾರಣಗಳಿರಬೇಕು. ಇಂಥ ಪರಿಮಿತ ನಿಯಮಗಳು ಪ್ರತ್ಯೇಕಿಸುವಿಕೆಯಲ್ಲಿ ಕೆಲಸಕ್ಕೆ ಬರುವುದಿಲ್ಲ ಮತ್ತು ಪರಿಪೂರ್ಣವೂ ಆಗಿರುವುದಿಲ್ಲ. ನಿಯಮಗಳ ಗುಣಗಳನ್ನು ಮತ್ತು ಒಳ್ಳೆಯ ಸ್ಫೂರ್ತಿಯ ಭಾವವನ್ನು ಅರ್ಥಮಾಡಿಕೊಳ್ಳಬೇಕು. ಶುದ್ಧ ತಾಂತ್ರಿಕ ಕಾರಣಗಳ ಆಧಾರದ ಮೇಲೆ ಪರಿಹಾರ ಕೋರಿಕೆಗಳನ್ನು ನಿರಾಕರಿಸುತ್ತ ಹೋದರೆ ವಿಮೆ ಉದ್ಯಮದ ಮೇಲೆ ಪಾಲಿಸಿದಾರರು ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ ತಕರಾರು ಅರ್ಜಿಗಳ ಸಂಖ್ಯೆಯೂ ಏರುತ್ತದೆ ಎಂದು ಹೇಳಿದೆ. ಅಲ್ಲದೆ ರಾಷ್ಟ್ರೀಯ ಆಯೋಗವು, ಓರಿಯಂಟಲ್‌ ಇನ್ಸುರನ್ಸ್‌ ಕಂಪನಿ ವಿರುದ್ಧ ಪರಮಜಿತ್ ಕೌರ್‌ ಪ್ರಕರಣದಲ್ಲಿ, ಚಾಲಕನೇ ಟ್ರಕ್‌ ಕಳವು ಮಾಡಿದ್ದರೂ ಅದು ಕೇಡುಬುದ್ಧಿಯ ಕೃತ್ಯ ಮತ್ತು ನಷ್ಟವಂತೂ ಸಂಭವಿಸಿರುತ್ತದೆ. ಅದನ್ನು ವಿಮೆ ಕಂಪನಿ ತುಂಬಿಕೊಡಬೇಕು ಎಂದು ತೀರ್ಪು ನೀಡಿದೆ ಎಂದು ವಿವರಿಸಿದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ರಾಷ್ಟ್ರೀಯ ಆಯೋಗವು, ರಾಜ್ಯ ಆಯೋಗವು ಸರಿಯಾಗಿಯೇ ತೀರ್ಪು ನೀಡಿದೆ ಎಂದು ತಿಳಿಸಿ ವಿಮೆ ಕಂಪನಿಯ ಮೇಲ್ಮನವಿಯನ್ನು ವಜಾ ಮಾಡಿತು. ತೀರ್ಪು- 01 Jul 2022

Comments

Popular posts from this blog

ಆಡಳಿತಾತ್ಮಕ ಲೋಪಗಳು ವಿಳಂಬ ಮನ್ನಾ ಕೋರಿಕೆಗೆ ಸಾಕಾಗದು

ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಯಾರೋ ಎಗರಿಸಿದ್ದರೆ ಅದನ್ನು ಬ್ಯಾಂಕ್ ನೀಡಬೇಕು

ವಿಮೆ ಕಂಪನಿಯ ನಿಯಮ ಮೀರಿಯೂ ಮೆಡಿಕ್ಲೇಮ್‌ ಪರಿಹಾರ